*ಕೋವಿಡ್ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಡಿಎ ದರ ಹೆಚ್ಚಳದ ಮೂರು ಕಂತುಗಳನ್ನು ತಡೆಹಿಡಿದಿದ್ದ ಕೇಂದ್ರ
*ಜನವರಿ 1ರಿಂದಲೇ ಅನ್ವಯವಾಗುವಂತೆ ಕೇಂದ್ರ ನೌಕರರ ಡಿಎ ಹಾಗೂ ಡಿಆರ್ ದರವನ್ನು ಶೇ.31ರಿಂದ ಶೇ.34ಕ್ಕೆ ಹೆಚ್ಚಿಸಿದ್ದ ಸರ್ಕಾರ
* ತಡೆಹಿಡಿದ ಡಿಎ ಹಾಗೂ ಡಿಆರ್ ಮೊತ್ತವನ್ನು ಮತ್ತೆ ಹಿಂತಿರುಗಿಸಲಾಗೋದಿಲ್ಲ ಎಂದು ಕೆಲವು ಮೂಲಗಳಿಂದ ಮಾಹಿತಿ
ನವದೆಹಲಿ (ಏ.15): ಕೋವಿಡ್ -19 (COVID-19) ಪೆಂಡಾಮಿಕ್ ಆರಂಭಿಕ ಅವಧಿಯಲ್ಲಿ ಕೆಂದ್ರ ಸರ್ಕಾರ (Central Government) ತಡೆ ಹಿಡಿದಿದ್ದ ತುಟ್ಟಿ ಭತ್ಯೆ (DA) ಬಿಡುಗಡೆ ಮಾಡುವಂತೆ ಪಿಂಚಣಿದಾರರು (Pensioners) ಮಾಡಿದ ಮನವಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ ಎಂದು ಎಚ್ ಟಿ (HT) ವರದಿಯೊಂದು ತಿಳಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿನ ಇತರ ತುರ್ತು ವೆಚ್ಚಗಳನ್ನು ಭರಿಸಲು ಈ ಹಣವನ್ನು ತಡೆ ಹಿಡಿಯಲಾಗಿತ್ತು.
ಡಿಎ ಹಾಗೂ ಡಿಆರ್ ತಡೆ ಹಿಡಿಯಲು ಕಾರಣವೇನು?
ಕೋವಿಡ್ -19 ಕಾರಣದಿಂದ ಸೃಷ್ಟಿಯಾದ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರ ಡಿಎ (DA) ಹಾಗೂ ಡಿಆರ್ (DR) ದರ ಹೆಚ್ಚಳದ ಮೂರು ಕಂತುಗಳನ್ನು ತಡೆ ಹಿಡಿದಿತ್ತು. 2020 ಜನವರಿ 1, 2020 ಜುಲೈ 1 ಹಾಗೂ 2021ರ ಜನವರಿ 1ರ ಡಿಎ ಹಾಗೂ ಡಿಆರ್ ಕಂತುಗಳನ್ನು ಸರ್ಕಾರ ತಡೆ ಹಿಡಿದಿತ್ತು. ಕೇಂದ್ರ ಸರ್ಕಾರಿ ನೌಕರರ ಡಿಎ ಹಾಗೂ ಡಿಆರ್ ದರವನ್ನು ವರ್ಷಕ್ಕೆ ಎರಡು ಬಾರಿ ಜನವರಿ ಮತ್ತು ಜುಲೈಯಲ್ಲಿ ನವೀಕರಿಸಲಾಗುತ್ತದೆ. ಡಿಎ ಹಾಗೂ ಡಿಆರ್ ದರ ಏರಿಕೆಯನ್ನು ತಡೆ ಹಿಡಿಯೋ ಮೂಲಕ ಸುಮಾರು 34,402 ಕೋಟಿ ರೂ. ಉಳಿತಾಯ ಮಾಡಲಾಗಿದೆ ಎಂದು ಕಳೆದ ವರ್ಷ ಆಗಸ್ಟ್ ನಲ್ಲಿ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman ) ಮಾಹಿತಿ ನೀಡಿದ್ದರು.
ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್: ತುಟ್ಟಿ ಭತ್ಯೆ ಹೆಚ್ಚಳಕ್ಕೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್!
2021ರ ಜುಲೈನಲ್ಲಿ ಡಿಎ ಹಾಗೂ ಡಿಆರ್ ಹೆಚ್ಚಳದ ಮೇಲಿನ ತಡೆಯನ್ನು ಹಿಂಪಡೆದ ಸರ್ಕಾರ, ಆ ಬಳಿಕ ಒಟ್ಟು ಮೂರು ಬಾರಿ ಡಿಎ ಹಾಗೂ ಡಿಆರ್ ಭತ್ಯೆಗಳಲ್ಲಿ ಹೆಚ್ಚಳ ಮಾಡಿತ್ತು. 2021ರ ಜುಲೈಯಲ್ಲಿ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಹಾಗೂ ಡಿಆರ್ ಅನ್ನು ಶೇ.17ರಿಂದ ಶೇ.28ಕ್ಕೆ ಹೆಚ್ಚಳ ಮಾಡಿತ್ತು. 2021ರ ಅಕ್ಟೋಬರ್ ನಲ್ಲಿ ಮತ್ತೆ ಕೇಂದ್ರ ಸರ್ಕಾರಿ ನೌಕರರ ಡಿಎಯಲ್ಲಿ ಶೇ.3ರಷ್ಟು ಏರಿಕೆ ಮಾಡಲಾಗಿದೆ. ಇದ್ರಿಂದ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.31ರಷ್ಟು ಏರಿಕೆ ಕಂಡಿತು. ಈ ಪರಿಷ್ಕೃತ ಡಿಎ 2021ರ ಜುಲೈನಿಂದಲೇ ಜಾರಿಗೆ ಬರುವಂತೆ ಸರ್ಕಾರ ಆದೇಶ ಹೊರಡಿಸಿದೆ. 2022ರ ಮಾರ್ಚ್ 30ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ನೌಕರರ ಡಿಎ ಹಾಗೂ ಡಿಆರ್ ದರವನ್ನು ಶೇಕಡಾ 31ರಿಂದ ಶೇಕಡಾ 34ಕ್ಕೆ ಹೆಚ್ಚಿಸಲು ಅನುಮೋದನೆ ನೀಡಲಾಯಿತು. ಹೆಚ್ಚಳಗೊಂಡ ಈ ಡಿಎ ಹಾಗೂ ಡಿಆರ್ ದರಗಳು 2022ರ ಜನವರಿ 1 ರಿಂದಲೇ ಅನ್ವಯವಾಗಲಿದೆ.
ತಡೆಹಿಡಿದ ಡಿಎ ಹಾಗೂ ಡಿಆರ್ ಬಿಡುಗಡೆ ಮಾಡಲ್ಲ
ಪಿಂಚಣಿದಾರರ ಕಲ್ಯಾಣ ಖಾತೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಪಿಂಚಣಿ ನಿಯಮಗಳ ಪರಿಶೀಲನೆ ಹಾಗೂ ತರ್ಕಬದ್ಧಗೊಳಿಸೋ ಸ್ವತಂತ್ರ ಏಜೆನ್ಸಿಗಳ ಸ್ಥಾಯಿ ಸಮಿತಿ 32ನೇ ಸಭೆ ಇತ್ತೀಚೆಗೆ ನಡೆದಿತ್ತು. ಈ ಸಭೆಯಲ್ಲಿ ವೆಚ್ಚಇಲಾಖೆಯ (DoE) ಪ್ರತಿನಿಧಿಯೊಬ್ಬರು ತಡೆಹಿಡಿಯಲಾಗಿರೋ ಡಿಎ ಹಾಗೂ ಡಿಆರ್ ಮೊತ್ತವನ್ನು ಮತ್ತೆ ಹಿಂತಿರುಗಿಸಲಾಗೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಎಚ್ ಟಿ ವರದಿ ಹೇಳಿದೆ.
Economic Crisis :ಶ್ರೀಲಂಕಾದ ಹಾದಿಯಲ್ಲೇ ನೇಪಾಳದ ಆರ್ಥಿಕತೆ; ಸದ್ಯ ಭಾರತದ ಮುಂದಿರೋ ಸವಾಲುಗಳೇನು?
ಡಿಎ ಲೆಕ್ಕಾಚಾರ ಹೇಗೆ?
ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ ಡಿಎ ಲೆಕ್ಕಾಚಾರ ಮಾಡೋ ಫಾರ್ಮುಲಾವನ್ನು ಕೇಂದ್ರ ಸರ್ಕಾರ 2006ರಲ್ಲಿ ಬದಲಾಯಿಸಿತ್ತು. ಅದು ಈ ಕೆಳಗಿನಂತಿದೆ.
ತುಟ್ಟಿ ಭತ್ಯೆ %= (ಅಖಿಲಾ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 12 ತಿಂಗಳು-115.76)/115.76)*100.