ಸಪ್ತಮಾತೆಯರು ಮನ ಸೋತ ಹಾಸನಾಂಬೆ ಕ್ಷೇತ್ರ ಮಹಿಮೆ!

By Web Desk  |  First Published Oct 17, 2019, 12:10 PM IST

ಹಾಸನ ನಗರದಲ್ಲಿ ಇರುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದರ್ಶನ ಈ ವರ್ಷ ಸಂಪ್ರದಾಯದಂತೆ 17  ದಿನಗಳು ಮಾತ್ರ. ಇದೇ ಅಕ್ಟೋಬರ್ 29ರಿಂದ ಅಕ್ಟೋಬರ್ ೨೯ರವರೆಗೆ ಹಾಸನಾಂಬೆ ದರ್ಶನೋತ್ಸವ ನಡೆಯಲಿದೆ. ಜಿಲ್ಲಾಡಳಿತ, ನಗರಸಭೆ ಭಕ್ತರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ.


ದಯಾಶಂಕರ ಮೈಲಿ

ಹಾಸನಾಂಬೆ ದೇವಾಲಯದ ಬಾಗಿಲು ತೆರೆಯುವುದಕ್ಕೂ ಮೊದಲು ಸಾಂಪ್ರದಾಯಿಕ ವಿಧಿ ವಿಧಾನ ಹಾಗೂ ಅರಸು ವಂಶಸ್ಥರು ಬನ್ನಿ ಕಡಿಯುತ್ತಾರೆ. ನಂತರ ಬಾಗಿಲು ತೆರೆಯಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಮುಂಭಾಗ ಕಳೆದ ವರ್ಷ ಹಚ್ಚಿದ್ದ ದೀಪ ಹಾಗೆಯೇ ಪ್ರಜ್ವಲಿಸುತ್ತಲೇ ಇರುತ್ತದೆ. ಹೂ ಮತ್ತು ಎಡೆಯು ಬಾಡದಿರುವುದು ಭಕ್ತರಲ್ಲಿ ಅಪಾರ ನಂಬಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಹಚ್ಚಿದಂತಹ ದೀಪ ಆರಿ ಹೋದರೆ, ಹೂ ಬಾಡಿದರೆ ಮತ್ತು ಎಡೆಯಲ್ಲಿ ಸ್ವಲ್ಪ ಏರುಪೇರಾದರೂ ಏನಾದರೂ ತೊಂದರೆಯಾಗಲಿದೆ ಎಂಬ ನಂಬಿಕೆ ಭಕ್ತರದ್ದು.

Tap to resize

Latest Videos

undefined

ದೇವಿಯ ದರ್ಶನ: 2018ರಲ್ಲಿ 9 ದಿನಗಳವರೆಗೆ ದೇವಾಲಯದ ಬಾಗಿಲನ್ನು ತೆರೆದಿದ್ದರೆ, 20117 ರಲ್ಲಿ 9ದಿನ, 2016ರಲ್ಲಿ 13 ದಿನ, 2015ರಲ್ಲಿ 15 ದಿನ, 2013ರಲ್ಲಿ 13 ದಿನ, 2012ರಲ್ಲಿ 15ದಿನ,
2011ರಲ್ಲಿ 9 ದಿನ ದರ್ಶನವಿತ್ತು. ಈ ವರ್ಷ 13 ದಿನಗಳ ಕಾಲ ಭಕ್ತರು ದರ್ಶನ ಪಡೆಯಬಹುದು.

ಹಾಸನಾಂಬಾ ದೇವಿಯ ಇತಿಹಾಸ: ಸುಮಾರು 12ನೇ ಶತಮಾನದಲ್ಲಿ ಹಾಸನದ ಚನ್ನಪಟ್ಟಣ ಪಾಳೆಗಾರನಾದ ಶ್ರೀ ಕೃಷ್ಣ ನಾಯ್ಕರಿಗೆ ಕನಸಿನಲ್ಲಿ ಹಾಸನಾಂಬ ದೇವಿಯು ನಾನು ಇಂತಹ
ಜಾಗದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದ್ದೇನೆ, ನನಗೊಂದು ಗುಡಿಯನ್ನು ಕಟ್ಟಿಸು ಎಂದು ಹೇಳಿ ಮಾಯವಾದಳು. ನಂತರ ಪಾಳೆಗಾರನಾದ ಕೃಷ್ಣಪ್ಪ  ನಾಯ್ಕರು ಹುತ್ತದರೂಪದಲ್ಲಿದ್ದ ದೇವಿಯ ಗುಡಿಯನ್ನು ಕಟ್ಟಿಸಿದರು.

ಭಕ್ತರು ಬರುವ ನಿರೀಕ್ಷೆ: ಈ ವರ್ಷ ದೇವಿ ದರ್ಶನ ಪಡೆಯಲು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ಕುಡಿಯುವ ನೀರು,
ವಾಹನಗಳ ನಿಲುಗಡೆ ಮತ್ತಿತರೆ ಮೂಲಭೂತ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.

ಒಗ್ಗರಣೆ ಹಾಕುವಂತಿಲ್ಲ: ದೇಗುಲ ಬಾಗಿಲು ತೆರೆದಾಗ ದೇವಿ ಕಣ್ಣುಬಿಟ್ಟ ರೀತಿಯಲ್ಲೇ ಗೋಚರಿಸುವುದರಿಂದ ಯಾರೂ ಒಗ್ಗರಣೆ ಹಾಕಲ್ಲ. ಸಾಂಬಾರು ಪದಾರ್ಥ ಕರಿಯುವುದಿಲ್ಲ.
ಮೊದಲ ದಿನ ಜಿಲ್ಲಾ ಖಜಾನೆಯಿಂದ ತಂದಿರುವ ಆಭರಣಗಳಿಂದ ದೇವಿಗೆ ಅಲಂಕಾರ ಮಾಡಲಾಗುತ್ತದೆ.

ಕ್ಷೇತ್ರ ಮಹಿಮೆ: ಹಾಸನಕ್ಕೆ ಹಿಂದೆ ಸಿಂಹಾಸನಪುರಿ ಎಂದು ಹೆಸರಿತ್ತು. ದೇವಿಯರು ನೆಲೆಸಿದ ನಂತರ ಹಾಸನ ಎಂಬ ಹೆಸರು ಬಂದಿತು. ಇಲ್ಲಿ ಪ್ರತೀ ದಿನ ಭಕ್ತರಿಗೆ ದೇವಿಯರ ದರ್ಶನ
ಭಾಗ್ಯ ಇರುವುದಿಲ್ಲ. ವರ್ಷಕ್ಕೆ ಕೇವಲ ಹತ್ತರಿಂದ ಹನ್ನೆರಡು ದಿನ ಮಾತ್ರ ದೇವಿಯರ ದರ್ಶನದ ಲಾಭವಾಗುತ್ತದೆ. ಆಶ್ವಯುಜ ಮಾಸದ ಹುಣ್ಣಿಮೆ ಕಳೆದ ನಂತರ ಬರುವಂತಹ ಗುರುವಾರದಂದು ಬಾಗಿಲನ್ನು(ವರ್ಷಕ್ಕೊಮ್ಮೆ) ತೆರೆಯಲಾಗುತ್ತದೆ ಮತ್ತು ಬಲಿಪಾಡ್ಯದ ಮೂರನೇ ದಿನ ಬೆಳಗ್ಗೆ ದೇವಸ್ಥಾನದ ಬಾಗಿಲನ್ನು ಮುಚ್ಚುತ್ತಾರೆ.

ದೇವಸ್ಥಾನದ ವೈಶಿಷ್ಟ್ಯ: ದೇವಸ್ಥಾನದ ಬಾಗಿಲನ್ನು ಮುಚ್ಚುವ ದಿನ ದೇವಿಯರಿಗೆ ಬಳೆ, ಅರಶಿನ, ಕುಂಕುಮ, ಹೂವು ಮುಂತಾದ ಮಂಗಳದ್ರವ್ಯಗಳನ್ನು ಅರ್ಪಿಸಿ ನಂದಾದೀಪವನ್ನು  ಉರಿಸಿಡುತ್ತಾರೆ. ಮರು ವರ್ಷ ದೇಗುಲದ ಬಾಗಿಲು ತೆರೆಯುವವರೆಗೆ ಆ ಹೂವು ಬಾಡದೆ ನಂದಾದೀಪ ನಂದದೇ ಹಾಗೆಯೇ ಉರಿಯುತ್ತಿರುತ್ತದೆ. ನಂದಾದೀಪ ಆರಿ, ಹೂವು  ಬಾಡಿದ್ದಲ್ಲಿ ಆ ವರ್ಷ ದೇಶಕ್ಕೆ ಆಪತ್ತು ಸಂಭವಿಸುವ ಸೂಚನೆಯಾಗಿರುತ್ತದೆ. ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಹತ್ಯೆ ಸಂದರ್ಭ ಈ ಆಕಸ್ಮಿಕ ಸಂಭವಿಸಿತ್ತು. ಮನೆಯಲ್ಲಿ ಮಡಿಮೈಲಿಗೆ ಕಾರಣ ಮನೆಯವರಿಗೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಈ ಊರಿನ ಮನೆಯಲ್ಲಿ ಈ ದೇವಿ ಭಾವಚಿತ್ರ ಈಗಲೂ ಇಟ್ಟುಕೊಳ್ಳುವುದಿಲ್ಲ.

ದೇವಿಕೆರೆಯ ವೈಶಿಷ್ಟ್ಯ: ದೇವಸ್ಥಾನದಿಂದ 100 ಮೀಟರ್ ದೂರದಲ್ಲಿ ಇರುವ ದೇವಿಗೆರೆಯಲ್ಲಿ ಮೂರು ದೇವಿಯರಿದ್ದಾರೆ. ಈ ದೇವಿಯರನ್ನು ಭೇಟಿಯಾಗಲು ದೇಗುಲದಿಂದ ಅಕ್ಕಂದಿರು ಕೆರೆಗೆ ಬರುತ್ತಾರೆ. ಅಲ್ಲಿ ಸ್ನಾನ ಮಾಡುತ್ತಾರೆ. ದೇಗುಲದಲ್ಲಿ ಅಭಿಷೇಕ ಮಾಡಿದ ನೀರು ಈ ಕೆರೆಯಲ್ಲಿ ಬಂದು ಬೀಳುತ್ತದೆ. ಒಬ್ಬ ಹುಡುಗಿಗೆ ಅತ್ತೆ ಕಷ್ಟ ಕೊಡುತ್ತಿದ್ದಳು. ಆ ಸೊಸೆ ಪ್ರತೀ ನಿತ್ಯ ದೇವಸ್ಥಾನಕ್ಕೆ ಬರುತ್ತಿದ್ದಳು. ದೇವತೆಯರು ಅವಳನ್ನು ಮಾತನಾಡಿಸುತ್ತಿದ್ದರು ಮತ್ತು ಈ ವಿಷಯ ಯಾರ ಬಳಿಯೂ ಹೇಳಬಾರದೆಂದು ಹೇಳಿದ್ದರು. ಒಂದು ದಿನ ಸೊಸೆ ದೇಗುಲಕ್ಕೆ ಹೊರಟಾಗ, ಅತ್ತೆ ಅವಳನ್ನು ಹಿಂಬಾಲಿಸಿ ಬಂದು ನೋಡಿದಾಗ ಅಮ್ಮನವರ ಮುಂದೆ ನಿಂತಿದ್ದ ಸೊಸೆಯನ್ನು ಕಂಡು ಸಿಟ್ಟಾಗಿ  ತಲೆ ಮೇಲೆ ಕುಟ್ಟಿದಾಗ ಸೊಸೆಯು ‘ಅಮ್ಮ ಹಾಸನಾಂಬೆ’ ಎಂದು ಕೂಗಿದಾಗ ದೇವಿ ಭಕ್ತಿಗೆ ಮೆಚ್ಚಿ ನನ್ನ ಸನ್ನಿಧಿಯಲ್ಲೇ ಯಾವಾಗಲೂ ಕಾಣುವಂತಿರು ಎಂದು ಹರಸಿದ್ದರಿಂದ ಸೊಸೆ  ಕಲ್ಲಾಗಿ ಬಿಟ್ಟಳು. ಆ ಕಲ್ಲು ಈಗಲೂ ಕಾಣಿಸುತ್ತದೆ. ಆ ಕಲ್ಲು ಪ್ರತೀ ವರ್ಷ ಬತ್ತದ ಕಾಳಿನ ಮೊನೆಯಷ್ಟು ಚಲಿಸುತ್ತದೆ. ಅದು ಸಂಪೂರ್ಣ ಚಲಿಸಿ ದೇವಿ ಪಾದ ತಲುಪಿದ ದಿನ ಕಲಿಯುಗದ ಅಂತ್ಯವೆಂದು ನಂಬಿಕೆ ಇದೆ.

ದಸರಾ ಮಾದರಿ: ಹಾಸನ ನಗರದ ಪ್ರಮುಖ ರಸ್ತೆಗಳು ಮತ್ತು ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿದ್ದು, ಸ್ಥಳೀಯ ಸಂಘಟನೆಗಳಮುಖಂಡರು, ಜನಪ್ರತಿನಿಧಿಗಳು, ವರ್ತಕರು ಹೀಗೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈಸೂರು ದಸರಾ ಮಾದರಿಯಲ್ಲಿ ಹಾಸನಾಂಬೆ ಉತ್ಸವವನ್ನು ಆಚರಿಸಲು  ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪುರಾಣ ಕಥೆ: ಸಪ್ತಮಾತೆಯರು ಕಾಶಿಯಿಂದ ದಕ್ಷಿಣದ ಕಡೆಗೆ ಆಕಾಶ ಮಾರ್ಗವಾಗಿ ಪ್ರಯಾಣ ಮಾಡುತ್ತಿದ್ದಾಗ ಹಾಸನದ ಮನೋಹರ  ಸೌಂದರ್ಯಕ್ಕೆ ಮನಸೋತು ಇಲ್ಲಿಯೇ ನೆಲೆನಿಂತರು. ಆ ಸಪ್ತಮಾತೆಯರಾದ ಬ್ರಾಹ್ಮದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವೀ, ವಹಾಹಿಣಿ, ಇಂದ್ರಾಣಿ ಮತ್ತು  ಚಾಮುಂಡಿ ಇವರಲ್ಲಿ ವೈಷ್ಣವಿ, ಕೌಮಾರಿ, ಮಾಹೇಶ್ವರೀ ದೇವಿಯರು ದೇವಸ್ಥಾನದಲ್ಲಿ ಹುತ್ತದ ರೂಪದಲ್ಲಿ ಹಾಗೂ ವಹಾಹಿಣಿ,  ಇಂದ್ರಾಣಿ, ಚಾಮುಂಡಿ ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ (ಕೆರೆ) ನೆಲೆಸಿರುವರು. ಬ್ರಾಹ್ಮದೇವಿಯು  ಹಾಸನದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕೆಂಚಮ್ಮ ಹೊಸಕೋಟೆಯಲ್ಲಿ ಕೆಂಚಾಂಬೆಯ ಹೆಸರಿನಲ್ಲಿ ನೆಲೆಸಿದ್ದಾಳೆ.

 

 

 

click me!