ಮೇ ತಿಂಗಳ ಜಿಎಸ್ ಟಿ ಸಂಗ್ರಹದಲ್ಲಿ ಶೇ.12ರಷ್ಟು ಏರಿಕೆ;1.57 ಲಕ್ಷ ಕೋಟಿ ರೂ. ಸಂಗ್ರಹ

Published : Jun 01, 2023, 06:17 PM IST
ಮೇ ತಿಂಗಳ ಜಿಎಸ್ ಟಿ ಸಂಗ್ರಹದಲ್ಲಿ ಶೇ.12ರಷ್ಟು ಏರಿಕೆ;1.57 ಲಕ್ಷ ಕೋಟಿ ರೂ. ಸಂಗ್ರಹ

ಸಾರಾಂಶ

ಕಳೆದ ಮೇ ತಿಂಗಳಲ್ಲಿ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ ಟಿ) ಸಂಗ್ರಹದಲ್ಲಿ ಶೇ.12ರಷ್ಟು ಏರಿಕೆ ಕಂಡುಬಂದಿದೆ. ಈ ತಿಂಗಳು ಒಟ್ಟು 1,57,090 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.   

ನವದೆಹಲಿ (ಜೂ.1): ಈ ವರ್ಷದ ಮೇ ತಿಂಗಳಲ್ಲಿ ದೇಶದ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದಲ್ಲಿ ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಶೇ.12ರಷ್ಟು ಏರಿಕೆ ಕಂಡುಬಂದಿದ್ದು, 1,57,090 ಕೋಟಿ ರೂ. ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಗುರುವಾರ (ಜೂ.1) ಬಿಡುಗಡೆ ಮಾಡಿರುವ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಮೇನಲ್ಲಿ ಸಂಗ್ರಹವಾದ ಒಟ್ಟು ಸರಕು ಹಾಗೂ ಸೇವಾ ತೆರಿಗೆಯಲ್ಲಿ (ಜಿಎಸ್ ಟಿ) ಸಿಜಿಎಸ್ ಟಿ 28,411 ಕೋಟಿ ರೂ., ಎಸ್ ಜಿಎಸ್ ಟಿ 35,828 ಕೋಟಿ ರೂ. ಹಾಗೂ ಐಜಿಎಸ್ ಟಿ 81,363 ಕೋಟಿ ರೂ. (ಇದರಲ್ಲಿ ಸರಕುಗಳ ರಫ್ತಿನಿಂದ ಸಂಗ್ರಹವಾದ 41,772 ಕೋಟಿ ರೂ.) ಇದೆ. ಇನ್ನು ಸೆಸ್ 11,489 ಕೋಟಿ ರೂ. (ಸರಕುಗಳ ರಫ್ತಿನಿಂದ ಸಂಗ್ರಹವಾದ 1,057 ಕೋಟಿ ರೂ. ಸೇರಿದಂತೆ) ಇದೆ. ಇದರಿಂದ ಮಾಸಿಕ ಜಿಎಸ್ ಟಿ ಆದಾಯ ಸತತ 14ನೇ ತಿಂಗಳಿಂದ 1.4 ಲಕ್ಷ ಕೋಟಿ ರೂ.ಗಿಂತ ಅಧಿಕವಿದೆ. 2023ರ ಏಪ್ರಿಲ್ ನಲ್ಲಿ ಅಂದರೆ ಕಳೆದ ತಿಂಗಳು ಸಾರ್ವಕಾಲಿಕ ಗರಿಷ್ಠ ಪ್ರಮಾಣದ ಅಂದರೆ 1,87,035 ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿತ್ತು. ಇದೇ ಮೊದಲ ಬಾರಿಗೆ ಒಟ್ಟು ಜಿಎಸ್ ಟಿ ಸಂಗ್ರಹ 1.75ಲಕ್ಷ ಕೋಟಿ ರೂ. ಗಡಿ ದಾಟಿತ್ತು. 2017ರ ಜು.1ರಂದು ದೇಶದಲ್ಲಿ ಜಿಎಸ್ಟಿ ಜಾರಿಯಾದ ಬಳಿಕ ಯಾವುದೇ ತಿಂಗಳೊಂದರಲ್ಲಿ ಸಂಗ್ರಹವಾದ ಗರಿಷ್ಠ ಪ್ರಮಾಣದ ಜಿಎಸ್ಟಿಇದಾಗಿತ್ತು.

ಇನ್ನು ಸರ್ಕಾರ 35,369 ಕೋಟಿ ರೂ. ಕೇಂದ್ರ ಜಿಎಸ್ ಟಿ (ಸಿಜಿಎಸ್ ಟಿ) ಹಾಗೂ  29,769 ಕೋಟಿ ರೂ. ರಾಜ್ಯ ಜಿಎಸ್ ಟಿ (ಎಸ್ ಜಿಎಸ್ ಟಿ) ಅನ್ನು ಸಂಯೋಜಿತ  ಜಿಎಸ್ ಟಿಯಿಂದ (ಐಜಿಎಸ್ ಟಿ) ಸೆಟ್ಲ ಮಾಡಿದೆ. ನಿಯಮಿತ ಸೆಟ್ಲಮೆಂಟ್ ಬಳಿಕ 2023ರ ಮೇನಲ್ಲಿ ಜಿಎಸ್ ಟಿಯಿಂದ ಕೇಂದ್ರ ಹಾಗೂ ರಾಜ್ಯಗಳಿಗೆ ಲಭಿಸಿದ ಒಟ್ಟು ಆದಾಯ ಕ್ರಮವಾಗಿ 63,780 ಕೋಟಿ ರೂ. (ಸಿಜಿಎಸ್ ಟಿ) ಹಾಗೂ 65,597ಕೋಟಿ ರೂ (ಐಜಿಎಸ್ ಟಿ).  ಇನ್ನು 2022-23ರ ಹಣಕಾಸು ವರ್ಷದಲ್ಲಿ ಒಟ್ಟಾರೆ 18.10 ಲಕ್ಷ ಕೋಟಿ ರೂ. ಜಿಎಸ್ಟಿ (GST) ಸಂಗ್ರಹವಾಗಿದೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.22ರಷ್ಟು ಹೆಚ್ಚು ಎಂದು ಸರ್ಕಾರ ತಿಳಿಸಿದೆ.

ಕಳೆದ ಸಾಲಿನಲ್ಲಿ  1.01 ಲಕ್ಷ ಕೋಟಿ ರೂ. ತೆರಿಗೆ ವಂಚನೆ
2022-23ನೇ ವಿತ್ತೀಯ ವರ್ಷದಲ್ಲಿ ಬರೋಬ್ಬರಿ 1.01 ಲಕ್ಷ ಕೋಟಿ ರೂ.ನಷ್ಟುಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆಯನ್ನು ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಗಮನಾರ್ಹ ಎಂದರೆ, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ, ವಂಚನೆ ಮಾಡಲಾದ ಮೊತ್ತ ದ್ವಿಗುಣಗೊಂಡಿದೆ.1.01 ಲಕ್ಷ ಕೋಟಿ ರೂ. ವಂಚನೆ ಪೈಕಿ 21 ಸಾವಿರ ಕೋಟಿ ರೂ.ನಷ್ಟು ಮೊತ್ತವನ್ನು ವಸೂಲಿ ಮಾಡುವಲ್ಲಿ ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಜಿಎಸ್‌ಟಿಗೂ ಮುಂಚಿನ ಕೆಲಸಗಳಿಗೆ ವ್ಯಾಟ್‌ ಮಾತ್ರ: ಹೈಕೋರ್ಟ್‌

 2021-22ನೇ ಆರ್ಥಿಕ ವರ್ಷದಲ್ಲಿ 54 ಸಾವಿರ ಕೋಟಿ ರೂ.ನಷ್ಟು ಜಿಎಸ್‌ಟಿ ವಂಚನೆಯಾಗಿ, 21000 ಕೋಟಿ ರೂ.ಗಳನ್ನು ವಸೂಲು ಮಾಡಲಾಗಿತ್ತು. ಮತ್ತೊಂದೆಡೆ, 2022-23ನೇ ವಿತ್ತೀಯ ವರ್ಷದಲ್ಲಿ 14 ಸಾವಿರ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದರೆ, ಅದಕ್ಕೂ ಹಿಂದಿನ ವರ್ಷಗಳಲ್ಲಿ ಕ್ರಮವಾಗಿ 12,574 ಹಾಗೂ 12596 ಪ್ರಕರಣಗಳು ಪತ್ತೆಯಾಗಿದ್ದವು. ವಂಚನೆ ಪ್ರಕರಣಗಳು ಹಾಗೂ ವಂಚನೆ ಮೊತ್ತ ಹೆಚ್ಚಾಗಿರುವುದು ಇದರಿಂದ ತಿಳಿದುಬರುತ್ತದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌