ಆಕಾರವಿಲ್ಲದ ದೇವರಿಗೆ ಮೂರ್ತಿ ಪೂಜೆ ಏಕೆ?

By Web Desk  |  First Published Apr 22, 2019, 4:24 PM IST

ನಮ್ಮ ಪೂರ್ವಿಕರು ಆಚರಿಸುತ್ತಿದ್ದ ಬಹುತೇಕ ಆಚಾರ, ವಿಚಾರಗಳಿಗೆ ತನ್ನದೇ ಆದ ಅರ್ಥಗಳಿವೆ. ವೈಜ್ಞಾನಿಕ ಕಾರಣವೂ ಇದೆ. ಮನಸ್ಸನ್ನು ನಿಗ್ರಹದಲ್ಲಿಟ್ಟು, ಮಹತ್ತರವಾದದ್ದನ್ನು ಸಾಧಿಸಲು ಇವು ಪೂರಕವಾಗಿರುತ್ತಿದ್ದವು. ಅಂಥ ಆಚಾರಗಳಿಗೆ ಕಾರಣ ಹುಡುಕುವ ಯತ್ನವಿದು...


ದೇವರು ನಿರಾಕಾರ. ಆತನನ್ನು ಯಾವ ರೂಪದಲ್ಲೂ ಹಿಡಿದಿಡಲು ಸಾಧ್ಯವಿಲ್ಲ. ನಾವು ಹೇಗೆ ಕಲ್ಪಿಸಿಕೊಳ್ಳುತ್ತೇವೋ, ಆ ಆಕಾರದಲ್ಲಿ ಆತನಿರುತ್ತಾನೆ ಎಂದು ನಮ್ಮ ಶ್ರುತಿ, ಸ್ಮತಿ, ಪುರಾಣಗಳು ಹೇಳುತ್ತವೆ. ಆದರೂ ನಾವು ಪ್ರತಿಯೊಬ್ಬ ದೇವರಿಗೂ ಒಂದೊಂದು ರೂಪ ನೀಡಿದ್ದೇವೆ. ಆ ರೂಪದಲ್ಲೇ ದೇವರ ಮೂರ್ತಿಗಳನ್ನು ಕೆತ್ತುತ್ತೇವೆ. ಅದನ್ನೇ ಪೂಜಿಸುತ್ತೇವೆ. ದೇವರ ಚಿತ್ರಗಳನ್ನೂ ನಿರ್ದಿಷ್ಟ ರೂಪದಲ್ಲೇ ರಚಿಸುತ್ತೇವೆ. ನಿರಾಕಾರನಾದ ದೇವರಿಗೆ ರೂಪ ಹೇಗೆ ಬಂತು?

ಸನ್ಯಾಸಿಗಳೇಕೆ ಕಾವಿ ವಸ್ತ್ರ ಧರಿಸುತ್ತಾರೆ?

Latest Videos

ಇದಕ್ಕಿರುವುದು ಮನಃಶ್ಶಾಸ್ತ್ರೀಯ ಕಾರಣ. ನಾವು ಕಣ್ಣಿನಿಂದ ಏನನ್ನು ನೋಡುತ್ತೇವೆಯೋ ಅದು ನಮ್ಮ ಯೋಚನೆಗಳನ್ನು ಪ್ರಭಾವಿಸುತ್ತದೆ. ನಾವು ನೋಡುವ ವಸ್ತುವಿಗೆ ಅನುಗುಣವಾಗಿ ನಮ್ಮ ಯೋಚನೆಗಳೂ ಬದಲಾಗುತ್ತವೆ. ಉದಾಹರಣೆಗೆ, ಮೋಡ ಎಂದು ಹೇಳಿದ ಮಾತ್ರಕ್ಕೆ ನಮಗೆ ಮೋಡದ ಕಲ್ಪನೆ ಬರುವುದಿಲ್ಲ. ಮೋಡವನ್ನು ಸಾಕ್ಷಾತ್ ನೋಡಿದರೆ ಅದರ ಬಗ್ಗೆ ಸ್ಪಷ್ಟ ಚಿತ್ರಣ ಮೂಡುತ್ತದೆ. ಅದೇ ರೀತಿ, ದೇವರು ಯಾರು ಎಂಬುದನ್ನು ಎಷ್ಟೇ ವಿವರಿಸಿದರೂ ಆತನನ್ನು ಮನಸ್ಸಿನಲ್ಲಿ ಕಲ್ಪಿಸಿಕೊಂಡು ಆರಾಧಿಸುವುದಕ್ಕೆ ಒಂದು ರೂಪ ಇದ್ದರೆ ಒಳ್ಳೆಯದು ಎಂಬ ಕಾರಣಕ್ಕೆ ದೇವರಿಗೆ ವಿವಿಧ ರೂಪಗಳನ್ನು ನೀಡಲಾಗಿದೆ. 

ತಾಯಿಯನ್ನು ಕಲ್ಪಿಸಿಕೊಂಡು ನಿನ್ನ ಕಷ್ಟ ಸುಖಗಳನ್ನು ಹೇಳಿಕೋ ಎಂದರೆ ಬಹಳ ಕಷ್ಟ. ಕೊನೆ ಪಕ್ಷ ಒಂದು ಗುಂಡು ಕಲ್ಲನ್ನಾದರೂ ಇಟ್ಟು ಅದುವೇ ದೇವರೆಂದು ಹೇಳಿದರೂ ಸಾಕು, ಮನುಷ್ಯ ಒಪ್ಪುತ್ತಾನೆ. ಹಾಗಾಗಿ ದೇವರ ಸಂಕೇತ ಅಗತ್ಯ. ಕ್ರೈಸ್ತ ಧರ್ಮದಲ್ಲಿಯೂ ಶಿಲುಬೆ ಸಂಕೇತ ಬಳಕೆಯಲ್ಲಿದೆ. ಮುಸ್ಲಿಮರೂ ಚಂದ್ರ ಮತ್ತು ನಕ್ಷತ್ರವನ್ನು ಬಳಸುವುದುಂಟು. ಯಹೂದಿಗಳು ಅಗ್ನಿಯನ್ನೇ ದೇವರು ಎನ್ನುವರು. ಪುರಾಣಗಳಲ್ಲಿ ಶಿಲ್ಪ ಶಾಸ್ತ್ರವು ಪ್ರವರ್ಧಮಾನಕ್ಕೆ ಬಂದು ಸುಂದರವಾದ ದೇವಾನುದೇವತೆಗಳ ಮೂರ್ತಿಗಳನ್ನು ರೂಪಿಸಿದರು. ಇದರಿಂದ ಆರಾಧನೆ ಸುಲಭವಾಯಿತು. ಏಕಾಗ್ರತೆಯನ್ನು ಕಳೆದುಕೊಳ್ಳದೆ ಆಧ್ಯಾತ್ಮಿಕ ಶಕ್ತಿಯನ್ನು ಗಳಿಸಿಕೊಳ್ಳುವುದಕ್ಕೆ ಇದೊಂದು ಮಾರ್ಗ. ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿರುವ ದೇವರ ಪೀಠದಲ್ಲಿ ಒಂದು ದೇವರ ಮೂರ್ತಿ ಇದ್ದರೆ ಅದರಲ್ಲಿ ನಮ್ಮ ಭಕ್ತಿಯನ್ನು ಸ್ಥಾಪಿಸಲು ಸಾಧ್ಯವಾಗುತ್ತದೆ. ಆದರೆ ಅಧ್ಯಾತ್ಮದ ಆಳಕ್ಕಿಳಿಯುವವರು ಆರಂಭದಲ್ಲಿಯೇ ಮೂರ್ತಿ ಪೂಜೆಯನ್ನು ತ್ಯಜಿಸುತ್ತಾರೆ.

click me!