Asianet Suvarna News Asianet Suvarna News

ಯಾದಗಿರಿ: ಬಿರುಬಿಸಿಲನ್ನೂ ಲೆಕ್ಕಿಸದೆ ಧರಣಿ ನಡೆಸಿದ ದೊಡ್ಡಗೌಡರು!

ಗಾಂಧಿವೃತ್ತದ ಒಂದು ಕಿ.ಮೀ. ವ್ಯಾಪ್ತಿ ನಿಷೇಧಾಜ್ಞೆ ಹೊರಡಿಸಿದ್ದ ಆಡಳಿತ | ಗೌಡರ ಹೋರಾಟ, ನಿಷೇಧಾಜ್ಞೆಯ ಎಫೆಕ್ಟ್ ನೋಡಲೆಂದು ಸೇರಿದ ಜನಸಮೂಹ| ನಿಷೇಧಾಜ್ಞೆ ನಡುವೆಯೂ ಗಾಂಧಿ ವೃತ್ತದಲ್ಲಿ ಮೌನ ಕ್ರಾಂತಿಗೆ ಕಾರಣವಾಯ್ತು ಗೌಡರ ಧರಣಿ | ಗೌಡರ ಪ್ರವೇಶದಿಂದಾಗಿ ಕಾವು ಪಡೆದ ಪ್ರತಿಭಟನೆ | ಪಿಎಸ್ಸೈ ಬಾಪೂಗೌಡ ಅಮಾನತಿಗೆ ಆಗ್ರಹ | ಪೊಲೀಸರು, ಅಧಿಕಾರಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರ ಎಂದ ಮಾಜಿ ಪ್ರಧಾನಿ ಆರೋಪ|

Former PM H D Devegowda Did Protest in Yadgir
Author
Bengaluru, First Published Oct 24, 2019, 12:47 PM IST

ಯಾದಗಿರಿ[ಅ.24]: ಜಿಲ್ಲೆಯಲ್ಲಿನ ಈ ಎರಡು ಪ್ರತ್ಯೇಕ ವಿದ್ಯಮಾನಗಳು ಆತಂಕ ಹಾಗೂ ತೀವ್ರ ಕುತೂಹಲಗಳಿಗೆ ಸಾಕ್ಷಿಯಾಗಿತ್ತು. ಮಹಾರಾಷ್ಟ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಳೆದೆರಡು ತಿಂಗಳ ಹಿಂದೆ ಅಬ್ಬರಿಸಿ, ಬೊಬ್ಬಿರಿದ್ದ ನೆರೆ ಹಾವಳಿ ಇದೀಗ ಮತ್ತೆ ತನ್ನ ಪ್ರತಾಪ ತೋರಿಸುವತ್ತ ಮುನ್ನುಗ್ಗುತ್ತಿರುವುದು ಆತಂಕ ಮೂಡಿಸಿದ್ದರೆ, ಕಾರ್ಯಕರ್ತರಿಗೆ ಹಿಂಸೆ ನೀಡಿದ ಆರೋಪಕ್ಕೆ ಗುರಿಯಾದ ಯಾದಗಿರಿ ನಗರ ಠಾಣೆಯ ಎಎಸ್‌ಐ ಬಾಪೂಗೌಡ ಅಮಾನತಿಗೆ ಆಗ್ರಹಿಸಿ, ಕಳೆದೆರಡು ದಿನಗಳಿಂದ ಶರಣಗೌಡ ಕಂದಕೂರು ನೇತೃತ್ವದಲ್ಲಿ ಜೆಡಿಎಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಪಾಲ್ಗೊಂಡಿದ್ದ ಮಾಜಿ ಪ್ರಧಾನಿ ದೇವೇಗೌಡರು ಸರ್ಕಾರದ ವಿರುದ್ಧ ಗುಡುಗು ಹಾಕಿದರು.

ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಜೆಡಿಎಸ್‌ ಕಾರ್ಯಕರ್ತನ ಮೇಲೆ ಯಾದಗಿರಿ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬಾಪೂಗೌಡ ಹಿಂಸೆ ಮಾಡಿದ್ದಾರೆಂದು ಆರೋಪಿಸಿ, ಗುರುಮಠಕಲ್ ಶಾಸಕ ನಾಗನಗೌಡ ಕಂದಕೂರು ಅವರ ಪುತ್ರ, ಶರಣಗೌಡ ನೇತೃತ್ವದಲ್ಲಿ ನಗರ ಠಾಣೆಯೆದುರು ಸೋಮವಾರದಿಂದ ಶುರುವಾಗಿದ್ದ ಧರಣಿ, ಬುಧವಾರ ಮಾಜಿ ಪ್ರಧಾನಿ ದೇವೇಗೌಡರ ಆಗಮನದ ನಂತರ ಅಂತ್ಯಗೊಂಡಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿಎಂ ಕಾರಿಗೆ ಅಡ್ಡಗಟ್ಟಿ, ಕಪ್ಪು ಬಾವುಟ ಪ್ರದರ್ಶಿಸಿದ ಪ್ರಕರಣದಲ್ಲಿ ತಮ್ಮನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಲಾಗುತ್ತಿದೆ ಎಂದು ಶರಣಗೌಡ ತಮ್ಮ ನೂರಾರು ಬೆಂಬಲಿಗರೊಡನೆ ಧರಣಿ ನಡೆಸಿದ್ದರು. ಇದೇ ವಿಚಾರವಾಗಿ ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಒತ್ತಡ ಹೇರುತ್ತಿದ್ದಾರೆಂದು ದೂರಿದ್ದ ಅವರು, ಪಿಸ್ಸೈ ಬಾಪೂಗೌಡ ಅಮಾನತಿಗೆ ಆಗ್ರಹಿಸಿ ಪ್ರತಿಭಟಿಸಿದ್ದರು. ಇದಕ್ಕೆ ಬೆಂಬಲಿಸಿದ್ದ ಮಾಜಿ ಪ್ರಧಾನಿ ದೇವೇಗೌಡರು, ಬುಧವಾರ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಈ  ವಿಚಾರಕ್ಕೆ ಮತ್ತಷ್ಟೂ ಕಾವು ನೀಡಿದಂತಾಗಿತ್ತು.

ಬೆಂಗಳೂರಿನಿಂದ ಬುಧವಾರ ಬೆಳಗ್ಗೆ ಉದ್ಯಾನ್‌ ರೈಲು ಮೂಲಕ ಯಾದಗಿರಿಗೆ ಆಗಮಿಸಿದ ದೇವೇಗೌಡರು, ಸರ್ಕೀಟ್ ಹೌಸ್ ತಲುಪಿ, ಕೆಲ ಕಾಲ ಕಾರ್ಯಕರ್ತರ ಭೇಟಿಯಾದರು. ನಂತರ ಶಾಸಕ ಕಂದಕೂರು ಅವರ ಮನೆಗೆ ತೆರಳಿ ಉಪಹಾರದ ನಂತರ, ನೇರವಾಗಿ ಗಾಂಧಿ ವೃತ್ತದ ನಗರ ಪೊಲೀಸ್‌ ಠಾಣೆಯೆದುರು ಶರಣಗೌಡ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು, ಸಾವಿರಾರು ಜನರಗಮನ ಸೆಳೆದರು.

ಪಿಎಸ್ಸೈ ಅಮಾನತು ಪ್ರಕರಣದ ವಿಷಯದಲ್ಲಿ ಮಾಜಿ ಪ್ರಧಾನಿ ಭೇಟಿಯಿಂದಾಗಿ ತೀವ್ರ ಮಜುಗರಕ್ಕೀಡಾದ ಪೊಲೀಸ್ ಇಲಾಖೆ, ಗೌಡರ ಭೇಟಿಗೂ ಮುನ್ನ, ಅಂದರೆ ಮಂಗಳವಾರ ರಾತ್ರಿ ಕಲಂ 144 ರ ಅನ್ವಯ ನಿಷೇಧಾಜ್ಞೆ ಹೊರಡಿಸಿತ್ತಾದರೂ, ಕಾನೂನಿನ ಅನ್ವಯದಂತೆ ನಾಲ್ವರನ್ನೊಳಗೊಂಡ ದೇವೇಗೌಡರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಶಿಷ್ಟಾಚಾರ ಪ್ರಕಾರ ಮಾಜಿ ಪ್ರಧಾನಿ ದೇವೇಗೌಡರು ಬಂದಾಗ ಅವರಿಗೆ ನೆರಳಾಗುವಂತೆ ಕೊಡೆ ಅಲ್ಲಿಡಲಾಗಿತ್ತಾದರೂ, ಬಿರು ಬಿಸಿಲಲ್ಲೇ ಧರಣಿಯಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ ಗೌಡರು, ಅದನ್ನು ತೆಗೆಯಿಸಿ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ, ಶರಣಗೌಡ ಕಂದಕೂರು ಹಾಗೂ ಪಿಎಸ್ಸೈರಿಂದ ಹಲ್ಲೆಗೊಳಗಾಗಿದ್ದೇನೆಂದು ದೂರು ನೀಡಿದ ಯರಗೋಳಗ್ರಾಮದ ಮಾರ್ತಾಂಡಪ್ಪ ಜೊತೆ ಕುಳಿತರು. 

ಸುಮಾರು ಒಂದು ಗಂಟೆ ಕಾಲ ಅಲ್ಲಿಯೇ ಕುಳಿತ ಗೌಡರು, ಮಾಧ್ಯಮಗಳೆದುರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಅಧಿಕಾರಿಗಳದ್ದೇನೂ ತಪ್ಪಿಲ್ಲ. ಆದರೆ, ರಾಜ್ಯ ಸರ್ಕಾರ ಇವರ ಮೇಲೆ ಒತ್ತಡ ಹಾಕುತ್ತಿದೆ ಎಂದು ದೂರಿದರು. ಕಟ್ಟ ಕಡೆಯ ಕಾರ್ಯಕರ್ತನಿಗೆ ಅನ್ಯಾಯವಾದಾಗ ತಾವು ಅಲ್ಲಿಗೆ ಬರುವುದಾಗಿ ಹೇಳಿದ ಗೌಡರು, ನ್ಯಾಯಯುತ ಈ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ನನ್ನ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ನಿಷೇಧಾಜ್ಞೆಯಂತಹ ಕಟ್ಟುಪಾಡು ಕಂಡಿಲ್ಲ ಎಂದರು. 

ಇದಕ್ಕೂ ಮುನ್ನ, ಸರ್ಕೀಟ್ ಹೌಸಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡಿದ್ದ ಗೌಡರು, ಪಿಎಸ್ಸೈ ಅಮಾನತಿಗೆ ಮೊದಲು ಹೂಂಗುಟ್ಟಿದ್ದ ಡಿಜಿ, ನಂತರ ತಮಗೆ ಸ್ವಲ್ಪ ಕಷ್ಟವಾಗುತ್ತಿದೆಎಂದು ಹೇಳಿದ್ದು ನೋಡಿದರೆ, ಸರ್ಕಾರದ ಒತ್ತಡ ಸ್ಪಷ್ಟವಾದಂತಿದೆ ಎಂದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ನಂತರ, ಶರಣಗೌಡ ಕಂದಕೂರು ಸಮೇತ ಜಿಲ್ಲಾಧಿಕಾರಿ ಕಚೇರಿ ಎದುರಿನ ಆವರಣಕ್ಕೆ ತೆರಳಿದ ಅವರು, ಅಲ್ಲಿ ಜಮಾಯಿಸಿದ್ದ ಸಾವಿರಾರು ಕಾರ್ಯಕರ್ತರನ್ನುದ್ದೇಶಿಸಿ, ಬಹಿರಂಗ ಸಭೆಯಲ್ಲಿ ಮಾತನಾಡಿ, ಧರಣಿ ಅಂತ್ಯಕ್ಕೆ ಸೂಚಿಸಿದರು.

ನಿಷೇಧಾಜ್ಞೆ ನೋಡಲೆಂದೇ ಜಮಾಯಿಸಿದ್ರು ಸಾವಿರಾರು ಮಂದಿ!

ಪಿಎಸ್ಸೈ ಬಾಪೂಗೌಡ ಅಮಾನತಿಗೆ ಆಗ್ರಹಿಸಿ, ನಗರ ಪೊಲೀಸ್ ಠಾಣೆ ಎದುರು ಕಳೆದ ಮೂರು ದಿನಗಳಿಂದ ಶರಣಗೌಡ ಕಂದಕೂರು ನೇತೃತ್ವದಲ್ಲಿ ಜೆಡಿಎಸ್ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬುಧವಾರ ನಗರಕ್ಕೆ ಮಾಜಿ ಪ್ರಧಾನಿ ಆಗಮಿಸುವ ಸುದ್ದಿ ಖಚಿತವಾಗುತ್ತಿದ್ದಂತೆಯೇ, ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಮಂಗಳವಾರ ರಾತ್ರಿಯಿಂದಲೇ ಗಾಂಧಿ ವೃತ್ತದ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ಕಲಂ 144 ರ ಅನ್ವರ ನಿಷೇಧಾಜ್ಞೆ ಜಾರಿ ಮಾಡಿದ್ದ ಆಡಳಿತ ಮುಜುಗರಕ್ಕೊಳಗಾದ ಸನ್ನಿವೇಶ ಎದುರಾದಂತಿತ್ತು. ನಿಷೇಧಾಜ್ಞೆ ಜಾರಿ ಬಗ್ಗೆ ಮಾಹಿತಿ ಪಡೆದಿದ್ದ ದೇವೇಗೌಡರು, ಕಾನೂನಿನ ಪ್ರಕಾರ ಶಾಂತ ರೀತಿಯಲ್ಲೇ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದರು.

ಅದರಂತೆಯೇ, ಬುಧವಾರ ಬೆಳಿಗ್ಗೆ ಗಾಂಧಿವೃತ್ತಕ್ಕೆ ಪ್ರತಿಭಟನಾ ಸ್ಥಳಕ್ಕೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ ಜೊತೆ ಆಗಮಿಸಿದ ಗೌಡರು, ಅಲ್ಲಿದ್ದ ಶರಣಗೌಡ ಜೊತೆಯಾದರು. ಪಿಎಸ್ಸೈ ವಿರುದ್ಧ ದೂರು ನೀಡಿದ್ಧ ಯರಗೋಳದ ಮಾರ್ತಾಂಡ ಸಹ ಅಲ್ಲಿದ್ದರು. ಇತ್ತ, ನಿಷೇಧಾಜ್ಞೆ ಬಗ್ಗೆ ತೀವ್ರ ಕುತೂಹಲ ಬೀರಿದ ಜನರು ಅಲ್ಲಿಗೆ ಆಗಮಿಸ ತೊಡಗಿದರು. ಜೆಡಿಎಸ್‌ಕಾರ್ಯಕರ್ತರು ಸೇರಿದಂತೆ ದೇವೇಗೌಡರ ಹೋರಾಟ ವೀಕ್ಷಿಸಲು ಕುತೂಹಲಕ್ಕೆಂದೇ ಸಾವಿರಾರು ಜನರು ಅಲ್ಲಿ ಸೇರ್ಪಡೆಯಾದರು. ಮುಂಜಾಗ್ರತಾ ಕ್ರಮವಾಗಿ ಇಡೀ ಪ್ರದೇಶದಲ್ಲೆಲ್ಲ ಭಾರಿ ಪೊಲೀಸ್‌ ಬಂದೋಬಸ್ತ್ ಹಾಕಲಾಗಿತ್ತು. ನಿಷೇಧಾಜ್ಞೆಯಂತೆ ಐವರು ಜೊತೆಗೂಡಿ ಸೇರಬಾರದೆಂದು ಮಂಗಳವಾರ ರಾತ್ರಿಯಿಂದಲೇ ಧ್ವನಿವರ್ಧಕದ ಮೂಲಕ ಸಂದೇಶ ಸಾರಿದ್ದ ಪೊಲೀಸರಿಗೆ ಬುಧವಾರ ವಾತಾವರಣ ಮಜುಗರದ ಸನ್ನಿವೇಶ  ಸೃಷ್ಟಿಸಿದಂತಾಗಿತ್ತು.ಇತ್ತ, ನಿಷೇಧಾಜ್ಞೆ ಹಿನ್ನೆಲೆ ವ್ಯಾಪಾರ ವಹಿವಾಟು ಆರಂಭಿಸಲು ಗೊಂದಲಕ್ಕೀಡಾಗಿದ್ದ ವ್ಯಾಪಾರಿಗಳು,ಆಡಳಿತದ ಈ ನಿರ್ಧಾರವನ್ನು ಟೀಕಿಸತೊಡಗಿದರು.

Follow Us:
Download App:
  • android
  • ios