ಡೆಬಿಟ್, ಕ್ರೆಡಿಟ್ ಕಾರ್ಡ್ ಹೊಸ ಮಾರ್ಗಸೂಚಿಗಳ ಅನುಷ್ಠಾನಕ್ಕೆ ನೀಡಿದ್ದ ಗಡುವನ್ನು ಆರ್ ಬಿಐ ವಿಸ್ತರಿಸಿದೆ. ಈ ಹಿಂದೆ ಜುಲೈ 1 ಅಂತಿಮ ದಿನಾಂಕವಾಗಿತ್ತು.ಈಗ ಅದನ್ನು ಅಕ್ಟೋಬರ್ 1ಕ್ಕೆ ವಿಸ್ತರಿಸಲಾಗಿದೆ.
ನವದೆಹಲಿ (ಜೂ.22): ಕ್ರೆಡಿಟ್ ಕಾರ್ಡ್ (Credit card) ಹಾಗೂ ಡೆಬಿಟ್ ಕಾರ್ಡ್ ಗೆ (Debit card) ಸಂಬಂಧಿಸಿ ಭಾರತೀಯ ರಿಸರ್ವ್ ಬ್ಯಾಂಕಿನ (RBI) ಮಾರ್ಗಸೂಚಿಗಳಲ್ಲಿನ ಆಯ್ದ ನಿಬಂಧನೆಗಳ ಅನುಷ್ಠಾನಕ್ಕೆ ನೀಡಿದ್ದ ಗಡುವನ್ನು ಅಕ್ಟೋಬರ್ 1ರ ತನಕ ವಿಸ್ತರಿಸಲಾಗಿದೆ. ಈ ಹಿಂದೆ ಜುಲೈ 1 ಅಂತಿಮ ಗಡುವಾಗಿತ್ತು.
ಕ್ರೆಡಿಟ್ ಕಾರ್ಡ್ ವಿತರಣಾ ಸಂಸ್ಥೆಗಳ ಪ್ರತಿನಿಧಿಗಳ ಮನವಿ ಹಿನ್ನೆಲೆಯಲ್ಲಿ ಮಾಸ್ಟರ್ ಮಾರ್ಗಸೂಚಿಗಳ (Guidelines) ಅನುಷ್ಠಾನಕ್ಕೆ ನಿಗದಿಪಡಿಸಿದ್ದ ಗಡುವನ್ನು 2022ರ ಅಕ್ಟೋಬರ್ 1ಕ್ಕೆ ಮುಂದೂಡಲಾಗಿದೆ ಎಂದು ಆರ್ ಬಿಐ (RBI) ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಬ್ಯಾಂಕುಗಳು (Banks) ಹಾಗೂ ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು (NBFC) ಆರ್ ಬಿಐಯ ಕ್ರೆಡಿಟ್ ಕಾರ್ಡ್ ವಿತರಣೆ ಹಾಗೂ ನಿರ್ವಹಣೆ ನಿರ್ದೇಶನಗಳು-2022 ಅನ್ನು ಜುಲೈ 1ರಿಂದ ಜಾರಿಗೆ ತರಬೇಕಿತ್ತು.
ಈ ಪ್ರಮುಖ ಬದಲಾವಣೆಗೆ ಗಡುವು ವಿಸ್ತರಣೆ
ಕ್ರೆಡಿಟ್ ಕಾರ್ಡ್ ವಿತರಿಸಿ 30 ದಿನಗಳಿಗಿಂತ ಹೆಚ್ಚು ಸಮಯವಾಗಿದ್ದು, ಗ್ರಾಹಕ (Customer) ಇನ್ನೂ ಸಕ್ರಿಯಗೊಳಿಸದಿದ್ರೆ ಕಾರ್ಡ್ ವಿತರಕ ಬ್ಯಾಂಕುಗಳು ಅಥವಾ ಸಂಸ್ಥೆಗಳು ಅಂಥ ಕ್ರೆಡಿಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಲು ಕಾರ್ಡ್ ಹೊಂದಿರುವ ವ್ಯಕ್ತಿಯಿಂದ ಒನ್ ಟೈಮ್ ಪಾಸ್ ವರ್ಡ್ (OTP) ಆಧಾರಿತ ಒಪ್ಪಿಗೆ ಪಡೆಯಬಹುದು. ಒಂದು ವೇಳೆ ಗ್ರಾಹಕರಿಂದ ಒಪ್ಪಿಗೆ ಸಿಗದಿದ್ರೆ ಕಾರ್ಡ್ ವಿತರಕರು ಪ್ರತಿಕ್ರಿಯೆ ಸ್ವೀಕರಿಸಿದ 7 ಕಾರ್ಯನಿರತ ದಿನಗಳೊಳಗೆ ಯಾವುದೇ ವೆಚ್ಚವಿಲ್ಲದೆ ಅಂಥ ಕ್ರೆಡಿಟ್ ಕಾರ್ಡ್ ಖಾತೆಯನ್ನು ಮುಚ್ಚಬಹುದು ಎಂಬ ನಿಬಂಧನೆ ಅನುಷ್ಠಾನದ ಗಡುವನ್ನು ವಿಸ್ತರಿಸಲಾಗಿದೆ.
3 ಹೋಳಾಗಲಿದೆ ಅಮೆರಿಕದ ಈ ಕಂಪನಿ, ಭಾರತದಲ್ಲೂ ಭಾರೀ ಫೇಮಸ್ ಇದರ ಉತ್ಪನ್ನ!
ಇನ್ನು ಕ್ರೆಡಿಟ್ ಕಾರ್ಡ್ ಕ್ರೆಡಿಟ್ ಮಿತಿಯನ್ನು (Credit limit) ಹೆಚ್ಚಳ ಮಾಡುವ ಮುನ್ನ ಬ್ಯಾಂಕುಗಳು ಹಾಗೂ ಸಂಸ್ಥೆಗಳು ಗ್ರಾಹಕನ ಒಪ್ಪಿಗೆ ಪಡೆಯೋದು ಅಗತ್ಯ ಎಂಬ ನಿಬಂಧನೆಯನ್ನು ಕೂಡ ಅಕ್ಟೋಬರ್ 1ರ ತನಕ ವಿಸ್ತರಿಸಲಾಗಿದೆ. ಬಾಕಿ ಉಳಿದಿರುವ ಕ್ರೆಡಿಟ್ ಕಾರ್ಡ್ ಶುಲ್ಕ, ತೆರಿಗೆಗಳು ಇತ್ಯಾದಿಗೆ ಸಂಬಂಧಿಸಿದ ನಿಬಂಧನೆಗಳ ಅನುಷ್ಠಾನದ ಗಡುವನ್ನು ಕೂಡ ವಿಸ್ತರಿಸಲಾಗಿದೆ. ಈ ನಿಬಂಧನೆಗಳನ್ನು ಹೊರತುಪಡಿಸಿ ಉಳಿದ ಎಲ್ಲವೂ ಜುಲೈ 1ರಿಂದಲೇ ಜಾರಿಗೆ ಬರಲಿವೆ. ಇವುಗಳಲ್ಲಿ ಕ್ರೆಡಿಟ್ ಕಾರ್ಡ್ ವಿತರಕರು ಕಾರ್ಡ್ ಸಕ್ರಿಯಗೊಳ್ಳುವ ಮುನ್ನ ಹೊಸ ಕ್ರೆಡಿಟ್ ಕಾರ್ಡ್ ಖಾತೆಗೆ ಸಂಬಂಧಿಸಿದ ಯಾವುದೇ ಕ್ರೆಡಿಟ್ ಮಾಹಿತಿಯನ್ನು ಕ್ರೆಡಿಟ್ ಮಾಹಿತಿ ಕಂಪನಿಗಳಿಗೆ ನೀಡಬಾರದು ಎಂಬ ನಿಬಂಧನೆ ಕೂಡ ಸೇರಿದೆ.
ಆರ್ ಬಿಐ (ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್-ಪ್ರಕಟಣೆ ಹಾಗೂ ನಿರ್ವಹಣೆ) ನಿರ್ದೇಶನಗಳು- 2022 ಅಡಿಯಲ್ಲಿ ಕ್ರೆಡಿಟ್ ಕಾರ್ಡ್ ಗಳಿಗೆ ಸಂಬಂಧಿಸಿದ ನಿಬಂಧನೆಗಳು ಪೇಮೆಂಟ್ ಬ್ಯಾಂಕ್ ಗಳು, ರಾಜ್ಯ ಸಹಕಾರಿ ಬ್ಯಾಂಕ್ ಗಳು ಹಾಗೂ ಜಿಲ್ಲಾ ಕೇಂದ್ರೀಯ ಸಹಕಾರಿ ಬ್ಯಾಂಕುಗಳನ್ನು ಹೊರತುಪಡಿಸಿ ಪ್ರತಿ ಬ್ಯಾಂಕಿಗೆ ಹಾಗೂ ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಿಗೆ (NBFCs) ಅನ್ವಯಿಸಲಿವೆ.
Bank Holidays:ಜುಲೈನಲ್ಲಿ ಬ್ಯಾಂಕಿಗೆ ಹೋಗೋ ಪ್ಲ್ಯಾನ್ ಇದೆಯಾ? ಹಾಗಾದ್ರೆ ಈ ರಜಾಪಟ್ಟಿಯನ್ನೊಮ್ಮೆ ನೋಡಿ ಬಿಡಿ
ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್ ಕಳೆದ ತಿಂಗಳ 11ಕ್ಕೆ ಪ್ರಾರಂಭವಾಗಿ ಈ ತಿಂಗಳ 10ಕ್ಕೆ ಮುಗಿಯುತ್ತದೆ. ಕ್ರೆಡಿಟ್ ಕಾರ್ಡ್ ಬಿಲ್ ಸೃಷ್ಟಿಸಿ ಅದನ್ನು ಗ್ರಾಹಕರಿಗೆ ಕಳುಹಿಸುವ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬ ಮಾಡಬಾರದು ಎಂದು ಕೂಡ ಆರ್ ಬಿಐ ತಿಳಿಸಿದೆ. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಗ್ರಾಹಕರಿಗೆ ಇ-ಮೇಲ್ ಮೂಲಕ ಕಳುಹಿಸಿರುವ ಬಗ್ಗೆ ಸಂಸ್ಥೆಗಳು ದೃಢೀಕರಿಸಬೇಕು. ಬಡ್ಡಿದರ ಅನ್ವಯಿಸುವ ದಿನಕ್ಕಿಂತ ಕನಿಷ್ಠ 15 ದಿನಗಳ ಮುನ್ನವಾದ್ರೂ ಬಿಲ್ ಗ್ರಾಹಕರನ್ನು ತಲುಪಬೇಕು.ಇದ್ರಿಂದ ಬಿಲ್ ಪಾವತಿಗೆ ಅವರಿಗೆ ಸಾಕಷ್ಟು ಸಮಯ ಸಿಗುತ್ತದೆ ಎಂದು ಆರ್ ಬಿಐ ಅಭಿಪ್ರಾಯ ಪಟ್ಟಿದೆ.