ಫೇಸ್ ಬುಕ್, ಇನ್‌ಸ್ಟಾಗ್ರಾಮ್ ಬಳಕೆದಾರರು ತಾಂತ್ರಿಕ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡ ಬೆನ್ನಲ್ಲೇ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಪ್ರತಿಸ್ಪರ್ಧಿ ಮೆಟಾ ಪ್ಲಾಟ್ ಫಾರ್ಮ್ ಅನ್ನು ಅಪಹಾಸ್ಯ ಮಾಡುವ ಪೋಸ್ಟ್ ಶೇರ್ ಮಾಡಿದ್ದಾರೆ.
ನವದೆಹಲಿ (ಮಾ.6): ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಬಳಕೆದಾರರು ಲಾಗಿನ್ ಸಮಸ್ಯೆ ಬಗ್ಗೆ ಅಳಲು ತೋಡಿಕೊಂಡ ಬೆನ್ನಲ್ಲೇ 'ಎಕ್ಸ್' (ಈ ಹಿಂದಿನ ಟ್ವಿಟ್ಟರ್) ಮುಖ್ಯಸ್ಥ ಎಲಾನ್ ಮಸ್ಕ್ ಮಂಗಳವಾರ ತನ್ನ ಪ್ರತಿಸ್ಪರ್ಧಿ ಸಂಸ್ಥೆ ಮೆಟಾ ಪ್ಲಾಟ್ ಫಾರ್ಮ್ ಕುರಿತು ತಮಾಷೆಯ ಪೋಸ್ಟ್ ಶೇರ್ ಮಾಡಿದ್ದಾರೆ. 'ನೀವು ಈ ಪೋಸ್ಟ್ ಓದುತ್ತಿದ್ದರೆ, ಇದಕ್ಕೆ ನಮ್ಮ ಸರ್ವರ್ ಕೆಲಸ ಮಾಡುತ್ತಿರೋದೆ ಕಾರಣ' ಎಂದು ಮಸ್ಕ್ ಬರೆದುಕೊಂಡಿದ್ದಾರೆ. ಇದಾದ ಕೆಲವು ನಿಮಿಷಗಳ ಬಳಿಕ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಲೋಗೋಗಳನ್ನು ಹೊಂದಿರುವ ಪೆಂಗ್ವಿನ್ ಗಳು 'ಎಕ್ಸ್' ಲೋಗೋ ಹೊಂದಿರುವ ಪೆಂಗ್ವಿನ್ ಗೆ ಸಲ್ಯೂಟ್ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ. ಜಗತ್ತಿನಾದ್ಯಂತ ಸಾವಿರಾರು ಮಂದಿ ಬಳಕೆದಾರರಿಗೆ ಫೇಸ್ ಬುಕ್ ಹಾಗೂ ಇನ್‌ಸ್ಟಾಗ್ರಾಮ್ ಪ್ಲಾಟ್ ಫಾರ್ಮ್ ಗಳು ಡೌನ್ ಆಗಿದ್ದವು. ಅಂದಹಾಗೇ ಮಸ್ಕ್ ಟ್ವಿಟ್ಟರ್ ಖರೀದಿಸಿದ ಬಳಿಕ ಹಲವು ಬಾರಿ ಸರ್ವರ್ ಸಮಸ್ಯೆ ಎದುರಿಸಿತ್ತು. ಹೀಗಾದಾಗ ಪ್ರತಿ ಬಾರಿಯೂ ಮಸ್ಕ್ ಟ್ರೋಲ್ ಆಗಿದ್ದರು. ಆದರೆ ತಕ್ಷಣವೇ ಸಮಸ್ಯೆ ಸರಿಪಡಿಸಲಾಗಿತ್ತು. ಬಳಿಕ ಟ್ವಿಟರ್ ತಾಂತ್ರಿಕ ಸಮಸ್ಯೆ ಎದುರಾಗದಂತೆ ನೋಡಿಕೊಂಡಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಥ್ರೆಡ್ಸ್ ಬಳಕೆದಾರರು ಏಕಾಏಕಿ ತಾಂತ್ರಿಕ ಸಮಸ್ಯೆ ಎದುರಿಸಿದ್ದಾರೆ. ಮೆಟಾ ಸರ್ವರ್ ಸಮಸ್ಯೆ ಕಾಣಿಸಿಕೊಂಡಿದ್ದು, ಫೇಸ್‌ಬುಕ್ , ಮೆಸೇಂಜರ್, ಇನ್‌ಸ್ಟಾಗ್ರಾಂ ಬಳಕೆದಾರರು ಇದೀಗ ಲಾಗಿನ್ ಸಮಸ್ಯೆಯಿಂದ ಪರಾದಾಡುತ್ತಿದ್ದಾರೆ. ಏಕಾಏಕಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಥ್ರೆಡ್ಸ್ ಲಾಗ್ ಔಟ್ ಆಗಿದೆ. ಬಳಿಕ ಹೊಸ ಪಾಸ್‌ವರ್ಡ್ ಸಹಿತಿ ಏನೇ ಮಾಡಿದರೂ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮದಲ್ಲಿ ಬಳಕೆದಾರರು ಅಳಲು ತೋಡಿಕೊಂಡಿದ್ದಾರೆ.
ಫೇಸ್ ಬುಕ್ ಬಳಕೆದಾರರಿಗೆ ತಮ್ಮ ಖಾತೆಗಳಿಗೆ ಲಾಗಿನ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಇನ್ನೊಂದೆಡೆ ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಫೀಡ್ಸ್ ರಿಫ್ರೆಶ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. 14,864 ಬಳಕೆದಾರರು ಇನ್‌ಸ್ಟಾಗ್ರಾಮ್ ಸಮಸ್ಯೆ ಬಗ್ಗೆ ವರದಿ ಮಾಡಿದ್ರೆ, 12,103 ಜನರು ಫೇಸ್ ಬುಕ್ ತೊಂದ್ರೆ ಬಗ್ಗೆ ಮಂಗಳವಾರ ಸಂಜೆ ಮಾಹಿತಿ ನೀಡಿದ್ರು.
ಇನ್ನು ಥ್ರೆಡ್ಸ್ ಬಳಕೆದಾರರು ಕೂಡ ಸಮಸ್ಯೆ ಎದುರಿಸಿದ್ರು. ಈ ಆಪ್ ತೆರೆದ ತಕ್ಷಣ 'error'ಸಂದೇಶ ಕಾಣಿಸುತ್ತಿತ್ತು. “Sorry, something went wrong. Try again” ಎಂಬ ಸಂದೇಶ ಕಾಣಿಸುತ್ತಿತ್ತು.
ಮೆಟಾ ಪ್ಲಾಟ್ ಫಾರ್ಮ್ ಬಳಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನೆಟ್ಟಿಗರು ಎಕ್ಸ್ ನಲ್ಲಿ ಹಾಸ್ಯಾಸ್ಪದ ಪೋಸ್ಟ್ ಗಳನ್ನು ಶೇರ್ ಮಾಡಿದ್ದರು. ಬಳಕೆದಾರರಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಹಾಗೂ ಥ್ರೆಡ್ಸ್ ಬಳಕೆಯಲ್ಲಿ ಸಮಸ್ಯೆಯಾಗಿರುವ ಬಗ್ಗೆ ಮೆಟಾ ವಕ್ತಾರ ಆಂಡಿ ಸ್ಟೋನ್ ಖಚಿತಪಡಿಸಿದ್ದಾರೆ. 'ಜನರು ನಮ್ಮ ಸೇವೆಗಳನ್ನು ಪಡೆಯುವಲ್ಲಿ ಸಮಸ್ಯೆ ಎದುರಿಸುತ್ತಿರುವ ಬಗ್ಗೆ ನಮಗೆ ಅರಿವಿದೆ. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾವೀಗ ಕಾರ್ಯನಿರತರಾಗಿದ್ದೇವೆ' ಎಂದು ಸ್ಟೋನ್ 'ಎಕ್ಸ್' ನಲ್ಲಿ ಬರೆದಿದ್ದಾರೆ.
ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಮೆಟಾ ಸೇವೆ ತಾತ್ಕಾಲಿಕ ಸ್ಥಗಿತಗೊಂಡಿದೆ. ಡೌನ್ ಡಿಟೆಕ್ಟರ್ ಡಾಟ್ ಕಾಮ್ ತಾಂತ್ರಿಕ ಸಮಸ್ಯೆ ಕುರಿತು ಮಾಹಿತಿ ನೀಡಿದೆ. ಮೆಟಾದ ಕೆಲ ಸೇವೆಗಳು ಸ್ಥಗಿತಗೊಂಡಿದೆ. ತಾಂತ್ರಿಕ ಸಮಸ್ಯೆಯಿಂದ ಬಳಕೆದಾರರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಅನ್ನೋ ಮಾಹಿತಿಯನ್ನು ನೀಡಿದೆ. ಟ್ವಿಟರ್‌ನಲ್ಲಿ ಈ ಕುರಿತು ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಎಲಾನ್ ಮಸ್ಕ್ ಕೈಜಾರಿದ ವಿಶ್ವದ ನಂ.1 ಶ್ರೀಮಂತನ ಪಟ್ಟ ಜೆಫ್ ಬೆಜೋಸ್ ಪಾಲು
2024ರ ಅತೀ ದೊಡ್ಡ ಸರ್ವರ್ ಡೌನ್ ಎಂದು ಹೇಳಲಾಗುತ್ತದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಸೇರಿದಂತೆ ಮೆಟಾ ಕೆಲ ಸೇವೆಗಳು ಈ ಮಟ್ಟಿನ ತಾಂತ್ರಿಕ ಸಮಸ್ಯೆ ಎದುರಿಸಿಲ್ಲ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಮೆಟಾ ಮಾಲೀಕತ್ವದ ವ್ಯಾಟ್ಸ್ಆ್ಯಪ್ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ಇನ್ನುಳಿದ ಸೇವೆಗಳು ತಾತ್ಕಾಲಿಕ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ತಾಂತ್ರಿಕ ಸಮಸ್ಯೆ ಪರಿಹಾರವಾಗುವ ಸಾಧ್ಯತೆಯನ್ನು ಡೌನ್ ಡಿಟೆಕ್ಟರ್ ನೀಡಿದೆ.