Digital Assets Tax: ದೇಶಕ್ಕೆ ಕ್ರಿಪ್ಟೋಕರೆನ್ಸಿ ‘ಹಿಂಬಾಗಿಲ ಪ್ರವೇಶ’: ಕೇಂದ್ರದ ಮಹತ್ವದ ಘೋಷಣೆ

By Kannadaprabha News  |  First Published Feb 2, 2022, 7:30 AM IST

*ಕ್ರಿಪ್ಟೋಕರೆನ್ಸಿ ಆದಾಯದ ಮೇಲೆ ಶೇ.30ರಷ್ಟುತೆರಿಗೆ
*ಬಜೆಟ್‌ನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
*ಈ ಮೂಲಕ ಕ್ರಿಪ್ಟೋ ಕರೆನ್ಸಿಗೆ ಪರೋಕ್ಷವಾಗಿ ಹಸಿರು ನಿಶಾನೆ
 


ನವದೆಹಲಿ(ಫೆ. 02): ಇತ್ತೀಚೆಗೆ ಬಿಟ್‌ಕಾಯಿನ್‌ನಂಥ ಕ್ರಿಪ್ಟೋ ಕರೆನ್ಸಿ (Cryptocurrency) ಹಾವಳಿ ಹೆಚ್ಚುತ್ತಿರುವ ನಡುವೆ, ಇಂಥ ವ್ಯವಹಾರಕ್ಕೆ ಮಾನ್ಯತೆ ನೀಡಬೇಕೇ ಬೇಡವೇ ಎಂಬ ಪ್ರಶ್ನೆಗಳು ಎದ್ದಿದ್ದವು. ಈ ಬಗ್ಗೆ ಕೇಂದ್ರ ಬಜೆಟ್‌ನಲ್ಲಿ (Union Budget 2022) ಸ್ಪಷ್ಟಚಿತ್ರಣ ಲಭಿಸಿದೆ. ಕ್ರಿಪ್ಟೋ ಕರೆನ್ಸಿ ವ್ಯವಹಾರ ಹಾಗೂ ಇತರ ವರ್ಚುವಲ್‌ ಆಸ್ತಿಗಳಿಂದ ಬರುವ ಆದಾಯಕ್ಕೆ ಶೇ.30ರಷ್ಟುತೆರಿಗೆ ಹಾಕಲಾಗುತ್ತದೆ ಎಂದು ಘೋಷಿಸಲಾಗಿದೆ. ಈ ಮೂಲಕ ಕ್ರಿಪ್ಟೋ ಕರೆನ್ಸಿಯು ಅಧಿಕೃತ ಮಾನ್ಯತೆ ಇಲ್ಲದಿದ್ದರೂ ದೇಶಕ್ಕೆ ‘ಹಿಂಬಾಗಿಲ ಪ್ರವೇಶ’ ಪಡೆದಂತಾಗಿದೆ. ಇದೇ ವೇಳೆ, ಒಂದು ನಿರ್ದಿಷ್ಟಮಿತಿ ಮೇಲಿನ ಡಿಜಿಟಲ್‌ ಕರೆನ್ಸಿ (Digital Currency) ವ್ಯವಹಾರಕ್ಕೆ (ಖರೀದಿ ಹಾಗೂ ಮಾರಾಟ) ಶೇ.1ರಷ್ಟುಟಿಡಿಎಸ್‌ (ಮೂಲದಲ್ಲೇ ತೆರಿಗೆ ಕಡಿತ) ವಿಧಿಸುವುದಾಗಿ ಪ್ರಕಟಿಸಲಾಗಿದೆ.

ಇನ್ನು ಯಾರು ಡಿಜಿಟಲ್‌ ಕರೆನ್ಸಿ ವ್ಯವಹಾರದ ಮೂಲಕ ಕಾಣಿಕೆ (Gift) ಪಡೆಯುತ್ತಾರೋ, ಅಂಥ ಫಲಾನುಭವಿಗೆ ತೆರಿಗೆ ಅನ್ವಯವಾಗಲಿದೆ. ಆದರೆ, ಡಿಜಿಟಲ್‌ ವ್ಯವಹಾರದ ವೇಳೆ ನಷ್ಟಉಂಟಾದರೆ, ಆ ನಷ್ಟತೋರಿಸಿ ತೆರಿಗೆ ವಿನಾಯ್ತಿ ಪಡೆಯಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಸಂಸತ್ತಿನಲ್ಲಿ ಬಜೆಟ್‌ ಅಂಗೀಕಾರವಾದ ಬಳಿಕ ಏಪ್ರಿಲ್‌ 1ರಿಂದ ಈ ಹೊಸ ತೆರಿಗೆ ಪ್ರಸ್ತಾವಗಳು ಜಾರಿಗೆ ಬರಲಿವೆ.

Tap to resize

Latest Videos

undefined

ಇದನ್ನೂ ಓದಿ: Budget 2022: ಬಜೆಟ್‌ನಲ್ಲಿ ಇ-ಪಾಸ್‌ಪೋರ್ಟ್ ಘೋಷಣೆ: ಹಾಗಂದ್ರೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಪರ-ವಿರೋಧ: ಈ ಬಗ್ಗೆ ಪ್ರತಿಕ್ರಿಯಿಸಿರುವ ತಜ್ಞರು, ‘ಲಾಟರಿ, ಗೇಮ್‌ ಶೋಗಳಂತಹ ವ್ಯವಹಾರಗಳ ಮೇಲೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಅದೇ ಮಾದರಿಯ ತೆರಿಗೆ ಕ್ರಿಪ್ಟೋಕರೆನ್ಸಿ ಮೇಲೆ ಬೀಳಲಿದೆ’ ಎಂದ್ದಿದ್ದಾರೆ. ಇದಲ್ಲದೆ, ‘ಕ್ರಿಪ್ಟೋ ಕರೆನ್ಸಿಯನ್ನು ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಸರ್ಕಾರವು ಮಾತು ಉಳಿಸಿಕೊಂಡಿದೆ’ ಎಂದು ಕೆಲವರು ಶ್ಲಾಘಿಸಿದ್ದಾರೆ. ಆದರೆ ಇನ್ನೂ ಕೆಲವು ತಜ್ಞರು, ‘ಶೇ.30ರಷ್ಟುತೆರಿಗೆ ಅತಿಯಾಯಿತು. ಇದು ಪರೋಕ್ಷವಾಗಿ ಕ್ರಿಪ್ಟೋ ವ್ಯವಹಾರಕ್ಕೆ ಲಗಾಮು ಹಾಕಿದಂತೆ. ಬೆಳವಣಿಗೆ ಆಗುತ್ತಿದ್ದ ಈ ವಲಯ ಇನ್ನು ಸಂಕುಚಿತವಾಗಲಿದೆ’ ಎಂದಿದ್ದಾರೆ.

ಭಾರತದಲ್ಲಿ ಎಷ್ಟುವ್ಯವಹಾರಸ್ಥರು?: ಭಾರತದಲ್ಲಿ ಈಗ ಸುಮಾರು 2 ಕೋಟಿ ಕ್ರಿಪ್ಟೋಕರೆನ್ಸಿ ವ್ಯವಹಾರಸ್ಥರಿದ್ದಾರೆ. ಇವರು ಸುಮಾರು 40 ಸಾವಿರ ಕೋಟಿ ರು.ಗಳಷ್ಟುಕ್ರಿಪ್ಟೋ ಕರೆನ್ಸಿ ಮೂಲಕ ಹೂಡಿಕೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ವ್ಯವಹಾರವು ತೆರಿಗೆ ವಂಚಕರಿಗೆ ಅನುಕೂಲವಾಗಬಹುದು ಎಂದು ಆರ್‌ಬಿಐ ಆತಂಕ ವ್ಯಕ್ತಪಡಿಸಿತ್ತು. ಆದರೆ, ಈಗ ಕ್ರಿಪ್ಟೋ ಕರೆನ್ಸಿ ವಲಯವನ್ನು ತೆರಿಗೆ ವ್ಯಾಪ್ತಿಗೆ ತರುವ ಮೂಲಕ ಈ ಗೊಂದಲಗಳಿಗೆ ಸರ್ಕಾರ ತೆರೆ ಎಳೆದಿದೆ.

ಇದನ್ನೂ ಓದಿ: Budget 2022: ಶೀಘ್ರದಲ್ಲೇ ಭಾರತದಲ್ಲಿ 5G ಸೇವೆ: ಈ ವರ್ಷವೇ ತರಂಗಾಂತರ ಹಂಚಿಕೆ ಮಾಡಲಿರುವ ಕೇಂದ್ರ!

‘ಹಿಂಬಾಗಿಲ ಪ್ರವೇಶ’ ಹೇಗೆ?: ಈ ಬಗ್ಗೆ ಬಜೆಟ್‌ ಮಂಡನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ‘ದೇಶದಲ್ಲಿ ಇನ್ನೂ ಕ್ರಿಪ್ಟೋ ಬಗ್ಗೆ ನಿಯಮಗಳು ರೂಪುಗೊಂಡಿಲ್ಲ. ಆದರೆ ಇದರಲ್ಲಿ ಹಣ ಹೂಡಿ ಲಾಭ ಮಾಡಿಕೊಳ್ಳುವವರ ಮೇಲೆ ತೆರಿಗೆ ವಿಧಿಸಲು, ನಿಯಮ ರೂಪುಗೊಳ್ಳುವವರೆಗೆ ಕಾಯ್ದುಕೊಂಡು ಕೂರಲಾಗದು’ ಎಂದಿದ್ದಾರೆ. ಈ ಮೂಲಕ ಹಿಂಬಾಗಿಲಿಂದ ಸರ್ಕಾರವು ಕ್ರಿಪ್ಟೋಗೆ ಮಾನ್ಯತೆ ನೀಡಿದಂತಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

-ಕ್ರಿಪ್ಟೋಕರೆನ್ಸಿ ಆದಾಯದ ಮೇಲೆ ಶೇ.30ರಷ್ಟುತೆರಿಗೆ

- ಕೇಂದ್ರ ಸರ್ಕಾರದ ಮಹತ್ವದ ಘೋಷಣೆ

- ಈ ಮೂಲಕ ಕ್ರಿಪ್ಟೋ ಕರೆನ್ಸಿಗೆ ಪರೋಕ್ಷವಾಗಿ ಹಸಿರು ನಿಶಾನೆ

- ಡಿಜಿಟಲ್‌ ಕರೆನ್ಸಿ ವ್ಯವಹಾರಕ್ಕೆ ಶೇ.1ರಷ್ಟುಟಿಡಿಎಸ್‌

- ಕ್ರಿಪ್ಟೋ ಮೂಲಕ ಕಾಣಿಕೆ ಪಡೆದವರಿಗೂ ತೆರಿಗೆ ಅನ್ವಯ

- ವ್ಯವಹಾರದಲ್ಲಿ ನಷ್ಟವಾಗಿದೆ ಎಂದು ಹೇಳಿ ತೆರಿಗೆ ವಿನಾಯ್ತಿ ಪಡೆಯುವಂತಿಲ್ಲ

- ಏ.1ರಿಂದಲೇ ಹೊಸ ಕ್ರಿಪ್ಟೋ ತೆರಿಗೆ ನೀತಿ ಅನ್ವಯ

click me!