ಸೂಕ್ತ ಪರಿಹಾರ ಕನಸಿನಲ್ಲಿ ಸಂತ್ರಸ್ತರು| ಪ್ರವಾಹ ಬಂದು ಎರಡು ತಿಂಗಳು ಗತಿಸಿದರೂ ಇನ್ನು ದೊರೆಯದ ಪರಿಹಾರ| ಎರಡು ತಿಂಗಳು ಹಿಂದೆ ಬಂದ ಘಟಪ್ರಭ ನದಿ ಪ್ರವಾಹಕ್ಕೆ 22 ಗ್ರಾಮಗಳು ಜಲಾವೃತಗೊಂಡು ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿವೆ| ಬೆಳೆದ ಬೆಳೆಗಳು ನೀರಿನಲ್ಲಿ ಮುಳುಗಿ ಕೋಟ್ಯಂತರ ಮೌಲ್ಯದ ಬೆಳೆಗಳು ಹಾನಿಯಾಗಿವೆ| ಹಲವಾರು ಜಾನುವಾರು ಪ್ರವಾಹಕ್ಕೆ ಕೊಚ್ಚಿಹೋಗಿ ಅಸುನೀಗಿವೆ|
ವಿಶ್ವನಾಥ ಮುನವಳ್ಳಿ
ಮುಧೋಳ(ಅ.20): ಪ್ರವಾಹದ ಹೊಡೆತಕ್ಕೆ ಸೂರು ಹಾಗೂ ಬೆಳೆ ಕಳೆದುಕೊಂಡು ಈಗಾಗಲೇ ಬೀದಿಗೆ ಬಿದ್ದಿರುವ ಸಂತ್ರಸ್ತರು ಪರಿಹಾರಕ್ಕಾಗಿ ಜಾತಕಪಕ್ಷಿಯಂತೆ ಎದುರು ನೋಡುತ್ತಿದ್ದಾರೆ. ಸದ್ಯ ಅವರ ಜೀವನ ಅಕ್ಷರಶಃ ಅತಂತ್ರವಾಗಿದೆ.
ಎರಡು ತಿಂಗಳು ಹಿಂದೆ ಬಂದ ಘಟಪ್ರಭ ನದಿ ಪ್ರವಾಹಕ್ಕೆ 22 ಗ್ರಾಮಗಳು ಜಲಾವೃತಗೊಂಡು ಸಾವಿರಾರು ಕುಟುಂಬಗಳು ನಿರಾಶ್ರಿತರಾಗಿವೆ. ಬೆಳೆದ ಬೆಳೆಗಳು ನೀರಿನಲ್ಲಿ ಮುಳುಗಿ ಕೋಟ್ಯಂತರ ಮೌಲ್ಯದ ಬೆಳೆಗಳು ಹಾನಿಯಾಗಿವೆ. ಹಲವಾರು ಜಾನುವಾರು ಪ್ರವಾಹಕ್ಕೆ ಕೊಚ್ಚಿಹೋಗಿ ಅಸುನೀಗಿವೆ.
11 ಸಾವಿರಕ್ಕೂ ಅಧಿಕ ಜನ ನಿರಾಶ್ರಿತರು
ತಾಲೂಕಿನಲ್ಲಿ ಹರಿದಿರುವ ಘಟಪ್ರಭ ನದಿ ಪ್ರವಾಹದಿಂದ 10 ಗ್ರಾಮಗಳು ಪೂರ್ಣ ಪ್ರಮಾಣದಲ್ಲಿ ಬಾಧಿತಗೊಂಡಿವೆ. 11 ಸಾವಿರಕ್ಕೂ ಅಧಿಕ ಜನ ಈ ವೇಳೆ ನಿರಾಶ್ರಿತರಾಗಿದ್ದರು.26 ಗ್ರಾಮಗಳು ಭಾಗಶಃ ಬಾಧಿತಗೊಂಡಿವೆ. ನದಿಯ ಪ್ರವಾಹದಿಂದ ಬಾಧಿತಗೊಂಡ 12,573 ಕುಟುಂಬಗಳಿಗೆ ಬಟ್ಟೆ, ಅಡುಗೆ ಸಾಮಗ್ರಿ ಸೇರಿದಂತೆ ಇತರೆ ದಿನಸಿ ವಸ್ತು ಗಳನ್ನು ಖರೀದಿಸಲು ತಲಾ ಕುಟುಂಬಕ್ಕೆ 10 ಸಾವಿರದಂತೆ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಕೃಷಿ ಇಲಾಖೆಯ ಸಮೀಕ್ಷೆ ಪ್ರಕಾರ 12,263 ಹೆಕ್ಟೇರ್ ಕೃಷಿ ಜಮೀನು ಹಾನಿಯಾಗಿದೆ. ತೋಟಗಾರಿಕೆ ಇಲಾಖೆಯ ಸಮೀಕ್ಷೆ ಪ್ರಕಾರ 2 ಸಾವಿರ ಎಕರೆ ಈರುಳ್ಳಿ, 375ಎಕರೆ ಅರಿಷಣ, 112 ಎಕರೆ ಬಾಳೆ, 375 ಎಕರೆ ತರಕಾರಿ, 125 ಎಕರೆ ದಾಳಿಂಬೆ ಸೇರಿದಂತೆ ಒಟ್ಟು 2987 ಎಕರೆ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ತಾಲೂಕು ಆಡಳಿತವು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಾಜ್ಯ ಸರ್ಕಾರ ಮಾತ್ರ ಪರಿಹಾರ ಘೋಷಣೆ ಮಾಡದೆ ಇರುವುದು ಸಂತ್ರಸ್ತರ ಪಿತ್ತ ನೆತ್ತಿಗೇರಿದೆ. ದಿನಕ್ಕೊಂದು ಹೇಳಿಕೆ ನೀಡುತ್ತಿರುವ ಜನಪ್ರತಿನಿಧಿಗಳ ಮಾತನ್ನು ಸಂತ್ರಸ್ತರು ನಂಬದಂತಾಗಿದೆ. ತಮಗೆ ಸೂಕ್ತ ಸಮಯದಲ್ಲಿ ಪರಿಹಾರ ನೀಡದಿರುವ ಸರ್ಕಾರ ಇದ್ದರೇನು,ಬಿದ್ದರೇನು ಎನ್ನುವಂತಾಗಿದೆ. ಸ್ವಾರ್ಥ ರಾಜಕಾರಣದಿಂದ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿದೆ. ಮತ ಕೇಳುವ ರಾಜಕಾರಣಿಗಳಿಗೆ ನಾವು ಬುದ್ಧಿ ಕಲಿಸಬೇಕಾಗಿದೆ ಎನ್ನುತ್ತಾರೆ ಸಂಕಷ್ಟಕ್ಕೊಳಗಾದ ಸಂತ್ರಸ್ತರು.
ಜಿಲ್ಲೆಗೆ ಆಗಮಿಸುತ್ತಿರುವ ರಾಜ್ಯದ ದೊರೆ ಸಂತ್ರಸ್ತರಿಗೆ ಏನಾದರೂ ಪರಿಹಾರ ಘೋಷಣೆ ಮಾಡಬಹುದು ಎಂಬ ನೀರಿಕ್ಷೆಯಲ್ಲಿದ್ದಾರೆ. ಆದರೆ, ಇವರ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸದೆ ಇರುವುದು ಸಂತ್ರಸ್ತರ ದೌರ್ಬಾಗ್ಯವೇ ಯಾಗಿದೆ. ಆಡಳಿತ ಪಕ್ಷದ ಕೆಲ ಶಾಸಕರು, ಸಂಸದರು ಸಂತ್ರಸ್ತರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸಂತ್ರಸ್ತರ ಗೋಳನ್ನು ರಾಜ್ಯದ ಸಂಸದರು ಪ್ರಧಾನಿಗೆ ಭೇಟಿಯಾಗಿ ಏಕೆ ಮನವರಿಕೆ ಮಾಡುತ್ತಿಲ್ಲ. ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮಲತಾಯಿ ಧೋರಣೆ ಏಕೆ ಮಾಡುತ್ತಿದೆ ಎಂಬ ಯಕ್ಷ ಪ್ರಶ್ನೆಯಾಗಿದೆ. ರಾಜಕಾರಣ ಏನೇ ಇರಲಿ ಸಂತ್ರಸ್ತರಿಗೆ ಮಾತ್ರ ಪರಿಹಾರ ನೀಡಲಿ ಎಂಬುದು ಎಲ್ಲರ ಒತ್ತಾಸೆಯಾಗಿದೆ.
ನೆರೆ ಹಾವಳಿಯಿಂದಾಗಿ ನದಿ ಪಾತ್ರದ ರೈತರ ಪರಿಸ್ಥಿತಿ ಕಣ್ಣಾರೆ ನೋಡಿಯೇ ತಿಳಿದುಕೊಳ್ಳಬೇಕು. ಇಡೀ ರಾಜ್ಯದ ಜನತೆ ಪರಿಹಾರ ನೀಡುವಂತೆ ಸರ್ಕಾರದ ಮೇಲೆ ಸಾಕಷ್ಟು ಸಲ ಒತ್ತಡ ಹೇರಿದರೂ ತಮಗೆ ಸಂಬಂದವಿಲ್ಲ ಎಂಬಂತೆ ಆಡಳಿತ ನಡೆಸುತ್ತಿರುವುದು ಜನ ರೋಸಿ ಹೋಗಿದ್ದಾರೆ.
ಸಂತ್ರಸ್ತರು ಪ್ರತಿದಿನ ಬ್ಯಾಂಕ್‌ಗೆ ಹೋಗುವುದು ತಪ್ಪಿಲ್ಲ. ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಆಗಿದಿಯೋ ಇಲ್ಲವೊ ಎಂಬ ಆತಂಕದಲ್ಲಿದ್ದಾರೆ. ಈ ಕುರಿತು ಸಂಬಂಧಿಸಿದ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ನಾವು ಅರ್ಹ ಸಂತ್ರಸ್ತರಿಂದ ಎಲ್ಲ ದಾಖಲಾತಿಗಳನ್ನು ಪಡೆದಿದ್ದೇವೆ, ಸಂತ್ರಸ್ತರಿಗಾಗಿರುವ ಕುರಿತು ಮಾಹಿತಿಯನ್ನು ಕಳಿಸಿದ್ದೇನೆ ಆದರೆ ಸರ್ಕಾರ ಪರಿಹಾರ ನೀಡುವದೊಂದೆ ಬಾಕಿ ಇದೆ ಎಂದು ಹೇಳುತ್ತಾರೆ.
ರಾಜ್ಯದ ಮುಖ್ಯಮಂತ್ರಿಗಳು ನೆರೆ ಸಂತ್ರಸ್ತರಿಗೆ ಕೂಡಲೇ ಪರಿಹಾರ ಘೋಷಣೆ ಮಾಡಬೇಕು ಮತ್ತು ಸಂತ್ರಸ್ತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಂತ್ರಸ್ತರ ಗೋಳು ರಾಜ್ಯದ ದೊರೆಯ ಕಿವಿಗೆ ತಲುಪಲಿ, ಕೂಡಲೇ ಪರಿಹಾರ ನೀಡಲಿ ಎಂಬುದು ಎಲ್ಲರ ಬಯಕೆಯಾಗಿದೆ.