ಉದ್ಯೋಗ ದೊರೆತ ಕ್ಷಣವೇ ನಿವೃತ್ತಿ ಜೀವನದ ಬಗ್ಗೆ ಯೋಚಿಸಬೇಕು ಎನ್ನುತ್ತಾರೆ ಹಣಕಾಸು ತಜ್ಞರು. ಆದರೆ, ಭಾರತದಲ್ಲಿ ಬಹುತೇಕ ಉದ್ಯೋಗಿಗಳಿಗೆ ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಮಾಡೋವಾಗ ಇಪಿಎಫ್ ಹಾಗೂ ಎನ್ ಪಿಎಸ್ ಇವೆರಡರಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆ ಕಾಡೇ ಕಾಡುತ್ತದೆ. ಎಷ್ಟೋ ಜನರು ಈ ಎರಡು ಯೋಜನೆಗಳ ಬಗ್ಗೆ ಸಾಕಷ್ಟು ಗೊಂದಲ ಹೊಂದಿರುತ್ತಾರೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.
Business Desk: ವೇತನ (Salary) ಪಡೆಯೋ ಉದ್ಯೋಗಿಗಳು (Employees) ನಿವೃತ್ತಿ (Retirement) ಬದುಕಿಗೆ ಒಂದಿಷ್ಟು ಹೂಡಿಕೆ (Investment) ಮಾಡಿಡೋದು ಅತ್ಯವಶ್ಯಕ. ನಿವೃತ್ತಿ ಬದುಕಿನ ಹೂಡಿಕೆಗೆ (Investment) ಬಹುತೇಕ ಉದ್ಯೋಗಿಗಳು ಹೆಚ್ಚಾಗಿ ಎರಡು ಯೋಜನೆಗಳನ್ನು ನೆಚ್ಚಿಕೊಳ್ಳುತ್ತಾರೆ. ಒಂದು ಉದ್ಯೋಗಿಗಳ ಭವಿಷ್ಯ ನಿಧಿ (EPF) ಹಾಗೂ ಇನ್ನೊಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS).ಆದ್ರೆ ಬಹುತೇಕರಿಗೆ ಇವುಗಳಲ್ಲಿ ಯಾವುದು ಉತ್ತಮ ಎಂಬ ಪ್ರಶ್ನೆಯಂತೂ ಕಾಡೇ ಕಾಡುತ್ತೆ. ನಿವೃತ್ತಿ ಬದುಕಿಗೆ ಉತ್ತಮ ರಿಟರ್ನ್ಸ್ ಪಡೆಯಲು ಎನ್ ಪಿಎಸ್ ಮತ್ತು ಇಪಿಎಫ್ ನಲ್ಲಿ ಯಾವುದು ಒಳ್ಳೆಯದು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಇಪಿಎಫ್ ಉದ್ಯೋಗಿಗಳ ಪ್ರಯೋಜನಕ್ಕಿರುವ ಯೋಜನೆಯಾಗಿದೆ. ತಿಂಗಳ ವೇತನ ಪಡೆಯೋ ವ್ಯಕ್ತಿಗಳು ಮಾತ್ರ ಇದರಲ್ಲಿ ಹೂಡಿಕೆ ಮಾಡಹುದಾಗಿದೆ. ಆದ್ರೆ ಎನ್ ಪಿಎಸ್ ಹಾಗಲ್ಲ, ಯಾವುದೇ ವೃತ್ತಿ ಅಥವಾ ಉದ್ಯೋಗ ವ್ಯವಸ್ಥೆಯಲ್ಲಿರೋರು ಇದರ ಮೂಲಕ ನಿವೃತ್ತಿ ಬದುಕಿಗೆ ಒಂದಿಷ್ಟು ಕೂಡಿಡಬಹುದು.
2021ರ ಮಾರ್ಚ್ ಹಾಗೂ 2022ರ ಫೆಬ್ರವರಿ ನಡುವೆ ನೌಕರರ ಭವಿಷ್ಯ ನಿಧಿ ಸಂಸ್ಥೆಗೆ (EPFO) 1.11 ಕೋಟಿ ಚಂದಾದಾರರು ಸೇರ್ಪಡೆಗೊಂಡಿದ್ದಾರೆ. ಇನ್ನು 2021-22ನೇ ಸಾಲಿನಲ್ಲಿ 93.6 ಲಕ್ಷಕ್ಕೂ ಅಧಿಕ ಮಂದಿ ಎನ್ ಪಿಎಸ್ ಗೆ ಸೇರ್ಪಡೆಗೊಂಡಿದ್ದಾರೆ. ಬಹುತೇಕ ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ಇಪಿಎಫ್ ವ್ಯವಸ್ಥೆಯನ್ನು ಕಲ್ಪಿಸಿದ್ದರೂ ತರಿಗೆ ಉಳಿತಾಯದ ಉದ್ದೇಶದಿಂದ ಕೆಲವರು ಎನ್ ಪಿಎಸ್ ನಲ್ಲಿ ಕೂಡ ಹೂಡಿಕೆ ಮಾಡುತ್ತಾರೆ. ಹಾಗಾದ್ರೆ ಇವೆರಡರಲ್ಲಿ ಯಾವುದು ಬೆಸ್ಟ್?
EPF ಬಡ್ಡಿದರ: ಉದ್ಯೋಗಿಗಳಿಗೆ ಶಾಕ್ ಕೊಟ್ಟ ಸರ್ಕಾರ, 5 ಕೋಟಿ ಜನರಿಗೆ ಹೊಡೆತ!
ಎರಡರ ನಡುವೆ ವ್ಯತ್ಯಾಸವೇನು?
*ಈ ಎರಡೂ ಹೂಡಿಕೆಗಳು ನಿವೃತ್ತಿಗಾಗಿಯೇ ಉಳಿತಾಯ ಮಾಡೋ ಉದ್ದೇಶ ಹೊಂದಿರುವ ಕಾರಣ ಅವಧಿಗೂ ಮುನ್ನ ವಿತ್ ಡ್ರಾ ಮಾಡೋದನ್ನು ಪ್ರೋತ್ಸಾಹಿಸೋದಿಲ್ಲ. ಈ ಎರಡೂ ಹೂಡಿಕೆಗಳನ್ನು ನೀವು ದಶಕಗಳ ಬಳಿಕ ನಿಮ್ಮ ನಿವೃತ್ತಿಯ ಬಳಿಕ ಯಾವುದೇ ಆದಾಯ ಮೂಲಗಳು ಇಲ್ಲದ ಸಮಯದಲ್ಲಿ ಬಳಸಿಕೊಳ್ಳಬಹುದು.
*ಇನ್ನು ಇವೆರಡರ ನಡುವಿನ ದೊಡ್ಡ ವ್ಯತ್ಯಾಸವೆಂದ್ರೆ ಇಪಿಎಫ್ ಖಾತೆಯಲ್ಲಿ ಜಮಾ ಮಾಡಿದ ಹಣಕ್ಕೆ ನೀಡುವ ವಾರ್ಷಿಕ ಬಡ್ಡಿ ಮೇಲೆ ಯಾವುದೇ ತೆರಿಗೆ ವಿಧಿಸಲಾಗೋದಿಲ್ಲ. ಹೀಗಾಗಿ ಇದು ತೆರಿಗೆಮುಕ್ತ ರಿಟರ್ನ್ಸ್ ಒದಗಿಸುತ್ತದೆ. ಪ್ರಸ್ತುತ ಶೇ. 8.1 ಬಡ್ಡಿದರವನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ಆದ್ರೆ, ಎನ್ ಪಿಎಸ್ ರಿಟರ್ನ್ಸ್ ಮಾರುಕಟ್ಟೆ ಸ್ಥಿತಿಗತಿಗಳನ್ನು ಆಧರಿಸಿದೆ. ಇಪಿಎಫ್ ಮೇಲಿನ ಬಡ್ಡಿದರವನ್ನು ಭಾರತ ಸರ್ಕಾರ ನಿರ್ಧರಿಸುತ್ತದೆ. ಅದೇ ಎನ್ ಪಿಎಸ್ ರಿಟರ್ನ್ಸ್ ಮಾರುಕಟ್ಟೆ ಪರಿಸ್ಥಿತಿ ಮೇಲೆ ಅವಲಂಬಿತವಾಗಿದೆ.
*ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ ಇಪಿಎಫ್ ಮೇಲಿನ ಹೂಡಿಕೆಗೆ 1.5ಲಕ್ಷ ರೂ. ತನಕ ತೆರಿಗೆ ವಿನಾಯ್ತಿ ಸಿಗುತ್ತದೆ. ಇನ್ನು ಎನ್ ಪಿಎಸ್ ಸೆಕ್ಷನ್ 80CCD (1) ಹಾಗೂ 80CCD (2) ಅಡಿಯಲ್ಲಿ 2ಲಕ್ಷ ರೂ. ತನಕ ಒಟ್ಟು ತೆರಿಗೆ ವಿನಾಯ್ತಿ ಸಿಗುತ್ತದೆ.
*ಇವೆರಡ ನಡುವಿನ ಇನ್ನೊಂದು ಮೂಲಭೂತವಾದ ವ್ಯತ್ಯಾಸವೆಂದ್ರೆ ಇಪಿಎಫ್ ಖಾಸಗಿ ವಲಯದಲ್ಲಿ ಕಾರ್ಯನಿರ್ವಹಿಸೋ ವೇತನ ಪಡೆಯೋ ಉದ್ಯೋಗಿಗಳಿಗೆ ಮಾತ್ರ ಹೂಡಿಕೆ ಮಾಡಲು ಅವಕಾಶ ಕಲ್ಪಿಸುತ್ತದೆ. ಆದ್ರೆ ಎನ್ ಪಿಎಸ್ ನಲ್ಲಿ ಯಾವುದೇ ಭಾರತೀಯ ನಾಗರಿಕ ಹೂಡಿಕೆ ಮಾಡಬಹುದು. 18-60 ವಯಸ್ಸಿನ ನಡುವಿನ ಯಾವುದೇ ವ್ಯಕ್ತಿ ಸ್ವಉದ್ಯೋಗಿ ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಅವಕಾಶವಿದೆ.
*ಇನ್ನು ಇಪಿಎಫ್ ಗೆ ಕೊಡುಗೆಯಾಗಿ ಉದ್ಯೋಗಿಯ ಮೂಲವೇತನದ ಶೇ.12ರಷ್ಟನ್ನು ಕಡಿತಗೊಳಿಸಲಾಗುತ್ತದೆ. ಇಪಿಎಫ್ ಗೆ ಉದ್ಯೋಗಿಯು ಇದಕ್ಕಿಂತ ಹೆಚ್ಚಿನ ಕೊಡುಗೆ ನೀಡಲು ಕೂಡ ಅವಕಾಶವಿದೆ. ಆದ್ರೆ ಎನ್ ಪಿಎಸ್ ನಲ್ಲಿ ಖಾತೆದಾರರು ದೊಡ್ಡ ಮೊತ್ತದ ಇಲ್ಲವೇ ಸಣ್ಣ ಕಂತುಗಳಲ್ಲಿ ಹಣವನ್ನು ಹೂಡಿಕೆ ಮಾಡೋದು ಅಗತ್ಯ. ಎನ್ ಪಿಎಸ್ ಖಾತೆಗೆ ಒಂದು ಹಣಕಾಸು ಸಾಲಿನಲ್ಲಿ ಕನಿಷ್ಠ 6,000 ರೂ. ಹೂಡಿಕೆ ಮಾಡಬೇಕು.
*ಇನ್ನು ಇಪಿಎಫ್ ಖಾತೆಯಿಂದ ಅವಧಿ ಮುಗಿದ ಬಳಿಕ ಸಂಪೂರ್ಣ ಹಣವನ್ನು ವಿತ್ ಡ್ರಾ ಮಾಡಬಹುದು. ಆದ್ರೆ ಎನ್ ಪಿಎಸ್ ನಲ್ಲಿ ಅವಧಿ ಮುಗಿದ ಬಳಿಕ ಒಟ್ಟು ಮೊತ್ತದಲ್ಲಿ ಶೇ.40ರಷ್ಟನ್ನು ವರ್ಷಾಸನಗಳಲ್ಲಿ ಹೂಡಿಕೆ ಮಾಡೋದು ಕಡ್ಡಾಯ.
*ಎನ್ ಪಿಎಸ್ ನಲ್ಲಿ ಹೂಡಿಕೆದಾರರಿಗೆ ಹೆಚ್ಚಿನ ಸ್ವಾತತ್ರ್ಯವಿದೆ. ಅಂದ್ರೆ ಈಕ್ವಿಟಿ ಷೇರುಗಳಲ್ಲಿ ನೀವು ಎಷ್ಟು ಹಣವನ್ನು ಹೂಡಿಕೆ ಮಾಡಲು ಬಯಸುತ್ತೀರಿ ಎನ್ನೋದನ್ನು ಆಯ್ಕೆ ಮಾಡಲು ಇದು ಅವಕಾಶ ನೀಡುತ್ತದೆ.ನಿಮ್ಮ ತಿಂಗಳ ಕೊಡುಗೆಯಲ್ಲಿ ಗರಿಷ್ಠ ಶೇ.75ರಷ್ಟು ಹಣವನ್ನು ಹೂಡಿಕೆ ಮಾಡಬಹುದು. ಆದ್ರೆ ಇಪಿಎಫ್ ನಲ್ಲಿ ನಿಮ್ಮ ಹಣ ಎಲ್ಲಿ ಹೂಡಿಕೆಯಾಗಬೇಕು ಎಂದು ಆಯ್ಕೆ ಮಾಡುವ ಅವಕಾಶವಿಲ್ಲ. ಒಟ್ಟು ಹಣದ ಶೇ.5-ಶೇ.10ರಷ್ಟು ಈಕ್ವಿಟಿ ಷೇರುಗಳಲ್ಲಿ ಹೂಡಿಕೆಯಾಗುತ್ತದೆ.
*ಇಪಿಎಫ್ ನಲ್ಲಿ ಹೂಡಿಕೆ ಮಾಡಿದ ಹಣವನ್ನು ವೈದ್ಯಕೀಯ ಚಿಕಿತ್ಸೆ, ಗೃಹಸಾಲ ಮರುಪಾವತಿ, ಗೃಹ ಖರಿದಿ ಸೇರಿದಂತೆ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅವಧಿಗೂ ಮುನ್ನ ನಿಗದಿತ ಮೊತ್ತ ವಿತ್ ಡ್ರಾ ಮಾಡಲು ಅವಕಾಶವಿದೆ. ಇನ್ನು ಎನ್ ಪಿಎಸ್ ನಿಂದ ಅವಧಿಗೂ ಮುನ್ನ ಸ್ವಲ್ಪ ಹಣವನ್ನು ವಿತ್ ಡ್ರಾ ಮಾಡಲು ಅವಕಾಶವಿದೆ. ಆದ್ರೆ ಎನ್ ಪಿಎಸ್ ನಲ್ಲಿನ ಒಟ್ಟು ಹಣದಲ್ಲಿ ಶೇ.80ರಷ್ಟನ್ನು ವರ್ಷಾಸನಗಳಲ್ಲಿ ಹೂಡಿಕೆ ಮಾಡೋದು ಕಡ್ಡಾಯ. ಇನ್ನು 60 ವರ್ಷದ ಬಳಿಕ ವಿತ್ ಡ್ರಾ ಮಾಡೋವಾಗ ಕೂಡ ಶೇ.40ರಷ್ಟನ್ನು ವರ್ಷಾಸನಗಳಲ್ಲಿ ಹೂಡಿಕೆ ಮಾಡೋದು ಕಡ್ಡಾಯ.