ಹುನಗುಂದ: ಪ್ರವಾಹದಿಂದ ಕೂಡಲ ಸಂಗಮನಾಥ ದೇವಾಲಯಕ್ಕೆ ಬೀಗ

By Web Desk  |  First Published Oct 24, 2019, 10:58 AM IST

ಮತ್ತೆ 30 ಗ್ರಾಮಗಳು ಜಲಾವೃತ| 6 ಗಂಜಿ ಕೇಂದ್ರ ಸ್ಥಾಪನೆ | ಬೆಳೆಗಳೆಲ್ಲ ಕೃಷ್ಣಾರ್ಪಣೆ | ಸಂಗಮನಾಥ ದೇವಾಲಯಕ್ಕೆ ಬೀಗ| ಜಲಾವೃತ ಗರ್ಭಗುಡಿಗೆ ಬೀಗ| ಭಕ್ತರ ಪ್ರವೇಶ ನಿಷೇಧ ಪೊಲೀಸ್ ಸರ್ಪಗಾವಲು|ದೇಶ ವಿದೇಶದ ಭಕ್ತರಿಗೆ ನಿರಾಸೆ| 


ಹುನಗುಂದ[ಅ.24]: ಕೃಷ್ಣಾ-ಮಲಪ್ರಭಾ ನದಿಗಳ ಪ್ರವಾಹ ಮತ್ತೆ ಉಕ್ಕಿ ಬಂದಿರುವುದರಿಂದ ಎರಡು ನದಿಗಳ ಸಂಗಮ ಸ್ಥಳದಲ್ಲಿರುವ ಕೂಡಲಸಂಗಮದ ಸಂಗಮನಾಥನ ದೇವಾಲಯ ಎರಡನೇ ಬಾರಿಗೆ ಸಂಪೂರ್ಣ ಜಲಾವೃತಗೊಂಡಿದೆ. ಮಲಪ್ರಭಾ ನದಿ ನೀರು ತಾಲೂಕಿನ ಐತಿಹಾಸಿಕ ತಾಣ ಐಹೊಳೆಯ ದೇಗುಲದಲ್ಲಿಯೂ ನುಗ್ಗಿದೆ. ನದಿಗಳ ಪ್ರವಾಹದ ರುದ್ರನರ್ತನಕ್ಕೆ ಎರಡೂ ನದಿತೀರದ ಹುನಗುಂದ ತಾಲೂಕಿನ 30 ಕ್ಕೂ ಹೆಚ್ಚು ಗ್ರಾಮಗಳಿಗೆ ನೀರುನುಗ್ಗಿ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. 

ಸಾವಿರಾರು ಎಕರೆ ಪ್ರದೇಶದಲ್ಲಿ ನದಿ ನೀರು ನುಗ್ಗಿ ಕೋಟ್ಯಂತರ ಮೌಲ್ಯದ ಬೆಳೆ ಹಾನಿಯಾಗಿದೆ. ಹಲವು ಗ್ರಾಮಗಳ ರಸ್ತೆ ಸಂಪರ್ಕ  ಡಿತಗೊಂಡಿದೆ. ನವಿಲು ತೀರ್ಥ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹರಿ ಬಿಟ್ಟಿದ್ದರಿಂದ ಹಾಗೂ ಧಾರವಾಡ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಣ್ಣಿ ಹಳ್ಳ ತುಂಬಿ ಬಂದಿದ್ದರಿಂದ ಮಲಪ್ರಭೆ ಆರ್ಭಟ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ. 

Tap to resize

Latest Videos

undefined

30 ಗ್ರಾಮಗಳಿಗೆ ನುಗ್ಗಿದ ನೀರು: 

ಎರಡು ನದಿ ಪಾತ್ರದ ಗಂಜಿಹಾಳ, ಹಿರೇಮಳಗಾವಿ, ಚಿಕ್ಕಮಳಗಾವಿ, ಹೂವನೂರ, ಕಮತಗಿ, ಚಿತ್ತರಗಿ, ಚಿಕ್ಕಮಾಗಿ, ಖೈರವಾಡಗಿ, ಪಾಪಥನಾಳ, ಬೆಳಗಲ್ಲ, ಮೇದಿನಾಪೂರ, ನಿಂಬಲಗುಂದಿ, ಐಹೊಳೆ, ಕಳ್ಳಿಗುಡ್ಡ, ರಾಮಥಾಳ, ಹೂವಿನಹಳ್ಳಿ, ಬೇವಿನಾಳ, ನಂದನೂರ, ವರಗೊಡದಿನ್ನಿ, ಖಜಗಲ್ಲ, ಕೆಂಗಲ್ಲ ಕಡಪಟ್ಟಿ, ಇದ್ದಲಗಿ ಬಿಸನಾಳಕೊಪ್ಪ, ಧನ್ನೂರ, ಅಡಿಹಾಳ, ಎಮ್ಮೆಟ್ಟಿ, ಕಮದತ್ತ,ಕಮಲದಿನ್ನಿ, ಅನಪಕಟ್ಟಿ, ಕೆಸರಪೆಂಟಿ ಈ 30 ಗ್ರಾಮಗಳಲ್ಲಿ ನದಿನೀರು ನುಗ್ಗಿದ್ದು, ಜನ ತಮ್ಮ ಜಾನುವಾರುಗಳ ಸಮೇತ ತಾಲೂಕು ಆಡಳಿತ ಗುರಿತಿಸಿದ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಎರಡು ನದಿಗಳ ಆರ್ಭಟ ಹೀಗೆ ಮುಂದುವರಿದರೆಈ ಎಲ್ಲ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡು ಸರ್ವಕೃಷ್ಣಾರ್ಪಣ ಮಸ್ತು ಎಂಬ ಸ್ಥಿತಿ ನಿರ್ಮಾಣವಾಗಲಿದೆ.

6 ಗ್ರಾಮಗಳಲ್ಲಿ ಗಂಜಿ ಕೇಂದ್ರ: 

ಪ್ರವಾಹ ಪರಿಸ್ಥಿತಿ ತೀವ್ರಗೊಂಡಗಂಜಿಹಾಳ, ಕೆಂಗಲ್ಲ ಕಡಪಟ್ಟಿ, ವರಗೋಡದಿನ್ನಿ, ಖಜಗಲ್ಲ,ಚಿತ್ತರಗಿ ಹಾಗೂ ಕಮತಗಿ 6 ಗ್ರಾಮಗಳಲ್ಲಿ ಈಗಾಗಲೇ ತಾಲೂಕು ಆಡಳಿತ ಗಂಜಿ ಕೇಂದ್ರ ಆರಂಭಿಸಿದ್ದು, ಇತರೆ ಗ್ರಾಮಗಳಲ್ಲಿ ಪರಿಸ್ಥಿತಿ ಕೈ ಮೀರಿದರೆ ಅಲ್ಲಿಯೂ ಗಂಜಿ ಕೇಂದ್ರ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಕೃಷಿ ಭೂಮಿಯಲ್ಲಿ ನೀರು: 

ಕೃಷ್ಣಾ-ಮಲಪ್ರಭೆಯ ಪ್ರವಾಹನದಿ ಪಾತ್ರ ಬಿಟ್ಟು ಸುಮಾರು ಒಂದು ಕಿಲೋಮೀಟರ್‌ವರೆಗೆ ತನ್ನ ವ್ಯಾಪ್ತಿಯನ್ನು ಚಾಚಿಕೊಂಡಿರುವುದರಿಂದ ಎರಡೂ ನದಿತೀರದ ಸಾವಿರಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆದು ನಿಂತ ಕೋಟ್ಯಂತರ ರುಪಾಯಿ ಮೌಲ್ಯದ ಬೆಳೆಗಳು ನೀರಿಗೆ ಆಹುತಿಯಾಗಿವೆ. ಕಳೆದ ಮೂರು ತಿಂಗಳ ಹಿಂದೆ ಉಂಟಾದ ಪ್ರವಾಹ ಸಂದರ್ಭದಲ್ಲಿ ನೀರು ನುಗ್ಗಿ ಬೆಳೆ ನಷ್ಟ ಅನುಭವಿಸಿದ್ದ ರೈತರು ನೀರು ಕಡಿಮೆಯಾಗಿ ಬಿತ್ತನೆ ಮಾಡಿದ ಬೆನ್ನ ಹಿಂದೆಯೇ ಮತ್ತೆ ಪ್ರವಾಹ ಬಂದು ಬಿತ್ತಿದ ಬೆಳೆ ಹಾಳಾಗಿರುವುದು ರೈತರ ಜಂಗಾಬಲವನ್ನೇ ಕುಸಿಯುವಂತೆ ಮಾಡಿದೆ. 

ಒಂದು ಕಡೆಸೂರು ಕಳೆದುಕೊಂಡು ಬೀದಿಗೆ ಬಿದ್ದ ಜನರು ಮತ್ತೊಂದಡೆ ಬೆಳೆದ ಬೆಳೆಯನ್ನು ಕಳೆದುಕೊಂಡು ಭಿಕ್ಷಾ ಪಾತ್ರೆ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರ ಬಹುತೇಕ ಮೇವಿನ ಬಣವೆಗಳು ಮುಳುಗಿ ಜಾನುವಾರುಗಳಿಗೆ ಆಹಾರ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. 

ಸಂಗಮನಾಥನ ದೇವಾಲಯಕ್ಕೆ ಬೀಗ 

ಕೂಡಲಸಂಗಮದ ಸಂಗಮನಾಥನ ದೇವಾಲಯ ಕೃಷ್ಣಾ-ಮಲಪ್ರಭಾ ನದಿಗಳ ನೀರಿನಿಂದ ಸಂಪೂರ್ಣ ಜಲಾವೃತಗೊಂಡಿದೆ. ದೇವಾಲಯ ಸಂಪೂರ್ಣ ಜಲಾವೃತಗೊಂಡಿರುವುದರಿಂದ ಗರ್ಭಗುಡಿಗೆ ಬೀಗ ಹಾಕಲಾಗಿದೆ. ದೇವಸ್ಥಾನದ ಸಂಕೀರ್ಣ ಹಾಗೂ ನದಿಯ ದಂಡೆಗೆ ಸಾರ್ವಜನಿಕರು ಮತ್ತು ಭಕ್ತರ ಪ್ರವೇಶವನ್ನು ನಿಷೇದಿಸಲಾಗಿದ್ದು, ಈಗ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಇದರಿಂದ ಸಂಗಮನಾಥನ ದರ್ಶನಕ್ಕೆ ದೇಶ ವಿದೇಶದಿಂದ ಬಂದ ಭಕ್ತರು ನಿರಾಶೆಯಿಂದ ಮರಳುತ್ತಿರುವ ದೃಶ್ಯ ಕಂಡು ಬಂದಿತು.

ರಸ್ತೆ ಸಂಪರ್ಕ ಕಡಿತ

ತಾಲೂಕಿನ ಕಮತಗಿ ಗ್ರಾಮದಲ್ಲಿ ಮಲಪ್ರಭಾನದಿ ನೀರು ನುಗ್ಗಿ ಆ ಗ್ರಾಮದ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಮಲಪ್ರಭಾ ನದಿಯಲ್ಲಿನಿರ್ಮಿಸಿದ್ದ ಐಹೊಳೆ, ನಿಂಬಲಗುಂದಿ, ಮುಳ್ಳೂರ, ಕಮತಗಿ, ಇಂಗಳಗಿ, ಸುರಳಿಕಲ್ಲ, ಚಿಕ್ಕಮಾಗಿ, ಖೈರವಾಡಗಿ, ಹಡಗಲಿ ಬ್ರಿಡ್ಜ್‌ಗಳ ಮೇಲೆ ನೀರುಹ ರಿಯುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನೂ ಕೆಲವು ಗ್ರಾಮಗಳ ಸಂಪರ್ಕ ಕಡಿತಗೊಳ್ಳುವ ಲಕ್ಷಣಗಳು ಸ್ಪಷ್ಟವಾಗಿದೆ. 

ರೆಡ್ ಅಲರ್ಟ್‌

ಎರಡು ನದಿಗಳ ಪ್ರವಾಹ ಕ್ಷಣ ಕ್ಷಣಕ್ಕೂ ಹೆಚ್ಚಾಗಿರುವುದರಿಂದ ತಾಲೂಕಿನಲ್ಲಿ ಜಲಪ್ರಳಯವಾಗುವ ಅಪಾಯ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ರೆಡ್ ಅಲರ್ಟ್ ಆಗಿದೆ. ಪ್ರವಾಹ ಪೀಡಿತ ಎಲ್ಲ ಗ್ರಾಮಗಳಲ್ಲಿಅಧಿಕಾರಿಗಳ ತಂಡ ಬೀಡು ಬಿಟ್ಟಿದ್ದು, ಅಲ್ಲಿಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ. ಸ್ಥಳಾಂತರಗೊಂಡ ಜನರಿಗೆ ಎಲ್ಲ ಸೌಲಭ್ಯಗಳನ್ನುನೀಡುವ ಕಾರ್ಯದಲ್ಲಿ ಮತ್ತೊಂದು ತಂಡತೊಡಗಿಕೊಂಡಿದೆ. ಪ್ರತಿ ಗ್ರಾಮಕ್ಕೂ ಪೊಲೀಸ್‌ ಸಿಬ್ಬಂದಿಯನ್ನು ನೇಮಿಸಿ ಜನ ನದಿಯ ದಡಕ್ಕೆ ಹೋಗದಂತೆ ಎಚ್ಚರಿಕೆ ವಹಿಸಲಾಗಿದೆ. ಎರಡು ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಇನ್ನೂ ಹೆಚ್ಚಾಗುವ ಅಪಾಯವಿದೆ. ಸಂತ್ರಸ್ತಕುಟುಂಬಗಳಿಗೆ ಪುನರ್ವಸತಿ ಸೇರಿ ಅವರಿಗೆ ಎಲ್ಲ ನೆರವು ನೀಡುವ ಕಾರ್ಯಅಚ್ಚು ಕಟ್ಟಾಗಿ ಮಾಡಲಾಗುತ್ತಿದೆ. ನದಿ ಪ್ರವಾಹ ಹೆಚ್ಚಿರುವ ಕಾರಣ ಯಾರೂ ನದಿ ತೀರಕ್ಕೆ ಹೋಗಬಾರದು ಮತ್ತು ಜಾನುವಾರುಗಳನ್ನು ಬಿಡಬಾರದು. ಅಪಾಯದಲ್ಲಿರುವ ಗ್ರಾಮಗಳ ಜನರು ತಕ್ಷಣವೇ ತಾಲೂಕು ಆಡಳಿತ ಗುರುತಿಸಿದ ಸ್ಥಳಕ್ಕೆ ಬರಬೇಕು ಎಂದು  ಹುನಗುಂದ ತಹಸೀಲ್ದಾರ್ ಆನಂದ ಕೊಲ್ಹಾರ ಅವರು ಹೇಳಿದ್ದಾರೆ. 

109 ಗ್ರಾಮಗಳು ಬಾಧಿತ

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಮತ್ತು ಮಳೆಯಿಂದಾಗಿ ಬುಧವಾರ ಸಾಯಂಕಾಲದ ಮಾಹಿತಿಯಂತೆ 109 ಗ್ರಾಮಗಳು ಬಾಧಿತವಾಗಿದ್ದು 17 ಜಾನುವಾರಗಳು ಮೃತ ಪಟ್ಟಿವೆ.  888 ಮನೆಗಳು ಭಾಗಶಃ ಹಾನಿಗೀಡಾಗಿವೆ. ಘಟಪ್ರಭಾ ಮತ್ತು ಮಲಪ್ರಭಾನದಿಗಳ ಅಬ್ಬರಕ್ಕೆ ಮುಧೋಳ ಹಾಗೂ ಬಾದಾಮಿ, ಹುನಗುಂದ ತಾಲೂಕಿನ ನದಿ ತೀರದ ಗ್ರಾಮಗಳು ಬಾಧಿತವಾಗಿದ್ದು ಐತಿಹಾಸಿಕ ಸ್ಥಳಗಳಾದ ಪಟ್ಟದಕಲ್ಲು, ಐಹೊಳೆ, ಕೂಡಲಸಂಗಮ ದೇವಾಲಯಗಳಲ್ಲಿ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ. 

ಬುಧವಾರ ಸಾಯಂಕಾಲದ ಹೊತ್ತಿಗೆ ಹಿಡಕಲ್‌ ಜಲಾಶಯದಿಂದ ಮತ್ತು ಬಳ್ಳಾರಿ ನಾಲಾ ಸೇರಿದಂತೆ ಒಟ್ಟು 19 ಸಾವಿರ ಕ್ಯುಸೆಕ್‌ನೀರು ಘಟಪ್ರಭಾ ನದಿಗೆ ಬಿಡಲಾಗಿದ್ದುಇದರಿಂದ ಮುಧೋಳ ತಾಲೂಕಿನ ಹಲವು ಗ್ರಾಮಗಳು ಪ್ರವಾಹ ಭೀತಿಯನ್ನುಎದುರಿಸುತ್ತಿವೆ. ನವಿಲುತೀರ್ಥ ಜಲಾಶಯದಿಂದ 5704 ಕ್ಯುಸೆಕ್ ನೀರು ಹೊರಬಿಡಲಾಗಿದ್ದು ಇದರಿಂದ ಬಾದಾಮಿ ತಾಲೂಕಿನ ಹತ್ತಕ್ಕೂ ಹೆಚ್ಚು ಗ್ರಾಮಗಳು ಬಾಧಿತವಾಗಿವೆ, ಪ್ರಮುಖ ಸಂಪರ್ಕ ರಸ್ತೆಗಳು ಸಂಪರ್ಕ ಕಡಿತಗೊಂಡಿವೆ. ಹುನಗುಂದ ತಾಲೂಕಿನ ಏಳು ಗ್ರಾಮಗಳಲ್ಲಿ ಮತ್ತೆ ಪರಿಹಾರ 18 ರಿಂದ ಇಂದಿನವರೆಗಿನ ಮಳೆಯ ಪ್ರಮಾಣ ಗಮನಿಸಿದರೆ ವಾಡಿಕೆ ಮಳೆಗಿಂತ ಗಣನೀಯವಾಗಿ ಹೆಚ್ಚಾಗಿದ್ದು ಸಹ ನದಿ ತೀರದ ಗ್ರಾಮಗಳಲ್ಲಿ ನೀರು ನುಗ್ಗಲು ಪ್ರಮುಖ ಕಾರಣವಾಗಿದೆ.
 

click me!