technology
By Suvarna Web Desk | 05:44 PM February 01, 2018
ಮೊಬೈಲ್ ಪ್ರಿಯರೇ ಗಮನಿಸಿ, ಕಡಿಮೆ ಬೆಲೆಯಲ್ಲಿ ನಿಮ್ಮ ಕೈ ಸೇರಲಿದೆ ಜಿಯೋನಿಎಂ7 ಪವರ್

Highlights

ಸ್ಯಾಮ್'ಸಂಗ್, ಆ್ಯಪಲ್ ಕಂಪೆನಿಗಳ ಫೋನುಗಳಲ್ಲಿ ಸಾಮಾನ್ಯವಾಗಿ ಇರದಂಥ ವಿಶಿಷ್ಟವಾದ ಕೆಲವೊಂದು ಫೀಚರ್‌ಗಳನ್ನಿಟ್ಟುಕೊಂಡು ಬೇರೆ ಬೇರೆ ಮೊಬೈಲ್ ಕಂಪೆನಿಗಳು ತಮ್ಮ ಮಾರುಕಟ್ಟೆಯನ್ನು ಬಲಪಡಿಸಿಕೊಳ್ಳಲು ನೋಡುತ್ತಿರುವುದು ಹೊಸದೇನಲ್ಲ. ಜಿಯೋನಿ ಎಂ7 ಪವರ್ ಕೂಡ ತನ್ನ ವಿಭಿನ್ನ, ವಿಶಿಷ್ಟ ಫೀಚರ್‌ಗಳಿಂದ ತರುಣ ತರುಣಿಯರಿಗೆ ಇಷ್ಟವಾಗುವಂಥ ಫೋನು.

ಬೆಂಗಳೂರು (ಫೆ.01): ಸ್ಯಾಮ್'ಸಂಗ್, ಆ್ಯಪಲ್ ಕಂಪೆನಿಗಳ ಫೋನುಗಳಲ್ಲಿ ಸಾಮಾನ್ಯವಾಗಿ ಇರದಂಥ ವಿಶಿಷ್ಟವಾದ ಕೆಲವೊಂದು ಫೀಚರ್‌ಗಳನ್ನಿಟ್ಟುಕೊಂಡು ಬೇರೆ ಬೇರೆ ಮೊಬೈಲ್ ಕಂಪೆನಿಗಳು ತಮ್ಮ ಮಾರುಕಟ್ಟೆಯನ್ನು ಬಲಪಡಿಸಿಕೊಳ್ಳಲು ನೋಡುತ್ತಿರುವುದು ಹೊಸದೇನಲ್ಲ. ಜಿಯೋನಿ ಎಂ7 ಪವರ್ ಕೂಡ ತನ್ನ ವಿಭಿನ್ನ, ವಿಶಿಷ್ಟ ಫೀಚರ್‌ಗಳಿಂದ ತರುಣ ತರುಣಿಯರಿಗೆ ಇಷ್ಟವಾಗುವಂಥ ಫೋನು.

2017 ರ ಸೆಪ್ಟೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಬಂದ ಜಿಯೋನಿ ಎಂ7, ಆರಿಂಚಿನ ಡಿಸ್‌ಪ್ಲೇ ಹೊಂದಿದೆ. 720ಗG1440 ಪಿಕ್ಸೆಲ್ ಡಿಸ್‌ಪ್ಲೇ ಇರುವ ಈ ಫೋನಿನ ಬೆಲೆ ಬಿಡುಗಡೆಯಾದಾಗ 15,000 ದ ಆಸುಪಾಸಿನಲ್ಲಿತ್ತು. 5000 ಎಂಎಎಚ್ ಬ್ಯಾಟರಿ ಹೊಂದಿರುವ ಇದರ ವೈಶಿಷ್ಟವೆಂದರೆ, ಇದನ್ನು ಪವರ್‌ಬ್ಯಾಂಕ್ ರೀತಿಯಲ್ಲೂ ಬಳಸಬಹುದು. ಅದೇ ಕಾರಣಕ್ಕೆ ಈ ಫೋನಿನ ಜೊತೆಗೆ ಪವರ್ ಎಂಬ ಹೆಸರೂ ಸೇರಿಕೊಂಡಿದೆ. 4 ಜಿಬಿ ರ್ಯಾಮ್ 64 ಜಿಬಿ ಸ್ಟೋರೇಜ್ ಹೊಂದಿರುವ ಇದನ್ನು ಮೈಕ್ರೋ ಎಸ್‌'ಡಿ ಕಾರ್ಡು ಬಳಸಿ 256 ಜಿಬಿಗೆ ವಿಸ್ತರಿಸಬಹುದಾಗಿದೆ.

ಇದರ ತೂಕ 199 ಗ್ರಾಮ್. ಎರಡು ನ್ಯಾನೋ ಸಿಮ್'ಗಳಿಗೆ ಅವಕಾಶ ಇರುವ ಜಿಯೋನಿ ಎಂ7 ವೈಫ್,ಜಿಪಿಎಸ್, ಬ್ಲೂಟೂಥ್, ಓಟಿಜಿ, ಎಫ್‌ಎಮ್ ರೇಡಿಯೋ, ಎಲ್‌ಟಿಇ ಹೊಂದಿದೆ.

ಇದರ ವೈಶಿಷ್ಟವೆಂದರೆ ಅಗಾಧವಾದ ಬ್ಯಾಟರಿ ಲೈಫು. ಒಮ್ಮೆ ಚಾರ್ಜ್ ಮಾಡಿದರೆ ಎರಡು ದಿನ ಆರಾಮಾಗಿ ಬಳಸಬಹುದು. 13 ಮೆಗಾಪಿಕ್ಸೆಲ್‌ನ ಕೆಮರಾ, 8 ಮೆಗಾಪಿಕ್ಸೆಲ್‌ನ ಫ್ರಂಟ್ ಕೆಮರಾ ಹೊಂದಿರುವ ಇದು ಆ್ಯಂಡ್ರಾಯಿಡ್ 7.1.1 ಆಪರೇಟಿಂಗ್ ಸಿಸ್ಟಮ್ ಹೊಂದಿದೆ.

ಇದು ಚೌಕಟ್ಟಿಲ್ಲದ ಫೋನುಗಳ ಯುಗ. ಡಿಸ್‌ಪ್ಲೇ ಏರಿಯಾ ಜಾಸ್ತಿ ಇರಬೇಕು ಎಂದು ಆಸೆಪಡುವ ಎಲ್ಲರ ಪಾಲಿಗೆ ಎಂ7 ಹೇಳಿ ಮಾಡಿಸಿದ ಫೋನು. ಅತ್ಯುತ್ತಮ ಡಿಸೈನ್ ಹೊಂದಿರುವ ಇದರ ಡಿಸ್‌ಪ್ಲೇ ಕೂಡ ಸಾಕಷ್ಟು ಆಕರ್ಷಕವಾಗಿದೆ.

ಇದರ ಫೀಚರ್‌ಗಳು ಕೂಡ ಮೆಚ್ಚುಗೆಯಾಗುವಂತಿವೆ. ಒಂದು ಪುಟ್ಟ ಉದಾಹರಣೆ ಕೊಡುವುದಾದರೆ, ಈ ಫೋನಿನಲ್ಲಿ ಇತ್ತೀಚೆಗೆ ಜನಪ್ರಿಯವಾಗುತ್ತಿರುವ ಲಾಂಗ್ ಸ್ಕ್ರೀನ್ ಶಾಟ್ ಮೋಡ್ ಇದೆ. ಇದರಿಂದ ಇಡೀ ಪುಟವನ್ನೇ ಸ್ಕ್ರೀನ್‌ಶಾಟ್ ಮಾಡಬಹುದು. ಆಮೇಲೆ ಬೇಕಾಗಿದ್ದನ್ನು ಎಡಿಟ್ ಮಾಡಬಹುದು. ತೆಳ್ಳಗಿನ ಜೀರೋ ಸೈಜ್ ಫೋನ್ ಬೇಡ, ಕೊಂಚ ಮೈ ಕೈ ತುಂಬಿಕೊಂಡಿರುವುದೇ ಇಷ್ಟ ಅನ್ನುವವರಿಗೆ ಈ ಫೋನ್ ಇಷ್ಟವಾಗುತ್ತದೆ. ಅಂಗೈಯೊಳಗೆ ಅಡಗಿ ಕೂರುವಷ್ಟು ಚಿಕ್ಕದಲ್ಲದೇ ಹೋದರೂ ಕೈಯಿಂದ ಜಾರುವಷ್ಟು ದೊಡ್ಡದೂ ಅಲ್ಲದ ಇದು ಫೋಟೋಗ್ರಫಿಗೆ ಕೂಡ ಹೊಂದಿಕೊಳ್ಳುತ್ತದೆ. ರಾತ್ರಿಯ ಫೋಟೋಗಳು ಅಷ್ಟು ಚೆನ್ನಾಗಿ ಮೂಡದೇ ಹೋದರೆ ಹಗಲುಬೆಳಕಿನಲ್ಲಿ ಅತ್ಯುತ್ತಮ ಫೋಟೋಗಳನ್ನು ತೆಗೆಯಬಹುದು.

ಸೆಲ್ಫೀ ಪ್ರಿಯರಿಗಂತೂ ಇದರಲ್ಲಿ ಅನೇಕ ಆಯ್ಕೆಗಳಿವೆ. ಗ್ರೂಪ್ ಸೆಲ್ಫೀ, ಫೇಸ್ ಬ್ಯೂಟಿ ಮೋಡ್, ಪೋರ್ಟ್ರೇಟ್ ಆಯ್ಕೆ- ಹೀಗೆ ಹಲವಾರು ಆಯ್ಕೆಗಳನ್ನು ಇದು ಹೊಂದಿದೆ. ಬೇರೆ ಬೇರೆ ಆಟಗಳನ್ನು ಆಡುವವರಿಗೋಸ್ಕರ ಗೇಮ್ ಮೋಡ್ ಕೂಡ ಇದೆ. ಬ್ಯಾಟರಿ ಕಡಿಮೆಯಾದ ಲೋ ಪವರ್ ಮೋಡ್, ಮಲ್ಟಿಟಾಸ್ಕಿಂಗ್- ಜೊತೆಗೇ ಬಿಲ್ಟ್ ಇನ್ ಆಗಿ ಟ್ರೂಕಾಲರ್, ಗಾನಾ, ಟಚ್‌'ಪಾಲ್, ಜಿಸ್ಟೋರ್‌ಗಳಿವೆ. ಕನ್ನಡದಲ್ಲಿ ಅಕ್ಷರ ಛಾಪಿಸುವವರಿಗೆ ಇದು ಅತ್ಯುತ್ತಮ ಫೋನ್. ಬೇಕು ಬೇಕಾದ ಕನ್ನಡ ಕೀಬೋರ್ಡುಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವೂ ಇದರಲ್ಲಿದೆ. ಬೇಗನೇ ಹ್ಯಾಂಗ್ ಆಗುವುದಿಲ್ಲ, ಎಷ್ಟು ಹೊತ್ತು ಮಾತಾಡಿದರೂ ಬಿಸಿಯಾಗುವುದಿಲ್ಲ. ಬಿಲ್ಟ್ ಇನ್ಆ್ಯಪ್‌ಗಳನ್ನು ತೆಗೆದುಹಾಕುವ ಅನುಕೂಲವಿದೆ.

ನೋಟಿಫಿಕೇಷನ್‌ಗಳನ್ನು ಮಾನಿಟರ್ ಮಾಡುವುದಕ್ಕೆ ಅವಕಾಶವಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಬ್ರಾಂಡ್‌'ಗಳಿಗಿಂತ ಹೆಚ್ಚಿನ ಅನುಕೂಲಗಳು ಬೇಕು ಅನ್ನುವವರು ಈ ಫೋನ್ ಕೊಳ್ಳಬಹುದು. ಅಷ್ಟಕ್ಕೂ ಒಂದು ಫೋನಿನ ಆಯಸ್ಸು ಎಷ್ಟು ಅನ್ನುವುದು ಈಗ ಮುಖ್ಯವಲ್ಲ ಎಂದು ನಂಬಿರುವವರಿಗೆ ಇದು ಅತ್ಯುತ್ತಮ ಮಾಡೆಲ್.

 

Show Full Article


Recommended


bottom right ad