ಉತ್ತರ ಕರ್ನಾಟಕದಲ್ಲಿ ಭಾಗದಲ್ಲಿ ನಡೆಯುತ್ತಿರುವ ಮೊದಲ ಹೂಡಿಕೆ ಸಮಾವೇಶ 'ಇನ್ವೆಸ್ಟ್ ಕರ್ನಾಟಕ 2020' ಹುಬ್ಬಳ್ಳಿಯಲ್ಲಿ ಇಂದಿನಿಂದ ಶುರುವಾಗಲಿದೆ. ರಾಜ್ಯದಲ್ಲಿ ಈ ವರೆಗೆ ಒಟ್ಟು ಐದು ಹೂಡಿಕೆದಾರರ ಸಮಾವೇಶಗಳು ನಡೆದಿದ್ದು ರಾಜ್ಯ ರಾಜಧಾನಿ ಹೊರಗೆ ನಡೆಯುತ್ತಿರುವುದು ಇದೇ ಮೊದಲು.
ಕರ್ನಾಟಕದ ಉತ್ತರ ಭಾಗಕ್ಕೂ ಉದ್ಯಮಿಗಳನ್ನು ಕರೆತಂದು ಕೈಗಾರಿಕೆಗಳನ್ನು ಸ್ಥಾಪನೆ ಮಾಡುವ ಪ್ರಯತ್ನವಾಗಿ ಇದೇ ಫೆ.14ರಂದು ಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ’ ಎನ್ನುವ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ರಾಜ್ಯ ಸರ್ಕಾರ ಆಯೋಜಿಸಿದೆ. ದೇಶ-ವಿದೇಶದ ಉದ್ಯಮಿಗಳು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಅದರಂತೆ ಈ ಬಾರಿಯಾದರೂ ಇತ್ತ ಬಂಡವಾಳ ಹರಿದು ಬಂದು, ನಮ್ಮ ಯುವಕರ ಕೈಗೆ ಉದ್ಯೋಗ ಸಿಗಲಿ, ಪ್ರತಿಭಾ ಪಲಾಯನ ತಪ್ಪಲಿ ಎನ್ನುವ ನಿರೀಕ್ಷೆ ಈ ಭಾಗದ ಜನರಲ್ಲಿ ಹೆಚ್ಚಿದೆ.
ಪ್ರಾದೇಶಿಕ ತಾರತಮ್ಯ ನಿವಾರಣೆಗೆ ಹುಬ್ಬಳ್ಳಿಯಲ್ಲಿ ‘ಜಿಮ್’
90ರ ದಶಕದಲ್ಲಿ ‘ಅಭಿವೃದ್ಧಿಯಲ್ಲಿ ಪ್ರಾದೇಶಿಕ ತಾರತಮ್ಯ’ವಾಗುತ್ತಿದೆ ಎನ್ನುವ ದೊಡ್ಡ ಕೂಗು ಕರ್ನಾಟಕದ ಉತ್ತರ ಭಾಗದಿಂದ ಕೇಳಿಬಂದಾಗ ಸೂಕ್ಷ್ಮಮತಿಯಾಗಿದ್ದ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಡಮಾಡದೇ ಹೆಸರಾಂತ ಅರ್ಥಶಾಸ್ತ್ರಜ್ಞ ಡಾ.ಡಿ.ಎಂ.ನಂಜುಂಡಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿ ಆ ಕೊರಗು ನಿವಾರಣೆಗೆ ಚಾಲನೆ ನೀಡಿದರು. ಆ ದಿಸೆಯಲ್ಲಿ ಪೂರ್ಣಪ್ರಮಾಣದ ಯಶಸ್ಸು ಕಾಣದೇ ಇದ್ದರೂ ಆಡಳಿತ ನಡೆಸುವ ಅಧಿಕಾರಿಗಳಿಗೆ ಮತ್ತು ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷಗಳಿಗೆ ರಾಜ್ಯದಲ್ಲಿ ಇಂಥದೊಂದು ಅನ್ಯಾಯ ಆಗಿದೆ ಎನ್ನುವುದನ್ನು ಇಂದಿಗೂ ಒತ್ತಿಒತ್ತಿ ಹೇಳುತ್ತಿದೆ ನಂಜುಂಡಪ್ಪ ಅವರ ಆ ವರದಿ. ಹೀಗೆ ಅಭಿವೃದ್ಧಿ ಯೋಜನೆ, ಅನುದಾನದ ಮಾತು ಕೇಳಿ ಬಂದಾಗಲೆಲ್ಲ ‘ಕೈಗಾರಿಕೆ ಸ್ಥಾಪನೆಯಲ್ಲೂ ಪ್ರಾದೇಶಿಕ ತಾರತಮ್ಯ ಆಗುತ್ತಿದೆ’ ಎನ್ನುವ ಆಕ್ರೋಶವೂ ಜತೆಯಲ್ಲೇ ಒದ್ದುಕೊಂಡು ಬರುತ್ತಿದೆ.
ಹುಬ್ಬಳ್ಳಿಯಲ್ಲಿ ಬೃಹತ್ ಹೂಡಿಕೆದಾರರ ಸಮಾವೇಶ, 10000 ಕೋಟಿ ಬಂಡವಾಳ ನಿರೀಕ್ಷೆ!
ಈ ಅಸಮಾಧಾನ ನಿವಾರಿಸಲು ರಾಜ್ಯ ಸರ್ಕಾರ ಈ ವರೆಗೆ 5 ಬಾರಿ (1996, 2002, 2010, 2012, 2016) ‘ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ’ (ಜಿಮ್)ಗಳನ್ನು ಆಯೋಜಿಸಿ, ಸರಿದೂಗಿಸುವ ಪ್ರಯತ್ನ ಮಾಡುತ್ತಲೇ ಬಂದಿದೆ. ಆದರೆ ಫಲಿತಾಂಶ ಮಾತ್ರ ತೀರಾ ಕಳಪೆ. ಇದನ್ನೆಲ್ಲ ಮನಗಂಡಿರುವ ಉತ್ತರ ಭಾಗದ ಹುಬ್ಬಳ್ಳಿಯವರೇ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಆಸಕ್ತಿ ವಹಿಸಿ ಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ ಸಮಾವೇಶ ಆಯೋಜನೆ ಆಗುವಂತೆ ನೋಡಿಕೊಂಡಿದ್ದಾರೆ.
ಹುಬ್ಬಳ್ಳಿ -ಧಾರವಾಡ ಮಹಾನಗರ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ, ಹಾವೇರಿ, ಗದಗ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಿ ಅಲ್ಲಿನ ಯುವಕರ ಕೈಗೆ ಕೆಲಸ ಸಿಗಲಿ, ಆ ಮೂಲಕ ಆಯಾ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆ ಹೆಚ್ಚಲಿ ಎನ್ನುವ ಆಶಯವನ್ನು ಶೆಟ್ಟರ್ ಹೊಂದಿದ್ದಾರೆ.
ಬೆಂಗಳೂರಿನಿಂದ ಹೊರಗೆ ಮೊದಲ ಇನ್ವೆಸ್ಟ್ ಕರ್ನಾಟಕ
ಪ್ರತಿ ಬಾರಿ ಬೆಂಗಳೂರಿನಲ್ಲಿ ಆಯೋಜನೆಯಾಗುತ್ತಿದ್ದ ಜಿಮ್‌ಗಳಲ್ಲಿ ಉದ್ಯಮಿಗಳಿಗೆ ಸರ್ಕಾರ ನೀವು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಗಿರಿ. ನಿಮ್ಮ ಉದ್ಯಮಕ್ಕೆ ಅಗತ್ಯವಾದ ಭೂಮಿ, ನೀರು, ವಿದ್ಯುತ್ ಇತ್ಯಾದಿಗಳನ್ನು ರಿಯಾಯ್ತಿ ದರದಲ್ಲಿ ಪೂರೈಸುತ್ತೇವೆ. ನಿಮ್ಮ ಉತ್ಪನ್ನಗಳ ಮೇಲಿನ ತೆರಿಗೆಯಲ್ಲೂ ಭಾರೀ ರಿಯಾಯ್ತಿ ನೀಡುತ್ತೇವೆ ಎಂದೆಲ್ಲ ಹೇಳುತ್ತಿತ್ತು. ಆದಾಗ್ಯೂ ಉತ್ತಮ ಸಂಪರ್ಕ (ವಿಮಾನ, ರೈಲು, ರಸ್ತೆ ಸಾರಿಗೆ), ಮೂಲಭೂತ ಸೌಕರ್ಯಗಳ ನೆಪ ಹೇಳಿ ಉದ್ಯಮಿಗಳು ಇತ್ತ ಬರಲು ಹಿಂದೇಟು ಹಾಕುತ್ತಿದ್ದರು. ಹಾಗಾಗಿ ಹೂಡಿಕೆದಾರರ ಸಮಾವೇಶಗಳು ಬೆಂಗಳೂರು, ಮಂಗಳೂರು, ಮೈಸೂರುಗಳಿಗೆ ಮಾತ್ರ ಸೀಮಿತವಾಗಿದ್ದೇ ಹೆಚ್ಚು.
ಇಂದು ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವಿದೆ. ನೈಋುತ್ಯ ರೈಲ್ವೆ ವಲಯವೇ ಇಲ್ಲಿದೆ. ವಾಯವ್ಯ ಸಾರಿಗೆ ಸಂಸ್ಥೆ ಕೂಡ ಸ್ಥಾಪನೆಯಾಗಿದೆ. ಪುಣೆ-ಬೆಂಗಳೂರು, ಹುಬ್ಬಳ್ಳಿ-ವಿಜಯಪುರ, ಕಾರವಾರ-ಹೊಸಪೇಟೆ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿವೆ.
ತನ್ನನ್ನು 'ಛೋಟೂ' ಎಂದ ಚೆಲುವೆಗೆ, ಮಿಲಿಯನ್ ಡಾಲರ್ 'ಉತ್ತರ' ಕೊಟ್ಟ ರತನ್ ಟಾಟಾ!
ಮಲಪ್ರಭೆಯ ಅಪಾರ ಪ್ರಮಾಣದ ನೀರು, ಕೊರತೆಯಾಗದಂತೆ ಪೂರೈಕೆಯಾಗುವ ವಿದ್ಯುತ್, ಬೃಹತ್ ಐಟಿ ಪಾರ್ಕ್, ಐಐಟಿ ಮತ್ತು ನಾಲ್ಕು ವಿಶ್ವವಿದ್ಯಾಲಯಗಳು, ಹೇರಳ ಮಾನವ ಸಂಪನ್ಮೂಲ ಸೇರಿದಂತೆ ಎಲ್ಲವೂ ಈಗ ಇಲ್ಲಿ ಲಭ್ಯ. ಹಾಗಾಗಿ ‘ಇನ್ವೆಸ್ಟ್ ಕರ್ನಾಟಕ-ಹುಬ್ಬಳ್ಳಿ’ ಜಿಮ್ ಬಗ್ಗೆ ನಿರೀಕ್ಷೆಗಳು ಸಹಜವಾಗಿಯೇ ಇಲ್ಲಿನ ಜನರಲ್ಲಿ ಹೆಚ್ಚಿವೆ.
ಹಿಂದಿನ ಜಿಮ್‌ಗಳಿಂದ ಆದ ಪ್ರಯೋಜನ ಏನು?
1996 ರಲ್ಲಿ ನಡೆದ ಮೊದಲ ಜಿಮ್ ಕರ್ನಾಟಕದಲ್ಲೂ ಹೂಡಿಕೆಗೆ ಅನುಕೂಲತೆಗಳಿವೆ ಎನ್ನುವುದನ್ನು ಎತ್ತಿ ಹೇಳಿತೇ ವಿನಃ ಅದರಿಂದ ಅಷ್ಟಾಗಿ ಬಂಡವಾಳ ಹರಿದು ಬರಲಿಲ್ಲ. ನಂತರ 2002ರಲ್ಲಿ ನಡೆದ ಜಿಮ್ ನಿಜಕ್ಕೂ ಜಗತ್ತಿನ ಐಟಿ ಉದ್ಯಮಿಗಳನ್ನು ಬೆಂಗಳೂರಿನತ್ತ ನೋಡುವಂತೆ ಮಾಡಿತು. ಮತ್ತು ಉದಾರವಾಗಿ ಬಂಡವಾಳ ಹೂಡಿ, ಲಕ್ಷಾವಧಿ ಯುವಕರಿಗೆ ಉದ್ಯೋಗ ನೀಡುವಂತೆ ಮಾಡಿತು.
ಎಸ್.ಎಂ.ಕೃಷ್ಣ ಅವರ ಇಚ್ಛಾಶಕ್ತಿ ಬೆಂಗಳೂರನ್ನು ಐಟಿ ರಾಜಧಾನಿಯನ್ನಾಗಿ ಮಾಡಿತು ಎನ್ನುವುದು ಐತಿಹಾಸಿಕ ಸತ್ಯ. ಆಗಲೂ ಬೆಂಗಳೂರು, ಮೈಸೂರು ಮಹಾನಗರಗಳಲ್ಲಿ ಮಾತ್ರ ಬಂಡವಾಳ ಹೂಡಿಕೆಯಾಯಿತು. ಅಚ್ಚರಿಯೆಂದರೆ ಹುಬ್ಬಳ್ಳಿ ಮೂಲದ ಉದ್ಯಮಿಗಳೂ ಉತ್ತರ ಕರ್ನಾಟಕದಲ್ಲಿ ತಮ್ಮ ಐಟಿ ಉದ್ಯಮ ಸ್ಥಾಪಿಸಲು ಮುಂದಾಗಲಿಲ್ಲ.
ನಂತರ 2010 ಮತ್ತು 2012 ರಲ್ಲಿ ನಡೆದ ಜಿಮ್‌ಗಳೂ ಜಗತ್ತಿನ ಉದ್ಯಮಿಗಳು ಕರ್ನಾಟಕದತ್ತ ಬರುವಂತೆ ಮಾಡಿದವು. ಅಂದು ಬೃಹತ್ ಕೈಗಾರಿಕೆ ಸಚಿವರಾಗಿದ್ದ ಮುರುಗೇಶ್ ನಿರಾಣಿ ಸ್ವತಃ ಉದ್ಯಮಿಯಾಗಿದ್ದರಿಂದ ಆಸಕ್ತಿಯಿಂದ ಈ ಜಿಮ್ ಸಂಘಟಿಸಿದ್ದರು. ಆ ವೇಳೆ ‘ಲ್ಯಾಂಡ್ ಬ್ಯಾಂಕ್’ ಸ್ಥಾಪಿಸಿ ಸರಿಸುಮಾರು 1.28 ಲಕ್ಷ ಎಕರೆ ಭೂಮಿ ಈ ಲ್ಯಾಂಡ್ ಬ್ಯಾಂಕ್‌ಗೆ ಠೇವಣಿ ಆಗುವಂತೆ ಮಾಡಿದ್ದರು. ಯಾವುದೇ ಉದ್ಯಮಿ ಕೈಗಾರಿಕೆ ಸ್ಥಾಪಿಸುತ್ತೇನೆ ಎಂದರೆ 24 ಗಂಟೆಯಲ್ಲಿ ಅವರಿಗೆ ಭೂಮಿ ಮಂಜೂರು ಮಾಡುವ ವ್ಯವಸ್ಥೆ ಮಾಡಿದ್ದರು. ಆದರೆ ಏನಕೇನ ರಾಜಕೀಯ ಬೆಳವಣಿಗೆಯಿಂದಾಗಿ ಅವರು ಕಂಡ ಕನಸು ನಿರೀಕ್ಷಿತ ರೀತಿಯಲ್ಲಿ ನನಸಾಗಲಿಲ್ಲ.
ಜಿಮ್‌ನಲ್ಲಿ ಘೋಷಣೆಯಾಗಿದ್ದ 10.76 ಲಕ್ಷ ಕೋಟಿ ಬಂಡವಾಳದಲ್ಲಿ ಹೂಡಿಕೆಯಾಗಿದ್ದು ಕೇವಲ ಶೇ.27ರಷ್ಟುಮಾತ್ರ. ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರದ ಮೊದಲ ಸಚಿವ ಸಂಪುಟದಲ್ಲೇ ಲ್ಯಾಂಡ್ ಬ್ಯಾಂಕ್‌ಗೆ ಬರಲಿದ್ದ ಆ ಎಲ್ಲ ಭೂಮಿಯನ್ನು ಆಯಾ ರೈತರಿಗೆ ವಾಪಸ್ ಕೊಟ್ಟಿತು. ಆ ಬಳಿಕ ಸಿದ್ದರಾಮಯ್ಯ ಅವಧಿಯ ಐದು ವರ್ಷ ಹೇಳಿಕೊಳ್ಳುವಂತಹ ಒಂದೇ ಒಂದೇ ಕೈಗಾರಿಕೆ ರಾಜ್ಯದಲ್ಲಿ ಸ್ಥಾಪನೆಯಾಗಲಿಲ್ಲ. 2016ರಲ್ಲಿ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲೂ ಒಂದು ಜಿಮ್ ನಡೆಯಿತು.
12 ವರ್ಷದ ಹಿಂದೆ ಜಗತ್ತಿನ 6 ನೇ ಅತಿದೊಡ್ಡ ಶ್ರೀಮಂತ, ಈಗ ಆಸ್ತಿ ‘ಸೊನ್ನೆ!'
ಅದು ರಾಜ್ಯದ ಉದ್ಯಮ, ಉದ್ಯೋಗ ವಲಯದಲ್ಲಿ ಹೇಳಿಕೊಳ್ಳುವಂತ ಸದ್ದು ಮಾಡಲೇ ಇಲ್ಲ. ಆದಾಗ್ಯೂ 2016ರಿಂದ 2020ರ ವರೆಗೆ ರಾಜ್ಯದಲ್ಲಿ ವಿವಿಧ ಉದ್ಯಮಗಳಿಗಾಗಿ 57,904 ಕೋಟಿ ಬಂಡವಾಳ ಹೂಡಿಕೆ ಹರಿದು ಬಂದಿದೆ. ಅದರಲ್ಲಿ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿ 966 ಕೋಟಿ, ಉತ್ತರ ಕರ್ನಾಟಕದಲ್ಲಿ 12,390 ಕೋಟಿ (ಬಳ್ಳಾರಿ ಜಿಲ್ಲೆಯಲ್ಲಿ ಜಿಂದಾಲ್-600 ಕೋಟಿ, ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ ತಾಲೂಕುಗಳಲ್ಲಿ ವಿಂಡ್ ಪವರ್ ಉತ್ಪಾದನೆಗೆ 11,790 ಕೋಟಿ) ಹೂಡಿಕೆಯಾಗಿದ್ದು ಹೊರತು ಪಡಿಸಿದರೆ 34,448 ಕೋಟಿಯಷ್ಟುಬೃಹತ್ ಬಂಡವಾಳ ಹೂಡಿಕೆ ಬೆಂಗಳೂರು, ಮಂಗಳೂರು, ಮೈಸೂರು ಮಹಾನಗರಗಳಲ್ಲೇ ಆಗಿದೆ.
ಜಿಮ್ ಯಶಸ್ವಿಯಾಗಲು ಏನು ಮಾಡಬೇಕು?
ರಾಜ್ಯದಲ್ಲಿ ಉದ್ಯಮ ಸ್ಥಾಪನೆಗೆ ಸಾರಿಗೆ ಸಂಪರ್ಕ ಸುಧಾರಿಸಿದ್ದರೂ, ಭೂಮಿ, ನೀರು, ಸಿಂಗಲ್ ವಿಂಡೋ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯೂ ಆಗಿಲ್ಲ. ಹೀಗಿರುವಾಗ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಉದ್ಯಮಿಗಳು ಬರುವುದಾದರೂ ಹೇಗೆ? ದೇಶ ಮತ್ತು ವಿದೇಶಗಳಲ್ಲಿ ಈ ಹೂಡಿಕೆದಾರರ ಸಮಾವೇಶ ಯಶಸ್ವಿಯಾಗಲು ಒಂದಿಷ್ಟುಪ್ರಮುಖ ಕಾರಣಗಳಿವೆ.
- ವಿಶೇಷ ಕೈಗಾರಿಕಾ ವಲಯ ಸ್ಥಾಪನೆ
- ಪ್ರತ್ಯೇಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಾಧಿಕಾರ ರಚನೆ
- ಏಕ ಗವಾಕ್ಷಿ ಯೋಜನೆ
- ಕೌಶಲ್ಯ ನೈಪುಣ್ಯತೆ ಹೊಂದಿದ ಮಾನವ ಸಂಪನ್ಮೂಲ
ಈ ನಾಲ್ಕೂ ಅತ್ಯಂತ ಪ್ರಮುಖ. ಇವು ಉದ್ಯಮಿಗಳಲ್ಲಿ ವಿಶ್ವಾಸ ಹುಟ್ಟಿಸುತ್ತವೆ. ಈಗಾಗಲೇ ಒಂದೆಡೆ ಉದ್ಯಮ ಸ್ಥಾಪಿಸಿಕೊಂಡಿರುವವರು ಅಲ್ಲಿಗಿಂತ ಇಲ್ಲಿ ಇತ್ತಮ ಪರಿಸರ, ಉತ್ತಮ ಸೌಲಭ್ಯ, ಸಾಕಷ್ಟುಕಚ್ಚಾ ವಸ್ತು ಲಭ್ಯತೆ, ಕೌಶಲ್ಯಯುತ ಮಾನವ ಸಂಪನ್ಮೂಲ ಲಭಿಸಿ ಹಾಕಿದ ಬಂಡವಾಳ ಸುರಕ್ಷಿತವಾಗಿ ವಾಪಸ್ ಬರುವುದರ ಜತೆಗೆ ಯಾವುದೇ ಕಿರಿಕಿರಿ ಇಲ್ಲದೇ ನಾಲ್ಕು ಕಾಸು ಸಂಪಾದನೆ ಆಗುವ ಭರವಸೆ ಸಿಕ್ಕರೆ ಮಾತ್ರ ಉದ್ಯಮಿಗಳು ಇಲ್ಲಿ ಹೂಡಿಕೆ ಮಾಡುತ್ತಾರೆ. ಅಂಥ ವಾತಾವರಣ ಕಲ್ಪಿಸುವ ಮೂಲಕ ಬಂಡವಾಳ ಹೂಡಿಕೆ ಮತ್ತು ಕೈಗಾರಿಕೆ ಸ್ಥಾಪನೆಯಾಗುವಂತೆ ನೋಡಿಕೊಂಡಾಗ ಮಾತ್ರ ಇಲ್ಲಿನ ಯುವಕರ ಕೈಗೆ ಉದ್ಯೋಗ ಸಿಗಲು ಸಾಧ್ಯ.
ಹುಬ್ಬಳ್ಳಿ ಸುತ್ತ ಉದ್ದಿಮೆಗೆ ಏನೇನು ಅನುಕೂಲಗಳಿವೆ?
ಹಿಂದೆ ನ್ಯಾನೋ ಕಾರು ಘಟಕ, ಟಾಟಾ ಮೆಟಾಲಿಕ್ ವಾಪಸ್ ಹೋದಂತಹ ಪರಿಸ್ಥಿತಿ ಈಗಿಲ್ಲ. ಹುಬ್ಬಳ್ಳಿಯ ಮುಮ್ಮಿಗಟ್ಟಿ-500 ಎಕರೆ, ಧಾರವಾಡದ ಬೇಲೂರು-500 ಎಕರೆ, ಮಹಾನಗರ ವ್ಯಾಪ್ತಿಯ ಕೈಗಾರಿಕಾ ವಲಯಗಳಲ್ಲಿ-1000 ಎಕರೆ ಸೇರಿದಂತೆ ಒಟ್ಟು 2 ಸಾವಿರ ಎಕರೆ ಕೆ.ಐ.ಡಿ.ಬಿ ಬಳಿ ಇದೆ. ತಕ್ಷಣಕ್ಕೆ 25 ಸಾವಿರ ಕೋಟಿಯಷ್ಟುಬಂಡವಾಳ ಹೂಡಿಕೆಗೆ ಭೂಮಿಯ ಕೊರತೆ ಎದುರಾಗುವುದಿಲ್ಲ. ಇತ್ತೀಚೆಗಷ್ಟೇ ಮಲಪ್ರಭಾ ಮೂರನೇ ಹಂತದ ನೀರೆತ್ತುವಿಕೆ ಆರಂಭವಾಗಿದೆ. ವಿದ್ಯುತ್‌ನ ಯಾವುದೇ ಸಮಸ್ಯೆ ಇಲ್ಲ. ವಿಮಾನ, ರೈಲು, ರಾಷ್ಟ್ರೀಯ ಹೆದ್ದಾರಿ ಬೇಕಷ್ಟಿದೆ. ನೈಪುಣ್ಯತೆ ಹೊಂದಿದ ಮಾನವ ಸಂಪನ್ಮೂಲಕ್ಕೆ ಕೊರತೆಯೇ ಇಲ್ಲ.
ಆದಾಗ್ಯೂ ದೊಡ್ಡ ಪ್ರಮಾಣದ ಹೂಡಿಕೆಗೆ ಭೂಮಿ ಲಭ್ಯತೆ ನಿಜಕ್ಕೂ ಕಷ್ಟ. ಹೀಗಿರುವಾಗ ಈ ಜಿಮ್‌ನಲ್ಲಿ ಬರೀ ಆಹಾರ ಸಂಸ್ಕರಣೆಗೆ ಒತ್ತು ನೀಡುವ ಮಾತುಗಳು ಕೇಳಿ ಬರುತ್ತಿವೆ. ಬೆಳಗಾವಿಯ ಕಿತ್ತೂರು ಬಳಿ ರೈಲ್ವೆ ವ್ಯಾಗನ್, ಬಿಡಿಭಾಗಗಳ ಉತ್ಪಾದನಾ ಘಟಕ ಬರಲು ಸಿದ್ಧವಾಗಿದೆ. ಹಾಗಾಗಿ ಕೆಮಿಕಲ್ ಬೇಸ್ಡ್ ಕೈಗಾರಿಕೆಗಳು, ಎಂಜಿನಿಯರಿಂಗ್ ಬೇಸ್ಡ್, ಎಫ್‌ಎಂಸಿಜಿ (ಫಾಸ್ಟ್ ಮೂವಿಂಗ್ ಕಂಜ್ಯೂಮರ್ಸ್ ಗೂಡ್ಸ್) ಅಡಿಯಲ್ಲಿ ಬರುವ ಟೂತ್ ಪೇಸ್ಟ್, ಸೋಪು ಇತ್ಯಾದಿ ಉತ್ಪಾದನಾ ಘಟಕಗಳು ಇಲ್ಲಿ ಆರಂಭವಾದರೆ ಹೆಚ್ಚು ಹೆಚ್ಚು ಯುವಕರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತದೆ.
ಉತ್ತರ ಕರ್ನಾಟಕ ಕೃಷಿಯಾಧಾರಿತ ಪ್ರದೇಶ. ಒಣ ಬೇಸಾಯದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಯುವ ಜೋಳ, ಸಜ್ಜೆ, ಶೇಂಗಾ, ಹತ್ತಿ, ಕಡಲೆ, ಸೂರ್ಯಕಾಂತಿ, ತೋಟಗಾರಿಕೆ ಬೆಳೆಗಳಾದ ಕಬ್ಬು, ಗೋವಿನ ಜೋಳ, ಗೋಧಿ, ತರಕಾರಿ, ಹಣ್ಣುಗಳ ಸಂಸ್ಕರಣೆ ಮತ್ತು ಉಪ ಉತ್ಪಾದನೆಗಳನ್ನು ಮಾಡುವ ಫುಡ್ ಪ್ರೋಸೆಸಿಂಗ್ ಯೂನಿಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದರೆ ಕಷ್ಟಪಟ್ಟು ದುಡಿಯುವ ರೈತರಿಗೆ ನ್ಯಾಯಯುತ ಬೆಲೆ ಲಭಿಸಲಿದೆ.
- ಮಲ್ಲಿಕಾರ್ಜುನ ಸಿದ್ದಣ್ಣವರ
ಇದನ್ನೂ ನೋಡಿ: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್..