ಬೆಳಗಾವಿಯು ಅಕ್ರಮ ಬಾಂಗ್ಲಾದೇಶೀಯರಿಗೆ ಪ್ರಶಸ್ತ ತಾಣವಾಗಿಬಿಟ್ಟಿದೆ. ಬೆಳಗಾವಿ ನಗರದಲ್ಲಿ ಬಾಂಗ್ಲಾದೇಶದ ಇನ್ನಷ್ಟು ಅಕ್ರಮ ವಲಸಿಗರು ನೆಲೆಸಿರುವ ಶಂಕೆ ದಟ್ಟವಾಗಿದೆ. ಪೊಲೀಸರು ಬಾಂಗ್ಲಾ ಪ್ರಜೆಗಳ ಪತ್ತೆಗೆ ತನಿಖೆ ಕೈಗೊಂಡಿದ್ದರೂ ಈತನಕ ಯಾರೂ ಪತ್ತೆಯಾಗಿಲ್ಲ. ‘ನಾವು ಪತ್ತೆ ಕಾರ್ಯ ಮುಂದುವರೆಸಿದ್ದೇವೆ. ಆದರೆ, ಯಾರೊಬ್ಬರೂ ಸಿಕ್ಕಿಲ್ಲ’ ಎಂದು ಪೊಲೀಸರು ಹೇಳುತ್ತಾರೆ.
ಬೆಳಗಾವಿ [ನ.02]: ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯು ಅಕ್ರಮ ಬಾಂಗ್ಲಾದೇಶೀಯರಿಗೆ ಪ್ರಶಸ್ತ ತಾಣವಾಗಿಬಿಟ್ಟಿದೆ. ದೇಶದ ಗಡಿಯೊಳಕ್ಕೆ ನುಸುಳಿ ಬಂದು ಬೆಳಗಾವಿ ಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ 12 ಪ್ರಜೆಗಳನ್ನು 2017 ರಲ್ಲಿ ಪತ್ತೆ ಹಚ್ಚಿ ಬಂಧಿಸಿ, ಗಡೀಪಾರು ಮಾಡಲಾಗಿತ್ತು. ಆದರೆ ಬೆಳಗಾವಿ ನಗರದಲ್ಲಿ ಬಾಂಗ್ಲಾದೇಶದ ಇನ್ನಷ್ಟು ಅಕ್ರಮ ವಲಸಿಗರು ನೆಲೆಸಿರುವ ಶಂಕೆ ದಟ್ಟವಾಗಿದೆ. ಪೊಲೀಸರು ಬಾಂಗ್ಲಾ ಪ್ರಜೆಗಳ ಪತ್ತೆಗೆ ತನಿಖೆ ಕೈಗೊಂಡಿದ್ದರೂ ಈತನಕ ಯಾರೂ ಪತ್ತೆಯಾಗಿಲ್ಲ. ‘ನಾವು ಪತ್ತೆ ಕಾರ್ಯ ಮುಂದುವರೆಸಿದ್ದೇವೆ. ಆದರೆ, ಯಾರೊಬ್ಬರೂ ಸಿಕ್ಕಿಲ್ಲ’ ಎಂದು ಪೊಲೀಸರು ಹೇಳುತ್ತಾರೆ.
ಈ ಹಿಂದೆ ನಿಷೇಧಿತ ಉಗ್ರ ಸಂಘಟನೆಯ ಸಕ್ರಿಯ ಕಾರ್ಯಕರ್ತರು ಬೆಳಗಾವಿಯಲ್ಲಿ ವಾಸವಾಗಿದ್ದರು. ಹೀಗಾಗಿ, ಬಾಂಗ್ಲಾದೇಶದ ಅಕ್ರಮ ಪ್ರಜೆಗಳು ಬೆಳಗಾವಿ ನಗರವನ್ನೇ ವಾಸಕ್ಕೆ ಆಯ್ಕೆ ಮಾಡಿಕೊಂಡಿದ್ದರು. ಕಳೆದ ಮೂರು ವರ್ಷಗಳಲ್ಲಿ ಬೆಳಗಾವಿಯಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದ 12 ಜನ ಪ್ರಜೆಗಳು ಮಾತ್ರ ಪತ್ತೆಯಾಗಿದ್ದಾರೆ. ಇವರೆಲ್ಲರೂ ಆರು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದರು. ಆಗಲೇ ಅವರನ್ನು ದೇಶದಿಂದ ಗಡೀಪಾರು ಮಾಡಲಾಗಿದೆ. ಆದರೆ, ಇನ್ನಷ್ಟು ಬಾಂಗ್ಲಾದೇಶ ಪ್ರಜೆಗಳು ಅಕ್ರಮವಾಗಿ ನೆಲೆಸಿದ್ದು, ಆಧಾರ್ ಕಾರ್ಡ್, ಪಡಿತರ ಚೀಟಿ ಹಾಗೂ ಪಾಸ್ ಪೋರ್ಟ್‌ಗಳನ್ನು ಹೊಂದಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಅಕ್ರಮ ಬಾಂಗ್ಲನ್ನರಿಗೆ ರೈಲ್ವೆಯೇ ಶ್ರೀರಕ್ಷೆ...
ದುಬೈಗೆ ಹೊರಟಿದ್ದವ ಸಿಕ್ಕಿಬಿದ್ದ: ನಕಲಿ ಪಾಸ್ ಪೋರ್ಟ್ ಬಳಸಿ 2017 ರ ಜುಲೈನಲ್ಲಿ ಪುಣೆ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ಮಹಮ್ಮದ್ ಬೇಪಾರಿ ಎಂಬುವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ, ಬೆಳಗಾವಿಯಲ್ಲಿ ಅಕ್ರಮವಾಗಿ ಬಾಂಗ್ಲಾ ಪ್ರಜೆಗಳು ವಾಸವಾಗಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿತ್ತು. ಆತ ನೀಡಿದ ಮಾಹಿತಿ ಮೇರೆಗೆ ತನಿಖೆ ಕೈಗೊಂಡಿದ್ದ ಮಾಳಮಾರುತಿ ಪೊಲೀಸರು, ಒಬ್ಬ ಮಹಿಳೆ ಸೇರಿದಂತೆ ಒಟ್ಟು 12 ಬಾಂಗ್ಲಾ ಪ್ರಜೆ ಗಳನ್ನು ಬಂಧಿಸಿದ್ದರು. ಬಂಧಿತರೆಲ್ಲರೂ ಅಟೋನಗರದ ಮಾಂಸ ಸಂಸ್ಕರಣ ಘಟಕದಲ್ಲಿ ಕೆಲಸ ಮಾಡುತ್ತಿದ್ದರು. ಆಟೋನಗರ ಮತ್ತು ರುಕ್ಮಿಣಿ ನಗರದಲ್ಲಿ ಇವರೆಲ್ಲರೂ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಹಣ ನೀಡಿದರೆ ಪಾಸ್‌ಪೋರ್ಟ್: ತಾವು ಬಾಂಗ್ಲಾದೇಶದ ನಿವಾಸಿಗಳು ಎಂದು ನ್ಯಾಯಾಲಯದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು. ದೇಶದ ಅಧಿಕೃತ ಗುರುತಿನ ದಾಖಲೆಗಳಾದ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಚುನಾವಣಾ ಗುರುತಿನ ಪತ್ರವನ್ನು ಹೊಂದಿ ದ್ದರು. ಕೇವಲ 22000 ವೆಚ್ಚದಲ್ಲಿ ಪಾಸ್‌ಪೋರ್ಟ್ ದೊರೆಯುತ್ತದೆ. 10 ಸಾವಿರ ಕೊಟ್ಟರೆ, ಬಾಂಗ್ಲಾದಿಂದ ಭಾರತದೊಳಗೆ ಪ್ರವೇಶಿಸಬಹುದು. ಬಾಂಗ್ಲಾ ಮತ್ತು ಭಾರತದ ಗಡಿಯಲ್ಲಿ ಏಜೆಂಟರು ಇಂತಹ ದಂಧೆಯಲ್ಲಿ ನಿರತರಾಗಿದ್ದಾರೆ. ಎರಡೂ ದೇಶಗಳ ಏಜೆಂಟರು ತಲಾ 5 ಸಾವಿರ ಪಡೆದು ಭಾರತದ ನೆಲಕ್ಕೆ ತಂದು ಬಿಡು ತ್ತಾರೆ ಎಂದು ಅಕ್ರಮ ಬಾಂಗ್ಲಾ ನಿವಾಸಿಗಳು ವಿಚಾರಣೆ ವೇಳೆ ಮಾಹಿತಿ ನೀಡಿದ್ದರು. ಬಾಂಗ್ಲಾದೇಶದ ಅಕ್ರಮ
ವಲಸಿಗರಿಗೆ ನಕಲಿ ದಾಖಲೆ ಪತ್ರಗಳನ್ನು ಮಾಡಿಕೊಡುವ ದೊಡ್ಡ ದಂಧೆಯೂ ಬೆಳಗಾವಿಯಲ್ಲಿ ನಡೆಯುತ್ತಿತ್ತು.