ವಾಹನಕ್ಕೆ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ ಡಿ.1ರಿಂದ ಡಬಲ್‌ ಟೋಲ್‌ ಬರೆ!

By Web DeskFirst Published Jul 21, 2019, 10:48 AM IST
Highlights

ವಾಹನಕ್ಕೆ ಫಾಸ್ಟ್‌ಟ್ಯಾಗ್‌ ಇಲ್ಲದಿದ್ದರೆ ಡಿ.1ರಿಂದ ಡಬಲ್‌ ಟೋಲ್‌ ಬರೆ!| ಹೆದ್ದಾರಿ ಟೋಲ್‌ಗಳಲ್ಲಿ ಉದ್ದನೆಯ ಕ್ಯೂ ತಪ್ಪಿಸಲು ಕ್ರಮ| ಏನಿದು ಫಾಸ್ಟ್‌ಟ್ಯಾಗ್‌?

ನವದೆಹಲಿ[ಜು.21]: ಡಿಜಿಟಲ್‌ ರೂಪದಲ್ಲಿ ರಸ್ತೆ ಟೋಲ್‌ ಪಾವತಿಸುವ ಸೌಲಭ್ಯವಾದ ‘ಫಾಸ್ಟ್‌ಟ್ಯಾಗ್‌’ ಹೊಂದಿಲ್ಲದ ವಾಹನಗಳಿಗೆ ಡಿ.1ರಿಂದ ಎರಡು ಪಟ್ಟು ಸುಂಕ ಬರೆ ಹೇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕ್ರಮದಿಂದ ಟೋಲ್‌ಗಳಲ್ಲಿ ನಗದು ಪಾವತಿ ಸ್ಥಗಿತಗೊಳ್ಳುವುದರ ಜತೆಗೆ, ವಾಹನಗಳು ಉದ್ದುದ್ದ ಕ್ಯೂ ನಿಲ್ಲುವುದು ತಪ್ಪಲಿದೆ. ಇದರಿಂದ ಸುಗಮ ಸಂಚಾರ ಸಾಧ್ಯವಾಗಲಿದೆ.

ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲ ಟೋಲ್‌ಗಳನ್ನು ಫಾಸ್ಟ್‌ಟ್ಯಾಗ್‌ ಮಾರ್ಗಗಳಾಗಿ ಪರಿವರ್ತಿಸಲಾಗುತ್ತದೆ. ಒಂದು ಲೇನ್‌ ಅನ್ನು ಮಾತ್ರ ನಗದು ಸ್ವೀಕಾರಕ್ಕೆ ಬಳಸಲಾಗುತ್ತದೆ. ಫಾಸ್ಟ್‌ಟ್ಯಾಗ್‌ ಹೊಂದಿಲ್ಲದ ವಾಹನಗಳು ಆ ಲೇನ್‌ ಉಪಯೋಗಿಸಬಹುದು. ಆದರೆ ಡಬಲ್‌ ಟೋಲ್‌ ನೀಡಬೇಕು ಎಂದು ಕೇಂದ್ರ ಹೆದ್ದಾರಿ ಸಚಿವಾಲಯ ಶುಕ್ರವಾರ ಹೊರಡಿಸಿರುವ ಸುತ್ತೋಲೆ ತಿಳಿಸಿದೆ.

ಡಿ.1ರೊಳಗಾಗಿ ದೇಶದ ಎಲ್ಲ ಟೋಲ್‌ ಪ್ಲಾಜಾಗಳನ್ನು ಫಾಸ್ಟ್‌ ಟ್ಯಾಗ್‌ ಲೇನ್‌ಗಳೆಂದು ಘೋಷಣೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಆದರೆ ಟೋಲ್‌ ಕೇಂದ್ರದಲ್ಲಿ ತಾಂತ್ರಿಕ ದೋಷ ಕಂಡುಬಂದಾಗ ವಾಹನಗಳು ಉಚಿತವಾಗಿ ಹಾದು ಹೋಗಲು ಅವಕಾಶ ಕಲ್ಪಿಸುವ ಪ್ರಮುಖ ಷರತ್ತನ್ನು ಈ ಸುತ್ತೋಲೆಯಲ್ಲಿ ಕೈಬಿಡಲಾಗಿದೆ.

ಏನಿದು ಫಾಸ್ಟ್‌ಟ್ಯಾಗ್‌?

ವಾಹನಗಳ ಮುಂದಿನ ಗಾಜಿನ ಮೇಲೆ ಅಂಟಿಸಲಾಗುವ ಒಂದು ಬಗೆಯ ಸ್ಟಿಕ್ಕರ್‌. ಮೊಬೈಲ್‌ ರೀಚಾಜ್‌ರ್‍ ಮಾಡಿಸಿದಂತೆ ಇದನ್ನೂ ರೀಚಾಜ್‌ರ್‍ ಮಾಡಿಸಿಕೊಳ್ಳಬೇಕು. ಟೋಲ್‌ ಪ್ಲಾಜಾವನ್ನು ವಾಹನ ಹಾದು ಹೋಗುತ್ತಿದ್ದಂತೆ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್‌ ತಂತ್ರಜ್ಞಾನದ ಮೂಲಕ ಡಿಜಿಟಲ್‌ ರೂಪದಲ್ಲಿ ರಸ್ತೆ ಸುಂಕ ಕಡಿತವಾಗುತ್ತದೆ. ಇದಕ್ಕಾಗಿ ಟೋಲ್‌ ಬೂತ್‌ಗಳಲ್ಲಿ ವಾಹನಗಳು ನಿಲ್ಲುವಂತಿಲ್ಲ. ಚಲಿಸುತ್ತಿದ್ದಾಗಲೇ ಈ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ನಿಯಮ ಬದಲಿಗೆ ಕಾರಣವೇನು?

- ಸರ್ಕಾರ ಅಂದಾಜಿಸಿದ ಮಟ್ಟದಲ್ಲಿ ಫಾಸ್ಟ್‌ಟ್ಯಾಗ್‌ ಯೋಜನೆ ಬಳಕೆ ಆಗದಿರುವುದು

- ನಗದು ಪಾವತಿಗೆ ಕ್ಯೂನಿಂದಾಗಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಿಸುವುದು

- ಫಾಸ್ಟ್‌ಟ್ಯಾಗ್‌ ಮೂಲಕ ಟೋಲ್‌ ಶುಲ್ಕ ಪಾವತಿ ಡಿಜಿಟಲೀಕರಣಗೊಳಿಸುವುದು

click me!