ದೇವಸ್ಥಾನಗಳೇಕೆ ಎತ್ತರದ ಸ್ಥಳದಲ್ಲಿರುತ್ತವೆ?

By Web Desk  |  First Published Apr 20, 2019, 4:11 PM IST

ಬೆಂಗಳೂರಿನಂಥ ನಗರದಲ್ಲಿ ಕಂಡ ಕಂಡೆಲ್ಲ ದೇವಸ್ಥಾನಗಳಿರುತ್ತವೆ. ಎಲ್ಲಿ ದೇವಸ್ಥಾನವಿದ್ದರೂ ಜನರು ತುಂಬಿರುತ್ತಾರೆ. ಆದರೆ, ದೇವಸ್ಥಾನವನ್ನೂ ಕಟ್ಟಲೂ ರೀತಿ ರಿವಾಜುಗಳಿವೆ. ಅಷ್ಟಕ್ಕೂ ಎತ್ತರದ ಸ್ಥಳವನ್ನೇ ದೇವಸ್ಥಾನಗಳಿಗೆ ಆರಿಸಿಕೊಳ್ಳುವುದೇಕೆ?


ಈಗ ದೇವಸ್ಥಾನಗಳನ್ನು ಎಲ್ಲಿ ಬೇಕೆಂದರಲ್ಲಿ ಕಟ್ಟುತ್ತಾರೆ. ನಗರಗಳಲ್ಲಂತೂ ಫುಟ್‌ಪಾತ್ ಮೇಲೂ ದೇವಸ್ಥಾನಗಳಿರುತ್ತವೆ. ಆದರೆ, ಪ್ರಾಚೀನ ದೇವಸ್ಥಾನಗಳನ್ನು ನೋಡಿ. ಸಾಮಾನ್ಯವಾಗಿ ಅವು ಬೆಟ್ಟದ ಮೇಲೆ ಅಥವಾ ಎತ್ತರದ ಜಾಗದಲ್ಲಿಯೇ ನಿರ್ಮಾಣವಾಗಿರುತ್ತವೆ. ಇದರ ಹಿಂದೆ ಹಲವಾರು ಕಾರಣಗಳಿವೆ.

  • ದೇವರ ದರ್ಶನಕ್ಕೆ ಬರುವ ಭಕ್ತರು ಕಷ್ಟಪಟ್ಟು ಬೆಟ್ಟ ಹತ್ತಿ ಬರಲಿ ಎಂಬುದು ಮೊದಲ ಕಾರಣ. ಆಗ ಜನರಿಗೆ ದೇವರನ್ನು ತಲುಪುವುದು ಸುಲಭವಲ್ಲ ಎಂಬ ಭಾವನೆ ಮೂಡುತ್ತದೆ. ಬೆವರು ಹರಿಸಿ ಎತ್ತರದ ಜಾಗಕ್ಕೆ ಹೋಗುವುದರಿಂದ ದೇಹಕ್ಕೆ ವ್ಯಾಯಾಮವಾಗುತ್ತದೆ ಮತ್ತು ಅಲ್ಲಿಗೆ ಹೋದ ಮೇಲೆ ಶುದ್ಧ ಗಾಳಿ ಸಿಗುತ್ತದೆ. ದೇವಸ್ಥಾನದ ಒಳಗೆ ಕುಳಿತಾಗ ಧ್ಯಾನ ಮಾಡಲು ಏಕಾಗ್ರತೆ ಬರುತ್ತದೆ. ದೇವರನ್ನು ಒಲಿಸಿಕೊಳ್ಳಲು ಏಕೈಕ ದಾರಿಯೆಂದರೆ ಶುದ್ಧ ಮನಸ್ಸಿನ ಧ್ಯಾನ. ಲೌಕಿಕವಾದ ಎಲ್ಲ ವ್ಯವಹಾರಗಳಿಂದ ದೂರವಾಗಿ ಧ್ಯಾನ ಮಾಡಲು ಎತ್ತರದ ಸ್ಥಳ ಪ್ರಶಸ್ತವಲ್ಲವೇ?
  • ಹಳೆಯ ಕಾಲದ ದೇವಸ್ಥಾನಗಳಲ್ಲಿ ಬಹಳ ಸಂಪತ್ತಿರುತ್ತಿತ್ತು. ಅದು ಶತ್ರುಗಳನ್ನೂ ಆಹ್ವಾನಿಸುತ್ತಿತ್ತು. ಆದರೆ, ಎತ್ತರದ ಸ್ಥಳದಲ್ಲಿರುವ ಕಟ್ಟಡಕ್ಕೆ ಶತ್ರು ಭೀತಿ ಕಡಿಮೆ. ಒಮ್ಮೆ ಶತ್ರುಗಳು ದಾಳಿ ಮಾಡಿದರೂ ಎತ್ತರದಲ್ಲಿ ದೇವಸ್ಥಾನವನ್ನು ಕಾಯುವವರಿಗೆ ಅಲ್ಲಿನಿಂದಲೇ ಶತ್ರುಗಳನ್ನು ಹೊಡೆಯುವುದು ಸುಲಭ. ತಗ್ಗಿನ ಸ್ಥಳದಲ್ಲಿರುವುದು ಯಾವಾಗಲೂ ಅಪಾಯಕಾರಿ. ಆದ್ದರಿಂದಲೇ ಹಳೆಯ ಕಾಲದ ಕೋಟೆಗಳೂ ಎತ್ತರದ ಜಾಗದಲ್ಲಿಯೇ ಇರುತ್ತಿದ್ದವು.
  • ದೇವಸ್ಥಾನಗಳು ಹಿಂದಿನ ಕಾಲದಲ್ಲಿ ಕೇವಲ ದೇವರ ಸ್ಥಳ ಮಾತ್ರ ಆಗಿರಲಿಲ್ಲ. ಪ್ರವಾಹ, ಮುಳುಗಡೆಯಂಥ ಆಪತ್ತಿನ ಸಂದರ್ಭದಲ್ಲಿಯೂ ಅವರು ಜನರಿಗೆ ಆಶ್ರಯ ತಾಣಗಳೂ ಆಗಿರುತ್ತಿದ್ದವು. ಬೆಟ್ಟದ ಮೇಲಿರುವ ದೇವಸ್ಥಾನ ಮುಳುಗುವ ಸಾಧ್ಯತೆಯೇ ಇಲ್ಲ.
  • ಇದೆಲ್ಲಕ್ಕಿಂತ ಮುಖ್ಯವಾಗಿ ದೇವರ ಜಾಗವೇ ಎತ್ತರದ್ದಲ್ಲವೇ? ಹಾಗಾಗಿ ಅವರು ಬೆಟ್ಟದ ಮೇಲೇ ಇರಬೇಕು. 
  • ಮಹಾಬಲ ಸೀತಾಳಬಾವಿ

Tap to resize

Latest Videos

click me!