* ಮಹದಾಯಿ 1000 ಕೋಟಿ
* ಹುಬ್ಬಳ್ಳಿಯಲ್ಲಿ ಜಯದೇವ ಆಸ್ಪತ್ರೆ
* ಎಸ್‌ಐಆರ್ ರಚನೆಯ ಘೋಷಣೆ, ಎಫ್‌ಎಂಸಿಜಿಗೂ ಅಸ್ತು
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮಾ.05): ರಾಜ್ಯದ ದೊರೆ ಬಸವರಾಜ ಬೊಮ್ಮಾಯಿ(Basavaraj Bommai) ತಮ್ಮ ಚೊಚ್ಚಲ ಬಜೆಟ್‌ನಲ್ಲಿ(Budget) ತವರೂರಾದ ಹುಬ್ಬಳ್ಳಿ-ಧಾರವಾಡಕ್ಕೆ(Hubballi Dharwad) ಬಂಪರ್ ಕೊಡುಗೆ ಋುಣ ತೀರಿದ್ದಾರೆ. ಜಯದೇವ ಹೃದ್ರೋಗ ಆಸ್ಪತ್ರೆ, ಜವಳಿ ಪಾರ್ಕ್, ಕೈಗಾರಿಕೆ ಸ್ಥಾಪನೆ ಉತ್ತೇಜನಕ್ಕೆ ಎಸ್‌ಐಆರ್, ಮುಂಬೈ- ಬೆಂಗಳೂರು ಕಾರಿಡಾರ್‌ಗೆ ಉತ್ತೇಜನ ಹೀಗೆ ಹತ್ತಾರು ಯೋಜನೆ ಘೋಷಣೆ ಮಾಡಿದ್ದಾರೆ.
ಈ ಭಾಗದ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ಅಕ್ಷರಶಃ ಉತ್ತರದ ಬಾಗಿಲಿಗೆ ಬೊಮ್ಮಾಯಿ ತೋರಣ ಕಟ್ಟಿದಂತಾಗಿದೆ. ಸಿಎಂ ಕೊಡುಗೆಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇದೇ ವೇಳೆ ತುಪರಿಹಳ್ಳ - ಬೆಣ್ಣಿಹಳ್ಳಗಳ ಬಗ್ಗೆ ಪ್ರಸ್ತಾಪಿಸದೇ ಇರುವುದು ಕೊಂಚ ಬೇಸರ ಮೂಡಿಸಿದೆ.
undefined
ಆರೋಗ್ಯ ಕ್ಷೇತ್ರ:
ಉತ್ತರ ಕರ್ನಾಟಕದ(North Karnataka) 13 ಜಿಲ್ಲೆಗಳ ಜನತೆ ಹೆಚ್ಚಾಗಿ ಆರೋಗ್ಯದ ವಿಷಯವಾಗಿ ಹೆಚ್ಚು ಅವಲಂಬನೆಯಾಗುವುದು ಇದೇ ಹುಬ್ಬಳ್ಳಿಯನ್ನು. ಹೀಗಾಗಿ ಕಿಮ್ಸ್‌ನಂತೆಯೇ ಇಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಪ್ರಾರಂಭಿಸಬೇಕೆಂಬ ಬೇಡಿಕೆ ಇತ್ತು. ಹಿಂದೆ ಇದಕ್ಕಾಗಿ ಪ್ರಯತ್ನ ಕೂಡ ನಡೆದಿತ್ತು. ಆದರೆ ಅದು ಅಷ್ಟೊಂದು ಫಲಕೊಟ್ಟಿರಲಿಲ್ಲ. ಆದರೆ ಇದೀಗ ಪ್ರಾದೇಶಿಕ ಕೇಂದ್ರ(Regional Center) ತೆರೆಯುವುದಾಗಿ ಬಜೆಟ್‌ನಲ್ಲೇ ಘೋಷಿಸಲಾಗಿದೆ. .250 ಕೋಟಿ ಮೀಸಲಿಡಲಾಗಿದೆ. ಇದರಿಂದಾಗಿ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನತ್ತ ಪ್ರಯಾಣ ಬೆಳೆಸುವುದು ತಪ್ಪಲಿದೆ. ಬಡರೋಗಿಗಳಿಗೆ ಹೆಚ್ಚು ಅನುಕೂಲವಾದಂತಾಗಲಿದೆ.
Karnataka Budget 2022 ಬೊಮ್ಮಾಯಿ ಬಜೆಟ್‌ನಲ್ಲಿ ಕರಾವಳಿ ಜಿಲ್ಲೆಗಳಿಗೆ ಸಿಕ್ಕಿದ್ದೇನು?
ಹುಬ್ಬಳ್ಳಿಯ ಕಾರ್ಮಿಕ ಆಸ್ಪತ್ರೆ ಬರೀ 50 ಹಾಸಿಗೆಯ ಸಾಮರ್ಥ್ಯ ಹೊಂದಿದೆ. ಇದನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವುದಾಗಿ ಸಿಎಂ ಹೇಳಿದ್ದಾರೆ. ಇದರಿಂದ ಇಲ್ಲಿನ ಕಾರ್ಮಿಕರಷ್ಟೇ ಅಲ್ಲ ಸುತ್ತಮುತ್ತಲಿನ ಜಿಲ್ಲೆಗಳ ಕಾರ್ಮಿಕರಿಗೂ ಅನುಕೂಲ ಕಲ್ಪಿಸಲಿದೆ. ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಧಾರವಾಡದ ಕರ್ನಾಟಕ ಕ್ಯಾನ್ಸರ್ ಇನ್ಸ್‌ಟಿಟ್ಯೂಟ್‌ಗೆ ಸರ್ಕಾರ ವಿಶೇಷ ನೆರವು ನೀಡುವುದಾಗಿ ಘೋಷಿಸಿದೆ.
ಕೈಗಾರಿಕೆ ವಲಯ: ಎಸ್‌ಐಆರ್
ಕೈಗಾರಿಕಾ ವಲಯಕ್ಕೆ(Industrial Sector) ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ. ಫಾಸ್ಟ್ ಮೂವಿಂಗ್ ಗೂಡ್ಸ್ ಕ್ಲಸ್ಟರ್ (ಎಫ್‌ಎಂಸಿಜಿ) ಅಭಿವೃದ್ಧಿ ಪಡಿಸುವುದಾಗಿ ಘೋಷಿಸಿರುವ ಸರ್ಕಾರ, ಇದರಡಿ ಕೈಗಾರಿಕೆ ಸ್ಥಾಪಿಸುವವರಿಗೆ ವಿಶೇಷ ಪ್ಯಾಕೇಜ್ ನೀಡುವುದಾಗಿ ಹೇಳಿದೆ. ಜಗದೀಶ ಶೆಟ್ಟರ್ ಕೈಗಾರಿಕಾ ಸಚಿವರಾಗಿದ್ದಾಗಿನಿಂದ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿತ್ತು. ಶೆಟ್ಟರ್ ಅವರು ಅಸ್ಸಾಂ, ಗುವಾಹಟಿಗೆ ತೆರಳಿ ಅಲ್ಲಿನ ಎಫ್‌ಎಂಸಿಜಿ ಘಟಕಕ್ಕೆ ಭೇಟಿ ನೀಡಿ ಅವರನ್ನು ಇಲ್ಲಿಗೆ ಕರೆ ತರಲು ಸಮಿತಿ ಕೂಡ ರಚಿಸಿದ್ದರು. ಅದೀಗ ಫಲ ನೀಡಿದಂತಾಗಿದೆ. ಇದರಿಂದ ಸರಿಸುಮಾರು 1 ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಲಭಿಸಲಿದೆ. ಧಾರವಾಡ ಜಿಲ್ಲೆಯಷ್ಟೆಅಲ್ಲ ಇಡೀ ಉತ್ತರ ಕರ್ನಾಟಕದ ಜಿಲ್ಲೆಗಳಿನ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಂಡಂತಾಗುತ್ತದೆ.
ಕರ್ನಾಟಕ ಡಿಜಿಟಲ್ ಎಕನಾಮಿ ಮಿಷನ್‌ನಿಂದ(Karnataka Digital Economy Mission) ನಿರ್ವಹಿಸುವ ಕ್ಲಸ್ಟರ್‌ಗೆ . 20 ಕೋಟಿಯಂತೆ ಬಿಯಾಂಡ್ ಬೆಂಗಳೂರು ಕ್ಲಸ್ಟರ್ ಸೀಡ್ ಫಂಡ್ ಫಾರ್ ಸ್ಟಾರ್ಟ್‌ಫ್ಸ್ ಸ್ಥಾಪನೆಗೆ ಸರ್ಕಾರ ಅಸ್ತು ಎಂದಿದೆ. ಸದ್ಯ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಗಾಗಿ 12 ಕೋಟಿ ಮೀಸಲಿಡಲಾಗಿದೆ. ಈ ಮೂಲಕ ಬೆಂಗಳೂರಿನಾಚೆ ಉದ್ಯಮಗಳು ಬರಬೇಕು ಎಂಬ ಕನಸಿಗೆ ನೀರೆರೆದಂತಾಗಿದೆ.
ಚೆನ್ನೈ- ಬೆಂಗಳೂರು- ಮುಂಬೈ ಕೈಗಾರಿಕಾ ಕಾರಿಡಾರ್‌ನ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡುವುದಾಗಿ ಸರ್ಕಾರ ಘೋಷಿಸಿದೆ. ಇದರಲ್ಲಿ ಧಾರವಾಡ ಕೂಡ ಸೇರಿದೆ. ಇದರಿಂದಾಗಿ ಹೆಚ್ಚೆಚ್ಚು ಕೈಗಾರಿಕೆಗಳು ಬಂಡವಾಳ ಹೂಡಲು ಅನುಕೂಲ ಕಲ್ಪಿಸಿದಂತಾಗುತ್ತದೆ. ಈ ಬೇಡಿಕೆ ಬಹುವರ್ಷಗಳದ್ದು ಅದೀಗ ಈಡೇರಿದಂತಾಗಿದೆ.
ಎಸ್‌ಐಆರ್:
ಇನ್ನೊಂದು ಪ್ರಮುಖ ಬೇಡಿಕೆಯಾಗಿದ್ದ ಎಸ್‌ಐಆರ್ ಅಧಿನಿಯಮ ರಚನೆಗೆ ಈ ಸಲ ಸರ್ಕಾರ ಅಸ್ತು ಎಂದಿದೆ. ಎಸ್‌ಐಆರ್ ( ಸ್ಪೆಷಲ್ ಇನ್‌ವೆಸ್ಟ್ ರಿಜಿನ್) ಅಂದರೆ ವಿಶೇಷ ಹೂಡಿಕೆ ಪ್ರದೇಶ. ಈ ಕುರಿತು ಅಧಿಸೂಚನೆ ಮಾಡಿದರೆ ದೊಡ್ಡ ಗಾತ್ರ ಹೂಡಿಕೆ ಪ್ರದೇಶ, ಕೈಗಾರಿಕಾ ವಸಾಹತುಗಳ ಸ್ಥಾಪನೆ, ನಿಯಂತ್ರಣ ಹಾಗೂ ನಿರ್ವಹಣೆಗಾಗಿ ಅನುಕೂಲವಾಗಲಿದೆ. ಸದ್ಯ ಇದರಲ್ಲಿ ಧಾರವಾಡ ಕೂಡ ಸೇರಿರುವುದು ವಿಶೇಷ. ಇದರಿಂದ ಉದ್ಯಮಿಗಳ ಪರವಾನಗಿಗಾಗಿ ಕಚೇರಿ ಕಚೇರಿ ಅಲೆದಾಡುವುದು ತಪ್ಪಲಿದೆ.
ಜವಳಿ ಪಾರ್ಕ್:
ಇನ್ನು ನವಲಗುಂದದಲ್ಲಿ ಜವಳಿ ಪಾರ್ಕ್ ಸ್ಥಾಪಿಸುವುದಾಗಿ ಘೋಷಿಸಿದೆ. ಇದರಿಂದ 5 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಜಮಖಾನಾ ತಯಾರಿಕೆಯಲ್ಲಿ ವಿಶೇಷತೆ ಪಡೆದಿರುವ ನವಲಗುಂದದಲ್ಲಿ ಜವಳಿ ಪಾರ್ಕ್ ಆಗುತ್ತಿರುವುದು ಖುಷಿಯ ಸಂಗತಿ. ಇದರೊಂದಿಗೆ ಜಮಖಾನಾ ಕ್ಲಸ್ಟರ್ ಕೂಡ ತೆರೆಯುವುದಾಗಿ ಘೋಷಿಸಿದೆ. ಈ ಮೂಲಕ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತನ್ನು ಸರ್ಕಾರ ನೀಡಿದಂತಾಗಿದೆ. ಅಲ್ಲದೇ, ನಶಿಸಿ ಹೋಗುತ್ತಿರುವ ಜಮಖಾನಾ ತಯಾರಿಕೆಗೆ ಉತ್ತೇಜನ ನೀಡಿದಂತಾಗಿದೆ.
ರೈತರಿಗಾಗಿ ಪೀಠ:
ರೈತರ ಏಳ್ಗೆಗಾಗಿ ಶ್ರಮಿಸುತ್ತಿರುವ ಇಸಾರ್ಡ್ ಸಂಸ್ಥೆ ಸಂಸ್ಥಾಪಕರಾಗಿರುವ ಬೆಂಗಳೂರು ಕೃಷಿ ವಿವಿ ಕುಲಪತಿಯಾಗಿದ್ದ ಡಾ. ಎಸ್.ವಿ.ಪಾಟೀಲ ಹೆಸರಲ್ಲಿ ಕೃಷಿ ಸಂಶೋಧನೆ ಹಾಗೂ ರೈತರ ಶ್ರೇಯೋಭಿವೃದ್ಧಿ ಪೀಠ ಸ್ಥಾಪನೆಗೆ ಸರ್ಕಾರ ಅಸ್ತು ಎಂದಿದೆ. ಈ ಮೂಲಕ ರೈತರಿಗೆ ವಿವಿಧ ಬೆಳೆಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಇದರಿಂದ ಇಡೀ ಉತ್ತರ ಕರ್ನಾಟಕ ರೈತರಿಗೆ ಅನುಕೂಲವಾಗಲಿದೆ.
ಇದಲ್ಲದೇ ಎಸ್ಸಿ-ಎಸ್ಟಿ, ಹಿಂದುಳಿದ, ಅಲ್ಪಸಂಖ್ಯಾತ, ಇತರೆ ವರ್ಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ದೀನದಯಾಳ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಸ್ಥಾಪಿಸುವುದಾಗಿ ಸರ್ಕಾರ ಹೇಳಿದೆ. 1000 ವಿದ್ಯಾರ್ಥಿಗಳ ಸಾಮರ್ಥ್ಯ ಈ ವಸತಿ ನಿಲಯ ಹೊಂದಲಿದೆ. ಉನ್ನತ ಶಿಕ್ಷಣ ಪಡೆಯಲು ಬಯಸಿರುವ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಿದೆ. ಉದ್ಯೋಗಸ್ಥ ಮಹಿಳೆಯರಿಗಾಗಿ ವಸತಿ ನಿಲಯ ಸ್ಥಾಪಿಸಲಿದೆ. ಬೇರೆ ಬೇರೆ ಊರುಗಳಿಂದ ಬರುವ ಮಹಿಳೆಯರಿಗೆ ಇದು ಸುರಕ್ಷಿತ ತಾಣವಾಗಲಿದೆ.
Karnataka Budget 2022: ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ ಘೋಷಿಸಿದ ರಾಜ್ಯ ಸರಕಾರ
ಇನ್ನು ಧಾರವಾಡ -ಕಿತ್ತೂರು- ಬೆಳಗಾವಿ ನೂತನ ರೈಲು ಮಾರ್ಗವನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ. ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ತಯಾರಿಸುವ ಲ್ಯಾಬ್ ಇನ್ ಕಿಟ್‌ಗಳನ್ನು ಸರ್ಕಾರದ 169 ಬಾಲಕಿಯರ ಪ್ರೌಢಶಾಲೆಗಳಿಗೆ ವಿತರಿಸಲು ನಿರ್ಧರಿಸಿ ಘೋಷಿಸಲಾಗಿದೆ.
ಸಿಬ್ಬಂದಿ ನೇಮಕ:
ಕಳೆದ ವರ್ಷ ಬಜೆಟ್‌ನಲ್ಲಿ ಘೋಷಿಸಿದ್ದ, ಇದೀಗ ಪ್ರಾರಂಭವಾಗಿರುವ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಅಗತ್ಯವಿರುವ ಸಿಬ್ಬಂದಿ ನೇಮಕಕ್ಕೆ ಅಸ್ತು ಎಂದಿದೆ. ಇದರಿಂದ ಈ ಭಾಗದಲ್ಲಿ ಅಪರಾಧ ಪ್ರಕರಣಗಳ ತನಿಖೆ ಚುರುಕಾಗಲಿದೆ. ಒಟ್ಟಿನಲ್ಲಿ ನಿರೀಕ್ಷೆಗೂ ಮೀರಿ ಮುಖ್ಯಮಂತ್ರಿ ಬೊಮ್ಮಾಯಿ ತವರೂರಾದ ಹುಬ್ಬಳ್ಳಿ-ಧಾರವಾಡ ಜಿಲ್ಲೆಗೆ ಕೊಟ್ಟಿರುವುದಂತೂ ಸತ್ಯ. ಇದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಮಹದಾಯಿ; ಕಾಳಿ ನದಿಗೆ ಅನುದಾನ:
ಮಹದಾಯಿ ತೀರ್ಪಿನ ಅನುಷ್ಠಾನಕ್ಕೆ ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಗೆ ಮತ್ತೆ .1000 ಕೋಟಿ ಮೀಸಲಿಡಲಾಗಿದೆ. ಈಗಾಗಲೇ .1677 ಕೋಟಿ ಮೀಸಲಿದೆ. ಅದಕ್ಕೆ ಈ .1000 ಕೋಟಿ ಸೇರ್ಪಡೆಯಾದಂತಾಗಿದೆ. ಆದರೆ ಈವರೆಗೂ ಕೆಲಸ ಮಾತ್ರ ಪ್ರಾರಂಭವಾಗಿಲ್ಲ. ಇನ್ನಾದರೂ ಕೆಲಸ ಪ್ರಾರಂಭಿಸಬೇಕು ಎಂಬ ಬೇಡಿಕೆ ಹೋರಾಟಗಾರರದ್ದು.
ಇದೇ ವೇಳೆ ಕಾಳಿ ನದಿಯಿಂದ ಧಾರವಾಡ, ಉತ್ತರ ಕನ್ನಡ ಸೇರಿದಂತೆ 5 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ರೂಪಿಸಲು ಕ್ರಮ ಕೈಗೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಿದೆ. ಇದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆಗೆ ಇತಿಶ್ರೀ ಹಾಡಿದಂತಾಗಿದೆ.
ಮರೆತ ಬೆಣ್ಣಿಹಳ್ಳ- ತುಪರಿಹಳ್ಳ
ಇನ್ನೂ 1300 ಕೋಟಿ ವೆಚ್ಚದ ಬೆಣ್ಣಿಹಳ್ಳ ಹಾಗೂ .315 ಕೋಟಿ ವೆಚ್ಚದ ತುಪರಿಹಳ್ಳದ ಯೋಜನೆ ಬಗ್ಗೆ ಚಕಾರ ಎತ್ತಿಲ್ಲ. ಇದು ಜಿಲ್ಲೆಯಲ್ಲಿ ಬೇಸರ ಮೂಡಿಸಿದೆ. ಈ ಯೋಜನೆಗಳಿಗೂ ಪ್ರಾಥಮಿಕ ಹಂತದಲ್ಲಿ ಕೊಂಚವಾದರೂ ಅನುದಾನ ನೀಡಬೇಕಿತ್ತು ಎಂಬುದು ಹೋರಾಟಗಾರರ ಅಭಿಪ್ರಾಯ.