ಹೆಲ್ತ್ ಇನ್ಶೂರೆನ್ಸ್ ಎಂಬ ಗುಹೆ ಹೊಕ್ಕು ನೋಡಿದಾಗ..| ಸುಸೂತ್ರ ಬದುಕಿಗೆ ಆರೋಗ್ಯ ವಿಮೆ ಅತ್ಯಂತ ಅವಶ್ಯಕ| ಹೆಲ್ತ್ ಇನ್ಶೂರೆನ್ಸ್ ಕೊಳ್ಳುವ ಮೊದಲು ನೆನಪಿಡಬೇಕಾದ 5 ಅಂಶಗಳು| ಅಪಘಾತದಂತ ಅನಿರೀಕ್ಷಿತ ಘಟನೆಗಳಿಗೆ ಪೂರ್ವ ಸಿದ್ಧತೆ ಮುಖ್ಯ| ಅಪಘಾತ ಸಂದರ್ಭದಲ್ಲಿ ಆರೋಗ್ಯ ವಿಮೆ ಬಳಸುವ ಬಗೆ ಹೇಗೆ?|
ಬೆಂಗಳೂರು(ಮೇ.11): ಇಂದಿನ ಗಡಿಬಿಡಿ ಬದುಕಿನಲ್ಲಿ ಯಾವ ಘಳಿಗೆಯಲ್ಲಿ ಏನಾಗುತ್ತದೋ ಎಂಬ ಭಯ ಎಲ್ಲರನ್ನೂ ಕಾಡುತ್ತದೆ. ಅದರಲ್ಲೂ ಆರೋಗ್ಯ ಸಂಬಂಧಿತ ವಿಷಯದಲ್ಲಿ ನಾವು ಯಾವಾಗಲೂ ಎಚ್ಚರದಿಂದ ಇರಲೇಬೇಕು.
ಅಪಘಾತದಂತ ಅನಿರೀಕ್ಷಿತ ಘಟನೆಗಳಿಗೆ ನಮ್ಮಿಂದ ಏನು ಮಾಡಲಾಗದಿದ್ದರೂ, ಇದಕ್ಕಾಗಿ ಪೂರ್ವ ತಯಾರಿ ಕ್ರಮಗಳನ್ನು ಕೈಗೊಳ್ಳುವುದು ನಮ್ಮ ಕೈಯಲ್ಲಿದೆ. ಹೆಲ್ತ್ ಇನ್ಶೂರೆನ್ಸ್(ಆರೋಗ್ಯ ವಿಮೆ)ಅಂತಹ ಪೂರ್ವ ಸಿದ್ಧತಾ ಕ್ರಮಗಳಲ್ಲೊಂದು.
ಆದರೆ ಆರೋಗ್ಯ ವಿಮೆ ಮಾಡಿಸುವ ಮೊದಲು ಕೂಡ ನಾವು ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಆರೋಗ್ಯ ವಿಮೆಗಾಗಿ ಇರುವ ನಿಯಮಗಳು, ಯಾವ ಸಂದರ್ಭದಲ್ಲಿ ಈ ವಿಮೆಯನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಅರಿವು ಅತ್ಯವಶ್ಯ.
ಇತ್ತೀಚೆಗೆ ಗೆಳೆಯರೊಬ್ಬರಿಗೆ ಅಪಘಾತವಾಗಿ ಆಸ್ಪತ್ರೆ ಸೇರಿದರು. ಏಳೆಂಟು ದಿನ ಆಸ್ಪತ್ರೆಯಲ್ಲಿ ಇರಬೇಕಾಗಿ ಬಂತು. ಅದರ ಖರ್ಚು ಸುಮಾರು ಎಂಟು ಲಕ್ಷದಷ್ಟುಆಗುತ್ತದೆ ಎಂದು ಆಸ್ಪತ್ರೆಯ ಲೆಕ್ಕಪತ್ರ ವಿಭಾಗ ಸೂಚಿಸಿತು.
ಗೆಳೆಯರಿಗೆ ಕಚೇರಿಯಿಂದ ವಿಮೆ ಪಡೆಯುವ ಸೌಲಭ್ಯ ಇತ್ತು. ಅದರ ಮೊತ್ತ ಎರಡು ಲಕ್ಷದಷ್ಟಿತ್ತು. ಅವರ ಪತ್ನಿಯವರು ಕೆಲಸ ಮಾಡುವ ಕಛೇರಿಯಲ್ಲಿ ಐದು ಲಕ್ಷದಷ್ಟುಆರೋಗ್ಯ ವಿಮೆಯಿತ್ತು. ಎರಡೂ ಸೇರಿದರೆ ಹಾಗೂ ಹೀಗೂ ಆಸ್ಪತ್ರೆ ಖರ್ಚಿಗೆ ಸಾಕಾಗುತ್ತದೆ. ಇನ್ನೊಂದೆರಡು ಲಕ್ಷ ಹೊಂದಿಸಿದರೆ ಸಾಕು ಎಂಬ ಆಲೋಚನೆಯಲ್ಲಿದ್ದ ಅವರಿಗೆ ಆಘಾತ ತಂದದ್ದು ಆಸ್ಪತ್ರೆಯ ವಿಮಾ ವಿಭಾಗದವರು ಹೇಳಿದ ಮಾತು.
ಅದರ ಪ್ರಕಾರ ಎರಡು ವಿಮೆಯ ಮೊತ್ತವನ್ನು ಒಂದೇ ಪ್ರಕರಣಕ್ಕೆ ಬಳಸುವಂತಿರಲಿಲ್ಲ. ಒಂದು ಸಲ ಆಸ್ಪತ್ರೆ ಸೇರಿದಾಗ ಒಂದೇ ವಿಮೆಯನ್ನು ಮಾತ್ರ ಬಳಸತಕ್ಕದ್ದು. ನಿಮ್ಮ ವಿಮೆ ಚಾಲ್ತಿಯಲ್ಲಿದ್ದರೂ, ನೀವು ಎಲ್ಲಾ ರೀತಿಯಲ್ಲಿ ವಿಮೆಯ ಮೂಲಕ ಆರೋಗ್ಯಸೇವೆ ಪಡೆಯಲು ಅರ್ಹರಾಗಿದ್ದರೂ ಎರಡೂ ವಿಮೆಯನ್ನು ಜೊತೆಗೆ ಸೇರಿಸುವ ಹಾಗಿಲ್ಲ. ಇದರಿಂದಾಗಿ ಅವರು ಮತ್ತೆರಡು ಲಕ್ಷ ರುಪಾಯಿಗಳನ್ನು ಸಾಲ ಮಾಡಬೇಕಾಗಿ ಬಂತು.
ಈ ಕಿರು ಅಕ್ಷರಗಳಲ್ಲಿ ಬರೆದಿರುವ ಸಂಗತಿಗಳೇ ನಮ್ಮನ್ನು ಕಂಗಾಲು ಮಾಡುತ್ತದೆ. ಇಂಥ ಗುಟ್ಟುಗಳನ್ನು ಯಾವ ಏಜಂಟರೂ ನಮಗೆ ಹೇಳುವುದಿಲ್ಲ. ವಿಮೆ ಮಾಡಿಸುವ ಹೊತ್ತಿಗೆ ನಮಗೆ ಮೊತ್ತದ ಆಮಿಷವನ್ನಷ್ಟೇ ತೋರಿಸಲಾಗುತ್ತದೆ. ಮಿಕ್ಕ ಸಂಗತಿಗಳು ಅಪಾಯ ಎದುರಾದಾಗ ಮಾತ್ರ ತಿಳಿಯುತ್ತವೆ.
ಅದರಂತೆ ಈ ಕೆಳಗಿನ ಅಂಶಗಳನ್ನು ನೀವು ವಿಮೆ ಮಾಡಿಸುವ ಮೊದಲು ತಿಳಿದುಕೊಳ್ಳಲೇಬೇಕು:
1. ಯಾವ ಆರೋಗ್ಯ ವಿಮೆ: ಹಲವು ರೀತಿಯ ವಿಮೆಗಳಿರುತ್ತವೆ. ಕೆಲವು ಕೇವಲ ಇನ್ ಪೇಷಂಟುಗಳಿಗೆ ಮಾತ್ರ ಅನ್ವಯ. ಕೆಲವೊಂದು ಕಾಯಿಲೆಗಳಿಗೆ ಎರಡು ವರ್ಷಗಳ ನಂತರ ವಿಮಾ ಸೌಲಭ್ಯ ದೊರೆಯುತ್ತದೆ. ಮೊದಲನೇ ವರ್ಷದ ಮೊತ್ತ ಕಡಿಮೆ ಇರುತ್ತದೆ. ಕೆಲವೊಮ್ಮೆ ಕೇವಲ ಆಸ್ಪತ್ರೆಯ ಖರ್ಚನ್ನಷ್ಟೇ ಕೊಡುತ್ತಾರೆ. ಔಷಧಿಯ ಖರ್ಚು, ಸಲಹಾ ವೆಚ್ಚ, ವೈದ್ಯರ ಫೀಸು ಪ್ರತ್ಯೇಕವಾಗಿ ಕಟ್ಟಬೇಕಾಗುತ್ತದೆ. ಈ ಕುರಿತು ಪೂರ್ಣ ಮಾಹಿತಿ ನಿಮ್ಮ ವಿಮೆಯ ಜೊತೆಗೇ ಇರುವಂತೆ ನೋಡಿಕೊಳ್ಳಿ. ಎಲ್ಲರೂ ಬರಹರೂಪದಲ್ಲೇ ಇರಲಿ. ಮಾತುಗಳಿಗೆ ಮಣೆ ಹಾಕಬೇಡಿ.
2. ಎಷ್ಟುಸಾರಿ ಸೌಲಭ್ಯ ಪಡೆಯಬಹುದು: ವಿಮೆಯ ಮೊತ್ತ ಎಷ್ಟೇ ಇದ್ದರೂ ವರ್ಷಕ್ಕೆ ಒಂದೇ ಸಲ ಸೌಲಭ್ಯ ಪಡೆಯಬಹುದು ಎಂಬ ಗುಪ್ತ ಸೂಚನೆಯೂ ಅಡಕವಾಗಿರುವ ಆರೋಗ್ಯ ವಿಮೆಗಳೂ ಇರುತ್ತವೆ. ನಿಮ್ಮ ವಿಮಾ ಮೊತ್ತ ಐದು ಲಕ್ಷ ಇರುತ್ತದೆ ಅಂತಿಟ್ಟುಕೊಳ್ಳಿ. ಅದರ ಪೈಕಿ ನೀವು ಕಿಡ್ನಿ ಆಪರೇಷನ್ನಿಗೆ ಕೇವಲ ವರ್ಷಕ್ಕೆ ಒಂದೇ ಸಲ ಅದನ್ನು ಬಳಸಬಹುದು, ಪದೇ ಪದೇ ಬಳಸುವಂತಿಲ್ಲ ಎಂಬ ಸೂಚನೆಯಿದ್ದರೆ ಮುಗಿಯಿತು. ಕಿಡ್ನಿ ಸಂಬಂಧಿತ ಕಾಯಿಲೆ ಮರುಕಳಿಸಿದರೆ ವಿಮೆ ಯಾವ ಪ್ರಯೋಜನಕ್ಕೂ ಬಾರದು. ಹಾಗೆಯೇ, ಮತ್ತೆ ಮತ್ತೆ ಚಿಕಿತ್ಸೆ ಪಡೆದುಕೊಳ್ಳುವ ಸಾಧ್ಯತೆಯನ್ನೂ ಮೊದಲೇ ಖಚಿತ ಪಡಿಸಿಕೊಳ್ಳಿ. ಇಲ್ಲದೇ ಹೋದರೆ ಸಮಸ್ಯೆಯಾಗುತ್ತದೆ.
3. ಸಹ ಪಾವತಿ ಸಾಧ್ಯವೇ: ಎಷ್ಟೋ ಸಾರಿ ನೌಕರರಿಗೆ ಸಂಸ್ಥೆ ನೀಡಿರುವ ವಿಮಾ ಸೌಲಭ್ಯ ಒಂದು ಮೊತ್ತದಷ್ಟಿರುತ್ತದೆ. ಮಿಕ್ಕ ಹೆಚ್ಚುವರಿ ಮೊತ್ತವನ್ನು ರೋಗಿಯೇ ಪಾವತಿ ಮಾಡಬೇಕಿರುತ್ತದೆ. ಅಂಥ ಹೊತ್ತಲ್ಲಿ, ವಿಮೆಯಲ್ಲಿ ಸ್ಪಷ್ಟವಾಗಿ ಸೂಚಿತವಾಗಿರದೇ ಇದ್ದರೆ, ಪೂರ್ತಿ ಮೊತ್ತವನ್ನು ಒಮ್ಮೆಗೇ ಕಟ್ಟಿ, ನಂತರ ಅದನ್ನು ಹಿಂದಕ್ಕೆ ಪಡೆಯಬೇಕಾದ ಪರಿಸ್ಥಿತಿ ಬರುತ್ತದೆ. ಹೀಗಾಗಿ ಸಹ-ಪಾವತಿಯ ಅನುಕೂಲ ಇದೆಯೇ ಎಂದು ನೋಡಿಕೊಳ್ಳಿ. ಅಂದರೆ ಕೈಯಿಂದ ಕಟ್ಟಬೇಕಾದ ಮೊತ್ತವನ್ನು ರೋಗಿ ಕಟ್ಟುವುದು. ಮಿಕ್ಕ ಮೊತ್ತವನ್ನು ವಿಮಾ ಸಂಸ್ಥೆಯಿಂದೇ ಆಸ್ಪತ್ರೆ ನೇರವಾಗಿ ಪಡೆದುಕೊಳ್ಳುವ ವ್ಯವಸ್ಥೆ ಅತ್ಯಗತ್ಯ.
4. ಆಸ್ಪತ್ರೆ ಎಲ್ಲಿದೆ: ಕೆಲವೊಂದು ವಿಮಾ ಸಂಸ್ಥೆಗಳು ಕೆಲವೇ ಕೆಲವು ಆಸ್ಪತ್ರೆಗಳನ್ನಷ್ಟೇ ಸೂಚಿಸಿರುತ್ತವೆ. ಅವುಗಳು ಎಲ್ಲೆಂದರಲ್ಲಿ ಇರುವುದಿಲ್ಲ. ಅಪಘಾತದಂಥ ಅನಿವಾರ್ಯ ಸಂದರ್ಭಗಳಲ್ಲಿ ವಿಮಾ ಪಾಲಿಸಿಯಲ್ಲಿ ಸೂಚಿತವಾದ ಆಸ್ಪತ್ರೆಗಳನ್ನು ಹುಡುಕಿಕೊಂಡು ಹೋಗುವುದು ಸಾಧ್ಯವಾಗುವುದಿಲ್ಲ. ಒಮ್ಮೆ ಒಂದು ಆಸ್ಪತ್ರೆಗೆ ಸೇರಿಸಿದ ನಂತರ ಮತ್ತೊಂದು ಆಸ್ಪತ್ರೆಗೆ ಒಯ್ಯುವುದು ಕೂಡ ಅಸಾಧ್ಯ. ಹೀಗಾಗಿ ಹೆಚ್ಚು ಹೆಚ್ಚು ಆಸ್ಪತ್ರೆಗಳು ಇರುವ ವಿಮಾ ಪಾಲಿಸಿಯನ್ನೇ ಹೊಂದುವುದು ಒಳ್ಳೆಯದು.
5. ಮಿತಿ ಮತ್ತು ಪರಿಮಿತಿ: ಎಷ್ಟೋ ಸಂದರ್ಭಗಳಲ್ಲಿ ವಿಮಾ ಪಾಲಿಸಿಗಳು ವಾರ್ಡ್ ಬಾಡಿಗೆ ಕೊಡುವುದಿಲ್ಲ, ಆಂಬುಲೆನ್ಸ್ ವೆಚ್ಚ ಮರುಪಾವತಿ ಇಲ್ಲ, ಹೆರಿಗೆ ವೆಚ್ಚ ಇದರಡಿಯಲ್ಲಿ ಬರುವುದಿಲ್ಲ, ಬೇರೆ ಆಸ್ಪತ್ರೆಯಿಂದ ಕರೆಸಿದ ವೈದ್ಯರ ಖರ್ಚು ಕೊಡುವುದಿಲ್ಲ ಎಂದೆಲ್ಲ ಕಟ್ಟುಪಾಡುಗಳನ್ನು ಹಾಕಿರುತ್ತವೆ. ಅವುಗಳನ್ನೂ ಸೂಕ್ಷ್ಮವಾಗಿ ಗಮನಿಸುವುದು ಒಳ್ಳೆಯದು. ಯಾವ ತರಲೆಗಳೂ ಇಲ್ಲದೇ, ಸರಳವಾಗಿ ನಮ್ಮ ಹಕ್ಕುಗಳೇನು, ಬಾಧ್ಯತೆಗಳೇನು ಎಂದು ವಿವರಿಸುವ ವಿಮಾ ಪಾಲಿಸಿಯನ್ನೇ ಕೊಂಡುಕೊಳ್ಳಿ.