ಜಮಖಂಡಿ:ಮಣ್ಣು ಪಾಲಾದ ಬೆಳೆ, ಕಂಗಾಲಾದ ರೈತಾಪಿ ವರ್ಗ

By Web Desk  |  First Published Nov 15, 2019, 8:28 AM IST

ಪ್ರಕೃತಿಯಾಟಕ್ಕೆ ಅನ್ನದಾತ ಕಂಗಾಲು| ನೆರೆ-ಮಳೆಯಾಟದಿಂದ ರೈತರು ಬೆಳೆದ ಬೆಳೆಯಲ್ಲ ಮಣ್ಣು ಪಾಲು|ರೋಗಕ್ಕೆ ತುತ್ತಾಗಿ ಬೆಳೆಯಲ್ಲ ನಾಶ| ತಾಲೂಕಿನ ಗೋಠೆ ಗ್ರಾಮದ ತೊಗರಿ ಜಮೀನಿನಲ್ಲಿ ಕುಂಭದ್ರೋಣ ಮಳೆಗೆ ಹೂ ಉದುರಿವೆ| ತುಂಗಳ ಗ್ರಾಮದಲ್ಲಿ ಮಳೆಯಿಂದ ಹಾಳಾದ ಕಬ್ಬು ಬೆಳೆ|  


ಗುರುರಾಜ ವಾಳ್ವೇಕರ 

ಜಮಖಂಡಿ(ನ.15): ಈ ವರ್ಷ ರೈತಾಪಿ ವರ್ಗಕ್ಕೆ ಚೇತರಿಸಿಕೊಳ್ಳಲಾಗದ ಹೊಡೆತಗಳು ಬೀಳುತ್ತಿವೆ. ಕಳೆದ ಮೂರು ತಿಂಗಳ ಹಿಂದೆ ಕೃಷ್ಣಾ ನದಿಗೆ ನೆರೆ ಬಂದು ನದಿ ತೀರದ ರೈತರ ಬದುಕು, ಅನ್ನವನ್ನು ಕಸಿದುಕೊಂಡು ಅವರನ್ನು ಬೀದಿಗೆ ತಂದಿತ್ತು. ಆದರೆ, ನೆರೆ ಹೋಯಿತು ಎನ್ನುವಷ್ಟರದಲ್ಲಿ ಮಳೆ ರೈತಾಪಿ ವರ್ಗವನ್ನು ಕಂಗಾಲು ಮಾಡಿದೆ. ಬೆಳೆದ ಬೆಳೆಯೆಲ್ಲ ನೀರಲ್ಲಿ ನಿಂತಿದೆ. ಪರಿಣಾಮ ಬೆಳೆ ಮಣ್ಣು ಪಾಲಾಗಿದೆ. ಇದರಿಂದ ರೈತಾಪಿ ವರ್ಗಕ್ಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Tap to resize

Latest Videos

ಸತತ ಮಳೆಯಿಂದಾಗಿ ಬೆಳೆಗಳು ವಿವಿಧ ರೀತಿಯ ರೋಗಗಳಿಗೆ ತುತ್ತಾಗಿ, ಮಣ್ಣಲ್ಲೆ ಮಣ್ಣಾಗುತ್ತಿವೆ. ಅಳಿದುಳಿದ ಫಸಲು ಪಡೆಯಲಾಗದೇ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಸ್ಥಿತಿಯಲ್ಲಿ ತಾಲೂಕಿನ ಬಹುಪಾಲು ಅನ್ನದಾತನದ್ದಾಗಿದೆ. ಆಗಸ್ಟ್‌ ಇಡೀ ತಿಂಗಳು ನೆರೆ ಹಾಗೂ ಅತಿವೃಷ್ಟಿಉಂಟಾಗಿತ್ತು. ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ಆಗಾಗ ಬೀಳುತ್ತಿರುವ ಮಳೆಯಿಂದಾಗಿ ಭೂಮಿ ಸದಾ ಕೆಸರಿನ ಗದ್ದೆಯಾಗಿದ್ದು, ಇನ್ನೂ ಹಾಗೆ ಇದೆ. ಜತೆಗೆ ನೀರಿನಲ್ಲಿ ಮುಳುಗಿ ಕೊಳೆತು, ಕಟಾವಿಗೆ ಬಂದ ಕಬ್ಬನ್ನು ಇನ್ನು ಕಡಿದು ಹಾಕಿಲ್ಲ. ಇದರಿಂದ ಜಮೀನಿನಲ್ಲಿ ಬೆಳೆ, ಕಬ್ಬು ಕೊಳೆತು ದುರ್ವಾಸನೆ ಬೀರುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆಲ ರೈತರು ಬಿತ್ತಿದ ಬೀಜ ಮೊಳಕೆಯಲ್ಲೇ ಕಮರುತ್ತಿದೆ. ಕೆಲವು ಕಡೆಗಳಲ್ಲಿ ಸಸಿಗಳು ಬೆಳೆದರೂ ಅವು ರೋಗಗಳಿಗೆ ತುತ್ತಾಗಿವೆ. ಕೃಷ್ಣಾ ನದಿಯ ಸುತ್ತಲಿನ ರೈತರು ತಮ್ಮ ಅಳಲನ್ನು ತೋಡಿಕೊಂಡರು. ಯಾವ ರೋಗಕ್ಕೆ ಯಾವ ಔಷಧ ಉಪಚಾರ ಮಾಡಬೇಕು ಎಂದು ಯಾವೊಬ್ಬ ಅಧಿಕಾರಿಯೂ ತಿಳಿಸುತ್ತಿಲ್ಲ. ರೈತರ ಜಮೀನುಗಳಿಗೆ ಭೇಟಿ ನೀಡದೇ ಸಲಹೆ ನೀಡುತ್ತಿಲ್ಲ ಎಂಬ ಆರೋಪ ರೈತರದ್ದು.

ಈಗ ಬರುತ್ತಿರುವ ಮಳೆ ಕಟಾವಿಗೆ ನಿಂತಿರುವ ಮೆಕ್ಕೆಜೋಳ ಕೀಳಲು ಶುರು ಮಾಡಿದರೆ ಮತ್ತಷ್ಟು ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ಜಮೀನಿನಲ್ಲಿ ಸಂಪೂರ್ಣವಾಗಿ ನೀರು ನಿಂತ ಪರಿಣಾಮ ಬೆಳೆಗಳು ಮುರಿದು ನೀರಿನಲ್ಲಿ ಬೀಳುತ್ತಿವೆ. ತೊಗರಿ ಹೂ ಬಿಟ್ಟು ಕಾಯಿಹಿಡಿಯುವ ಸಂದರ್ಭದಲ್ಲಿ ಕುಂಭದ್ರೋಣ ಮಳೆಗೆ ಎಲ್ಲ ಹೂಗಳು ನೆಲಕಚ್ಚಿವೆ. ಅರಿಶಿಣ ಬೆಳೆ ಹಾಳು ಮಾಡುವ ಜೊತೆಗೆ ಬೆಂಕಿರೋಗ ಹಾಗೂ ತೆನೆ ಹುಳು ಬಾಧೆ ಸೃಷ್ಟಿಯಾಗುತ್ತಿವೆ.
ಕಳೆದ ನಾಲ್ಕು ವರ್ಷಗಳಿಂದ ಬರದಲ್ಲಿ ಬೆಂದ ರೈತ ಈ ಬಾರಿ ಅತಿವೃಷ್ಟಿಯಿಂದ ತೊಂದರೆಯಾಗಿದೆ. ಸರ್ಕಾರದಿಂದ ಸೂಕ್ತ ಪರಿಹಾರ ನೀಡಿದಲ್ಲಿ ರೈತರಿಗೆ ಅನುಕೂಲವಾಗುತ್ತದೆ. ನೀಡದಿದ್ದರೇ ನಮ್ಮ ಜೀವನ ಮಾಡುವುದೇ ಆಗುವುದಿಲ್ಲ ಎನ್ನುತ್ತಾರೆ ರೈತರು.

ನಮ್ಮ ಬೆಳೆಗೆ ನಾವೇ ಉಪಚಾರ ಮಾಡಕೋಬೇಕಾಗಿದೆ

ನಮ್ಮ ಬೆಳೆಗೆ ನಾವೇ ಉಪಚಾರ ಮಾಡಕೋಬೇಕಾಗಿದೆ. ಅದು ಔಷಧ ಅಂಗಡಿಕಾರರ ಸಲಹೆ ಪಡೆಯುವ ಜೊತೆಗೆ ಅವರು ಹೇಳಿದಷ್ಟುಹಣ ಕೊಟ್ಟು ರಸಗೊಬ್ಬರ, ಔಷಧ ತಂದು ಬೆಳೆಗಳಿಗೆ ಸಿಂಪಡಿಸುತ್ತಿದ್ದೇವೆ ಎಂದು ಪ್ರಗತಿಪರ ರೈತ ಆಲಗೊಂಡ ಚನವೀರ ಅವರು ಹೇಳಿದ್ದಾರೆ. 

ತಾಲೂಕಿನಲ್ಲಿ ಹಿಂಗಾರಿ ಹಂಗಾಮಿನಲ್ಲಿ 53550 ಹೆಕ್ಟೇರ್‌ ಬಿತ್ತನೆಯಾಗಬೇಕಿತ್ತು. ಆದರೆ ಮಳೆನಿಲ್ಲದ ಕಾರಣ 3600 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ. 487.50 ಎಂಎಂ ಆಗಬೇಕಿದ್ದ ಮಳೆ 593.7 ಎಂ.ಎಂ ಆಗಿದ್ದು, ಶೇ. 21.8 ರಷ್ಟುಮಳೆ ಹೆಚ್ಚಿಗೆಯಾಗಿದೆ. ಮಳೆ-ನೆರೆಯಿಂದ ರೈತರಿಗೆ ತೊಂದರೆಯಾಗಿದೆ.
 

click me!