Asianet Suvarna News Asianet Suvarna News

ಬೆಂಗಳೂರಲ್ಲಿ ಬಡವರಿಗೆ 1600 ಎಕರೆ ಭೂಮಿ

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಬೆಂಗಳೂರಿನಲ್ಲಿ ಬಡವರಿಗೆ ಸೂರು ಕಲ್ಪಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕಾಗಿ 1600 ಎಕರೆ ಭೂಮಿ ಮಂಜೂರು ಮಾಡಲಾಗಿದೆ. 

Urban Poor Get Home Soon Says Karnataka CM HD Kumaraswamy
Author
Bengaluru, First Published Mar 1, 2019, 8:41 AM IST

ಬೆಂಗಳೂರು :  ಗಾರ್ಮೆಂಟ್ಸ್‌ ನೌಕರರು, ರಿಕ್ಷಾ ಚಾಲಕರು ಸೇರಿದಂತೆ ಬಡವರ್ಗದ ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ದೃಷ್ಟಿಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ ಒಂದು ಲಕ್ಷ ಗುಂಪು ಮನೆಗಳ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದಕ್ಕಾಗಿ ಈಗಾಗಲೇ ರಾಜೀವ್‌ ಗಾಂಧಿ ವಸತಿ ನಿಗಮಕ್ಕೆ ಬೆಂಗಳೂರಿನ ಹೊರವಲಯದಲ್ಲಿ 1600 ಎಕರೆಯಷ್ಟು ಭೂಮಿಯನ್ನು ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಕಂದಾಯ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ಗುರುವಾರ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ 10 ಸಾವಿರ ಹಕ್ಕುಪತ್ರಗಳ ವಿತರಣಾ ಸಮಾರಂಭದಲ್ಲಿ ಅಕ್ರಮ-ಸಕ್ರಮದಡಿ (94ಸಿಸಿ-94ಸಿ) ಅರ್ಹ ಫಲಾನುಭವಿಗಳಿಗೆ ನಿವೇಶನಗಳ ಹಕ್ಕುಪತ್ರ ವಿತರಿಸಿ ಮಾತನಾಡಿದರು.

1 ಲಕ್ಷ ಗುಂಪು ಮನೆಗಳ ನಿರ್ಮಾಣ ಮಾಡಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಇದಕ್ಕಾಗಿ ಆನ್‌ಲೈನ್‌ ಮೂಲಕ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಈ ವರೆಗೆ 48 ಸಾವಿರ ಅರ್ಜಿಗಳು ಬಂದಿವೆ. ಟೆಂಡರ್‌ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಆದಷ್ಟುಬೇಗ ಗುದ್ದಲಿ ಪೂಜೆ ನೆರವೇರಿಸಲಿದ್ದೇವೆ ಎಂದರು.

ಗುಂಪು ಮನೆ ಯೋಜನೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಪ್ರತಿ ಮನೆಗೆ ತಲಾ 1.50 ಲಕ್ಷ ರು. ಒದಗಿಸಲಾಗುತ್ತದೆ. ಹಾಗೆಯೇ ಮನೆಯ ಮಾಲಿಕರು 1.50 ಲಕ್ಷ ರು. ನೀಡಬೇಕಾಗುತ್ತದೆ. ಉಳಿದ ಮೂರ್ನಾಲ್ಕು ಲಕ್ಷ ರು.ಗಳನ್ನು ಸರ್ಕಾರವೇ ಗ್ಯಾರಂಟಿ ನೀಡಿ ಬ್ಯಾಂಕ್‌ನಿಂದ ಸಾಲಸೌಲಭ್ಯ ಒದಗಿಸುತ್ತದೆ. ನಾಡಿನ ಪ್ರತಿ ಕುಟುಂಬಕ್ಕೂ ಮನೆ ಅಥವಾ ನಿವೇಶನ ಒದಗಿಸಬೇಕು ಎಂಬ ಉದ್ದೇಶದಿಂದ ನಿಯಮದಲ್ಲೂ ಬದಲಾವಣೆ ತಂದಿದ್ದೇವೆ ಎಂದು ಹೇಳಿದರು.

ಹಿಂದಿನ ಸರ್ಕಾರ ಗುರುತಿಸಿದ್ದ ಎಲ್ಲ ನಿವೇಶನಗಳ ಹಕ್ಕು ಪತ್ರವನ್ನು ಈಗ ವಿತರಿಸುತ್ತಿದ್ದೇವೆ. 94-ಸಿ ಹಾಗೂ 94-ಸಿಸಿ ಅಡಿಯಲ್ಲಿ ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ನಿಯಮಾನುಸಾರವಾಗಿ ಅಕ್ರಮ-ಸಕ್ರಮ ಮಾಡುತ್ತಿದ್ದೇವೆ. ಇಲ್ಲಿ ಜಾತಿಯ ಪ್ರಶ್ನೆ ಇಲ್ಲ, ಎಲ್ಲ ವರ್ಗದ ಬಡವರನ್ನೂ ಸಮಾನವಾಗಿ ಪರಿಗಣಿಸಲಾಗುತ್ತಿದೆ ಎಂದರು.

ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಮಾತನಾಡಿ, 94-ಸಿ ಅಡಿಯಲ್ಲಿ 1,11,800 ಜನರಿಗೆ ಈವರೆಗೆ ಹಕ್ಕು ಪತ್ರ ನೀಡಿದ್ದೇವೆ. 81,385 ಜನರಿಗೆ ಹಕ್ಕು ಪತ್ರ ನೀಡಲು ಬಾಕಿ ಇದೆ. 94-ಸಿಸಿ ಅಡಿಯಲ್ಲಿ 45,193 ಫಲಾನುಭವಿಗಳಿಗೆ ಹಕ್ಕು ಪತ್ರ ಹಂಚಿಕೆ ಮಾಡಿದ್ದು, 36,140 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಬಾಕಿ ಇದೆ ಎಂದು ವಿವರಿಸಿದರು.

ಅರ್ಜಿ ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿದ್ದು, ಮಾ.31ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಂದಿರುವ ಅರ್ಜಿಗಳನ್ನು ನೋಂದಣಿ ಮಾಡಿಕೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿ, ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಶಾಸಕರಾದ ರೋಷನ್‌ ಬೇಗ್‌, ಬಿ.ಎನ್‌.ಸುರೇಶ್‌, ಮುನಿರತ್ನ, ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಮತ್ತಿತರರಿದ್ದರು.

Follow Us:
Download App:
  • android
  • ios