ಹೊಸ ವರ್ಷಕ್ಕೂ ಮುನ್ನ ಸ್ಟಾಕ್ ಕ್ಲಿಯರೆನ್ಸ್ ಗೆ ಕೆಲವು ಇ-ಕಾಮರ್ಸ್ ವೆಬ್ ಸೈಟ್ ಗಳು ಆಕರ್ಷಕ ಆಫರ್ ಗಳನ್ನು ನೀಡುತ್ತಿವೆ. ಆದರೆ, ಆನ್ ಲೈನ್ ಖರೀದಿ ಮಾಡುವಾಗ ಎಚ್ಚರ ವಹಿಸೋದು ಅತ್ಯಗತ್ಯ. ಏಕೆಂದ್ರೆ ಸೈಬರ್ ವಂಚಕರು ಈ ಅವಕಾಶ ಬಳಸಿ ನಿಮ್ಮ ಖಾತೆಗೆ ಕನ್ನ ಹಾಕುವ ಸಾದ್ಯತೆ ಇದೆ. ಹಾಗಾದ್ರೆ ಸೈಬರ್ ವಂಚನೆಯಿಂದ ಪಾರಾಗಲು ಏನೆಲ್ಲ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.
Business Desk: 2022ನೇ ಸಾಲಿನ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗ ಕೆಲವು ಶಾಪ್ ಗಳು ಹಾಗೂ ಇ-ಕಾಮರ್ಸ್ ತಾಣಗಳಲ್ಲಿ ವರ್ಷಾಂತ್ಯದ ಮಾರಾಟದ ಹೆಸರಿನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಗಳನ್ನು ಕೂಡ ನೀಡಲಾಗುತ್ತಿದೆ. ವರ್ಷಾಂತ್ಯ ಅಥವಾ ಇಯರ್ ಎಂಡ್ ಕ್ಲಿಯರೆನ್ಸ್ ಸೇಲ್ಸ್ ಹಾಗೂ ಡಿಸ್ಕೌಂಟ್ಸ್ ಗ್ರಾಹಕರನ್ನು ಖರೀದಿಗೆ ಉತ್ತೇಜಿಸಿದರೆ, ಇದೇ ಅವಕಾಶವನ್ನು ಬಳಸಿಕೊಂಡು ಒಂದಿಷ್ಟು ಜನರ ಖಾತೆಗೆ ಲಗ್ಗೆ ಹಾಕಿ ಹಣ ದೋಚಲು ಸೈಬರ್ ವಂಚಕರು ಕೂಡ ಕಾಯುತ್ತಿರುತ್ತಾರೆ. ಹೀಗಾಗಿ ಆನ್ ಲೈನ್ ಶಾಪಿಂಗ್ ಮಾಡುವ ಸಂದರ್ಭದಲ್ಲಿ ಗ್ರಾಹಕರು ಎಚ್ಚರ ವಹಿಸೋದು ಅಗತ್ಯ. ಸ್ವಲ್ಪ ಯಾಮಾರಿದ್ರೂ ತೊಂದರೆ ಕಟ್ಟಿಟ್ಟ ಬುತ್ತಿ. ಈಗಂತೂ ಸೈಬರ್ ವಂಚಕರು ಹಣ ಲಪಟಾಯಿಸಲು ನಾನಾ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಎಷ್ಟೋ ಬಾರಿ ನಮ್ಮ ಅರಿವಿಗೇ ಬಾರದಂತೆ ನಮ್ಮ ಖಾತೆಯಿಂದ ಹಣ ದೋಚುವಷ್ಟು ಚಾಣಾಕ್ಷತನ ತೋರುತ್ತಾರೆ. ಇಂಥ ಅನೇಕ ಪ್ರಕರಣಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಹೀಗಿರುವಾಗ ವರ್ಷಾಂತ್ಯದ ಮಾರಾಟದಲ್ಲಿ ಸೈಬರ್ ವಂಚನೆಗಳಿಂದ ಸುರಕ್ಷಿತವಾಗಿರಲು ನಾವು ಏನ್ ಮಾಡ್ಬೇಕು? ಯಾವೆಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು? ಇಲ್ಲಿದೆ ಪೂರ್ಣ ಮಾಹಿತಿ.
1.ಅನುಮಾನಾಸ್ಪದ ಲಾಗಿನ್ ಹಾಗೂ ಸಂದೇಶಗಳ ಬಗ್ಗೆ ಎಚ್ಚರ
ಅನೇಕ ಶಾಪಿಂಗ್ ಹಾಗೂ ಇ-ಕಾಮರ್ಸ್ ವೆಬ್ ಸೈಟ್ ಗಳು ಬಳಕೆದಾರರಿಗೆ ಖಾತೆ ತೆರೆಯುವಂತೆ ಹೇಳುತ್ತವೆ. ಇದ್ರಿಂದ ಗ್ರಾಹಕರಿಗೆ ಅವರಿಗಿಷ್ಟವಾದ ಬಟ್ಟೆಗಳು ಅಥವಾ ವಸ್ತುಗಳನ್ನು ಆಯ್ಕೆ ಮಾಡಿಡಲು ಹಾಗೂ ನಂತರ ಖರೀದಿಸಲು ಅನುಕೂಲವಾಗುತ್ತದೆ. ಈ ರೀತಿ ಖಾತೆ ತೆರೆಯುವ ಸಂದರ್ಭದಲ್ಲಿ ಗ್ರಾಹಕ ತನ್ನ ಇ-ಮೇಲ್ ವಿಳಾಸ ಅಥವಾ ಮೊಬೈಲ್ ಸಂಖ್ಯೆ ನೀಡಬೇಕಾಗುತ್ತದೆ. ಇದ್ರಿಂದ ಹೊಸ ಆಫರ್ ಗಳು ಹಾಗೂ ಖರೀದಿಸಿದ ವಸ್ತುಗಳ ಡೆಲಿವರಿ ಸ್ಟೇಟಸ್ ಮಾಹಿತಿ ಪಡೆಯಲು ಅನುಕೂಲವಾಗುತ್ತದೆ. ಈ ರೀತಿಯ ಸಂವಹನ ಪ್ರಕ್ರಿಯೆಯಿಂದ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆದರೆ, ವಂಚಕರು ಕೆಲವೊಮ್ಮೆ ಈ ಖಾತೆಗೆಗಳಿಗೆ ಕನ್ನ ಹಾಕಿ ಈಗಾಗಲೇ ಸ್ಟೋರ್ ಆಗಿರುವ ಪಾವತಿ ಮಾಹಿತಿಗಳನ್ನು ಬಳಸಿ ಆರ್ಡರ್ ಮಾಡುವ ಸಾಧ್ಯತೆಯಿರುತ್ತದೆ. ಹೀಗಾಗಿ ನಿಮ್ಮ ಖಾತೆಗೆ ಅನುಮಾನಾಸ್ಪದವಾಗಿ ಲಾಗಿನ್ ಆಗಿರೋದು ಅಥವಾ ನೀವು ಆರ್ಡರ್ ಮಾಡದಿದ್ದರೂ ಖರೀದಿ ಪ್ರಕ್ರಿಯೆ ನಡೆಸಿರೋದು ಕಂಡುಬಂದರೆ, ತಕ್ಷಣ ಆ ನಿರ್ದಿಷ್ಟ ವೆಬ್ ಸೈಟ್ ಸರ್ಪೋಟ್ ತಂಡಕ್ಕೆ ಮಾಹಿತಿ ನೀಡಿ. ಒಂದು ವೇಳೆ ಹಣದ ವಹಿವಾಟು ನಡೆದಿರೋದು ಕಂಡುಬಂದಿದ್ದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ.
ಸ್ಟಾರ್ಟ್ ಅಪ್ ಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿರುವ 7 ಭಾರತೀಯ ಕ್ರಿಕೆಟಿಗರು ಇವರೇ ನೋಡಿ!
2.ಸುರಕ್ಷಿತ ಹಾಗೂ ಅಧಿಕೃತ ವೆಬ್ ಸೈಟ್ ಗಳನ್ನು ಮಾತ್ರ ಬ್ರೌಸ್ ಮಾಡಿ
ಸೈಬರ್ ವಂಚಕರು ವಂಚನೆಗೆ ಬಳಸುವ ಸಾಮಾನ್ಯ ಟ್ರಿಕ್ ಅಂದರೆ ಯಾವುದಾದ್ರೂ ಒಂದು ವೆಬ್ ಸೈಟ್ ನ ನಕಲಿ ಲಿಂಕ್ ಕಳುಹಿಸೋದು. ಆ ಲಿಂಕ್ ವೆಬ್ ಸೈಟ್ ನ ನೈಜ್ಯ ಲಿಂಕ್ ಮಾದರಿಯಲ್ಲೇ ಇದ್ದು, ಅಲ್ಪಸ್ವಲ್ಪ ಬದಲಾವಣೆಗಳಿರುತ್ತವೆ. ಆದರೆ, ಅದು ಗುರುತಿಸಲು ಸಾಧ್ಯವಾಗದಷ್ಟು ಸಣ್ಣ ಬದಲಾವಣೆಯಾಗಿರುತ್ತದೆ. ಉದಾಹರಣೆಗೆ ವಂಚಕರು ಒಬ್ಬ ವ್ಯಕ್ತಿಗೆ ಯಾವುದೋ ಒಂದು ವೆಬ್ ಸೈಟ್ ನ ಲೋಗೋ ಹಾಗೂ ಲಿಂಕ್ ಕಳುಹಿಸುತ್ತಾರೆ. ಆ ವೆಬ್ ಸೈಟ್ ಆ ವ್ಯಕ್ತಿ ಯಾವಾಗಲೂ ಬಳಸುವ ವೆಬ್ ಸೈಟ್ ಆಗಿರುತ್ತದೆ. ಇಂಥ ಸಂದರ್ಭದಲ್ಲಿ ಲಿಂಕ್ ನಕಲಿ ಅನ್ನೋದನ್ನು ಗಮನಿಸಿದೆ ಆತ ಅದರ ಮೇಲೆ ಕ್ಲಿಕ್ ಮಾಡಿದ್ರೆ ನಕಲಿ ವೆಬ್ ಸೈಟ್ ತೆರೆದುಕೊಳ್ಳುತ್ತದೆ. ಅದು ಪಾವತಿ ಅಥವಾ ವೈಯಕ್ತಿಕ ಮಾಹಿತಿಗಳನ್ನು ಕೋರುತ್ತದೆ. ಆ ಬಳಿಕ ಆ ಮಾಹಿತಿ ಬಳಸಿ ಆ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಹಣ ಎಗರಿಸುವ ಕೆಲಸವನ್ನು ವಂಚಕರು ಮಾಡುತ್ತಾರೆ. ಅಧಿಕೃತ ವೆಬ್ಸೈಟ್ ಸಾಮಾನ್ಯವಾಗಿ 'HTTPS'ಮೊದಲು ಲೋಗೋ ಹೊಂದಿರುತ್ತದೆ. ಅಲ್ಲದೆ, ನಿರ್ದಿಷ್ಟ ಹೆಸರು ಅಥವಾ ಎಕ್ಸ್ ಟೆನ್ಷನ್ ಹೊಂದಿರುತ್ತದೆ.
3.ಇತರರ ಜೊತೆ ಒಟಿಪಿ ಹಂಚಿಕೊಳ್ಳಬೇಡಿ
ಸೈಬರ್ ವಂಚನೆ ತಡೆಗೆ ಎಂದೇ ಬ್ಯಾಂಕ್ ಟೂ-ಫ್ಯಾಕ್ಟರ್ ಅಥೆಂಟಿಕೇಷನ್ ಮಾದರಿ ಪ್ರಾರಂಭಿಸಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಒಂದು ವೇಳೆ ನೀವು ಯಾವುದೇ ಖರೀದಿ ಅಥವಾ ಪಾವತಿ ಪ್ರಕ್ರಿಯೆಗೆ ಚಾಲನೆ ನೀಡದಿದ್ದರೂ ನಿಮ್ಮ ಮೊಬೈಲ್ ಗೆ ಒಟಿಪಿ ಬಂದಿದ್ದರೆ ನಿಮ್ಮ ಖಾತೆ ಪಾಸ್ ವರ್ಡ್ ಅನ್ನು ತಕ್ಷಣ ಬದಲಾಯಿಸಿ. ಅಲ್ಲದೆ, ಈ ಅನಧಿಕೃತ ಹಣದ ವಹಿವಾಟಿನ ಬಗ್ಗೆ ಬ್ಯಾಂಕ್ ಗೆ ಮಾಹಿತಿ ನೀಡಿ. ನೆನಪಿಡಿ ಯಾವುದೇ ಇ-ಕಾಮರ್ಸ್ ತಾಣದ ಉದ್ಯೋಗಿ ಗ್ರಾಹಕರಿಂದ ಒಟಿಪಿ ಕೇಳುವುದಿಲ್ಲ.
ಉತ್ತಮ ರಿಟರ್ನ್ ನೀಡುವ ಎಲ್ಐಸಿಯ 4 ಪಾಲಿಸಿಗಳು ಇವೇ ನೋಡಿ
4.ಸ್ಪ್ಯಾಮ್ ಕಾಲ್ ಗಳ ಬಗ್ಗೆ ಎಚ್ಚರ
ಅಪರಿಚಿತ ಸಂಖ್ಯೆಯಿಂದ ಕರೆ ಬಂದಾಗ ಅದನ್ನು ಸ್ವೀಕರಿಸಬೇಡಿ. ಟ್ರೂ ಕಾಲರ್ ಅಪ್ಲಿಕೇಷನ್ ನಿಮ್ಮ ಮೊಬೈಲ್ ನಲ್ಲಿದ್ರೆ ಸ್ಪ್ಯಾಮ್ ಕರೆಗಳ ಬಗ್ಗೆ ನಿಮಗೆ ಮಾಹಿತಿ ನೀಡುತ್ತದೆ. ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಗಳು ನಿಮ್ಮ ಬ್ಯಾಂಕ್ ಹಾಗೂ ವೈಯಕ್ತಿಕ ಮಾಹಿತಿಗಳನ್ನು ಕೋರಿದ್ರೆ ಯಾವುದೇ ಕಾರಣಕ್ಕೂ ನೀಡಬೇಡಿ.
5.ಪಾವತಿ ಮಾಹಿತಿಗಳನ್ನು ಇ-ಕಾಮರ್ಸ್ ತಾಣಗಳಲ್ಲಿ ಉಳಿಸಬೇಡಿ
ಯಾವುದೇ ಕಾರಣಕ್ಕೂ ಪಾವತಿ ಮಾಹಿತಿಗಳನ್ನು ಇ-ಕಾಮರ್ಸ್ ತಾಣಗಳಲ್ಲಿ ಸೇವ್ ಮಾಡಿಡಬೇಡಿ. ಮುಂದೆ ಖರೀದಿ ಮಾಡುವಾಗ ಸುಲಭವಾಗುತ್ತದೆ ಎಂಬ ಕಾರಣಕ್ಕೆ ಪಾವತಿ ಮಾಹಿತಿಗಳನ್ನು ಇ-ಕಾಮರ್ಸ್ ತಾಣಗಳಲ್ಲಿ ಉಳಿಸಬೇಡಿ.