'ಎಕ್ಸ್' ಹೊಸ ಬಳಕೆದಾರರು ಪೋಸ್ಟ್, ರಿಪ್ಲೈ, ಲೈಕ್ಸ್ ಮಾಡಲು ಇನ್ಮುಂದೆ ಶುಲ್ಕ ಪಾವತಿಸಬೇಕಾಗುತ್ತದೆ.ಈ ಹೊಸ ನಿಯಮದ ಜಾರಿ ಬಗ್ಗೆ ಎಕ್ಸ್ ಮುಖ್ಯಸ್ಥ ಎಲಾನ್ ಮಸ್ಕ್ ಮಾಹಿತಿ ನೀಡಿದ್ದು, ಶೀಘ್ರದಲ್ಲೇ ಜಾರಿಗೆ ತರೋದಾಗಿ ತಿಳಿಸಿದ್ದಾರೆ.
ನವದೆಹಲಿ (ಏ.16): 'ಎಕ್ಸ್' (ಈ ಹಿಂದಿನ ಟ್ವಿಟ್ಟರ್) ಹೊಸ ಬಳಕೆದಾರರಿಗೆ ಎಲಾನ್ ಮಸ್ಕ್ ಶಾಕ್ ನೀಡಿದ್ದಾರೆ. ಎಕ್ಸ್ ನಲ್ಲಿ ಹೊಸ ವ್ಯವಸ್ಥೆಯೊಂದನ್ನು ಮಸ್ಕ್ ಪರಿಚಯಿಸಿದ್ದು, ನೀವು ಏನಾದರೂ ಪೋಸ್ಟ್ ಬರೆಯಲು, ಯಾರಿಗಾದರೂ ರಿಪ್ಲೈ ನೀಡಲು ಅಥವಾ ಯಾವುದೇ ಒಂದು ಪೋಸ್ಟ್ ಗೆ ಲೈಕ್ ನೀಡಲು ಬಯಸಿದ್ರೆ ಹಣ ಪಾವತಿಸೋದು ಅಗತ್ಯ. ಹಣ ಪಾವತಿಸಿ ಬಳಸಬಹುದಾದ ಈ ವ್ಯವಸ್ಥೆ ಹೊಸ ಬಳಕೆದಾರರಿಗೆ ಮಾತ್ರ ಅನ್ವಯಿಸಲಿದೆ. ಎಕ್ಸ್ ನಲ್ಲಿ ಸ್ಪಾಮ್ ಹಾಗೂ ಬುಟ್ಸ್ ದೊಡ್ಡ ಸವಾಲಾಗಿದ್ದು, ಇದರ ಬೆಳವಣಿಗೆಯನ್ನು ನಿಯಂತ್ರಿಸಲು ಪ್ಲಾಟ್ ಫಾರ್ಮ್ ಗೆ ಹೊಸದಾಗಿ ಸೇರ್ಪಡೆಗೊಳ್ಳೋರಿಗೆ ಶುಲ್ಕ ವಿಧಿಸೋದು ಅನಿವಾರ್ಯವಾಗಿದೆ ಎಂದು ಎಲಾನ್ ಮಸ್ಕ್ ತಿಳಿಸಿದ್ದಾರೆ. ಇನ್ನು ಪ್ರತಿಯೊಬ್ಬರೂ ಎಕ್ಸ್ ಅನ್ನು ಉಚಿತವಾಗಿ ಫಾಲೋ ಹಾಗೂ ಬ್ರೌಸ್ ಮಾಡಬಹುದು. ಆದರೆ, ಹೊಸದಾಗಿ ಯಾರಾದ್ರೂ 'ಎಕ್ಸ್ 'ಗೆ ಸೇರ್ಪಡೆಯಾಗಲು ಬಯಸಿದ್ರೆ ಆಗ ಅವರಿಗೆ ವಾರ್ಷಿಕ ಶುಲ್ಕ ವಿಧಿಸಲಾಗುತ್ತದೆ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.
'ಹೊಸ ಬಳಕೆದಾರರು 'ಎಕ್ಸ್' ಪ್ಲಾಟ್ ಫಾರ್ಮ್ ನಲ್ಲಿ ಪೋಸ್ಟ್ , ಲೈಕ್, ಬುಕ್ ಮಾರ್ಕ್ ಹಾಗೂ ರಿಪ್ಲೈ ಮಾಡುವ ಮುನ್ನ ಸಣ್ಣ ಮೊತ್ತದ ವಾರ್ಷಿಕ ಶುಲ್ಕ ಪಾವತಿಸಬೇಕಾಗುತ್ತದೆ. ಇದು ಸ್ಪಾಮ್ ತಗ್ಗಿಸಲು ಹಾಗೂ ಪ್ರತಿಯೊಬ್ಬರಿಗೂ ಉತ್ತಮ ಅನುಭವ ನೀಡುವ ಉದ್ದೇಶವನ್ನು ಹೊಂದಿದೆ. ಆದರೆ, ನೀವು ಈಗಲೂ ಕೂಡ ಉಚಿತವಾಗಿ ಎಕ್ಸ್ ಖಾತೆಗಳನ್ನು ಫಾಲೋ ಮಾಡಬಹುದು, ಹಾಗೆಯೇ ಬ್ರೌಸ್ ಸಹ ಮಾಡಬಹುದು' ಎಂದು ಮಸ್ಕ್ ತಿಳಿಸಿದ್ದಾರೆ. ಅಲ್ಲದೆ, ಈ ಹೊಸ ನಿಯಮ ಶೀಘ್ರದಲ್ಲೇ ಅನುಷ್ಠಾನಕ್ಕೆ ಬರಲಿದೆ ಎಂದು ಮಸ್ಕ್ ದೃಢಪಡಿಸಿದ್ದಾರೆ.
ಪ್ರಧಾನಿ ಮೋದಿ ಭೇಟಿಗೆ ಕಾತುರದಿಂದ ಕಾಯ್ತಿರುವೆ: ಎಲಾನ್ ಮಸ್ಕ್
ಎಕ್ಸ್ ಪ್ಲಾಟ್ ಫಾರ್ಮ್ ನಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಜಾರಿಗೆ ತರಲು ಮಸ್ಕ್ ಯೋಜನೆ ರೂಪಿಸುತ್ತಿದ್ದಾರೆ. ಇದರಲ್ಲಿ 'ಎಕ್ಸ್' ನಲ್ಲಿ ಬಹುತೇಕ ಫೀಚರ್ಸ್ ಗಳಿಗೆ ಶುಲ್ಕ ವಿಧಿಸೋದು ಕೂಡ ಸೇರಿದೆ. ಈ ಹಿಂದೆ ಪ್ರತಿ ಎಕ್ಸ್ ಬಳಕೆದಾರರಿಗೆ ಅವರ ಉದ್ಯಮವನ್ನು ಪರಿಣಾಮಕಾರಿಯಾಗಿ ಮುನ್ನಡೆಸಲು ಶುಲ್ಕ ವಿಧಿಸುವ ಬಗ್ಗೆ ಮಸ್ಕ್ ಪ್ರಸ್ತಾಪಿಸಿದ್ದರು. ಆದರೆ, ಮೂಲ ಫೀಚರ್ ಗಳಿಗೂ ಹಣ ಪಾವತಿಸಿ ಬಳಸುವ ಯೋಚನೆ ಎಕ್ಸ್ ನ ಬಹುತೇಕ ಬಳಕೆದಾರರಿಗೆ ಇಷ್ಟವಾಗಿರಲಿಲ್ಲ.
ಈ ಹಿಂದೆ ಕೂಡ ಮಸ್ಕ್ ಅವರ ಎಕ್ಸ್ ಸೇವೆ ಬಳಕೆಗೆ ಶುಲ್ಕ ವಿಧಿಸುವ ಯೋಚನೆ ಬಳಕೆದಾರರಿಗೆ ಇಷ್ಟವಾಗಿಲ್ಲ ಎಂದ ಮೇಲೆ ಈಗ ಜಾರಿಗೆ ತರಲು ನಿರ್ಧರಿಸಿರುವ ಹೊಸ ನಿಯಮ ಕೂಡ ಹೊಸ ಎಕ್ಸ್ ಬಳಕೆದಾರರ ಸಂಖ್ಯೆಯನ್ನು ತಗ್ಗಿಸುವ ಸಾಧ್ಯತೆಯೂ ಇದೆ. ಹೀಗಿರುವಾಗ ಮಸ್ಕ್ ಪ್ಲಾಟ್ ಫಾರ್ಮ್ ನ ಒಟ್ಟಾರೆ ಬಳಕೆದಾರರ ಬೆಳವಣಿಗೆಯನ್ನು ತಗ್ಗಿಸಲು ಪ್ರಯತ್ನಿಸುತ್ತಿದ್ದಾರಾ ಎಂಬ ಪ್ರಶ್ನೆ ಮೂಡೋದು ಸಹಜ. ಮಸ್ಕ್ ಇಂಥ ನಿರ್ಧಾರದಿಂದ ಎಸ್ಕ್ ಬಳಕೆದಾರರ ಸಂಖ್ಯೆ ತಗ್ಗುವುದಿಲ್ಲವೆ? ಆದರೆ, ಇದಕ್ಕು ಕೂಡ ಮಸ್ಕ್ ಸ್ಪಷ್ಟನೆ ನೀಡಿದ್ದಾರೆ. 'ಬುಟ್ಸ್ ಹಾಗೂ ಸ್ಪಾಮ್ ತಡೆಗೆ ಹೊಸ ಬಳಕೆದಾರರಿಗೆ ಸಣ್ಣ ಮೊತ್ತದ ಶುಲ್ಕ ವಿಧಿಸೋದೊಂದೆ ಈಗ ಉಳಿದಿರುವ ಏಕೈಕ ಮಾರ್ಗವಾಗಿದೆ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.
ಭಾರತಕ್ಕೂ ಬರಲಿದೆ ಟೆಸ್ಲಾ, ಎಲೋನ್ ಮಸ್ಕ್ ಉದ್ಯಮಕ್ಕೆ ಹೂಡಿಕೆ ಮಾಡ್ತಿರೋ ಬಿಲಿಯನೇರ್ ಯಾರು?
ನಕಲಿ ಬುಟ್ ಖಾತೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇದರಿಂದಾಗಿ ಕೆಲವು ಉತ್ತಮ ಹ್ಯಾಂಡಲ್ಸ್ ಪ್ಲಾಟ್ ಫಾರ್ಮ್ ನ ನಿಜವಾದ ಬಳಕೆದಾರರಿಗೆ ಸಿಗುತ್ತಿಲ್ಲ ಎಂದು ಮಸ್ಕ್ ತಿಳಿಸಿದ್ದಾರೆ. ವಾರ್ಷಿಕ ಶುಲ್ಕ ಎಷ್ಟಿರಲಿದೆ ಎಂಬುದು ನಮಗೆ ಈ ತನಕ ಗೊತ್ತಿಲ್ಲ. ಆದರೆ, ಎಕ್ಸ್ ಈ ಆಯ್ಕೆಯನ್ನು ಆಯ್ದ ಮಾರುಕಟ್ಟೆಯಲ್ಲಿ ಈಗಾಗಲೇ ಪರೀಕ್ಷಿಸಿದೆ. ಅಲ್ಲಿ ಹೊಸ ಬಳಕೆದಾರರಿಗೆ ಇಡೀ ವರ್ಷಕ್ಕೆ $1 (ಅಂದಾಜು 82 ರೂ.) ಶುಲ್ಕ ವಿಧಿಸಲಾಗಿದೆ. ಅಲ್ಲದೆ, ಅಲ್ಲಿನ ಬಳಕೆದಾರರಿಗೆ ಇದೊಂದೇ ಮಾರ್ಗ ಉಳಿದಿರುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಅಲ್ಲದೆ, ಎಕ್ಸ್ ಈಗಾಗಲೇ ತನ್ನ ಪ್ರೀಮಿಯಂ ಚಂದಾದಾರಿಕೆಯನ್ನು ವಿವಿಧ ಟೈರ್ ಗಳಲ್ಲಿ ನೀಡಿದೆ.