ನವರಾತ್ರಿಯಲ್ಲಿ ಪ್ರತಿದಿನ ದುರ್ಗಾಮಾತೆಯ ಒಂದೊಂದು ಅವತಾರವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಒಂಭತ್ತು ಅವತಾರಗಳನ್ನು ಹೊಂದಿರುವ ದುರ್ಗಾಮಾತೆಯ ಆಯಾ ಅವತಾರಕ್ಕೆ ನಮ್ಮ ದೇಶದ ಬೇರೆ ಬೇರೆ ಕಡೆ ಪ್ರಸಿದ್ಧ ದೇವಾಲಯಗಳಿವೆ. ದುರ್ಗೆಯ ಒಂಭತ್ತೂ ಅವತಾರಗಳಿಗೆ ಪ್ರತ್ಯೇಕ ದೇಗುಲಗಳನ್ನು ಹೊಂದಿರುವ ಏಕೈಕ ಸ್ಥಳವೆಂದರೆ ಉತ್ತರ ಪ್ರದೇಶದ ವಾರಾಣಸಿ. ಅಲ್ಲಿರುವ ಹಾಗೂ ಇತರೆಡೆ ಇರುವ ನವದುರ್ಗಿಯ ಪ್ರತ್ಯೇಕ ಅವತಾರಗಳಿಗೆ ಮೀಸಲಾದ ಪ್ರಸಿದ್ಧ ದೇಗುಲಗಳ ಬಗ್ಗೆ ಇಲ್ಲಿ ತಿಳಿಯಿರಿ.
ನವರಾತ್ರಿಯಲ್ಲಿ ಪ್ರತಿದಿನ ದುರ್ಗಾಮಾತೆಯ ಒಂದೊಂದು ಅವತಾರವನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಒಂಭತ್ತು ಅವತಾರಗಳನ್ನು ಹೊಂದಿರುವ ದುರ್ಗಾಮಾತೆಯ ಆಯಾ ಅವತಾರಕ್ಕೆ ನಮ್ಮ ದೇಶದ ಬೇರೆ ಬೇರೆ ಕಡೆ ಪ್ರಸಿದ್ಧ ದೇವಾಲಯಗಳಿವೆ. ದುರ್ಗೆಯ ಒಂಭತ್ತೂ ಅವತಾರಗಳಿಗೆ ಪ್ರತ್ಯೇಕ ದೇಗುಲಗಳನ್ನು ಹೊಂದಿರುವ ಏಕೈಕ ಸ್ಥಳವೆಂದರೆ ಉತ್ತರ ಪ್ರದೇಶದ ವಾರಾಣಸಿ. ಅಲ್ಲಿರುವ ಹಾಗೂ ಇತರೆಡೆ ಇರುವ ನವದುರ್ಗಿಯ ಪ್ರತ್ಯೇಕ ಅವತಾರಗಳಿಗೆ ಮೀಸಲಾದ ಪ್ರಸಿದ್ಧ ದೇಗುಲಗಳ ಬಗ್ಗೆ ಇಲ್ಲಿ ತಿಳಿಯಿರಿ.
1ನೇ ದಿನದ ಪೂಜೆ
ಶೈಲಪುತ್ರಿ
ಶೈಲಪುತ್ರಿಯೆಂದರೆ ಪರ್ವತನ ಪುತ್ರಿ ಪಾರ್ವತಿ. ಪರ್ವತರಾಜನ ಮಗಳಾದ ಈಕೆಗೆ ಸತಿ, ಭವಾನಿ, ಹೇಮಾವತಿ ಎಂದೂ ಹೆಸರಿದೆ. ಇವಳು ಪ್ರಕೃತಿಯ ಮಗಳು. ಎರಡು ಹಸ್ತಗಳನ್ನು ಹೊಂದಿರುವ ಈಕೆ ಒಂದು ಕೈಲಿ ತ್ರಿಶೂಲವನ್ನೂ, ಇನ್ನೊಂದು ಕೈಲಿ ಕಮಲವನ್ನೂ ಹಿಡಿದಿರುತ್ತಾಳೆ. ನಂದಿ ಈಕೆಯ ವಾಹನ. ಹಣೆಯಲ್ಲಿ ಚಂದ್ರನಿದ್ದಾನೆ. ಶೈಲಪುತ್ರಿಯ ಪ್ರಸಿದ್ಧ ದೇವಾಲಯಗಳೆಂದರೆ ವಾರಾಣಸಿಯ ಮರ್ಹಿಯಾ ಘಾಟ್‌ನಲ್ಲಿರುವ ಮಾ ಶೈಲಪುತ್ರಿ ದೇವಾಲಯ ಹಾಗೂ ಮುಂಬೈನ ವಾಶಿ ಬಳಿಯಿರುವ ಹೆಡಾವ್ಡೆ ಮಹಾಲಕ್ಷ್ಮಿ ದೇವಸ್ಥಾನ.
ಮಂತ್ರ: ಓಂ ದೇವೀ ಶೈಲಪುತ್ರ್ಯೈ ನಮಃ
ಫೋಟೋ - ಹೆಡಾವ್ಡೆ ಮಹಾಲಕ್ಷ್ಮೇ ದೇವಸ್ಥಾನ, ಮುಂಬೈ, ಮಹಾರಾಷ್ಟ್ರ
2ನೇ ದಿನದ ಪೂಜೆ
ಬ್ರಹ್ಮಚಾರಿಣಿ
ಈಕೆ ಪಾರ್ವತಿಯು ಶಿವನ ಪತ್ನಿಯಾಗುವುದಕ್ಕಿಂತ ಮೊದಲಿನ ರೂಪ. ಪ್ರಜಾಪತಿ ದಕ್ಷನ ಮಗಳು. ಬ್ರಹ್ಮಚರ್ಯ ಮತ್ತು ತಪಸ್ಸಿಗೆ ಹೆಸರಾದವಳು. ಬರಿಗಾಲಿನಲ್ಲಿ ನಡೆಯುವ ಈಕೆ ಕೈಯಲ್ಲಿ ಜಪದ ಮಾಲೆ ಹಾಗೂ ಕಮಂಡಲು ಹಿಡಿದಿರುತ್ತಾಳೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿ ಬ್ರಹ್ಮಚಾರಿಣಿಯ ಪ್ರಸಿದ್ಧ ದೇವಾಲಯವಿದೆ.
ಮಂತ್ರ: ಓಂ ದೇವೀ ಬ್ರಹ್ಮಚಾರಿಣ್ಯೈ ನಮಃ
ಫೋಟೋ - ಬ್ರಹ್ಮಚಾರಿಣಿ ದೇವಿ ದೇವಸ್ಥಾನ, ವಾರಾಣಸಿ, ಉತ್ತರ ಪ್ರದೇಶ
3ನೇ ದಿನದ ಪೂಜೆ
ಚಂದ್ರಘಂಟಾ
ದುರ್ಗಾಮಾತೆಯ ವಿವಾಹಿತ ರೂಪ ಚಂದ್ರಘಂಟಾ. ಶಿವನನ್ನು ಮದುವೆಯಾದ ಮೇಲೆ ಈಕೆ ತನ್ನ ಹಣೆಯಲ್ಲಿ ಗಂಟೆಯಾಕಾರದ ಅರ್ಧ ಚಂದ್ರನನ್ನು ಧರಿಸಿದಳು. ದುಷ್ಟಶಕ್ತಿಗಳನ್ನು ಸಂಹರಿಸಲು ಸಿದ್ಧಳಾಗಿ ನಿಂತಿರುವ ರೂಪ ಈಕೆಯದು. ಸಿಂಹದ ಮೇಲೆ ಕುಳಿತ ಈಕೆಗೆ ಹತ್ತು ಕೈಗಳಿವೆ. ಒಂದೊಂದು ಕೈಯಲ್ಲೂ ಒಂದೊಂದು ಆಯುಧ ಹಿಡಿದಿದ್ದಾಳೆ.
ಮಂತ್ರ: ಓಂ ದೇವೀ ಚಂದ್ರಘಂಟಾಯೈ ನಮಃ
ಫೋಟೋ - ಚಂದ್ರಘಂಟಾ ದೇವಿ ದೇವಸ್ಥಾನ, ವಾರಾಣಸಿ, ಉತ್ತರ ಪ್ರದೇಶ
4ನೇ ದಿನದ ಪೂಜೆ
ಕೂಷ್ಮಾಂಡಾ
ಒಂದು ಸಮಯದಲ್ಲಿ ದುರ್ಗಾಮಾತೆ ಸೂರ್ಯನ ಒಳಗೆ ವಾಸಿಸಲು ಆರಂಭಿಸುತ್ತಾಳೆ. ಆಗ ಸೂರ್ಯನಿಂದ ವಿಶ್ವಕ್ಕೆ ಶಕ್ತಿ ಬಿಡುಗಡೆಯಾಗುತ್ತದೆ. ಸೂರ್ಯನೊಳಗೇ ನೆಲೆಸುವಷ್ಟುಪ್ರಖರ ದೇವತೆಯೀಕೆ. ಎಂಟು ಕೈಗಳಿರುವ, ಸಿಂಹದ ಮೇಲೆ ಸಂಚರಿಸುವ ಈಕೆ ತನ್ನ ಭಕ್ತರಿಗೆ ಸಿದ್ಧಿ ಹಾಗೂ ಸಂಪತ್ತನ್ನು ಕರುಣಿಸುತ್ತಾಳೆಂಬ ನಂಬಿಕೆಯಿದೆ. ಕೂಷ್ಮಾಂಡಾ ದೇವಿಯ ಪ್ರಸಿದ್ಧ ದೇವಸ್ಥಾನ ಉತ್ತರ ಪ್ರದೇಶದ ಕಾನ್ಪುರ ನಗರ ಜಿಲ್ಲೆಯ ಘಟಾಂಪುರದಲ್ಲಿದೆ.
ಮಂತ್ರ: ಓಂ ದೇವೀ ಕೂಷ್ಮಾಂಡಾಯೈ ನಮಃ
ಫೋಟೋ - ಕೂಷ್ಮಾಂಡಾ ದೇವಿ ದೇವಸ್ಥಾನ, ಘಟಾಂಪುರ, ಉತ್ತರ ಪ್ರದೇಶ
5ನೇ ದಿನದ ಪೂಜೆ
ಸ್ಕಂದಮಾತಾ
ಯುದ್ಧದೇವತೆಯಾದ ಸ್ಕಂದನ (ಕಾರ್ತಿಕೇಯ) ತಾಯಿ ಇವಳು. ಅಗ್ನಿಯ ದೇವತೆ ಎಂದೂ ಈಕೆಗೆ ಹೇಳುತ್ತಾರೆ. ಮಡಿಲಿನಲ್ಲಿ ಸ್ಕಂದನನ್ನು ಹೊತ್ತು ಈಕೆ ಸಿಂಹದ ಮೇಲೆ ಕುಳಿತು ಯುದ್ಧಕ್ಕೆ ಹೊರಟ ಸ್ಥಿತಿಯಲ್ಲಿ ತೋರುತ್ತಾಳೆ. ನಾಲ್ಕು ಕೈ ಹೊಂದಿರುವ ಈಕೆ ಒಂದು ಕೈಲಿ ಮಗು, ಇನ್ನೊಂದು ಕೈಲಿ ಅಭಯಮುದ್ರೆ, ಮತ್ತೆರಡು ಕೈಗಳಲ್ಲಿ ಆಯುಧಗಳನ್ನು ಹೊಂದಿದ್ದಾಳೆ.
ಮಂತ್ರ: ಓಂ ದೇವೀ ಸ್ಕಂದಮಾತಾಯೈ ನಮಃ
ಫೋಟೋ - ಸ್ಕಂದಮಾತಾ ದೇವಿ, ವಾರಾಣಸಿ, ಉತ್ತರ ಪ್ರದೇಶ
6ನೇ ದಿನದ ಪೂಜೆ
ಕಾತ್ಯಾಯನಿ
ಮಹಿಷಾಸುರ ರಾಕ್ಷಸನನ್ನು ಕೊಲ್ಲಲು ಕಾತ್ಯಾಯನ ಎಂಬ ಸನ್ಯಾಸಿಗೆ ಹುಟ್ಟಿದ ಮಗಳು ಈಕೆ. ಸಿಟ್ಟು, ದ್ವೇಷ ಹಾಗೂ ಹಟಕ್ಕೆ ಹೆಸರುವಾಸಿ. ಆದರೆ ಸಂತೋಷಗೊಂಡರೆ ಎಲ್ಲರನ್ನೂ ಸಲಹುತ್ತಾಳೆ. ಸಿಂಹದ ಮೇಲೆ ಕುಳಿತಿರುವ ಈಕೆಗೆ ನಾಲ್ಕು ಕೈಗಳು. ಈಕೆಗೆ ಚಾಮುಂಡೇಶ್ವರಿ, ಮಹಿಷಾಸುರಮರ್ದಿನಿ ಎಂದೂ ಹೆಸರಿದೆ. ಮೈಸೂರಿನಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ ದೇಶದಲ್ಲೇ ಪ್ರಸಿದ್ಧಿ ಪಡೆದಿದೆ.
ಮಂತ್ರ: ಓಂ ದೇವೀ ಕಾತ್ಯಾಯನ್ಯೈ ನಮಃ
ಫೋಟೋ: ಚಾಮುಂಡೇಶ್ವರಿ ದೇವಸ್ಥಾನ, ಮೈಸೂರು, ಕರ್ನಾಟಕ
7ನೇ ದಿನದ ಪೂಜೆ
ಕಾಲರಾತ್ರಿ
ದುರ್ಗಾಮಾತೆಯ ಅತ್ಯಂತ ರೌದ್ರಾವತಾರ ಇದು. ಶುಂಭ, ನಿಶುಂಭರೆಂಬ ರಾಕ್ಷಸರನ್ನು ಸಂಹರಿಸಲು ದುರ್ಗೆ ಈ ಅವತಾರ ಎತ್ತಿದ್ದಳು. ಕಾಲರಾತ್ರಿ ಅಂದರೆ ಸಾವಿನ ರಾತ್ರಿ. ಈಕೆಯು ಸಮಯದ ಸಂಹತ್ರ್ರೆಯೂ ಹೌದು. ನೋಡಲು ಕಡುಗಪ್ಪಾಗಿರುವ ಈಕೆ ಕತ್ತೆಯ ಮೇಲೆ ಸಂಚರಿಸುತ್ತಾಳೆ. ನಾಲ್ಕೈ ಕೈಗಳನ್ನು ಹೊಂದಿದ್ದು, ಎರಡು ಕೈಗಳಲ್ಲಿ ಖಡ್ಗ ಹಾಗೂ ಕಬ್ಬಿಣದ ಕೊಕ್ಕೆಯನ್ನು ಹಿಡಿದಿದ್ದಾಳೆ.
ಮಂತ್ರ: ಓಂ ದೇವೀ ಕಾಲರಾತ್ರ್ಯೈ ನಮಃ
ಫೋಟೋ - ಕಾಲರಾತ್ರಿ ದೇವಿ ದೇವಸ್ಥಾನ, ವಾರಾಣಸಿ, ಉತ್ತರ ಪ್ರದೇಶ
8ನೇ ದಿನದ ಪೂಜೆ
ಮಹಾಗೌರಿ
ಪಾವಿತ್ರ್ಯ ಹಾಗೂ ಸ್ವಚ್ಛತೆಯ ದೇವತೆಯೀಕೆ. ಶೈಲಪುತ್ರಿಯು 16ನೇ ವಯಸ್ಸಿನವಳಾಗಿದ್ದಾಗ ಅತ್ಯಂತ ಸುಂದರಿಯಾಗಿದ್ದಳು. ಆಗ ಈಕೆಯನ್ನು ಮಹಾಗೌರಿ ಎಂದು ಕರೆಯಲಾಗುತ್ತಿತ್ತು. ಎತ್ತಿನ ಮೇಲೆ ಸಂಚರಿಸುವ ಈಕೆ ನಾಲ್ಕು ಕೈ ಹೊಂದಿದ್ದಾಳೆ. ಒಂದು ಕೈಲಿ ತ್ರಿಶೂಲ ಹಾಗೂ ಇನ್ನೊಂದು ಕೈಲಿ ಡಮರುಗ ಹಿಡಿದಿದ್ದಾಳೆ. ಎಲ್ಲರನ್ನೂ ಕ್ಷಮಿಸುವುದಕ್ಕೆ ಹಾಗೂ ಪಾಪಿಗಳನ್ನು ಪರಿಶುದ್ಧಗೊಳಿಸುವುದಕ್ಕೆ ಈಕೆ ಪ್ರಸಿದ್ಧಳು.
ಮಂತ್ರ: ಓಂ ದೇವೀ ಮಹಾಗೌರ್ಯೈ ನಮಃ
ಫೋಟೋ - ಮಹಾಗೌರಿ ದೇವಸ್ಥಾನ, ಲೂಧಿಯಾನಾ, ಪಂಜಾಬ್
9ನೇ ದಿನದ ಪೂಜೆ
ಸಿದ್ಧಿಧಾತ್ರಿ
ಇದು ದುರ್ಗಿಯ ಕೊನೆಯ ಅವತಾರ. ಜಗತ್ತು ಹುಟ್ಟುವಾಗ ರುದ್ರನು ಆದಿಶಕ್ತಿಯ ಆದಿಮ ಅವತಾರವನ್ನು ಪೂಜೆ ಮಾಡಿದ. ಇದು ಆದಿಶಕ್ತಿಯಾದ್ದರಿಂದ ಯಾವುದೇ ರೂಪವಿರಲಿಲ್ಲ. ರುದ್ರನ ಪೂಜೆಯಿಂದಾಗಿ ಈಕೆ ಸಿದ್ಧಿಧಾತ್ರಿಯ ರೂಪ ಧರಿಸಿ ಶಿವನ ಅರ್ಧ ದೇಹದಿಂದಲೇ ಅವತರಿಸಿದಳು. ಹುಲಿ ಅಥವಾ ಸಿಂಹದ ಮೇಲೆ ಕುಳಿತಿರುವ ಈಕೆಗೆ ನಾಲ್ಕು ಕೈಗಳು. ಅವುಗಳಲ್ಲಿ ಚಕ್ರ, ಗದೆ, ಕಮಲ ಹಾಗೂ ಶಂಖಗಳನ್ನು ಹಿಡಿದ್ದಾಳೆ.
ಮಂತ್ರ: ಓಂ ದೇವೀ ಸಿದ್ಧಿಧಾತ್ರ್ಯೈ ನಮಃ
ಫೋಟೋ - ಸಿದ್ಧಿಧಾತ್ರಿ ದೇವಸ್ಥಾನ, ಸಾಗರ, ಮಧ್ಯಪ್ರದೇಶ