ನವದೆಹಲಿ(ಅ.01): ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ (International market) ಕಚ್ಚಾತೈಲದ ಬೆಲೆ ಏರಿಕೆ ಪರಿಣಾಮ ಭಾರತದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗುರುವಾರ ಡೀಸೆಲ್ (Diesel) ಬೆಲೆಯನ್ನು ಲೀ.ಗೆ 31 ಪೈಸೆ ಮತ್ತು ಪೆಟ್ರೋಲ್ (Petrol) ಬೆಲೆಯನ್ನು ಲೀಗೆ 26 ಪೈಸೆಯಷ್ಟುಹೆಚ್ಚಳ ಮಾಡಿವೆ.
ಇದರೊಂದಿಗೆ ಡೀಸೆಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದಂತಾಗಿದೆ. 3 ವಾರಗಳ ಬಳಿಕ ಕಳೆದ ವಾರರಿಂದ ಮತ್ತೆ ತೈಲ ದರ ಏರಿಕೆ ಆರಂಭವಾಗಿತ್ತು. ಅದರ ಬಳಿಕ ಡೀಸೆಲ್ ದರ 1.25 ರು.ನಷ್ಟುಮತ್ತು ಪೆಟ್ರೋಲ್ ದರ 50 ಪೈಸೆಯಷ್ಟುಹೆಚ್ಚಳವಾಗಿದೆ.
2 ತಿಂಗಳ ನಂತರ ಡೀಸೆಲ್ ಬೆಲೆ ಏರಿಕೆ : ಪೆಟ್ರೋಲ್ ಬೆಲೆ ಏರಿಕೆ ಇಲ್ಲ
ಗುರುವಾರದ ದರ ಏರಿಕೆ ಬಳಿಕ ಬೆಂಗಳೂರಿನಲ್ಲಿ (Bengaluru) ಡೀಸೆಲ್ ದರ 95.30 ರು. ಮತ್ತು ಪೆಟ್ರೋಲ್ ದರ 105.18 ರು.ಗೆ ಏರಿದೆ. ಇನ್ನು ದೆಹಲಿಯಲ್ಲಿ (Delhi) ಪೆಟ್ರೋಲ್‌ಗೆ 101.64, ಡೀಸೆಲ್‌ಗೆ 89.87 ರು., ವಾಣಿಜ್ಯ ರಾಜಧಾನಿ ಮುಂಬೈನಲ್ಲಿ (Mumbai) ಪೆಟ್ರೋಲ್ ದರ 107.71 ರು. ಹಾಗೂ ಡೀಸೆಲ್ ಬೆಲೆ 97.52ಕ್ಕೆ ಮುಟ್ಟಿದೆ.
ಬ್ರಿಟನ್‌ನಲ್ಲಿಯು ತೈಲ ಬಿಕ್ಕಟ್ಟು
ಬ್ರಿಟನ್‌ನಲ್ಲಿ (Britain) ಹಿಂದೆಂದೂ ಕಂಡುಕೇಳರಿಯದ ತೈಲ ಬಿಕ್ಕಟ್ಟೊಂದು ಸೃಷ್ಟಿಯಾಗಿದೆ. ಅಗತ್ಯ ಪ್ರಮಾಣದ ತೈಲ ಸಂಗ್ರಹ ಇದ್ದಾಗಿಯೂ ಜನರು ಆತಂಕಕ್ಕೆ ಒಳಗಾಗಿ ಪೆಟ್ರೋಲ್ ಪಂಪ್ (Petrol Pump) ಎದುರು ಕಿಲೋಮೀಟರ್‌ಗಟ್ಟಲೆ ಸರತಿ ಸಾಲುಗಳಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹಾಗಂತ ಈ ಬಿಕ್ಕಟ್ಟಿಗೆ ಕಾರಣ ಪೆಟ್ರೋಲ್, ಡೀಸೆಲ್ ಕೊರತೆ ಅಲ್ಲ; ಟ್ರಕ್ ಚಾಲಕರ ಕೊರತೆ! ಹೌದು, ಪೆಟ್ರೋಲ್ ಪಂಪ್‌ಗಳಿಗೆ ತೈಲವನ್ನು ಕೊಂಡೊಯ್ಯಲು ಟ್ರಕ್ ಚಾಲಕರೇ (Truck Drivers) ಸಿಗುತ್ತಿಲ್ಲ. ಹೀಗಾಗಿ ದೇಶದ ಪ್ರಮುಖ ನಗರಗಳ ಶೇ.90ರಷ್ಟುಪೆಟ್ರೋಲ್ ಪಂಪ್‌ಗಳು ಖಾಲಿಯಾಗಿವೆ. ಈ ಸುದ್ದಿ ತಿಳಿದ ಜನರು ಗಾಬರಿಗೊಳಗಾಗಿ ಇನ್ನುಳಿದ ಪಂಪ್‌ಗಳಿಗೆ ಮತ್ತಿಗೆ ಹಾಕುತ್ತಿದ್ದಾರೆ.
ಬಿಕ್ಕಟ್ಟಿಗೆ ಕಾರಣ ಏನು?:
ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬಂದ ಬಳಿಕ 13 ಲಕ್ಷಕ್ಕೂ ಅಧಿಕ ವಿದೇಶಿ ಕಾರ್ಮಿಕರು ದೇಶ ತೊರೆದಿದ್ದಾರೆ. ಹೀಗಾಗಿ 2 ವರ್ಷದಲ್ಲಿ ಬ್ರಿಟನ್ 1 ಲಕ್ಷಕ್ಕೂ ಅಧಿಕ ಟ್ರಕ್ ಚಾಲಕರನ್ನು ಕಳೆದುಕೊಂಡಿದೆ. ಅಲ್ಲದೆ ಕೊರೋನಾ (covid) ಕಾರಣದಿಂದ ತವರಿಗೆ ಮರಳಿದವರು ಇನ್ನೂ ಕೆಲಸಕ್ಕೆ ಬಂದಿಲ್ಲ. ಪರವಾನಗಿ ವಿತರಣೆಯೂ ನನೆಗುದಿಗೆ ಬಿದ್ದಿದೆ. ಹೀಗಾಗಿ ಹೊಸ ರೀತಿಯ ತೈಲ ಬಿಕ್ಕಟ್ಟು ಆರಂಭವಾಗಿದೆ.
ಸರ್ಕಾರದಿಂದ ಕ್ರಮ:
ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಬ್ರಿಟನ್ ಸರ್ಕಾರ ಯೋಧರನ್ನೇ ಚಾಲಕರನ್ನಾಗಿ ನೇಮಿಸಲು ಮುಂದಾಗಿದೆ. ಜೊತೆಗೆ 5000 ವಿದೇಶಿ ಟ್ರಕ್ ಚಾಲಕರನ್ನು ಕರೆತರಲು ತುರ್ತು ವೀಸಾ ನೀಡಲು ನಿರ್ಧರಿಸಿದೆ. ಕಾಂಪಿಟೀಷನ್ ಆ್ಯಕ್ಟ್ 1998ನಿಂದ ತೈಲೋದ್ಯಮಕ್ಕೆ ವಿನಾಯ್ತಿ ನೀಡಲು ಚಿಂತಿಸಿದೆ. ಘನವಾಹನ ಚಾಲನೆ ಪರವಾನಗಿ ಇರುವವರಿಗೆ ಕೆಲಸಕ್ಕೆ ಮರಳುವಂತೆ ವಿನಂತಿಸಿದೆ. ನಾಲ್ಕು ಸಾವಿರ ಜನರಿಗೆ ಘನ ವಾಹನ ತರಬೇತಿ ನೀಡಿ ಕರ್ತವ್ಯಕ್ಕೆ ನಿಯೋಜಿಸಿದೆ.