ಕೇಂದ್ರ ಸರ್ಕಾರಿ ನೌಕರರಿಗೆ ಶುಭಸುದ್ದಿ; ಶೀಘ್ರದಲ್ಲೇ ಶೇ.4ರಷ್ಟು ಡಿಎ ಏರಿಕೆ ಸಾಧ್ಯತೆ

By Suvarna News  |  First Published Feb 6, 2023, 11:30 AM IST

ಈ ಬಾರಿಯ ಬಜೆಟ್ ನಲ್ಲಿ ತುಟ್ಟಿ ಭತ್ಯೆ (ಡಿಎ) ಹೆಚ್ಚಳವಾಗಬಹುದು ಎಂದು ಕೇಂದ್ರ ಸರ್ಕಾರಿ ನೌಕರರು ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ, ಅಂಥ ಯಾವುದೇ ಬೆಳವಣಿಗೆ ಘಟಿಸಲಿಲ್ಲ. ಆದರೆ, ಕೆಲವು ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಶೀಘ್ರದಲ್ಲೇ ನೌಕರರ ಡಿಎ ಅನ್ನು ಶೇ.4ರಷ್ಟು ಹೆಚ್ಚಳ ಮಾಡಲಿದೆ. 


ನವದೆಹಲಿ (ಫೆ.6): 2023ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ (ಡಿಎ) ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಕೇಂದ್ರ ಸರ್ಕಾರ ಅಂಥ ಯಾವುದೇ ಘೋಷಣೆ ಮಾಡಿಲ್ಲ. ಇದರಿಂದ ನಿರಾಸೆಗೊಂಡಿದ್ದ ಕೇಂದ್ರ ಸರ್ಕಾರದ ಒಂದು ಕೋಟಿಗೂ ಅಧಿಕ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಶುಭ ಸುದ್ದಿಯಿದೆ. ಕೇಂದ್ರ ಸರ್ಕಾರ ತುಟ್ಟಿ ಭತ್ಯೆಯನ್ನು ಶೇ.4ರಷ್ಟು ಅಂದ್ರೆ ಶೇ.38 ರಿಂದ ಶೇ.42ಕ್ಕೆ ಏರಿಕೆ ಮಾಡುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಈ ಏರಿಕೆಯನ್ನು ಪ್ರತಿ ತಿಂಗಳು ಕಾರ್ಮಿಕರ ಇಲಾಖೆ ಬಿಡುಗಡೆ ಮಾಡುವ ಕೈಗಾರಿಕ ಕಾರ್ಮಿಕರ (ಸಿಪಿಐ-ಐಡಬ್ಲ್ಯು) ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿ ಮಾಡಲಾಗುವುದು. ಒಂದು ವೇಳೆ ಕೇಂದ್ರ ಸರ್ಕಾರ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿದರೆ 2023ರ ಜನವರಿ 1ರಿಂದಲೇ ಡಿಎ ಹೆಚ್ಚಳ ಜಾರಿಗೆ ಬರಲಿದೆ. 2022ರ ಸೆಪ್ಟೆಂಬರ್ 28ರಂದು ಕೊನೆಯದಾಗಿ ಡಿಎ ಪರಿಷ್ಕರಣೆ ಮಾಡಲಾಗಿತ್ತು. ಈ ಭತ್ಯೆಯನ್ನು ವರ್ಷದಲ್ಲಿಎರಡು ಬಾರಿ ಅಂದ್ರೆ ಜನವರಿ ಹಾಗೂ ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ. ಹೀಗಾಗಿ ಈ ತಿಂಗಳು ಡಿಎ ಪರಿಷ್ಕರಣೆ ಮಾಡುವ ಸಾಧ್ಯತೆ ಹೆಚ್ಚಿದೆ.

ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಅಖಿಲ ಭಾರತ ರೈಲ್ವೆಮೆನ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಶಿವ ಗೋಪಾಲ್ ಮಿಶ್ರಾ 'ಡಿಸೆಂಬರ್ 2022ರ ಸಿಪಿಐ-ಐಡಬ್ಲ್ಯು ಅನ್ನು 2023ರ ಜನವರಿ 31ರಂದು ಬಿಡುಗಡೆ ಮಾಡಲಾಗಿದೆ. ಇದರ ಅನ್ವಯ ಡಿಎ ಹೆಚ್ಚಳ ಶೇ.4.23ರಷ್ಟು ಆಗಬೇಕು. ಆದರೆ, ಸರ್ಕಾರ ದಶಮಾಂಶವನ್ನು ಹೆಚ್ಚಳಕ್ಕೆ ಪರಿಗಣಿಸುವ ಸಾಧ್ಯತೆಯಿಲ್ಲ. ಹೀಗಾಗಿ ಡಿಎ ಶೇ.4ರಷ್ಟು ಹೆಚ್ಚಿಸಿ ಶೇ.42ಕ್ಕೆ ಏರಿಕೆ ಮಾಡುವ ಸಾಧ್ಯತೆಯಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
2022ರ ಮಾರ್ಚ್ ನಲ್ಲಿ ಕೇಂದ್ರ ಸಚಿವ ಸಂಪುಟ ಡಿಎಯನ್ನು (DA) ಶೇ.3ಕ್ಕೆ ಏರಿಕೆ ಮಾಡಲು ಒಪ್ಪಿಗೆ ನೀಡಿತ್ತು. ಪರಿಣಾಮ ಡಿಎ ಮೂಲವೇತನದ ಶೇ.34ಕ್ಕೆ ಹೆಚ್ಚಳವಾಗಿತ್ತು. ಇನ್ನು ಸೆಪ್ಟೆಂಬರ್ ನಲ್ಲಿ ಕೂಡ ಕೇಂದ್ರ ಸರ್ಕಾರ (Central Government) ನೌಕರರ ಡಿಎ ಅನ್ನು ಶೇ.4ರಷ್ಟು ಏರಿಕೆ ಮಾಡಲು ಒಪ್ಪಿಗೆ ನೀಡಿತ್ತು. ಪರಿಣಾಮ ಕೇಂದ್ರ ಸರ್ಕಾರಿ ನೌಕರರ ಡಿಎ ಮೂಲವೇತನದ ಶೇ.38ಕ್ಕೆ ಏರಿಕೆಯಾಗಿದೆ. ಜುಲೈ 1ರಿಂದ ಪೂರ್ವಾನ್ವಯವಾಗುವಂತೆ ಈ ಹೆಚ್ಚಳ (Hike) ಮಾಡಲಾಗಿದೆ. ಇದರಿಂದ ಸುಮಾರು 47.68 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರಿಗೆ ಪ್ರಯೋಜನವಾಗಿದೆ. 

Tap to resize

Latest Videos

ಅದಾನಿ ಸಮೂಹದ ಬಗ್ಗೆ ಮಾರುಕಟ್ಟೆ ನಿಯಂತ್ರಕರ ನಿಗಾ; ದೇಶದ ಇಮೇಜ್‌ಗೆ ಧಕ್ಕೆ ಇಲ್ಲ: ನಿರ್ಮಲಾ ಸೀತಾರಾಮನ್

ಡಿಎ ಪರಿಷ್ಕರಣೆಗೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (AICPI) ಮಾನದಂಡವಾಗಿದ್ದು,ಅದರ ಆಧಾರದಲ್ಲೇ ಪರಿಷ್ಕರಿಸಲಾಗುತ್ತದೆ. ಡಿಎ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಹಾಗೆಯೇಡಿಯರನೆಸ್ ರಿಲೀಫ್ ಅಥವಾ ಡಿಆರ್ (DR)ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ. ಕೋವಿಡ್ -19 ಕಾರಣದಿಂದ ಸೃಷ್ಟಿಯಾದ ಹೆಚ್ಚುವರಿ ವೆಚ್ಚಗಳನ್ನು ಭರಿಸಲು ಕೇಂದ್ರ ಸರ್ಕಾರ ಈ ಹಿಂದೆ ಡಿಎ (DA)ಹಾಗೂ ಡಿಆರ್ (DR) ದರ ಹೆಚ್ಚಳದ ಮೂರು ಕಂತುಗಳನ್ನು ತಡೆ ಹಿಡಿದಿತ್ತು. 2020 ಜನವರಿ 1, 2020 ಜುಲೈ 1 ಹಾಗೂ 2021ರ ಜನವರಿ 1ರ ಡಿಎ ಹಾಗೂ ಡಿಆರ್ ಕಂತುಗಳನ್ನು ಸರ್ಕಾರ ತಡೆ ಹಿಡಿದಿತ್ತು. 

ಎಲ್ಐಸಿಯ ಈ ಪಾಲಿಸಿಯಲ್ಲಿ ದಿನಕ್ಕೆ 45ರೂ. ಹೂಡಿಕೆ ಮಾಡಿದ್ರೆ 25ಲಕ್ಷ ರೂ. ರಿಟರ್ನ್!

ಡಿಎ ಲೆಕ್ಕಚಾರ ಹೀಗೆ
ಉದ್ಯೋಗಿಗಳ ಜೀವನ ನಿರ್ವಹಣಾ ವೆಚ್ಚದ ಆಧಾರದಲ್ಲಿ ಡಿಎ (DA) ನಿಗದಿಪಡಿಸಲಾಗುತ್ತದೆ. ಉದ್ಯೋಗಿ ನಗರ, ಗ್ರಾಮೀಣ, ಅರೆಪಟ್ಟಣ ಹೀಗೆ ಯಾವ ಪ್ರದೇಶದಲ್ಲಿ ವಾಸಿಸುತ್ತಾನೆ ಎಂಬ ಆಧಾರದಲ್ಲಿ ಡಿಎ ನಿಗದಿಪಡಿಸಲಾಗುತ್ತದೆ. ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರ (Pensioners) ಡಿಎ ಲೆಕ್ಕಾಚಾರ ಮಾಡೋ ಫಾರ್ಮುಲಾವನ್ನು ಕೇಂದ್ರ ಸರ್ಕಾರ (Central Government) 2006ರಲ್ಲಿ ಬದಲಾಯಿಸಿತ್ತು. ಅದು ಈ ಕೆಳಗಿನಂತಿದೆ.
ತುಟ್ಟಿ ಭತ್ಯೆ %= (ಅಖಿಲ ಭಾರತ ಗ್ರಾಹಕ ದರ ಸೂಚ್ಯಂಕದ ಸರಾಸರಿ (ಮೂಲ ವರ್ಷ 2001=100) ಕಳೆದ 3 ತಿಂಗಳು-126.33)/126.33)x100.

click me!