ಕರ್ನಾಟಕ ಬಜೆಟ್‌ 2024: ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಯ ಕಸರತ್ತು

By Kannadaprabha News  |  First Published Feb 17, 2024, 5:13 AM IST

ಹೆಚ್ಚು ಹೊಸ ಯೋಜನೆಗಳ ಘೋಷಿಸದೆ ದಾಖಲೆಯ 15ನೇ ಬಜೆಟ್‌ ಮಂಡಿಸಿದ ಸಿದ್ದು, 2ನೇ ಬಾರಿ ಕೊರತೆ ಬಜೆಟ್‌: ಸೀಮಿತ ಸಂಪನ್ಮೂಲಗಳಲ್ಲೇ ಪ್ರಗತಿ ಪಥದ ಜಪ,ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿದ್ದರೂ ಜನಪ್ರಿಯತೆಗೆ ಜೋತುಬೀಳದ ಸಿಎಂ, ಹೊಸ ಸೆಸ್‌ಗಳು, ಮದ್ಯದ ತೆರಿಗೆ ಹೆಚ್ಚಳದ ಮೂಲಕ ಸಂಪನ್ಮೂಲ ಸಂಗ್ರಹದ ಗುರಿ


ಬೆಂಗಳೂರು(ಫೆ.17): ಗ್ಯಾರಂಟಿಗಳ ಅನುಷ್ಠಾನದ ಒತ್ತಡ ನಿಭಾಯಿಸುತ್ತಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಾಖಲೆಯ 15ನೇ ಬಜೆಟ್‌ನಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೂ ಒತ್ತು ನೀಡುವ ಪ್ರಯತ್ನ ಮಾಡಿದ್ದಾರೆ. ಸೀಮಿತ ಸಂಪನ್ಮೂಲಗಳಲ್ಲೇ ‘ಪ್ರಗತಿ ಪಥದ’ ಜಪ ಮಾಡುವ ಭರದಲ್ಲಿ ಸತತ ಎರಡನೇ ಬಾರಿಗೆ ಕೊರತೆ ಬಜೆಟ್ ಮಂಡಿಸಿದ್ದಾರೆ.

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿದ್ದರೂ ಹೆಚ್ಚು ಹೊಸ ಕಾರ್ಯಕ್ರಮಗಳನ್ನು ಘೋಷಿಸದ ಸಿದ್ದರಾಮಯ್ಯ, ತಮ್ಮ ಆಯವ್ಯಯವನ್ನು ‘ಕಲ್ಯಾಣ ಆಧಾರಿತ ಬಜೆಟ್‌’ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಕೇಂದ್ರದಿಂದ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಅಂಕಿ-ಅಂಶಗಳ ಸಹಿತಿ ಪ್ರಸ್ಥಾಪಿಸುವ ಮೂಲಕ ಬಜೆಟ್‌ ಭಾಷಣದಲ್ಲೇ ಹರಿಹಾಯ್ದಿದ್ದಾರೆ. ಜತೆಗೆ ಅಯೋಧ್ಯೆ ರಾಮಜನ್ಮಭೂಮಿ ದೇವಾಲಯ ನಿರ್ಮಾಣಕ್ಕೆ ಪ್ರತ್ಯಸ್ತ್ರವಾಗಿ ಆಂಜನೇಯ ಜನ್ಮಭೂಮಿ ಅಂಜನಾದ್ರಿಯನ್ನು 100 ಕೋಟಿ ರು.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಘೋಷಣೆ ಮಾಡಿದ್ದಾರೆ. ಜತೆಗೆ ಜನಸಾಮಾನ್ಯರಿಗೆ ಬಿಸಿ ತಾಕದಂತೆ ಕೆಲವು ಹೊಸ ಸೆಸ್‌ ಪರಿಚಯಿಸಿದ್ದು, ದುಬಾರಿ ಮದ್ಯದ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಲು ಪ್ರಸ್ತಾಪಿಸಿದ್ದಾರೆ. ತನ್ಮೂಲಕ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅಳೆದು ತೂಗಿ ಹೆಜ್ಜೆಯಿಟ್ಟಿದ್ದಾರೆ.

Tap to resize

Latest Videos

undefined

ಪ್ರತಿ ಜಿಲ್ಲೆಗಳಲ್ಲೂ ಡೇ-ಕೇರ್‌ ಕಿಮೋಥೆರಪಿ ಕೇಂದ್ರ, 7 ತಾಲೂಕುಗಳಲ್ಲಿ ಹೊಸ ಆಸ್ಪತ್ರೆ!

3.71 ಲಕ್ಷ ಕೋಟಿ ಬಜೆಟ್

ಈವರೆಗೆ ಹದಿನೈದು ಬಜೆಟ್‌ ಮಂಡನೆ ಮಾಡಿರುವ ಸಿದ್ದರಾಮಯ್ಯ ಅವರು ಗ್ಯಾರಂಟಿಗಳ ಕಾರಣದಿಂದಾಗಿ ಕಳೆದ ವರ್ಷ ಮೊದಲ ಬಾರಿಗೆ ಕೊರತೆ ಬಜೆಟ್‌ ಮಂಡಿಸಿದ್ದರು. ಇದೀಗ ಶುಕ್ರವಾರ ಬರೋಬ್ಬರಿ 3,71,383 ಕೋಟಿ ರು. ಗಾತ್ರದ 2024-25ನೇ ಸಾಲಿನ ಬಜೆಟ್‌ ಮಂಡನೆ ಮಾಡಿದ್ದಾರೆ. ರಾಜಸ್ವ ಸ್ವೀಕೃತಿಗಳಲ್ಲಿ 27,353 ಕೋಟಿ ರು. ಕೊರತೆ ಉಂಟಾಗಿರುವುದರಿಂದ ಪ್ರಸಕ್ತ ಸಾಲಿನಲ್ಲಿ 1,05,246 ಕೋಟಿ ರು. ಸಾಲ ಮಾಡುವುದಾಗಿ ಪ್ರಸ್ತಾಪಿಸಿದ್ದರೂ ಅಂತಿಮವಾಗಿ 3,849 ಕೋಟಿ ರು. ಮೊತ್ತದ ಕೊರತೆ ಬಜೆಟ್‌ ಮಂಡನೆ ಮಾಡಿದ್ದಾರೆ.

ಅನ್ನಭಾಗ್ಯ, ಗೃಹಲಕ್ಷ್ಮೀ, ಶಕ್ತಿ, ಗೃಹಜ್ಯೋತಿ, ಯುವನಿಧಿ ಸೇರಿ ಪಂಚ ಗ್ಯಾರಂಟಿಗಳಿಗೆ ಈ ವರ್ಷ 52,009 ಕೋಟಿ ರು. ಹಣ ಮೀಸಲಿಟ್ಟಿದ್ದಾರೆ. ಇದು 55 ಸಾವಿರ ಕೋಟಿ ರು.ವರೆಗೂ ಹೆಚ್ಚಳವಾಗುವ ಸಾಧ್ಯತೆಯ ಬಗ್ಗೆಯೂ ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಅಭಿವೃದ್ಧಿಗೆ ಒತ್ತು, ಬೃಹತ್‌ ಘೋಷಣೆಗಳಿಲ್ಲ:

ಲೋಕಸಭೆ ಚುನಾವಣೆ ಹೊಸ್ತಿಲಿನಲ್ಲಿ ಮಂಡಿಸುತ್ತಿರುವ ಬಜೆಟ್‌ ಆಗಿದ್ದರಿಂದ ಜನಪ್ರಿಯ ಕಾರ್ಯಕ್ರಮ, ಬೃಹತ್‌ ಯೋಜನೆಗಳ ಘೋಷಣೆ ನಿರೀಕ್ಷೆಯಿತ್ತು. ಆದರೆ ಈ ಬಾರಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಒತ್ತು ನೀಡಿದ್ದರೂ ಬೃಹತ್‌ ಘೋಷಣೆಗಳ ಗೋಜಿಗೆ ಸಿದ್ದರಾಮಯ್ಯ ಹೋಗಿಲ್ಲ. ಗ್ಯಾರಂಟಿ ಯೋಜನೆಗಳ ಹೊರತಾಗಿಯೂ 1.20 ಲಕ್ಷ ಕೋಟಿ ರು.ಗಳ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗೆ ಮೀಸಲಿಡುವ ಮೂಲಕ ಶಾಸಕರ ಹಾಗೂ ನಾಗರಿಕರ ಅಸಮಾಧಾನ ಶಮನಕ್ಕೆ ಯತ್ನಿಸಿದ್ದಾರೆ.

ಸಾಲ ಹೆಚ್ಚಳ, ಪಿಪಿಪಿ ಯೋಜನೆಗಳಿಗೆ ಮೊರೆ:

2024-25 ಸಾಲಿನಲ್ಲಿ 1,05,246 ಕೋಟಿ ರು. ಸಾಲ ಮಾಡಲು ನಿರ್ಧಾರ ಮಾಡಿರುವುದರಿಂದ 2024-25ನೇ ಸಾಲಿನ ಅಂತ್ಯಕ್ಕೆ ರಾಜ್ಯದ ಸಾಲ 6.65 ಲಕ್ಷ ಕೋಟಿಗೆ ಏರಿಕೆಯಾಗಲಿದೆ. ಹೀಗಾಗಿ ಸಂಪನ್ಮೂಲಗಳ ಅಲಭ್ಯತೆಯ ಕಾರಣ ಖಾಸಗೀಕರಣ ವಿರೋಧಿಸುವ ಸಿದ್ದರಾಮಯ್ಯ ಅವರೇ ಸಾಲು-ಸಾಲು ಪಿಪಿಪಿ (ಸಾರ್ವಜನಿಕ ಖಾಸಗಿ ಸಹಭಾಗಿತ್ವ) ಯೋಜನೆಗಳನ್ನು ಪ್ರಕಟಿಸಿದ್ದಾರೆ. 73 ಕಿ.ಮೀ. ಉದ್ದದ ಬೆಂಗಳೂರು ಪೆರಿಫೆರಲ್‌ ರಿಂಗ್‌ ರಸ್ತೆಯನ್ನು 27 ಸಾವಿರ ಕೋಟಿ ರು. ವೆಚ್ಚದಲ್ಲಿ ‘ಬೆಂಗಳೂರು ಬಿಸಿನೆಸ್‌ ಕಾರಿಡಾರ್‌’ ಎಂದು ಪಿಪಿಪಿ ಮಾದರಿಯಲ್ಲಿ ನಿರ್ಮಿಸಲು ಆರ್‌ಎಫ್‌ಪಿ ಕರೆಯಲಾಗಿದೆ. ಇದೇ ವರ್ಷ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಸಾಮಾನ್ಯರಿಗೆ ಬಿಸಿಯಾಗದಂತೆ ತೆರಿಗೆ ಹೆಚ್ಚಳ:

ಆನ್‌ಲೈನ್ -ವಹಿವಾಟುಗಳ ಮೇಲೆ ಸೆಸ್‌ ವಿಧಿಸಿ ಗಿಗ್‌ ಕಾರ್ಮಿಕರ (ಡೆಲಿವರಿ ಬಾಯ್ಸ್) ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ಪ್ರತ್ಯೇಕ ಬಿಲ್‌ ತರುವುದಾಗುವುದು ಎಂದು ಹೇಳಿದ್ದು, ಬಿಲ್‌ನಲ್ಲಿ ಸೆಸ್ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಇನ್ನು ವಾಣಿಜ್ಯ ಸಾರಿಗೆ ವಾಹನಗಳ ನೋಂದಣಿಯ ಮೇಲೆ ಸುಂಕವನ್ನು ವಿಧಿಸಲಾಗುವುದು. ಈ ಹಣವನ್ನು ಸಾರಿಗೆ ವಾಹನಗಳ ಕಾರ್ಮಿಕರಿಗೆ ಕಾರ್ಯಕ್ರಮಗಳನ್ನು ರೂಪಿಸಲು ಬಳಸಲಾಗುವುದು. ಜತೆಗೆ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆ ಜತೆಗೆ ಶೇ.1ರಷ್ಟು ಫೈರ್ ಸೆಸ್‌ ವಿಧಿಸಿ ಅಗ್ನಿಶಾಮಕ ಸಿಬ್ಬಂದಿ ಕಲ್ಯಾಣಕ್ಕೆ ಬಳಸಲಾಗುವುದು ಎಂದು ಹೇಳಲಾಗಿದೆ. ಜತೆಗೆ ಪರಿಷ್ಕೃತ ಜಾಹಿರಾತು ನೀತಿ ಹಾಗೂ ಪ್ರೀಮಿಯಂ ಎಫ್‌ಎಆರ್‌ ನೀತಿ ಜಾರಿಗೊಳಿಸುವ ಮೂಲಕ 2 ಸಾವಿರ ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ.

ಸಿಎಂ ಸುದೀರ್ಘ ಬಜೆಟ್‌ ಮಂಡನೆ: ಲೋಕಸಭಾ ಚುನಾವಣಾ ಮತಬೇಟೆಗೆ ಪೂರಕವಾಗಿ ಅನುದಾನ

ವಿವಿಧ ಕಾರ್ಯಕ್ರಮಗಳ ಘೋಷಣೆ:

ಆರ್ಥಿಕತೆಗೆ ಉತ್ತೇಜನ ನೀಡಲು ಪ್ರಮುಖ ನಗರಗಳಲ್ಲಿ ರಾತ್ರಿ 1 ಗಂಟೆವರೆಗೆ ವಹಿವಾಟಿಗೆ ಅವಕಾಶ ನೀಡುವ ಜತೆಗೆ ಹೋಮ್‌ ಡೆಲಿವರಿ ಆ್ಯಪ್‌ ಮೂಲಕ 80 ವರ್ಷ ದಾಟಿದ ಹಿರಿಯ ನಾಗರಿಕರುಳ್ಳ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲಪಿಸಲು ಅನ್ನ-ಸುವಿಧಾ ಕಾರ್ಯಕ್ರಮ, ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ‘ಕರ್ನಾಟಕ ರೈತ ಸಮೃದ್ಧಿ ಯೋಜನೆ’ ಜಾರಿ, 50 ಕಡೆ ಕೆಫೆ ಸಂಜೀವಿನಿ ಎಂಬ ಮಹಿಳೆಯರೇ ನಡೆಸುವ ಕ್ಯಾಂಟೀನ್‌ ಸೇರಿ ಹಲವು ಕಾರ್ಯಕ್ರಮಗಳನ್ನೂ ಘೋಷಿಸಿದ್ದಾರೆ.

ಉಳಿದಂತೆ ಬಜೆಟ್‌ನಲ್ಲಿ ಮಹಿಳೆಯರಿಗೆ 86,423 ಕೋಟಿ ಹಾಗೂ ಮಕ್ಕಳಿಗೆ 54,617 ಕೋಟಿ ರು., ಎಸ್‌ಸಿಪಿ-ಟಿಎಸ್‌ಪಿ ಅಡಿ 39,121 ಕೋಟಿ ರು., ಗ್ರಾಮೀಣ ಭಾಗದಲ್ಲಿ ಕ್ರಿಟಿಕಲ್‌ ಕೇರ್‌ಗೆ ಒತ್ತು ನೀಡುವ ಮೂಲಕ ಎಲ್ಲಾ ವರ್ಗಗಳನ್ನೂ ಸಂತೈಸುವ ಪ್ರಯತ್ನ ಮಾಡಲಾಗಿದೆ.

click me!