ಅಮೀನಗಡ: ಕೊಚ್ಚೆಯಲ್ಲೇ ತರಕಾರಿ ಖರೀದಿ: ಮರೀಚಿಕೆಯಾದ ಸ್ವಚ್ಛತೆ

By Web DeskFirst Published Oct 23, 2019, 11:47 AM IST
Highlights

ಅತಂತ್ರ ಸ್ಥಿತಿಯಲ್ಲಿ ವ್ಯಾಪಾರಸ್ಥರು | ಸಂತೆ, ಮಾರುಕಟ್ಟೆಗಿಲ್ಲ ನಿಗದಿತವಾದ ಸ್ಥಳ| ಅತಂತ್ರ ಸ್ಥಿತಿಯಲ್ಲಿ ವ್ಯಾಪಾರಿಗಳು, ಗ್ರಾಹಕರು|  ವಾರಕ್ಕೊಮ್ಮೆ ನಡೆಯುವ ಸಂತೆ| ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಪ್ರಯಾಣಿಕರ ಪರದಾಟ|  

ನರಸಿಂಹಮೂರ್ತಿ 

ಅಮೀನಗಡ[ಅ.23]: ಗ್ರಾಮ ಪಂಚಾಯತಿ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತಿಯಾದರೂ ಸಂತೆ ಮಾರುಕಟ್ಟೆಗಿಲ್ಲ ನಿಗದಿತ ಸ್ಥಳ. ಇದರಿಂದಾಗಿ ಅತಂತ್ರ ಸ್ಥಿತಿಯಲ್ಲಿ ವ್ಯಾಪಾರಿಗಳು, ಗ್ರಾಹಕರಿಗಿಲ್ಲ ಶುದ್ಧ ಸ್ವಚ್ಛತೆಯ ತರಕಾರಿ, ವಾರಕ್ಕೊಮ್ಮೆ ನಡೆಯುವ ಸಂತೆಯಿಂದ ಹೆದ್ದಾರಿಯಲ್ಲಿ ನಡೆಯುವ ವಾಹನ ಸಂಚಾರ ದಟ್ಟಣೆಯಿಂದ ಪ್ರಯಾಣಿಕರು ಕೂಡ ಪರದಾಡುವಂತಾಗಿದೆ. ಇದು ಅಮೀನಗಡ ಪಟ್ಟಣ ಮಾರುಕಟ್ಟೆ ದುಸ್ಥಿತಿ.

Latest Videos

ಶತಮಾನಗಳ ಹಿಂದೆ ಮಂಡಲ ಪಂಚಾಯತಿ ಇದ್ದಾಗ ಅಮೀನಗಡ ಪಟ್ಟಣದ ಮುಖ್ಯ ರಸ್ತೆ ಎನಿಸಿದ, ತೇರಿನ ಬೀದಿಯಲ್ಲಿ ತರಕಾರಿ ಸಂತೆ ನಡೆಯುತ್ತಿತ್ತು. ಜನಸಂಖ್ಯೆ ಹೆಚ್ಚಾದಂತೆ ಮಂಡಲ ಪಂಚಾಯತಿ, ಗ್ರಾಪಂ ಆಗಿ ರೂಪುಗೊಂಡಿತು. ಗ್ರಾಮ ಉದ್ದಕ್ಕೆ ಬೆಳೆಯುತ್ತಾ ಸಾಗಿತು. ಗ್ರಾಮದೊಳಗಿದ್ದ ಸಂತೆ ರಾಯಚೂರು ಬೆಳಗಾವಿ ಹೆದ್ದಾರಿಗೆ ಸ್ಥಳಾಂತರಗೊಂಡಿತು. ಅಮೀನಗಡದಲ್ಲಿ ಜರುಗುವ ತರಕಾರಿ ಸಂತೆಗೆ ಸುತ್ತಮುತ್ತಲ ಗ್ರಾಮಗಳಲ್ಲದೇ, ನಗರ ಪಟ್ಟಣಗಳ ಸುತ್ತಮುತ್ತಲ ಹೊಲಗಳಲ್ಲಿ ಬೆಳೆಯುವ ವಿವಿಧ ರೀತಿಯ ತರಕಾರಿಗಳು ಮಾರಾಟಕ್ಕೆ ಬಂದವು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇಲ್ಲಿಯೇ ತರಕಾರಿಗಳ ಸವಾಲು ಜರುಗುತ್ತಿದ್ದವು, ಸವಾಲಿನಲ್ಲಿ ತೆಗೆದುಕೊಂಡ ತರಕಾರಿಗಳನ್ನು ವಿವಿಧ ಗ್ರಾಮಗಳ ವ್ಯಾಪಾರಸ್ಥರು,ಇಲ್ಲಿಯೇ ಮಾರಾಟ ಮಾಡುತ್ತಿದ್ದರು. ಆದರೆ ಸುಸಜ್ಜಿತ ಸಂತೆ ಮಾರುಕಟ್ಟೆ ಇಲ್ಲದ ಕಾರಣ, ವ್ಯಾಪಾರಸ್ಥರು, ರಾಜ್ಯ ಹೆದ್ದಾರಿಯ ಚರಂಡಿಗಳ ಮೇಲೆ, ಪಾದಚಾರಿಗಳ ರಸ್ತೆ ಅಲ್ಲದೇ, ಈಗಿರುವ ನಾಡ ಕಾರ್ಯಾಲಯ, ಸಾರ್ವಜನಿಕ ಗ್ರಂಥಾಲಯ ಎದುರೇ ತರಕಾರಿ ಹಾಗೂ ದಿನಸಿ ಅಂಗಡಿಗಳನ್ನು ಇಟ್ಟುಕೊಂಡು, ಕೆಲವರು ನೆಲದ ಮೇಲೆ ಇಟ್ಟು ಮಾರಿನಂತರ ಸಂಜೆ ತಮ್ಮ ಊರುಗಳಿಗೆ ಹಿಂದಿರುಗುವುದು ನಡೆದಿದೆ. ಪಕ್ಕದಲ್ಲೇ ಚರಂಡಿ, ತ್ಯಾಜ್ಯವಸ್ತುಗಳ ರಾಶಿ, ಕೆಸರು, ರೊಜ್ಜುಗಳ ಮಧ್ಯೆಯೇ ತರಕಾರಿಸಂತೆ ವ್ಯಾಪಾರ ಜರುಗಿದೆ.

ವ್ಯಾಪಾರಸ್ಥರ ಅಳಲು: 

ವಾರಕ್ಕೊಮ್ಮೆ ಜರುಗುವಸಂತೆಗೆ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಇಲ್ಲ. ಮಳೆಗಾಲ, ಬೇಸಿಗೆಯಾಗಲೀ ವ್ಯಾಪಾರಸ್ಥರಿಗೆಸಂರಕ್ಷಣೆ ಇಲ್ಲ. ವಾರಕ್ಕೊಮ್ಮೆ ಜರುಗುವ ಸಂತೆಗೆ ವ್ಯಾಪಾರಿಗಳು, 5 ರೂಪಾಯಿಯಿಂದ 20 ರೂಪಾಯಿಯವರೆಗೆ ಸಂತೆ ಕರವನ್ನು ಕಟ್ಟುತ್ತಾರೆ.ಆದರೂ ವ್ಯಾಪಾರಿಗಳಿಗಾಗಲಿ, ಗ್ರಾಹಕರಿಗಾಗಲೀ ಯಾವುದೇ ಸುರಕ್ಷೆಯಾಗಲಿ ಇಲ್ಲ. ಭಾನುವಾರಕ್ಕೊಮ್ಮೆ ತರಕಾರಿ ಸಂತೆ ಬೃಹತ್ ಪ್ರಮಾಣದಲ್ಲಿ ಜರುಗಿದರೆ, ಪ್ರತಿದಿನ ರಾಜ್ಯ ಹೆದ್ದಾರಿಯ ಚರಂಡಿಗಳ ಮೇಲೆ ಹಾಗೂ ಪಾದಚಾರಿಗಳ ರಸ್ತೆಯಲ್ಲಿ ತರಕಾರಿ ವ್ಯಾಪಾರಸ್ಥರು ತಮ್ಮ ವಹಿವಾಟು ನಡೆಸುತ್ತಾರೆ. ಟೆಂಡರ್ ಪಡೆದ ಗುತ್ತಿಗೆದಾರ ತಪ್ಪದೆ ಕರ ವಸೂಲಿಮಾಡುತ್ತಾರೆ. ಆದರೆ ಸೌಲಭ್ಯ ಮಾತ್ರ ಇಲ್ಲ ಎಂಬುದು ಬೀದಿ ವ್ಯಾಪಾರಿಗಳ ಅಳಲು. 

ಪಪಂನಿಂದ ಸಂಪೂರ್ಣ ನಿರ್ಲಕ್ಷ್ಯ: 

ಪಟ್ಟಣದಲ್ಲೊಂದು ವಾರಕ್ಕೊಮ್ಮೆ ಸಂತೆ ನಡೆಯುತ್ತಿದೆ ಎಂಬುದನ್ನು ಪಪಂ ಮರೆತು ಬಿಟ್ಟಂತೆ ಕಾಣುತ್ತಿದೆ. ವರ್ಷದಲ್ಲೊಮ್ಮೆ ಟೆಂಡರ್ ಕರೆದು ಕೈತೊಳೆದುಕೊಳ್ಳುತ್ತದೆ. ಇಲ್ಲಿ ಜರುಗುವ ಗ್ರಾಮೀಣ ಸಂತೆಯಲ್ಲಿ ವ್ಯಾಪಾರಸ್ಥರ, ಗ್ರಾಹಕರ ಸಮಸ್ಯೆಗೆ ಯಾವುದೇ ರೀತಿಯಲ್ಲೂ ಸ್ಪಂದಿಸದಿರುವುದು ವಿಪರ್ಯಾಸ. 

ಬಹುದೊಡ್ಡ ದುರಂತ: 

ಗ್ರಾಮೀಣ ಸಂತೆ ಮಾರುಕಟ್ಟೆ ಶಿಥಿಲಾವಸ್ಥೆಯಲ್ಲಿ ಕಳೆದ 15  ವರ್ಷಗಳ ಹಿಂದೆ ಗ್ರಾಮೀಣ ಸಂತೆ ಮಾರುಕಟ್ಟೆಗಾಗಿ ಹುನಗುಂದ ತಾಲೂಕು ಕೃಷಿ ಉತ್ಪನ್ನ ಮಾರುಕಟೆ, 12  ಲಕ್ಷ ವೆಚ್ಚದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಿತು. ಮಾರುಕಟ್ಟೆ ಕಟ್ಟಿದವರಾರು ಎಂಬ ಮಾಹಿತಿಯೇ ಪಟ್ಟಣ ಪಂಚಾಯತಿಗಿಲ್ಲ. ಅಲ್ಲದೆ ಅದರ ಸಂಪೂರ್ಣ ಕಾಮಗಾರಿ ಮುಗಿದು ಬಹು ವರ್ಷಗಳೇ ಕಳೆದರೂ, ಇದುವರೆಗೂ ಹಸ್ತಾಂತರಗೊಂಡಿದೆಯೋ ಇಲ್ಲವೋ ಎಂಬುದು ಕೂಡ ಪ್ರಸ್ತುತ ಪಪಂ ಮುಖ್ಯಾಧಿಕಾರಿಗಳಿಗಾಗಲೀ, ಮಾಜಿ ಅಧ್ಯಕ್ಷರಿಗಾಗಲಿ ಇಲ್ಲದಿರುವುದು ದುರಂತವೇಸರಿ. 12 ಲಕ್ಷ ಗಳಲ್ಲಿ ಕಟ್ಟಿದ ಗ್ರಾಮೀಣ ಸಂತೆ ಮಾರುಕಟ್ಟೆ ಸರಿಯಾಗಿ ಬಳಕೆಯಾಗದ ಕಾರಣ ಇಂದು, ಅದು ಹಗಲುಹೊತ್ತಿನಲ್ಲಿ ಅಲೆಮಾರಿಗಳ ಸಂಸಾರದಗೂಡಾಗಿ, ರಾತ್ರಿ ಅನೈತಿಕ ಚಟುವಟಿಕೆಗಳ, ಮದ್ಯಪಾನಿಗಳ ಕದ್ದುಮುಚ್ಚಿ ಸೇವಿಸುವ ತಾಣವಾಗಿದೆ.

ಸಂಚಾರ ದುಸ್ತರ: 

ಪ್ರತಿ ಭಾನುವಾರಕ್ಕೊಮ್ಮೆ ಜರುಗುವ ಇಲ್ಲಿನ ತರಕಾರಿ ಸಂತೆ,ಬೆಳಗಾವಿ-ರಾಯಚೂರು ಹೆದ್ದಾರಿ ಅಕ್ಕಪಕ್ಕಗಳಲ್ಲಿಅಂಗಡಿಕಾರರು ಅಂಗಡಿಗಳನ್ನು ತೆರೆಯುವುದರಿಂದ, ಪಾದಚಾರಿಗಳಿಗೆ, ವಾಹನಗಳಿಗೆ ಸಂಚರಿಸಲು ಅತಿ ಕಠಿಣವಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ತಳ್ಳುಬಂಡಿಗಳಲ್ಲಿ, ಪುಟ್ಟ ಗೂಡಂಗಡಿಗಳಲ್ಲಿ ರಸ್ತೆ ಬದಿ ವ್ಯಾಪಾರ ನಡೆದಿರುತ್ತದೆ. ಖರೀದಿಸಲು ಬಂದ ದ್ವಿಚಕ್ರವಾಹನ ಸವಾರರು ಗಾಡಿಗಳನ್ನು ಅಲ್ಲಿಯೇ ನಿಲ್ಲಿಸುವುದರಿಂದ ವಿಪರೀತ ಜನದಟ್ಟಣೆಯಾಗಿ, ಸಂಚರಿಸಲು ದುಸ್ತರವಾಗುತ್ತದೆ. 

ಗ್ರಾಹಕರಿಗೆ ಸ್ವಚ್ಛತೆ ಮರೀಚಿ ಕೆಪಟ್ಟಣ ಪಂಚಾಯತಿಯಲ್ಲಿ ಒಬ್ಬರು ಹಿರಿಯ ಆರೋಗ್ಯನಿರೀಕ್ಷಕ ಹುದ್ದೆ ಇದ್ದು, ಅವರೂ ಇಲ್ಲಿಯ ಸಂತೆಯ ಸ್ವಚ್ಛತೆ, ಶುಭ್ರತೆ ಬಗ್ಗೆ ಗಮನಹರಿಸದಿರುವುದು, ಪಟ್ಟಣ ಪಂಚಾಯತಿಯ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ. ಹೊಲಗಳಿಂದ ನೇರವಾಗಿ ತರಕಾರಿ ಬರುತ್ತದೆ, ಆರೋಗ್ಯಕ್ಕೆ ಉತ್ತಮ ಎಂದು ನಿರೀಕ್ಷೆಯಿಟ್ಟುಕೊಂಡು ಬಂದ ಗ್ರಾಹಕನಿಗೆ, ಕೊಚ್ಚೆಯಲ್ಲೇ ಮಾರಾಟವಾಗುವ ತರಕಾರಿಗಳನ್ನುತೆಗೆದುಕೊಂಡು ಹೋಗುವ ಅನಿವಾರ್ಯತೆಇದೆ. ಶುದ್ಧ ಮತ್ತು ತಾಜಾ ತರಕಾರಿ ಎಂಬುದು ಗ್ರಾಹಕರಿಗೆ ಗಗನ ಕುಸುಮವಾಗಿದೆ.

ಈ ಬಗ್ಗೆ ಮಾತನಾಡಿದ ಅಮೀನಗಡ ಪಪಂ ಮುಖ್ಯಾಧಿಕಾರಿ ಶಿವಾನಂದ ಆಲೂರ ಅವರು, ಈ ಹಿಂದೆ ಗ್ರಾಮ ಪಂಚಾಯತಿ ಸಂದರ್ಭದಲ್ಲಿ ಗ್ರಾಮೀಣ ಸಂತೆ ಮಾರುಕಟ್ಟೆ ಕಟ್ಟಲಾಗಿದ್ದು, ಅದು ಪಟ್ಟಣ ಪಂಚಾಯತಿಗೆ ಹಸ್ತಾಂತರವಾಗಿದೆಯೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ, ಹಿಂದೆ ಎರಡು ಬಾರಿ ಸಂತೆ ಮಾರುಕಟ್ಟೆಯಿಂದಾಗುವ ಅನಾನುಕೂಲತೆ ಗಮನಿಸಿ, ಚುನಾಯಿತ ಸದಸ್ಯರಾದಿಯಾಗಿ ಸಂತೆ ವ್ಯಾಪಾರಿಗಳನ್ನುಕರೆಸಿ, ಸ್ಥಳಾಂತರ ಬಗ್ಗೆ ಚರ್ಚಿಸಲಾಗಿತ್ತು, ಅವರು ನೂತನ ಸ್ಥಳಕ್ಕೆ ಸರಿಯಾದ ರಸ್ತೆ, ಮೂಲಭೂತ ಸೌಲಭ್ಯ ನಿರ್ಮಿಸಿ ಕೊಡಿ ಹೋಗುತ್ತೇವೆ ಎಂದಿದ್ದರು. ಅದರಂತೆ ಈಗ ರಸ್ತೆ ನಿರ್ಮಾಣ ಮಾಡಲಾಗಿದೆ. ಮುಂದಿನ ಹಣಕಾಸು ವರ್ಷದ ಅನುದಾನದಲ್ಲಿ ಮೂಲಭೂತ ಸೌಲಭ್ಯಗಳೊಂದಿಗೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿ ಸಂತೆಯನ್ನು ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.  

click me!