ಇನ್ನೆರಡು ವರ್ಷದಲ್ಲಿ ದೇಶದ ಎಲ್ಲ ಸಾರಿಗೆ ಬಸ್‌ಗಳು ಎಲೆಕ್ಟ್ರಿಕ್ ಬಸ್‌ಗಳಾಗಿ ಪರಿವರ್ತನೆ ಹೊಂದುತ್ತವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅವರ ಗುರಿ ದೊಡ್ಡದಿದೆ. ಈ ಯೋಜನೆಯಿಂದ ದೇಶಕ್ಕೆ ಹಾಗೂ ಪರಿಸರಕ್ಕೆ ಲಾಭವೂ ದೊಡ್ಡದಿದೆ.
ಎಲ್. ಪಿ. ಕುಲಕರ್ಣಿ, ಬಾದಾಮಿ
ನವದೆಹಲಿ[ಸೆ.26]: ವಾಯುಮಾಲಿನ್ಯಕ್ಕೆ ಪೆಟ್ರೋಲ್-ಡೀಸೆಲ್ ವಾಹನಗಳು ನೀಡುವ ಕೊಡುಗೆ ಅಪಾರ. ಈ ನಿಟ್ಟಿನಲ್ಲಿ, ಇಂದು ಇಡೀ ವಿಶ್ವದಲ್ಲಿ ಎಲೆಕ್ಟ್ರಿಕ್ ವಾಹನಗಳು ಬದಲಾವಣೆ ತರಬಲ್ಲ ಸಾಧನವಾಗಿ ಆಶಾಭಾವನೆ ಮೂಡಿಸಿವೆ. ಭಾರತವು ತನ್ನದೇ ಆದ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಯೋಜನೆಯನ್ನು ಹೊಂದಿದೆ. ಎಂಟು ದೇಶಗಳ ಕ್ಲೀನ್ ಎನರ್ಜಿ ಮಿನಿಸ್ಟೀರಿಯಲ… ಎಂಬ ಉನ್ನತ ಮಟ್ಟದ ವೇದಿಕೆಯ ಸದಸ್ಯನಾಗಿ ಭಾರತವು 2030ರ ವೇಳೆಗೆ ಶೇ.30ರಷ್ಟುವಿದ್ಯುತ್ ವಾಹನಗಳನ್ನು ತಯಾರಿಸಿ ರಸ್ತೆಗಿಳಿಸುವ ಗುರಿ ಹೊಂದಿದೆ. ಈ ಗುರಿಯು ದೇಶದ ಕಚ್ಚಾ ತೈಲದ ಮೇಲಿನ ಅವಲಂಬನೆಯನ್ನು ತಗ್ಗಿಸುವುದಲ್ಲದೆ, ಪರಿಸರದ ಸಮತೋಲನವನ್ನು ಕಾಪಾಡಲು ದೊಡ್ಡ ಭರವಸೆಯ ಹೆಜ್ಜೆಯಾಗಿದೆ.
ಸುಸ್ಥಿರ ಪರಿಸರಕ್ಕೆ ಎಲೆಕ್ಟ್ರಿಕ್ ವಾಹನಗಳು
ಹಲವಾರು ಕಾರಣಗಳಿಂದಾಗಿ ಪೆಟ್ರೋಲ್, ಡಿಸೇಲ್ ಮುಂತಾದ ಪಳೆಯುಳಿಕೆ ಇಂಧನದಿಂದ ಓಡುವ ವಾಹನಗಳು ಪರಿಸರಕ್ಕೆ ಒಳ್ಳೆಯದಲ್ಲ. ಅವು ಹಸಿರುಮನೆ ಅನಿಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮಿಸುತ್ತಾ ಜನರ ಸ್ವಾಸ್ಥ್ಯ ಕೆಡಿಸುತ್ತಿವೆ. ಭಾರತವು ಅತಿ ಹೆಚ್ಚು ವಾಹನ ಹೊಗೆಯನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಇದಕ್ಕೆ ಪೂರಕವಾಗಿ ನಮ್ಮ ದೇಶದಲ್ಲಿ ಅತಿಹೆಚ್ಚು ವಾಯುಮಾಲಿನ್ಯ ಸಂಬಂಧಿತ ಸಾವುಗಳೂ ಸಂಭವಿಸುತ್ತಿವೆ. ‘ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಪ್ರಕಾರ, ವಾಹನ ಹೊಗೆಯು ಭಾರತದ ನಗರ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮುಖ ಮೂಲಗಳಲ್ಲೊಂದು. ವಿಶ್ವದ ಅತಿ ದೊಡ್ಡ ವಾಹನ ಮಾರುಕಟ್ಟೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಪಳೆಯುಳಿಕೆ ಇಂಧನ ಆಧಾರಿತ ವಾಹನಗಳನ್ನೇ ಅವಲಂಬಿಸಿದರೆ ಪರಿಸರದ ಮೇಲೆ ಭಾರೀ ದುಷ್ಪರಿಣಾಮ ಉಂಟಾಗಲಿದೆ. ಒಟ್ಟಾರೆ, ವಿದ್ಯುತ್ ವಾಹನಗಳು ಪರಿಸರಕ್ಕೆ ಪ್ರಯೋಜನಕಾರಿ ಎಂಬುದಂತೂ ನಿಜ. ಅವುಗಳಲ್ಲಿ ಆಂತರಿಕ ದಹನ ನಡೆಸುವ ಇಂಜಿನ್ನುಗಳಿರುವುದಿಲ್ಲ. ಹೀಗಾಗಿ ಅವುಗಳಿಂದ ಯಾವ ಹೊಗೆಯೂ ಬರುವುದಿಲ್ಲ. ನೀತಿ ಆಯೋಗದ ವರದಿಯ ಪ್ರಕಾರ, 2030ರ ವೇಳೆಗೆ ಭಾರತವು ವಿದ್ಯುತ್ ವಾಹನಗಳನ್ನು ಬಳಕೆ ಮಾಡಿ ರಸ್ತೆ ಸಾರಿಗೆಯ ಶೇ.64ರಷ್ಟುಶಕ್ತಿ ಬೇಡಿಕೆಯನ್ನು ಮತ್ತು ಶೇ.34ರಷ್ಟುಇಂಗಾಲ ಹೊಗೆಯನ್ನು ತಗ್ಗಿಸಬಹುದು.
ಪೆಟ್ರೋಲ್-ಡೀಸೆಲ್‌ನಿಂದಾಗುವ ಅಪಾಯ
ಪಳೆಯುಳಿಕೆ ಇಂಧನದ ಹೊರೆಯನ್ನು ವಿದ್ಯುತ್ ವಾಹನಗಳಿಗೆ ವರ್ಗಾಯಿಸಲಾಗುತ್ತಿದೆ ಎಂದು ಕೆಲವರು ಹೇಳುತ್ತಾರೆ. ಅಂದರೆ ಪೆಟ್ರೋಲ… ಮತ್ತು ಡೀಸೆಲ… ಬದಲು ಕಲ್ಲಿದ್ದಲನ್ನು ವಿದ್ಯುತ್ ಶಕ್ತಿ ಉತ್ಪಾದನೆಗೆ ಬಳಸಲಾಗುತ್ತದೆ ಎಂಬುದು ಅವರ ವಾದ. ಇಂದು ಕಲ್ಲಿದ್ದಲು ಆಧಾರಿತ ಉಷ್ಣ ಶಕ್ತಿ ಉತ್ಪಾದನೆಯು ಭಾರತದ ಶೇ.70ರಷ್ಟುಶಕ್ತಿ ಅಗತ್ಯವನ್ನು ಪೂರೈಸುತ್ತದೆ. ಪರಿಸರದ ದೃಷ್ಟಿಯಲ್ಲಿ ಭಾರತದಲ್ಲಿ ಶಕ್ತಿಮೂಲವಾಗಿ ಕಲ್ಲಿದ್ದಲು ಒಂದು ಹೊರೆಯಾಗಿದೆ. ಇದು ಕಾರ್ಬನ್ ಡೈ ಆಕ್ಸೈಡ್‌ನಂತಹ ವಿಷಯುಕ್ತ ರಾಸಾಯನಿಕಗಳನ್ನು ಹೊರಹಾಕುತ್ತದೆ. ಹಾಗೆಯೇ ಉಷ್ಣಶಕ್ತಿ ಉತ್ಪಾದನೆಯಲ್ಲಿ ಕಲ್ಲಿದ್ದಲಿನ ದಹನದ ಸಮಯದಲ್ಲಿ ಸಲ್ಫರ್ ಡೈ ಆಕ್ಸೈಡ್, ನೈಟ್ರೋಜನ್ ಆಕ್ಸೈಡ್, ಸೀಸದ ಆಕ್ಸೈಡ್‌ಗಳಂತಹ ವಿಷಕಾರಿ ಅನಿಲಗಳು ಮತ್ತು ಘನ ವಸ್ತುಗಳು ಗಾಳಿಯನ್ನು ಸೇರುತ್ತವೆ. ಹೀಗಾಗಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿದರೆ ಕಲ್ಲಿದ್ದಲಿನ ಬಳಕೆಯೂ ಹೆಚ್ಚುವುದೇ? ಇದನ್ನು ಕೊಂಚ ಪರಾಮರ್ಶೆ ಮಾಡಬೇಕಾಗಿದೆ.
ಮೊದಲಿಗೆ ಒಂದು ಲೆಕ್ಕಾಚಾರ ನೋಡೋಣ. ಒಂದು ಕಿಲೋವ್ಯಾಟ್ ಶಕ್ತಿಯು ಒಂದು ವಿದ್ಯುತ್ ವಾಹನಕ್ಕೆ 10 ಕಿ.ಮೀ. ದೂರ ಸಂಚರಿಸುವ ಸಾಮರ್ಥ್ಯ ಒದಗಿಸುತ್ತದೆ. ಇದಕ್ಕಾಗಿ ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲನ್ನು ಬಳಸಿದರೆ, ಇದು 1 ಕೆ.ಜಿ. ಕಾರ್ಬನ್ ಡೈಆಕ್ಸೈಡನ್ನು ಹೊರಹಾಕುತ್ತದೆ. ಇದಕ್ಕೆ ಹೋಲಿಸಿದರೆ, ಒಂದು ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಬಳಸಿ ನಗರ ಪ್ರದೇಶಗಳಲ್ಲಿ 10 ಕಿ.ಮೀ. ದೂರ ಸಂಚರಿಸಬಹುದು. ಇದು 2.3ರಿಂದ 2.7 ಕೆ.ಜಿ. ಕಾರ್ಬನ್ ಡೈ ಆಕ್ಸೈಡನ್ನು ಹೊರಸೂಸುತ್ತದೆ. ಹಾಗಾಗಿಯೇ ಯುರೋಪಿನ ಸಂಶೋಧನೆಯ ಪ್ರಕಾರ, ಕಲ್ಲಿದ್ದಲಿನಿಂದ ತಯಾರಾಗುವ ವಿದ್ಯುತ್ತಿನಿಂದ ಓಡುವ ವಾಹನಗಳು ಕೂಡ ಸಾಂಪ್ರದಾಯಿಕ ಆಂತರಿಕ ದಹನ ಇಂಜಿನ್ ಪ್ರೇರಿತ ಗಾಡಿಗಳಿಗಿಂತ (ಪೆಟ್ರೋಲ್, ಡೀಸೆಲ್ ವಾಹನಗಳು) ಕಡಿಮೆ ಜಿಎಚ್‌ಜಿ ಹೊಗೆಯನ್ನು ಹೊರಹಾಕುತ್ತವೆ. ಇಷ್ಟೇ ಅಲ್ಲದೇ, ಕೇವಲ ಶಕ್ತಿ ಉತ್ಪಾದನೆ ದೃಷ್ಟಿಯಲ್ಲಿ ಹೊಗೆಗೆ ಸಂಬಂಧಿಸಿದಂತೆ ಪುನರ್ ನವೀಕರಿಸಬಲ್ಲ ಹಾಗೂ ಸಾಂಪ್ರದಾಯಿಕ ಶಕ್ತಿ ಮೂಲಗಳನ್ನು ಹೋಲಿಸಿದರೆ, ಇಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ತಯಾರಿಕೆಗೆ ಬೇಕಾದ ಕಚ್ಚಾ ಪದಾರ್ಥವನ್ನು ತೆಗೆಯುವುದು, ಪರಿಷ್ಕರಿಸುವುದು ಮತ್ತು ಸಂಸ್ಕರಿಸುವುದು ಇತ್ಯಾದಿ ಉತ್ಪಾದನಾ ಕ್ರಿಯೆಗಳನ್ನು ಇವು ಒಳಗೊಳ್ಳುವುದಿಲ್ಲ.
ಪರಿವರ್ತನೆ ಹೇಗೆ ಸಾಧ್ಯ?
ಭಾರತವು ಭವಿಷ್ಯದಲ್ಲಿ ಪುನರ್ ನವೀಕರಣಗೊಳ್ಳುವ ಶಕ್ತಿಮೂಲಗಳ ಬಳಕೆಗೆ ಅತಿ ಶೀಘ್ರವಾಗಿ ಬದಲಾಗಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಹಾಗೂ ಈ ನಿಟ್ಟಿನಲ್ಲಿ ಸಾಗುತ್ತಿದೆ ಕೂಡ. ಬೇಡಿಕೆ ಮತ್ತು ಪೂರೈಕೆಗೆ ಉತ್ತೇಜಕಗಳು, ಬ್ಯಾಟರಿ ತಂತ್ರಜ್ಞಾನದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಮತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ಉತ್ತೇಜನ, ಬ್ಯಾಟರಿ ಚಾರ್ಜಿಂಗ್‌ಗಾಗಿ ಮೂಲಭೂತ ಸೌಕರ್ಯಗಳ ಸ್ಥಾಪನೆಗಾಗಿ ಪ್ರೋತ್ಸಾಹ, ಇತ್ಯಾದಿ ಕಾರ್ಯವಿಧಾನಗಳು ಎಲೆಕ್ಟ್ರಿಕ್ ವಾಹನಗಳಿಗೆ ಬದಲಿಸುವ ಈ ಚಾಲನಾ ಪರಿವರ್ತನೆಯನ್ನು ತರಲು ಅಗತ್ಯವಾದವು. ಈ ಪರಿವರ್ತನೆಯು ವಿದ್ಯುತ್ ವಾಹನಗಳ ಉದ್ದಿಮೆಯಲ್ಲಿ ಹೂಡಿಕೆಗೆ ಪ್ರೇರಣೆ ನೀಡುತ್ತವೆ. ಎರಡು ದಶಕಗಳಿಂದ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮುನ್ನಡೆ ಸಾಧಿಸುತ್ತಿದ್ದರೂ ಈಗ ಇದಕ್ಕೆ ಚಾಲನೆ ದೊರೆತಿದೆ.
ವಾಯುಮಾಲಿನ್ಯದಿಂದ ಆರೋಗ್ಯದ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ಹೆಚ್ಚುತ್ತಿರುವ ಸಾರ್ವಜನಿಕ ತಿಳಿವಳಿಕೆ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಬಲಿಷ್ಠ ನೀತಿ, ರೂಪರೇಷೆಗಳು ಎಲೆಕ್ಟ್ರಿಕ್ ವಾಹನಗಳೆಡೆಗೆ ಗಮನ ಹರಿಸುವಂತೆ ಮಾಡುತ್ತಿವೆ. ಭಾರತದ ಇ-ಚಾಲನೆ ವಲಯವು ಕೂಡ ಭೌಗೋಳಿಕ ಸ್ಪರ್ಧಿಗಳಿಂದ ತಿಳಿವಳಿಕೆ, ಪ್ರೇರಣೆ ಹಾಗೂ ಜ್ಞಾನವನ್ನು ಪಡೆಯುತ್ತಿದ್ದು, ಅದರಿಂದ ಪ್ರೇರಿತವಾಗಿದೆ. ಪರಿಸರ ಹಾಗೂ ಆರ್ಥಿಕ ಪ್ರಯೋಜನಗಳನ್ನು ಪರಿಗಣಿಸಿದರೆ ದೇಶದ ಶೇ.30ರಷ್ಟುವಾಹನಗಳನ್ನು ವಿದ್ಯುದೀಕರಿಸುವ ಗುರಿಯು, ವಾಹನ, ತಂತ್ರಜ್ಞಾನ, ಶಕ್ತಿ ಮತ್ತು ಇತರೆ ಸಂಬಂಧಿತ ಕ್ಷೇತ್ರಗಳ ಸೇವೆ ನೀಡುಗರ ಮತ್ತು ಒಇಎಂಗಳ ನಡುವೆ ಹೆಚ್ಚಿನ ಮಟ್ಟದಲ್ಲಿ ಸಹಯೋಗವನ್ನು ಮತ್ತು ಸಹಕಾರವನ್ನು ಬಯಸುತ್ತದೆ.