ಸೇವಾ ಶುಲ್ಕ ಹೆಸರಿನಲ್ಲಿ ಗ್ರಾಹಕರ ಜೇಬಿಗೆ ಬರೆ, ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ಆದಾಯ; ಯಾವ ಸೇವೆಗೆ ಎಷ್ಟು ಶುಲ್ಕ?

By Suvarna News  |  First Published Mar 19, 2024, 1:12 PM IST

ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಡಿಜಿಟಲ್ ಕ್ರಾಂತಿಯಿಂದ ಗ್ರಾಹಕನಿಗೆ ಒಂದಿಷ್ಟು ಅನುಕೂಲಗಳಾಗಿದ್ದರೂ ಆತನ ಜೇಬಿನ ಹೊರೆ ಮಾತ್ರ ಹೆಚ್ಚುತ್ತಲೇ ಇದೆ. ಸೇವಾ ಶುಲ್ಕದ ರೂಪದಲ್ಲಿ ಬ್ಯಾಂಕುಗಳು ಗ್ರಾಹಕರಿಂದ ಪ್ರತಿವರ್ಷ ಕೋಟ್ಯಂತರ ರೂಪಾಯಿ ಸಂಗ್ರಹಿಸುತ್ತಿವೆ. 


ನವದೆಹಲಿ (ಮಾ.19): ಭಾರತದ ಬ್ಯಾಂಕಿಂಗ್ ವಲಯದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಹಿಂದಿನಂತೆ ಬ್ಯಾಂಕಿನಿಂದ ಹಣ ವಿತ್ ಡ್ರಾ ಮಾಡಲು ಸರದಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಹಾಗೆಯೇ ಇನ್ನೊಂದು ಖಾತೆಗೆ ಹಣ ವರ್ಗಾವಣೆ ಮಾಡಲು ಬ್ಯಾಂಕಿಗೆ ಭೇಟಿ ನೀಡಬೇಕಾದ ಅಗತ್ಯವಿಲ್ಲ. ಇವೆಲ್ಲವೂ ಸಾಧ್ಯವಾಗಿದ್ದು ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಂದ. ಇದರಿಂದ ಬ್ಯಾಂಕ್ ಗಳಿಗೆ ಕೂಡ ನಿರ್ವಹಣಾ ವೆಚ್ಚ ತಗ್ಗಿದೆ. ಆದರೂ ಗ್ರಾಹಕರ ಮೇಲೆ ಬ್ಯಾಂಕುಗಳು ವಿಧಿಸುತ್ತಿರುವ ಸೇವಾ ಶುಲ್ಕಗಳು ಹಾಗೂ ದಂಡದ ಪ್ರಮಾಣದಲ್ಲಿ ಮಾತ್ರ ಯಾವುದೇ ಇಳಿಕೆಯಾಗಿಲ್ಲ. ಒಂದರ ಮೇಲೊಂದರಂತೆ ನಾನಾ ರೂಪದಲ್ಲಿ ಸೇವಾ ಶುಲ್ಕಗಳನ್ನು ವಿಧಿಸುತ್ತವೆ. ಮೊಬೈಲ್ ಸಂಖ್ಯೆ ಸೇರ್ಪಡೆಯಿಂದ ಹಿಡಿದು ವಿಳಾಸ ಬದಲಾವಣೆ ತನಕ ವಿವಿಧ ಕಾರ್ಯಗಳಿಗೆ ಬ್ಯಾಂಕುಗಳು ಸೇವಾ ಶುಲ್ಕ ವಿಧಿಸುತ್ತವೆ. ಅಷ್ಟೇ ಏಕೆ ಗ್ರಾಹಕರಿಗೆ ಕಳುಹಿಸುವ ಎಸ್ ಎಂಎಸ್ ಗೂ ಶುಲ್ಕ ವಸೂಲಿ ಮಾಡುತ್ತವೆ. ಇದರಿಂದ ಬ್ಯಾಂಕುಗಳು ಕಲೆ ಹಾಕುತ್ತಿರುವ ಮೊತ್ತವೇನೂ ಕಡಿಮೆಯದ್ದಲ್ಲ. ಕಳೆದ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ನೀಡಿರುವ ಮಾಹಿತಿ ಅನ್ವಯ ಪ್ರಮುಖ ಸಾರ್ವಜನಿಕ ಹಾಗೂ ಖಾಸಗಿ ವಲಯದ ಬ್ಯಾಂಕುಗಳು 2018ರಿಂದ 2023 ಅಂದರೆ ಐದು ವರ್ಷಗಳ ಅವಧಿಯಲ್ಲಿ ಗ್ರಾಹಕರಿಗೆ ವಿಧಿಸಿರುವ ಸೇವಾ ಶುಲ್ಕಗಳ ಮೊತ್ತ 35,587 ಕೋಟಿ ರೂ.!

ಯಾವ ಸೇವೆಗಳಿಗೆಲ್ಲ ಬ್ಯಾಂಕ್ ಶುಲ್ಕ ವಿಧಿಸುತ್ತದೆ?
*ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ಸೇರ್ಪಡೆ ಅಥವಾ ಅಪ್ಡೇಟ್: ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಅಪ್ಡೇಟ್ ಅಥವಾ ಸೇರ್ಪಡೆ ಮಾಡಲು ಕೂಡ ಬ್ಯಾಂಕ್ 59 ರೂ. ಶುಲ್ಕ ವಿಧಿಸುತ್ತದೆ. ಇತ್ತೀಚೆಗೆ ಬಹುತೇಕರು ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಬದಲಾಯಿಸುತ್ತಿದ್ದಾರೆ. ಅಲ್ಲದೆ, ಡಿಜಿಟಲ್ ವಂಚನೆ ಪ್ರಕರಣಗಳು ಹೆಚ್ಚುತ್ತಿರುವ ಬೆನ್ನಲ್ಲೇ ಸುರಕ್ಷತೆ ದೃಷ್ಟಿಯಿಂದ ಕೂಡ ಕೆಲವರು ಮೊಬೈಲ್ ಸಂಖ್ಯೆ ಬದಲಾಯಿಸುತ್ತಿದ್ದಾರೆ. ಆದರೆ, ಬದಲಾದ ಮೊಬೈಲ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಸೇರ್ಪಡೆ ಮಾಡಲು ಮಾತ್ರ ಶುಲ್ಕ ಪಾವತಿಸಬೇಕಾಗಿದೆ. ಹಾಗೆಯೇ ಇ-ಮೇಲ್ ಐಡಿ ಸೇರ್ಪಡೆ ಅಥವಾ ಅಪ್ಡೇಟ್ ಗೆ ಕೂಡ 59 ರೂ. ಶುಲ್ಕ ಪಾವತಿಸಬೇಕು. 

Tap to resize

Latest Videos

ಈ ವರ್ಷ ಭಾರತದ ಬ್ಯಾಂಕರ್ ಗಳಿಗೆ ಬಂಪರ್; ಸಿಂಗಾಪುರದ ಉದ್ಯೋಗಿಗಳಿಗಿಂತಲೂ ಅಧಿಕ ವೇತನ ಹೆಚ್ಚಳ!

*ಹೆಸರು, ವಿಳಾಸ ತಿದ್ದುಪಡಿ: ಬ್ಯಾಂಕ್ ನಲ್ಲಿ ನಿಮ್ಮ ಹೆಸರು ಅಥವಾ ವಿಳಾಸದ ಬದಲಾವಣೆ ಹಾಗೂ ತಿದ್ದುಪಡಿಗೆ ಕೂಡ  59 ರೂ. ಶುಲ್ಕ ವಿಧಿಸಲಾಗುತ್ತದೆ. 

*ಪ್ಯಾನ್ ಸಂಖ್ಯೆ ಸೇರ್ಪಡೆ: ಪ್ಯಾನ್ ಸಂಖ್ಯೆ ಸೇಪರ್ಡೆಗೆ ಕೂಡ 59 ರೂ. ಶುಲ್ಕ ಇದೆ. 

*ಬ್ಯಾಂಕ್ ಖಾತೆ ವರ್ಗಾವಣೆ:ಬ್ಯಾಂಕ್ ಖಾತೆಯನ್ನು ಬೇರೆ ಶಾಖೆಗೆ ವರ್ಗಾಯಿಸಲು ಕೂಡ  59 ರೂ. ಶುಲ್ಕ ವಿಧಿಸಲಾಗುತ್ತದೆ.

*ಚೆಕ್: ಒಂದು ವೇಳೆ ನಿಮ್ಮ ಚೆಕ್ 1ಲಕ್ಷ ರೂ.ತನಕದಾಗಿದ್ರೆ ನೀವು ಬ್ಯಾಂಕಿಗೆ ಯಾವುದೇ ಶುಲ್ಕ ಪಾವತಿಸಬೇಕಾಗಿಲ್ಲ. ಆದರೆ, ಇದಕ್ಕಿಂತ ಹೆಚ್ಚಿನ ಮೊತ್ತಕ್ಕೆ ನೀವು ಕ್ಲಿಯರೆನ್ಸ್ ಶುಲ್ಕ ಪಾವತಿಸಬೇಕಾಗುತ್ತದೆ. ಈ ಶುಲ್ಕ 150ರೂ. ಇನ್ನು ನಿರ್ದಿಷ್ಟ ಸಂಖ್ಯೆಯ ಚೆಕ್ ಗಳನ್ನು ಮಾತ್ರ ಉಚಿತವಾಗಿ ನೀಡಲಾಗುತ್ತದೆ. ಎಸ್ ಬಿಐ ಬ್ಯಾಂಕ್ ಉಳಿತಾಯ ಖಾತೆಗೆ  10 ಚೆಕ್ ಗಳನ್ನು ಮಾತ್ರ ಉಚಿತವಾಗಿ ನೀಡುತ್ತದೆ. ಅದಕ್ಕಿಂತ ಹೆಚ್ಚಿನ ಚೆಕ್ ಗಳಿಗೆ ನೀವು ಶುಲ್ಕ ಪಾವತಿಸಬೇಕು.

ಎಟಿಎಂ ವಹಿವಾಟು: ಎಟಿಎಂನಿಂದ ನಗದು ವಿತ್ ಡ್ರಾ ಸೌಲಭ್ಯ ಕೂಡ ನಿಗದಿತ ಸಮಯದ ತನಕ ಮಾತ್ರ ಉಚಿತ. ಆ ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ವಹಿವಾಟು ನಡೆದ್ರೆ ಬ್ಯಾಂಕ್ ಶುಲ್ಕ ವಿಧಿಸುತ್ತದೆ. ಪ್ರತಿ ಬ್ಯಾಂಕ್ ವಿಧಿಸುವ ಶುಲ್ಕ ಬೇರೆ ಬೇರೆಯಾಗಿರುತ್ತದೆ. ಬಹುತೇಕ ಬ್ಯಾಂಕುಗಳು ತಮ್ಮದೇ ಎಟಿಎಂಗಳಲ್ಲಿ ತಿಂಗಳಿಗೆ 5 ಉಚಿತ ವಹಿವಾಟುಗಳಿಗೆ ಅವಕಾಶ ನೀಡುತ್ತವೆ. ಅದಕ್ಕಿಂತ ಹೆಚ್ಚಿದ್ರೆ ಪ್ರತಿ ವಹಿವಾಟಿಗೆ 20ರೂ.ನಿಂದ 50ರೂ. ತನಕ ಶುಲ್ಕ ವಿಧಿಸಲಾಗುತ್ತದೆ.

ಎಟಿಎಂ ಕಾರ್ಡ್: ಹಳೆಯ ಎಟಿಎಂ ಕಾರ್ಡ್ ಬ್ಲಾಕ್ ಮಾಡಲು 177ರೂ. ಶುಲ್ಕ ವಿಧಿಸಲಾಗುತ್ತದೆ. ಹಾಗೆಯೇ ಹೊಸ ಎಟಿಎಂ ಕಾರ್ಡ್ ಪಡೆಯಲು ಕೂಡ ಶುಲ್ಕ ಪಾವತಿಸಬೇಕು. ಹಾಗೆಯೇ ಹೊಸ ಕ್ರೆಡಿಟ್ ಕಾರ್ಡ್ ಗೆ ಕೂಡ ಶುಲ್ಕವಿದೆ. ಇದು ಬ್ಯಾಂಕಿನಿಂದ ಬ್ಯಾಂಕಿಗೆ ವ್ಯತ್ಯಾಸವಾಗುತ್ತದೆ. 

Bank of Baroda offer for women: ಮಹಿಳೆಯರಿಗೆ ವಿಶೇಷ ಆಫರ್… ಈ ಖಾತೆಯಲ್ಲಿರಲಿದೆ 25 ಲಕ್ಷ ರೂ.

ಎಸ್ ಎಂಎಸ್: ನಿಮ್ಮ ಬ್ಯಾಂಕ್ ಖಾತೆಗೆ ಹಣ ಕ್ರೆಡಿಟ್ ಅಥವಾ ಡೆಬಿಟ್ ಆದ್ರೆ ಆ ಬಗ್ಗೆ ನಿಮ್ಮ ಮೊಬೈಲ್ ಗೆ ಎಸ್ ಎಂಎಸ್ ಬರುತ್ತದೆ. ಇದು ಉಚಿತ ಎಂದು ಭಾವಿಸಬೇಡಿ. ಇದಕ್ಕೂ ಕೂಡ ಬ್ಯಾಂಕ್ ಶುಲ್ಕ ವಿಧಿಸುತ್ತದೆ.  ಆದರೆ, ಈ ಶುಲ್ಕ ಸಣ್ಣ ಮೊತ್ತದಾಗಿರುತ್ತದೆ.

35,587 ಕೋಟಿ ಶುಲ್ಕ 
2018ರಿಂದ 2023ರ ತನಕ ಐದು ವರ್ಷಗಳಲ್ಲಿ ಪ್ರಮುಖ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕುಗಳು  ಎಸ್ಎಂಎಸ್ , ಹೆಚ್ಚುವರಿ ಎಟಿಎಂ ವಹಿವಾಟುಗಳು ಹಾಗೂ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆ ಮಾಡದಿರೋದಕ್ಕೆ ಗ್ರಾಹಕರ ಮೇಲೆ 35,587 ಕೋಟಿ ರೂ. ಶುಲ್ಕ ವಿಧಿಸಿವೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಮಾಹಿತಿ ನೀಡಿತ್ತು. 
 

click me!