ಆರ್ ಬಿಐ ಇತ್ತೀಚೆಗಷ್ಟೇ ಆಯ್ದ ನಗರಗಳಲ್ಲಿ ಡಿಜಿಟಲ್ ರೂಪಾಯಿ ಪರಿಚಯಿಸಿದೆ. ಇದು ಟೋಕನ್ ರೂಪದಲ್ಲಿದ್ದು, ಪಾವತಿಗಳು ಹಾಗೂ ವಹಿವಾಟುಗಳಿಗೆ ಬಳಸಿಕೊಳ್ಳಬಹುದಾಗಿದೆ. ಆದರೆ, ಇದನ್ನು ಬ್ಯಾಂಕ್ ನಲ್ಲಿ ಎಫ್ ಡಿ ಇಡಬಹುದಾ? ಸರ್ಕಾರ ಈ ಬಗ್ಗೆ ಏನ್ ಹೇಳಿದೆ? ಇಲ್ಲಿದೆ ಮಾಹಿತಿ.
Business Desk:ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಇತ್ತೀಚೆಗೆ ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿ ಮೊದಲ ಪೈಲಟ್ ಯೋಜನೆಗೆ ಚಾಲನೆ ನೀಡಿದೆ. ಡಿಜಿಟಲ್ ರೂಪಾಯಿ ಡಿಜಿಟಲ್ ಟೋಕನ್ ರೂಪದಲ್ಲಿದ್ದು, ಪಾವತಿಗಳು ಹಾಗೂ ವಹಿವಾಟುಗಳಿಗೆ ಬಳಸಿಕೊಳ್ಳಬಹುದಾಗಿದೆ. ಡಿಜಿಟಲ್ ರೂಪಾಯಿ ಮೊಬೈಲ್ ನಲ್ಲೇ ಇರುವ ವ್ಯಾಲೆಟ್ ಆಗಿದೆ. ಇದನ್ನು ಕ್ಯುಆರ್ ಕೋಡ್ ಮೂಲಕ ಬಳಸಬಹುದು. ಇದನ್ನುಕರೆನ್ಸಿ ನೋಟಿನ ಡಿಜಿಟಲ್ ರೂಪ ಎಂದೇ ಹೇಳಬಹುದು. ಹೀಗಾಗಿ ಪರ್ಸ್ ನಲ್ಲಿ ನಗದು ಇಟ್ಟುಕೊಳ್ಳದೆ ಎಲ್ಲ ವಹಿವಾಟುಗಳನ್ನು ನಡೆಸಬಹುದು. ಡಿಜಿಟಲ್ ರೂಪಾಯಿ ಸೃಷ್ಟಿ, ವಿತರಣೆ ಹಾಗೂ ರಿಟೇಲ್ ಬಳಕೆ ಸಂಪೂರ್ಣ ಪ್ರಕ್ರಿಯೆಯನ್ನು ಆರ್ ಬಿಐ ಪ್ರಸ್ತುತ ಪರಿಶೀಲಿಸುತ್ತಿದೆ. ಹೀಗಾಗಿ ಇದು ಪ್ರಾಯೋಗಿಕ ಹಂತದಲ್ಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಎಂಟು ಬ್ಯಾಂಕ್ ಗಳನ್ನು ಆಯ್ಕೆ ಮಾಡಲಾಗಿದೆ. ಈ ಬ್ಯಾಂಕ್ ಗಳು ಗ್ರಾಹಕರಿಗೆ ಡಿಜಿಟಲ್ ವ್ಯಾಲೆಟ್ (Digital wallet) ಒದಗಿಸುತ್ತವೆ. ಇದನ್ನು ಬಳಸಿಕೊಂಡು ಬಳಕೆದಾರರು ವಹಿವಾಟು ನಡೆಸಬಹುದು. ಡಿಜಿಟಲ್ ರೂಪಾಯಿ ಮೂಲಕ ಗ್ರಾಹಕರು ಇತರ ಬಳಕೆದಾರರಿಗೆ ಪಾವತಿ ವರ್ಗಾವಣೆ ಮಾಡಬಹುದು. ಹಾಗೆಯೇ ಶಾಪಿಂಗ್ ನಡೆಸಬಹುದು. ಇನ್ನು ಡಿಜಿಟಲ್ ರೂಪಾಯಿ ಸ್ಥಿರ ಠೇವಣಿ (ಎಫ್ ಡಿ) ಇಡಬಹುದೇ? ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಇಲ್ಲಿದೆ ಉತ್ತರ.
ನೀವು ಬ್ಯಾಂಕ್ ನಲ್ಲಿ ನಗದು ಠೇವಣಿಯಿಟ್ಟರೆ ಅದಕ್ಕೆ ಬಡ್ಡಿ ಸಿಗುತ್ತದೆ. ಹಾಗೆಯೇ ಭವಿಷ್ಯದಲ್ಲಿ ಎಫ್ ಡಿಗೆ ಡಿಜಿಟಲ್ ರೂಪಾಯಿ ಕೂಡ ಬಳಸಬಹುದು. ಕೇಂದ್ರ ಸರ್ಕಾರ ಕೂಡ ಡಿಜಿಟಲ್ ರೂಪಾಯಿಯನ್ನು ಬ್ಯಾಂಕ್ ಠೇವಣಿ ಸೇರಿದಂತೆ ವಿವಿಧ ರೂಪಕ್ಕೆ ಮಾರ್ಪಡಿಸಲು ಮುಂದಿನ ದಿನಗಳಲ್ಲಿ ಅವಕಾಶವಿದೆ ಎಂದು ತಿಳಿಸಿದೆ. 'ಡಿಜಿಟಲ್ ಕರೆನ್ಸಿಯನ್ನು ಪೇಪರ್ ಕರೆನ್ಸಿ ಹಾಗೂ ನಾಣ್ಯಗಳ ಮಾದರಿಯಲ್ಲೇ ವಿತರಿಸಲಾಗೋದು. ಹಾಗೆಯೇ ಬ್ಯಾಂಕ್ ಗಳ ಮೂಲಕವೇ ವಿತರಣೆ ನಡೆಯಲಿದೆ. ಬಳಕೆದಾರರು ಬ್ಯಾಂಕ್ ಒದಗಿಸುವ ಡಿಜಿಟಲ್ ವ್ಯಾಲೆಟ್ ಮೂಲಕ ಡಿಜಿಟಲ್ ರೂಪಾಯಿ ವಹಿವಾಟು ನಡೆಸಬಹುದು. ಈ ವಹಿವಾಟು ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ವ್ಯಕ್ತಿಯಿಂದ ವ್ಯಾಪಾರಿಗೆ ಮಾದರಿಯಲ್ಲಿ ನಡೆಯಲಿದೆ' ಎಂದು ಕೇಂದ್ರ ಹಣಕಾಸು ಸಚಿವಾಲಯದ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.
ಎಸ್ ಬಿಐ ಗ್ರಾಹಕರಿಗೆ ಸಿಹಿಸುದ್ದಿ; ಎಫ್ ಡಿ ಮೇಲಿನ ಬಡ್ಡಿದರ ಹೆಚ್ಚಳ
ಯಾವೆಲ್ಲ ಬ್ಯಾಂಕ್ ಗಳಲ್ಲಿ ಲಭ್ಯ?
ಈ ಪೈಲಟ್ ಯೋಜನೆಯಲ್ಲಿ ಭಾಗವಹಿಸಲು ಎಂಟು ಬ್ಯಾಂಕ್ ಗಳನ್ನು (Banks) ಆಯ್ಕೆ ಮಾಡಲಾಗಿದೆ. ಮೊದಲ ಹಂತದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಐಸಿಐಸಿಐ ಬ್ಯಾಂಕ್ (ICICI bank), ಯೆಸ್ ಬ್ಯಾಂಕ್ ಹಾಗೂ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಅನ್ನು ಆಯ್ಕೆ ಮಾಡಲಾಗಿದೆ. ನಂತರದಲ್ಲಿ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ ಡಿಎಫ್ ಸಿ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರ ಬ್ಯಾಂಕ್ ಈ ಯೋಜನೆಗೆ ಸೇರ್ಪಡೆಗೊಳ್ಳಲಿವೆ.
ದೇಶಾದ್ಯಂತ ಲಭ್ಯವಾ?
ಮೊದಲ ಹಂತದಲ್ಲಿ ಡಿಜಿಟಲ್ ಕರೆನ್ಸಿಯನ್ನು ನವದೆಹಲಿ, ಮುಂಬೈ, ಬೆಂಗಳೂರು ಹಾಗೂ ಭುವನೇಶ್ವರದಲ್ಲಿ ಬಿಡುಗಡೆಗೊಳಿಸಲಿದೆ. ಮುಂದಿನ ದಿನಗಳಲ್ಲಿ ಇದನ್ನು ಅಹಮದಾಬಾದ್, ಗಾಂಗ್ಟಾಕ್, ಗುವಾಹಟಿ, ಹೈದರಾಬಾದ್, ಇಂದೋರ್, ಕೊಚ್ಚಿ, ಲಖನೌ, ಪಟನಾ, ಶಿಮ್ಲಾಕ್ಕೆ ವಿಸ್ತರಿಸಲಾಗುತ್ತದೆ.
ಶೀಘ್ರದಲ್ಲೇ ಪಿಪಿಎಫ್, ಎನ್‌ಎಸ್‌ಸಿ ,ಕೆವಿಪಿ ಬಡ್ಡಿದರ ಹೆಚ್ಚಳ
ಬಡ್ಡಿ ಸಿಗುತ್ತಾ?
ಬ್ಯಾಂಕ್ ಖಾತೆಯಲ್ಲಿರುವ ಹಣಕ್ಕೆ ಬಡ್ಡಿ (Interest) ನೀಡಲಾಗುತ್ತದೆ. ಆದರೆ, ಡಿಜಿಟಲ್ ರೂಪಾಯಿಗೆ (Digital Rupee) ಯಾವುದೇ ಬಡ್ಡಿದರ ಸಿಗೋದಿಲ್ಲ. ನಮ್ಮ ಜೇಬಿನಲ್ಲಿರುವ ನಗದು ಹಣಕ್ಕೆ ಯಾವುದಾದ್ರೂ ಬಡ್ಡಿ ಸಿಗುತ್ತದೆಯಾ? ಇದು ಕೂಡ ಹಾಗೆಯೇ.