ದೇಶದ ಮೊದಲ ಅಗರಬತ್ತಿ ಪಾರ್ಕ್ ಗೆ ಮಹಿಳೆಯರೇ ಸಾರಥಿಗಳು; ಏನಿದರ ವಿಶೇಷತೆ? ಇಲ್ಲಿದೆ ಮಾಹಿತಿ

By Suvarna News  |  First Published Mar 28, 2023, 3:51 PM IST

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ವಿದರ್ಭ ಸಮೀಪದ ಉಮ್ರೆಡ್  ಎಂಬ ನಗರ ಈಗ ದೇಶದ ಮೊದಲ 'ಅಗರಬತ್ತಿ ಪಾರ್ಕ್' ಎಂದು ಗುರುತಿಸಿಕೊಂಡಿದೆ. ಈ ಪಾರ್ಕ್ ಅನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡುತ್ತಿದ್ದಾರೆ. ಈ ಪಾರ್ಕ್ ನಿಂದ ಕನಿಷ್ಠ ಒಂದು ಸಾವಿರ ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗ ದೊರಕಿದೆ. 


ನಾಗ್ಪುರ (ಮಾ.28): ಅಗರಬತ್ತಿ ತಯಾರಿ ಅದೆಷ್ಟೋ ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನೆಗೆ ದಾರಿಯಾಗಿದೆ. ಅಗರಬತ್ತಿ ಸಿದ್ಧಪಡಿಸಿ ಅನೆಕ ಮಹಿಳೆಯರು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ವಿದರ್ಭ ಸಮೀಪದ ಉಮ್ರೆಡ್  ಎಂಬ ನಗರ ಈಗ ದೇಶದ ಮೊದಲ 'ಅಗರಬತ್ತಿ ಪಾರ್ಕ್' ಎಂದು ಗುರುತಿಸಿಕೊಂಡಿದ್ದು, ಇದನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡುತ್ತಿರೋದು ವಿಶೇಷ. ಉಮ್ರೆಡ್ ನಗರದಲ್ಲಿ ಅಗಬರತ್ತಿ ತಯಾರಿಕೆಯ 42 ಸಣ್ಣ ಘಟಕಗಳಿವೆ. ಇವು ಉಮ್ರೆಡ್ ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ನಿಗಮದ (ಎಂಐಡಿಸಿ)  ಕಟ್ಟಡದಲ್ಲಿದ್ದು, ಅಗರಬತ್ತಿ ಉತ್ಪಾದನೆಯಲ್ಲಿ ತೊಡಗಿವೆ. ಇಲ್ಲಿ ಐಟಿಸಿ ಹಾಗೂ ರಂಗರಾವ್ ಹಾಗೂ ಸನ್ಸ್ ಅವರಂತಹ ಸುಪ್ರಸಿದ್ಧ ಕಂಪನಿಗಳ ಅಗರಬತ್ತಿ ಘಟಕಗಳಿವೆ. ಈ ಕಂಪನಿಗಳು ತಮ್ಮದೇ ಟ್ರೇಡ್ ಮಾರ್ಕ್ ನಲ್ಲಿ ಇಲ್ಲಿಯೇ ಅಗರಬತ್ತಿಗೆ ಸುವಾಸನೆ, ಪ್ಯಾಕೇಜಿಂಗ್ ಹಾಗೂ ಬ್ರ್ಯಾಂಡಿಂಗ್ ಕಾರ್ಯಗಳನ್ನು ಮಾಡುತ್ತವೆ. ಉಮ್ರೆಡ್ ಅಗರಬತ್ತಿ ಪಾರ್ಕ್ ನಿಂದ ಕನಿಷ್ಠ ಒಂದು ಸಾವಿರ ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗ ದೊರಕಿದೆ. ಒಮ್ಮೆ ಹೈ ಟೆಕ್ ಸಾಮಾನ್ಯ ಸೌಲಭ್ಯ ಕೇಂದ್ರ ಅಥವಾ ಸಿಎಫ್ ಸಿ ಪೂರ್ಣಗೊಂಡ ಬಳಿಕ ಈ ಪಾರ್ಕ್ ದೇಶದ ಒಟ್ಟು ಅಗರಬತ್ತಿ ಉತ್ಪಾದನೆಯ ಶೇ.3ರಷ್ಟನ್ನು ಉತ್ಪಾದಿಸಲಿದೆ ಎಂದು ಟೈಮ್ಸ್ ನ್ಯೂಸ್ ವರದಿ ಮಾಡಿದೆ. 

ಉಮ್ರೆಡ್ ನ ಈ ಅಗರಬತ್ತಿ ಪಾರ್ಕ್ ಸ್ಥಳೀಯ ಮಹಿಳೆಯರಿಗೆ ಉದ್ಯೋಗಾವಕಾಶ ನೀಡುವ ಮೂಲಕ ಅವರಿಗೆ ಆರ್ಥಿಕ ನೆರವು ನೀಡುತ್ತಿದೆ. 'ಈ ಯೋಜನೆ ನನಗೆ ವರದಾನವಾಗಿದೆ. ಮೂರು ತಿಂಗಳ ಹಿಂದೆ ಈ ಕ್ಲಸ್ಟರ್ ಗೆ ಸೇರ್ಪಡೆಗೊಳ್ಳುವ ಮುನ್ನ ನಾನು ಗೃಹಿಣಿಯಾಗಿದ್ದೆ. ನನ್ನ ಪತಿ ಚಪ್ಪಲಿ ತಯಾರಿಸುವ ಕೆಲಸ ಮಾಡುತ್ತಿದ್ದಾರೆ. ಕುಟುಂಬದ ಆದಾಯವನ್ನು ಹೆಚ್ಚಿಸಲು ನನಗೆ ಉದ್ಯೋಗದ ಅವಶ್ಯಕತೆ ಇತ್ತು. ಸದ್ಯ ನನಗೆ ದಿನಕ್ಕೆ 200ರೂ. ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಉದ್ಯಮ ಇನ್ನಷ್ಟು ವಿಸ್ತರಣೆಗೊಂಡು ವೇತನ ಹೆಚ್ಚಳವಾಗುವ ನಿರೀಕ್ಷೆಯಿದೆ' ಎನ್ನುತ್ತಾರೆ ಉಮ್ರೆಡ್ ಅಗರಬತ್ತಿ ಪಾರ್ಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ರೂಪಾಲಿ ದೇವ್ ಗುಣೆ.  

Tap to resize

Latest Videos

Success Story: ಶಿಕ್ಷಕಿಯಾಗಿ ವೃತ್ತಿ ಶುರು ಮಾಡಿದ ಮಹಿಳೆ ಈಗ ಲಕ್ಷಾಂತರ ರೂ ಗಳಿಸ್ತಾರೆ

ಟೈಮ್ಸ್ ನ್ಯೂಸ್ ವರದಿ ಪ್ರಕಾರ ಉಮ್ರೆಡ್ ಅಗರಬತ್ತಿ ಪಾರ್ಕ್ 26 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಹರಡಿದ್ದು, ಉತ್ಪಾದನೆ, ಪರ್ಫ್ಯೂಮಿಂಗ್ ಹಾಗೂ ಮಾರ್ಕೆಟಿಂಗ್ ತನಕದ ಎಲ್ಲ ಕಾರ್ಯವನ್ನು ನಾಗ್ಪುರ ಅಗರಬತ್ತಿ ಮಾರ್ಕೆಟಿಂಗ್ ಅಸೋಸಿಯೇಷನ್ ಮೂಲಕ ಮಾಡಲಾಗುತ್ತಿದೆ. ಭಾರತದಲ್ಲಿ ಕಚ್ಚಾ ಅಗರಬತ್ತಿ ಅಗತ್ಯ ವರ್ಷಕ್ಕೆ 2.2 ಲಕ್ಷ ಟನ್ ಗಳಷ್ಟಿದೆ. 

ಉಮ್ರೆಡ್ ಅಗರಬತ್ತಿ ಪಾರ್ಕ್ ಅಗರಬತ್ತಿ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ನೆರವು ನೀಡಲಿದೆ. ಬಿದಿರು ತಜ್ಞ ಪ್ರತಾಪ್ ಗೋಸ್ವಾಮಿ ಅವರು ಈ ಪ್ರಾಜೆಕ್ಟ್ ರೂಪಿಸಿದ್ದು, ಇದಕ್ಕೆ ಮುಖ್ಯಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಸಿಎಂಇಜಿಪಿ) ನೆರವು ನೀಡಿದೆ. ಇದು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕಿರು ಹಾಗೂ ಸಣ್ಣ ಉದ್ಯಮಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.

'ಇದು ಸುದೀರ್ಘ ಅವಧಿಯ ಪ್ರಕ್ರಿಯೆಯಾಗಿದ್ದು, 2017ರಲ್ಲಿ ಪ್ರಾರಂಭಗೊಂಡಿತ್ತು. ಈ ಪರಿಕಲ್ಪನೆ ಬಗ್ಗೆ ಜನರಿಗೆ ವಿವರಿಸೋದ್ರಿಂದ ಹಿಡಿದು ಅವರನ್ನು ಕೆಲಸಕ್ಕೆ ಕರೆದುಕೊಂಡು ಬರೋದು, ಸಾಲ ದೊರಕಿಸುವ ಜೊತೆಗೆ ಯಂತ್ರಗಳನ್ನು ಅಳವಡಿಸುವ ತನಕ ಎಲ್ಲ ಕೆಲಸಗಳಿಗೆ ಸಾಕಷ್ಟು ಶ್ರಮದ ಅಗತ್ಯವಿತ್ತು. ಐದು ವರ್ಷಗಳ ಕಾರ್ಯದ ಬಳಿಕ ಎಲ್ಲವೂ ಸಾಧ್ಯವಾಗಿದೆ ಎಂದು ಗೋಸ್ವಾಮಿ ತಿಳಿಸಿದ್ದಾರೆ. 

Business Women : ಬೀಚಲ್ಲಿ ಟೀ ಮಾರ್ತಿದ್ದ ಮಹಿಳೆ ಈಗ ಕೋಟ್ಯಾಂತರ ರೂಪಾಯಿ ಒಡತಿ

ಪ್ರತಿ ಘಟಕದ ಸ್ಥಾಪನೆಗೆ 42ಲಕ್ಷ ರೂ. ಅಗತ್ಯವಿತ್ತು. ಷೇರುದಾರರು 4ಲಕ್ಷ ರೂ. ಹೂಡಿಕೆ ಮಾಡಬೇಕು. ಇನ್ನು ರಾಜ್ಯ ಸರ್ಕಾರ 11ಲಕ್ಷ ರೂ. ಸಬ್ಸಿಡಿ ನೀಡಿತ್ತು. ಉಳಿದ 27ಲಕ್ಷ ರೂ. ಬ್ಯಾಂಕ್ ಸಾಲದ ಮೂಲಕ ಪಡೆಯಲಾಗಿತ್ತು. 10 ಮಷಿನ್ ಗಳು ಹಾಗೂ ಯಂತ್ರಗಳಿವೆ. ಪ್ರತಿ ಘಟಕ  10-15 ಜನರಿಗೆ ಉದ್ಯೋಗ ಒದಗಿಸುತ್ತಿದೆ. 

click me!