Asianet Suvarna News Asianet Suvarna News

ಕೇಬಲ್‌, ಡಿಟಿಎಚ್‌ ನಿಜಕ್ಕೂ ದುಬಾರಿಯಾಗುತ್ತಾ?

ಕೇಬಲ್ ಟಿವಿ, ಡಿಟಿಎಚ್‌ಗೆ ಸಂಬಂಧಿಸಿದಂತೆ ಬರಲಿದೆ ಹೊಸ ಕಾಯ್ದೆ | ಕೇಬಲ್‌, ಡಿಟಿಎಚ್‌ ನಿಜಕ್ಕೂ ದುಬಾರಿಯಾಗುತ್ತಾ? ಏನಿದು ಹೊಸ ನಿಯಮ? ಇಲ್ಲಿದೆ ಸಂಪೂರ್ಣ ಮಾಹಿತಿ. 

Cable TV and DTH may costlier soon hints TRAI
Author
Bengaluru, First Published Dec 26, 2018, 4:19 PM IST

ಬೆಂಗಳೂರು (ಡಿ. 26): ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ಕೇಬಲ್‌ ಟೀವಿ ಹಾಗೂ ಡಿಟಿಎಚ್‌ಗಳಿಗೆ ಸಂಬಂಧಿಸಿದ ಹೊಸ ನಿಯಮವನ್ನು ಡಿ.29ರಿಂದ ಜಾರಿಗೊಳಿಸುತ್ತಿದೆ. ಅದರಡಿ ಟೀವಿ ವೀಕ್ಷಿಸುವವರು ತಮಗೆ ಬೇಕಾದ ಚಾನಲ್‌ಗಳನ್ನು ಮಾತ್ರ ವೀಕ್ಷಿಸುವ, ಅದಕ್ಕಷ್ಟೇ ಹಣ ಪಾವತಿ ಮಾಡುವ ಅವಕಾಶ ಪಡೆಯಲಿದ್ದಾರೆ. ಆದರೆ ಇದಕ್ಕೆ ಹೆಚ್ಚು ಹಣ ಪಾವತಿಸಬೇಕು ಎನ್ನುವುದು ವಿವಾದ ಹುಟ್ಟುಹಾಕಿದೆ.

ತಾನು ವೀಕ್ಷಿಸಲು ಬಯಸುವ ಚಾನಲ್‌ಗೆ ಮಾತ್ರ ಗ್ರಾಹಕ ಹಣ ಕೊಡಬೇಕು, ಅವರಿಗೆ ಬೇಡವಾದ ಚಾನಲ್‌ಗಳ ಅನಗತ್ಯ ಕಿರಿಕಿರಿ ತಪ್ಪಿಸಬೇಕು ಮತ್ತು ಕೇಬಲ್‌ ಟೀವಿ ಆಪರೇಟರ್‌ಗಳು ಹಾಗೂ ಡಿಟಿಎಚ್‌ ಸೇವಾದಾರರು ಗ್ರಾಹಕರನ್ನು ಸುಲಿಗೆ ಮಾಡುವುದನ್ನು ತಪ್ಪಿಸಬೇಕು ಎಂಬುದು ಟ್ರಾಯ್‌ನ ಉದ್ದೇಶ.

ಆದರೆ, ಟ್ರಾಯ್‌ ಜಾರಿಗೆ ತರಲು ಉದ್ದೇಶಿಸಿರುವ ಯೋಜನೆಯಿಂದ ವೀಕ್ಷಕನಿಗೆ ಹೊರೆಯಾಗಲಿದೆ, ಆತ ಈಗ ಕೊಡುತ್ತಿರುವುದರ ಎರಡು ಮೂರು ಪಟ್ಟು ಹೆಚ್ಚು ಹಣವನ್ನು ಪ್ರತಿ ತಿಂಗಳು ನೀಡಬೇಕಾಗುತ್ತದೆ ಮತ್ತು ಈ ಯೋಜನೆಯಿಂದ ಲಕ್ಷಾಂತರ ಕೇಬಲ್‌ ಟೀವಿ ಆಪರೇಟರ್‌ಗಳು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗುತ್ತಾರೆ ಎಂದು ಕೇಬಲ್‌ ಟೀವಿ ಆಪರೇಟರ್‌ಗಳ ಸಂಘ ಹೇಳುತ್ತಿದೆ. ಇದಕ್ಕೆಲ್ಲ ಉತ್ತರ ನೀಡುವಂತೆ ಹಾಗೂ ಒಟ್ಟಾರೆ ಈ ಹೊಸ ವ್ಯವಸ್ಥೆ ಏನು ಎಂಬುದನ್ನು ಗ್ರಾಹಕರಿಗೆ ಪರಿಚಯಿಸುವುದಕ್ಕೆ ಟ್ರಾಯ್‌ ವಿಸ್ತಾರವಾದ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿದೆ. ಅದರ ಆಯ್ದ ಭಾಗ ಇಲ್ಲಿದೆ.

* ಹೊಸ ನೀತಿಯಿಂದ ಗ್ರಾಹಕನಿಗೆ ಆಗುವ ಲಾಭವೇನು?

ಹೊಸ ನೀತಿಯಿಂದ ಗ್ರಾಹಕ ತಾನು ವೀಕ್ಷಿಸುವ ಚಾನಲ್‌ಗಳನ್ನು ಮಾತ್ರ ಪಡೆಯುವ ಹಕ್ಕು ಪಡೆಯುತ್ತಾನೆ. ಆತ ತಾನು ವೀಕ್ಷಿಸುವ ಚಾನಲ್‌ಗೆ ಮಾತ್ರ ಹಣ ಕಟ್ಟುತ್ತಾನೆ. ಅನಗತ್ಯವಾಗಿ ಹೆಚ್ಚು ಹಣ ನೀಡುವ ಹೊರೆ ತಪ್ಪುತ್ತದೆ. ಇಲ್ಲಿ ಪೇ ಚಾನಲ್‌ಗಳು ನಿಗದಿಪಡಿಸಿದ ಹಣವನ್ನಷ್ಟೇ ಗ್ರಾಹಕ ನೀಡುತ್ತಾನೆ. ಇದರಿಂದ ಪಾದರ್ಶಕತೆ ಇರುತ್ತದೆ. ಅಲ್ಲದೇ ಉಚಿತವಾಗಿ ನೀಡುವ ಚಾನಲ್‌ಗಳು (ಫ್ರೀ ಟು ಏರ್‌) ಎಂದಿನಂತೆ ಪ್ರಸಾರ ಆಗುತ್ತವೆ. ಹೀಗಾಗಿ ಗ್ರಾಹಕಸ್ನೇಹಿ ಯೋಜನೆ ಇದಾಗಿದೆ.

* 200 ರು. ಅಥವಾ ಅದಕ್ಕಿಂತ ಹೆಚ್ಚು ಹಣ ಪಾವತಿಸುವ ಸಂದರ್ಭ ಬರುವ ಸಾಧ್ಯತೆ ಇದೆಯಾ?

ಗ್ರಾಹಕ ತನಗೆ ಬೇಕಾದ ಚಾನಲ್‌ಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವುದರಿಂದ ಆತ ಹೆಚ್ಚು ಹಣ ಪಾವತಿಸಬೇಕಿಲ್ಲ. ಭವಿಷ್ಯದಲ್ಲಿ ಪೇ ಚಾನಲ್‌ಗಳು ಪೈಪೋಟಿಯ ಮೇಲೆ ತಮ್ಮ ಬಾಡಿಗೆ ಮೊತ್ತವನ್ನು ಇನ್ನಷ್ಟುತಗ್ಗಿಸುವ ಸಾಧ್ಯತೆಗಳಿವೆ. ಇದರಿಂದ ಗ್ರಾಹಕನಿಗೆ ಹೆಚ್ಚು ಅನುಕೂಲ. ಬಾರ್ಕ್ ನೀಡಿರುವ ವರದಿಯಲ್ಲಿ ಗ್ರಾಹಕನಿಗೆ ಈಗ ನೀಡಲಾಗುತ್ತಿರುವ ಚಾನಲ್‌ಗಳ ಪೈಕಿ ಶೇ.40ಕ್ಕಿಂತಲೂ ಕಡಿಮೆ ಚಾನಲ್‌ಗಳನ್ನು ಆತ ವೀಕ್ಷಿಸುತ್ತಿದ್ದಾನೆ. ಹಾಗಾಗಿ ಹೆಚ್ಚು ಹೊರೆ ಆಗುವುದಿಲ್ಲ.

*ದೊಡ್ಡ ಮಟ್ಟದ ಪ್ರಸಾರಕರಿಗೆ ಮಾತ್ರ ಹೊಸ ನೀತಿ ಸಹಕಾರಿಯೇ?

ಹಾಗೇನೂ ಇಲ್ಲ. ಇಲ್ಲಿ ಎಲ್ಲ ಪ್ರಸಾರಕರಿಗೂ ಸಮಾನ ಅವಕಾಶವಿದೆ. ಅವರು ತಮ್ಮ ಪ್ಯಾಕೇಜ್‌ನ ಮೊತ್ತವನ್ನು ಪಾರದರ್ಶಕವಾಗಿ ನೀಡಬೇಕಿದೆ. ಇದರಿಂದ ಎಂಎಸ್‌ಒ, ಡಿಟಿಎಚ್‌, ಕೇಬಲ್‌ ಆಪರೇಟರ್‌ಗಳೆಲ್ಲ ಇಲ್ಲಿ ಸಮಾನರು.

* ಎಫ್‌ಟಿಎ (ಫ್ರೀ ಟು ಏರ್‌) ಚಾನಲ್‌ಗಳು ಉಚಿತವಾಗಿ ಲಭ್ಯವಾಗುತ್ತವೆಯೇ?

ಹೊಸ ನೀತಿಯಿಂದ ಎಫ್‌ಟಿಎ ಚಾನಲ್‌ಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅವುಗಳು ಮುಂಚುನಂತೆ ಉಚಿತವಾಗಿಯೇ ಗ್ರಾಹಕನಿಗೆ ಲಭ್ಯ.

*ಗ್ರಾಹಕನಿಗೆ ಯಾವುದೇ ಚಾನಲ್‌ ಪಡೆಯುವ ಅವಕಾಶವಿದೆಯೇ?

ಹೌದು. ಡಿಸ್ಟ್ರಿಬ್ಯೂಟರ್‌ (ವಿತರಕ ಅಥವಾ ಆಪರೇಟ​ರ್‍ಸ್) ಬಳಿ ಲಭ್ಯವಿರುವ ಯಾವುದೇ ಚಾನಲ್ಲನ್ನು ಪಡೆಯಲು ಗ್ರಾಹಕನಿಗೆ ಅವಕಾಶವಿದೆ.

*.130ಕ್ಕೆ ನೀಡುವ 100 ಚಾನಲ್‌ಗಳನ್ನು ಪಡೆಯುವುದು ಗ್ರಾಹಕನಿಗೆ ಅನಿವಾರ್ಯವೇ?

ಇಲ್ಲ. 100 ಚಾನಲ್‌ಗಳು ಗ್ರಾಹಕನ ನಿರ್ಧಾರದ ಮೇಲೆ ತೀರ್ಮಾನ ಆಗುತ್ತವೆ. ಆತ ಕೇವಲ ಪೇ ಚಾನಲ್‌ಗಳನ್ನು ಪಡೆಯಲು ಇಚ್ಛಿಸಿದಲ್ಲಿ ಅವುಗಳಿಗಷ್ಟೇ ಹಣ ಕಟ್ಟಿದರೆ ಸಾಕು.

*ಮನೆಯಲ್ಲಿರುವ 2 ಅಥವಾ 3ನೇ ಟೀವಿಗೆ ಪ್ರತ್ಯೇಕ ಹಣ ನೀಡಬೇಕೆ?

ಹೌದು. ಮನೆಯ ಸದಸ್ಯರಿಗೆ ಪ್ರತ್ಯೇಕವಾಗಿ ಸಿಮ್‌ ಕಾರ್ಡ್‌ ಇರುವಂತೆಯೇ ಹೊಸ ಟ್ರಾಯ್‌ ನೀತಿ ಅನ್ವಯಿಸುತ್ತದೆ. ಅಂದರೆ ಸಿಮ್‌ಗೆ ಪ್ರತ್ಯೇಕ ಆಫರ್‌ ಇರುವಂತೆ ಪ್ರತ್ಯೇಕ ಟೀವಿಗೂ ಪ್ರತ್ಯೇಕ ಚಾನಲ್‌ಗಳನ್ನು ಪಡೆಯಬಹುದು. ಡಿಸ್ಟ್ರಿಬ್ಯೂಟರ್‌ ಮನೆಯಲ್ಲಿರುವ ಪ್ರತ್ಯೇಕ ಟೀವಿಗೆ ಬೇರೆಯದೇ ಆಫರ್‌ ನೀಡಬಹುದು. ಇದರಿಂದ ಗ್ರಾಹಕರಿಗೆ ಅನುಕೂಲ.

*ಇದರಿಂದ ಕೇಬಲ್‌ ಆಪರೇಟರ್‌ಗಳ ಆದಾಯ ಕುಸಿಯಲಿದೆಯೇ?

ಇಲ್ಲ. ಲೋಕಲ್‌ ಕೇಬಲ್‌ ಆಪರೇಟ​ರ್‍ಸ್ (ಎಲ್‌ಸಿಒ) ಮತ್ತು ಮಲ್ಟಿಪಲ್‌ ಸಿಸ್ಟಮ್‌ ಆಪರೇಟ​ರ್‍ಸ್ (ಎಂಎಸ್‌ಒ)ಗಳ ಆದಾಯವನ್ನು ಸಮಾನಾಂತರವಾಗಿ ನಿಗದಿಪಡಿಸಲಾಗುತ್ತದೆ. ಕೇಬಲ್‌ ಆಪರೇಟರ್‌ಗಳು ಎಂಎಸ್‌ಒಗಳಿಗೆ ನೀಡುವ ಹಣವನ್ನು ಇಬ್ಬರೂ ಒಪ್ಪಂದದ ಮೂಲಕ ನಿಗದಿಪಡಿಸಿಕೊಳ್ಳುವ ಅವಕಾಶ ನೀಡಲಾಗಿದೆ.

*ಕೇಬಲ್‌ ಆಪರೇಟರ್‌ಗಳು ಎಂಎಸ್‌ಒ ಹೊಂದಲು ಅವಕಾಶವಿದೆಯೇ?

ಇದೆ. ಕೇಬಲ್‌ ಆಪರೇಟರ್‌ಗಳು ಇಚ್ಛಿಸಿದರೆ ಮಲ್ಟಿಪಲ್‌ ಸಿಸ್ಟಮ್‌ ಆಪರೇಟರ್‌ಗಳಾಗಲು ಅವಕಾಶವಿದೆ.

*ಸೆಟ್‌ಟಾಪ್‌ ಬಾಕ್ಸ್‌ಗಳ ಮಾಲಿಕತ್ವ, ರಿಪೇರಿಯ ಜವಾಬ್ದಾರಿ ಯಾರದು?

ಡಿಸ್ಟ್ರಿಬ್ಯೂಟ​ರ್‍ಸ್ ಅಥವಾ ಕೇಬಲ್‌ ಆಪರೇಟರ್‌ಗಳು ಸೆಟ್‌ಟಾಪ್‌ ಬಾಕ್ಸ್‌ನ ನಿರ್ವಹಣೆಗೆ ಜವಾಬ್ದಾರರು. ಎಂಎಸ್‌ಒ, ಕೇಬಲ್‌ ಆಪರೇಟರ್‌ಗಳು 3 ವರ್ಷಗಳವರೆಗೆ ಸೆಟ್‌ಟಾಪ್‌ ಬಾಕ್ಸ್‌ನ ನಿರ್ವಹಣೆ ಮಾಡಬೇಕು.

*ಮುಂಗಡವಾಗಿ ಹಣ ಪಾವತಿಸಿ (ಪ್ರಿ-ಪೇಯ್ಡ್‌) ಚಾನಲ್‌ಗಳನ್ನು ವೀಕ್ಷಿಸಬೇಕೆ?

ಇಲ್ಲ. ಕೇಬಲ್‌ ಆಪರೇಟರ್‌ಗಳು ತಮ್ಮ ಇಚ್ಛೆಯಂತೆ ಪ್ರಿ-ಪೇಯ್ಡ್‌ ಅಥವಾ ಪೋಸ್ಟ್‌ ಪೇಯ್ಡ್‌ ವ್ಯವಸ್ಥೆಯನ್ನು ತನ್ನ ಗ್ರಾಹಕರಿಗೆ ನೀಡಬಹುದು.

*ಚಾನಲ್‌ಗಳ ಎಂಆರ್‌ಪಿ ದರದಲ್ಲಿ ರಿಯಾಯಿತಿ (ಡಿಸ್ಕೌಂಟ್‌) ನೀಡಲು ಅವಕಾಶವಿದೆಯೇ?

ಇದೆ. ಎಂಎಸ್‌ಒ, ಡಿಟಿಎಚ್‌ ಆಪರೇಟರ್‌ಗಳು ಚಾನಲ್‌ಗಳು ನಿಗದಿಪಡಿಸಿದ (ಎಂಆರ್‌ಪಿ) ದರಕ್ಕಿಂತ ಕಡಿಮೆ ಹಣಕ್ಕೆ (ರಿಯಾಯಿತಿ) ಚಾನಲ್‌ ನೀಡುವ ಹಕ್ಕನ್ನು ಹೊಂದಿರುತ್ತಾರೆ.

*.130ಗಿಂತ ಕಡಿಮೆ ಮೊತ್ತಕ್ಕೆ ಚಾನಲ್‌ ನೀಡಬಹುದೇ?

ನೀಡಬಹುದು. ಟ್ರಾಯ್‌ ತಿಂಗಳ ಬಾಡಿಗೆ ಎಂದು .130 ನಿಗದಿ ಪಡಿಸಿದೆ. ಇದರಲ್ಲಿಯೂ ಕೇಬಲ್‌ ಆಪರೇಟರ್‌ಗಳು ಕಡಿಮೆ ಮೊತ್ತಕ್ಕೆ ಸವೀರ್‍ಸ್‌ ನೀಡಲು ಅವಕಾಶವಿದೆ.

*ಇನ್‌ಸ್ಟಾಲೇಷನ್‌ಗೆ ಹಣ ಪಾವತಿಸಬೇಕೆ? ಹೌದಾದರೆ ಎಷ್ಟು?

ಪಾವತಿಸಬೇಕು. ಒಮ್ಮೆ ಚಾನಲ್‌ಗಳನ್ನು ಇನ್‌ಸ್ಟಾಲೇಷನ್‌ ಮಾಡಲು 350 ರು.ಗಿಂತ ಹೆಚ್ಚು ಚಾಜ್‌ರ್‍ ಮಾಡುವಂತಿಲ್ಲ.

* ಪೇ ಚಾನಲ್‌ ಎಂದರೆ ಏನು?

-ಯಾವುದೇ ಟೀವಿ ಚಾನಲ್‌ನ ಮಾಲಿಕ ತಾನು ಪ್ರಸಾರ ಮಾಡುವ ಚಾನಲ್‌ಗೆ ನಿಗದಿ ಪಡಿಸುವ ದರ.

ಫ್ರೀ ಟು ಏರ್‌ ಚಾನಲ್‌ಗಳು ಅಂದರೇನು?

ಫ್ರೀ ಟು ಏರ್‌ (ಎಫ್‌ಟುಎ) ಎಂದರೆ ಚಾನಲ್‌ ಮಾಲಿಕ ತನ್ನ ಚಾನಲ್‌ ಅನ್ನು ಗ್ರಾಹಕರಿಗೆ ಯಾವುದೇ ದರ ನಿಗದಿ ಪಡಿಸದೇ ನೀಡುವುದು. ಈ ಚಾನಲ್‌ಗಳನ್ನು ವೀಕ್ಷಿಸಲು ಗ್ರಾಹಕರು ಕೇಬಲ್‌ ಆಪರೇಟರ್‌ಗೆ ಪ್ರತ್ಯೇಕ ಹಣ ನೀಡಬೇಕಿಲ್ಲ.

* 130 ರು. ಮೂಲ ದರ ಅಂದರೇನು?

ಇದಕ್ಕೆ ನೆಟ್‌ವರ್ಕ್ ಕೆಪಾಸಿಟಿ ದರ ಎನ್ನಲಾಗುತ್ತದೆ. ಗ್ರಾಹಕರು ಕೇಬಲ್‌ ಆಪರೇಟರ್‌ಗೆ ನೀಡುವ ಶುಲ್ಕ ಇದು. ಇದನ್ನು ಟ್ರಾಯ್‌ ಈಗಾಗಲೇ 100 ಚಾನಲ್‌ಗೆ .130 ಎಂದು ನಿಗದಿ ಪಡಿಸಿದೆ.

ಹೊಸ ನೀತಿ ಜಾರಿಗೆ ಕಾರಣ

- ಟೀವಿ ಚಾನಲ್‌ಗಳ ಡಿಜಿಟಲೈಸೇಷನ್‌ 2012ರಲ್ಲಿ ಆರಂಭವಾಗಿ 2017ರಲ್ಲಿ ಮುಕ್ತವಾಯಿತು. ಇದು ವೀಕ್ಷಕರಿಗೆ ಉತ್ತಮ ಸೇವೆ ನೀಡುವ ಉದ್ದೇಶ ಹೊಂದಿದೆ. ಇದರ ಮುಂದುವರಿದ ಭಾಗವಾಗಿ ಟ್ರಾಯ್‌ ಗ್ರಾಹಕರಿಗೆ ಟೀವಿ ಚಾನಲ್‌ಗಳ ಆಯ್ಕೆಯ ಹಕ್ಕನ್ನು ನೀಡಿದೆ.

ಹೊಸ ನೀತಿ ಜಾರಿಗೆ ಇರುವ ಸಮಯ

2017ರ ಮಾಚ್‌ರ್‍ 3ರಂದು ಹೊಸ ನೀತಿಯನ್ನು ಟ್ರಾಯ್‌ ರೂಪಿಸಿತು. 2018ರ ಜು.3ರಂದು ಆ ಕುರಿತು ಆದೇಶ ಹೊರಡಿಸಿತು. 2019ರ ಜನವರಿಯಿಂದ ಜಾರಿಗೆ ತರಲು ಉದ್ದೇಶಿಸಿದೆ.

ಟೀವಿ ಚಾನಲ್‌ಗಳಿಗೆ ಆಗುವ ಲಾಭ

- ಚಾನಲ್‌ಗಳ ಪ್ರಸಾರಕರು ತಮ್ಮ ಚಾನಲ್‌ಗೆ ತಾವೇ ಮೌಲ್ಯವನ್ನು ನಿಗದಿಪಡಿಸಬಹುದು ಅಥವಾ ಉಚಿತವಾಗಿ ನೀಡಬಹುದು.

- ಗ್ರಾಹಕನಿಗೆ ನೇರವಾಗಿ, ಅದೇ ಬೆಲೆಗೆ, ಚಾನಲ್‌ ತಲುಪುತ್ತದೆ.

- ಇದರಿಂದ ಚಾನಲ್‌ ಪ್ರಸಾರಕರಿಗೆ ನಿರ್ದಿಷ್ಟಆದಾಯ ಹರಿದು ಬರಲಿದೆ.

ಡಿಸ್ಟ್ರಿಬ್ಯೂಟರ್‌ಗೆ ಸಿಗುವ ಅನುಕೂಲ

- ವಿತರಕ ಬ್ರಾಡ್‌ಕಾಸ್ಟರ್‌ನೊಂದಿಗೆ (ಟೀವಿ ಚಾನಲ್‌) ನೇರ ಒಪ್ಪಂದ ಮಾಡಿಕೊಂಡು ಚಾನಲ್‌ ನೀಡಬೇಕು. ಕಾನೂನಿಗೆ ವಿರುದ್ಧವಾಗಿ ಚಾನಲ್‌ ಪ್ರಸಾರ ಮಾಡಲು ಅವಕಾಶವಿರುವುದಿಲ್ಲ.

- ಪ್ರಸಾರಕ ವಿತರಕನಿಗೆ ನೇರವಾಗಿ ಹಣ ಸಂದಾಯ ಮಾಡುತ್ತಾನೆ ಅಥವಾ ಆತ ಗ್ರಾಹಕನಿಗೆ ವಿಧಿಸುವ ಹಣದಲ್ಲಿಯೇ ವಿತರಕನಿಗೆ ಒಂದು ಭಾಗವನ್ನು ನೀಡುತ್ತಾನೆ.

- ವಿತರಕ ತನ್ನ ಸೇವೆಯನ್ನು ಮತ್ತಷ್ಟುಉನ್ನತೀಕರಿಸುವ ಅವಕಾಶವನ್ನು ಹೊಂದಿರುತ್ತಾನೆ.

ಗ್ರಾಹಕರಿಗೆ ಆಗುವ ಅನುಕೂಲ

- ಹೊಸ ನೀತಿಯಿಂದ ಟೀವಿ ಚಾನಲ್‌ಗಳ ಆಯ್ಕೆಯ ವಿಷಯದಲ್ಲಿ ಗ್ರಾಹಕ ನಿಜವಾದ ರಾಜನಾಗುತ್ತಾನೆ.

- ತನಗೆ ಬೇಕಾದ ಚಾನಲ್‌ಗೆ ಮಾತ್ರ ಆತ ಹಣ ಪಾವತಿಸುತ್ತಾನೆ. ಇದರಿಂದ ದುಂದುವೆಚ್ಚ ತಪ್ಪಿಸಬಹುದು.

- ಅಲ್ಲದೆ ಅನಗತ್ಯವಾಗಿ ಪ್ರಸಾರ ಆಗುವ ಚಾನಲ್‌ಗಳ ಕಿರಿಕಿರಿಯಿಂದ ಮುಕ್ತನಾಗುತ್ತಾನೆ.

ಎಷ್ಟು ಹಣ ಪಾವತಿಸಬೇಕು? 

.130 - ಗ್ರಾಹಕ 100 ಚಾನಲ್‌ಗಳಿಗೆ ನೀಡಬೇಕಿರುವ ಹಣ.

.20​​ - ಗ್ರಾಹಕ ತಾನು ವೀಕ್ಷಿಸಲು ಬಯಸುವ ಆಯ್ದ 25 ಚಾನಲ್‌ಗಳಿಗೆ ಇದಕ್ಕಿಂತ ಹೆಚ್ಚು ಹಣ ಪಾವತಿಸಬೇಕಿಲ್ಲ.

ಶೇ.18: ಕೇಬಲ್‌ ಟೀವಿ ಪ್ರಸಾರಕ ಅಥವಾ ಡಿಟಿಎಚ್‌ ಸೇವಾದಾರರಿಗೆ ಗ್ರಾಹಕ ನೀಡಬೇಕಿರುವ ಕನಿಷ್ಠ ಮಾಸಿಕ ಶುಲ್ಕವಾದ 130 ರು.ಗೆ ಸರ್ಕಾರ ವಿಧಿಸುವ ತೆರಿಗೆ.

- ಪ್ರಶಾಂತ್ ಕೆ ಪಿ 

Follow Us:
Download App:
  • android
  • ios