Asianet Suvarna News Asianet Suvarna News

ಆಯುಷ್ಮಾನ್‌ ಭಾರತ್‌ ಜಾರಿಗೆ ರಾಜ್ಯ ಒಪ್ಪಿಗೆ: ಕಾರ್ಡ್‌ ಇಲ್ಲದಿದ್ದರೂ ಚಿಕಿತ್ಸೆ

ಕಳೆದ ಹತ್ತು ದಿನಗಳ ಹಿಂದೆ ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪೈಕಿ ರಾಜ್ಯದ ಪಾಲನ್ನು ಭರಿಸಲು ಸಹ ಒಪ್ಪಿಕೊಂಡಿದ್ದೇವೆ. ಹೀಗಾಗಿ ರಾಜ್ಯದಲ್ಲಿರುವ 1.20 ಕೋಟಿ ಬಿಪಿಎಲ್‌ ಕಾರ್ಡ್‌ದಾರರು ಹಾಗೂ ಉಳಿದ ಎಪಿಎಲ್‌ ಕಾರ್ಡ್‌ದಾರರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಫಲಾನುಭವಿಗಳಲ್ಲಿ ಆರೋಗ್ಯ ಕಾರ್ಡ್‌ ಇಲ್ಲದಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಒಪ್ಪಂದ ಮಾಡಿಕೊಂಡ ಕಳೆದ ಹತ್ತು ದಿನದಲ್ಲಿ 2,391 ಮಂದಿಗೆ ಯೋಜನೆಯಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ- ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ 

State Govt Of Karnataka Ready To Implement Ayushman Bharat
Author
Bangalore, First Published Nov 16, 2018, 7:38 AM IST

ಬೆಂಗಳೂರು[ನ.16]: ರಾಜ್ಯದಲ್ಲಿ ಪ್ರತಿ ಬಿಪಿಎಲ್‌ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರು. ಹಾಗೂ ಎಪಿಎಲ್‌ ಕುಟುಂಬಕ್ಕೆ 1.5 ಲಕ್ಷ ರು.ವರೆಗೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುವ ‘ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ’ ಯೋಜನೆಗೆ ಅ.30ರಿಂದ ರಾಜ್ಯ ಸರ್ಕಾರ ಅಧಿಕೃತವಾಗಿ ಚಾಲನೆ ನೀಡಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಕಳೆದ ಹತ್ತು ದಿನಗಳ ಹಿಂದೆ ಕೇಂದ್ರ ಆರೋಗ್ಯ ಇಲಾಖೆಯೊಂದಿಗೆ ಆಯುಷ್ಮಾನ್‌ ಭಾರತ್‌ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಪೈಕಿ ರಾಜ್ಯದ ಪಾಲನ್ನು ಭರಿಸಲು ಸಹ ಒಪ್ಪಿಕೊಂಡಿದ್ದೇವೆ. ಹೀಗಾಗಿ ರಾಜ್ಯದಲ್ಲಿರುವ 1.20 ಕೋಟಿ ಬಿಪಿಎಲ್‌ ಕಾರ್ಡ್‌ದಾರರು ಹಾಗೂ ಉಳಿದ ಎಪಿಎಲ್‌ ಕಾರ್ಡ್‌ದಾರರು ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಫಲಾನುಭವಿಗಳಲ್ಲಿ ಆರೋಗ್ಯ ಕಾರ್ಡ್‌ ಇಲ್ಲದಿದ್ದರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಒಪ್ಪಂದ ಮಾಡಿಕೊಂಡ ಕಳೆದ ಹತ್ತು ದಿನದಲ್ಲಿ 2,391 ಮಂದಿಗೆ ಯೋಜನೆಯಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು.

ಆರೋಗ್ಯ ಕರ್ನಾಟಕ

ಸಿದ್ದರಾಮಯ್ಯ ನೇತೃತ್ವದ ಹಿಂದಿನ ರಾಜ್ಯ ಸರ್ಕಾರವು 2018ರ ಮಾ.21ರಿಂದ ರಾಜ್ಯದಲ್ಲಿ ‘ಆರೋಗ್ಯ ಕರ್ನಾಟಕ’ ಯೋಜನೆ ಜಾರಿಗೆ ತಂದಿದೆ. ಇದರಡಿ ರಾಜ್ಯದಲ್ಲಿರುವ 1.18 ಕೋಟಿ ಬಿಪಿಎಲ್‌ ಕುಟುಂಬಗಳಿಗೆ ವಾರ್ಷಿಕ 1.5 ಲಕ್ಷ ರು. ಚಿಕಿತ್ಸಾ ವೆಚ್ಚ ಹಾಗೂ 19 ಲಕ್ಷ ಎಪಿಎಲ್‌ ಕುಟುಂಬಗಳಿಗೆ ಖಾಸಗಿ ಆಸ್ಪತ್ರೆ ಶುಲ್ಕದಲ್ಲಿ ಶೇ.30ರಷ್ಟನ್ನು ಸರ್ಕಾರವೇ ಪಾವತಿಸುವುದಾಗಿ ಘೋಷಿಸಿತ್ತು. ತುರ್ತು ಪರಿಸ್ಥಿತಿಯಲ್ಲಿ ಕುಟುಂಬದ ಚಿಕಿತ್ಸಾ ವೆಚ್ಚದ ಮಿತಿಯನ್ನು ಎರಡು ಲಕ್ಷ ರು.ವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಿತ್ತು. ಇದರಂತೆ, 2018ರ ಸೆ.20ರವರೆಗೆ 18,201 ಮಂದಿ ಖಾಸಗಿ ಆಸ್ಪತ್ರೆ ಹಾಗೂ 13,842 ಮಂದಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇರಿದಂತೆ 32,043 ಮಂದಿ ಆರೋಗ್ಯ ಸೇವೆ ಪಡೆದಿದ್ದಾರೆ.

ಆಯುಷ್ಮಾನ್‌ ಭಾರತ

ಪ್ರಸ್ತುತ ಕೇಂದ್ರ ಸರ್ಕಾರವು ‘ಆಯುಷ್ಮಾನ್‌ ಭಾರತ್‌’ ಯೋಜನೆಯಡಿ ದೇಶಾದ್ಯಂತ ಪ್ರತಿ ಬಿಪಿಎಲ್‌ ಕುಟುಂಬಕ್ಕೆ 5 ಲಕ್ಷ ರು. ವಾರ್ಷಿಕ ಚಿಕಿತ್ಸಾ ವೆಚ್ಚ ಭರಿಸುವ ಕಾರ್ಯಕ್ರಮ ಚಾಲನೆ ನೀಡಿದೆ. ಆದರೆ, ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದ 62 ಲಕ್ಷ ಬಿಪಿಎಲ್‌ ಕುಟುಂಬಗಳಿಗೆ ಮಾತ್ರ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಚಿಕಿತ್ಸಾ ಸೇವೆ ಲಭ್ಯವಾಗಲಿದೆ. ಈ 62 ಲಕ್ಷ ಕುಟುಂಬಗಳಿಗೆ ಶೇ.60ರಷ್ಟುಚಿಕಿತ್ಸಾ ವೆಚ್ಚವನ್ನು ಕೇಂದ್ರ ಸರ್ಕಾರ ಹಾಗೂ ಶೇ.40ರಷ್ಟುವೆಚ್ಚವನ್ನು ರಾಜ್ಯ ಸರ್ಕಾರ ಭರಿಸುತ್ತದೆ. ಉಳಿದ 72 ಲಕ್ಷ ಕುಟುಂಬಗಳಿಗೆ ರಾಜ್ಯ ಸರ್ಕಾರವು ‘ಆರೋಗ್ಯ ಕರ್ನಾಟಕ’ ಯೋಜನೆಯಡಿಯಲ್ಲಿಯೇ ಶೇ.100ರಷ್ಟುಚಿಕಿತ್ಸಾ ವೆಚ್ಚವನ್ನು ಭರಿಸಬೇಕು. ಹೀಗಾಗಿ ಎರಡೂ ಯೋಜನೆಗಳನ್ನು ಒಗ್ಗೂಡಿಸಲಾಗಿದೆ. ಆರೋಗ್ಯ ಕರ್ನಾಟಕ ಯೋಜನೆಯಡಿ ಬರುವ 53 ಲಕ್ಷ ಬಿಪಿಎಲ್‌ ಕುಟುಂಬಗಳಿಗೆ 1.5 ಲಕ್ಷ ಬದಲಿಗೆ ರಾಜ್ಯ ಸರ್ಕಾರದ ವೆಚ್ಚದಲ್ಲೇ 5 ಲಕ್ಷ ರು.ವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಉಳಿದ 19 ಲಕ್ಷ ಎಪಿಎಲ್‌ ಕಾರ್ಡ್‌ ಕುಟುಂಬದವರೆಗೆ ಶೇ.30ರಷ್ಟುಶುಲ್ಕವನ್ನು ರಾಜ್ಯ ಸರ್ಕಾರ ಭರಿಸಲಿದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕಾರ್ಡ್‌ ಇಲ್ಲದಿದ್ದರೂ ಚಿಕಿತ್ಸೆ

ಪ್ರಸ್ತುತ ಬೆಂಗಳೂರು ಒನ್‌, ಕರ್ನಾಟಕ ಒನ್‌ ಕೇಂದ್ರ ಅಥವಾ ಆರೋಗ್ಯ ಇಲಾಖೆ ಗುರುತಿಸಿರುವ 14 ಆಸ್ಪತ್ರೆಗಳಲ್ಲಿ ಆರೋಗ್ಯ ಕಾರ್ಡ್‌ ನೀಡಲಾಗುತ್ತಿದೆ. ಆದರೆ, ಬಹುತೇಕ ಸಂದರ್ಭದಲ್ಲಿ ಆರೋಗ್ಯ ಕಾರ್ಡ್‌ ಇಲ್ಲದೆ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಆರೋಗ್ಯ ಕಾರ್ಡ್‌ ಹೊಂದಿಲ್ಲದಿದ್ದರೂ ಬಿಪಿಎಲ್‌ ಅಥವಾ ಎಪಿಎಲ್‌ ಕಾರ್ಡ್‌, ಆಧಾರ್‌ ಕಾರ್ಡ್‌ನಂತಹ ದಾಖಲೆಗಳಿದ್ದರೂ ಚಿಕಿತ್ಸೆ ನೀಡಬಹುದು. ಜತೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಆರೋಗ್ಯ ಕಾರ್ಡ್‌ ತಂದರೂ ಅನುಮತಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗಾಗಿ ಯಾವುದೇ ಗೊಂದಲವಿಲ್ಲದೆ ಪ್ರತಿಯೊಬ್ಬರೂ ಯೋಜನೆಯ ಲಾಭ ಪಡೆಯಬಹುದು ಎಂದು ಹೇಳಿದರು.

ಹೊರ ರಾಜ್ಯದಲ್ಲೂ ಚಿಕಿತ್ಸೆ

ಚಿಕಿತ್ಸೆಗಳನ್ನು ಮೂರು ರೀತಿಯಲ್ಲಿ ವಿಂಗಡಿಸಿದ್ದು ಪ್ರಾಥಮಿಕ, ದ್ವಿತೀಯ ಹಾಗೂ ಸಂಕೀರ್ಣ ಶಸ್ತ್ರಚಿಕಿತ್ಸೆಗಳಾಗಿ ವಿಂಗಡಿಸಲಾಗಿದೆ. ರಾಜ್ಯದಲ್ಲಿ 531 ಖಾಸಗಿ ಹಾಗೂ 385 ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಲಭ್ಯವಿದೆ. ಸೇವೆ ಪಡೆಯಲು ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಬೇಕು. ಅಲ್ಲಿ ಸೇವೆ ಇಲ್ಲದಿದ್ದರೆ ವೈದ್ಯರೇ ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಉಳಿದಂತೆ 170 ತುರ್ತು ಚಿಕಿತ್ಸೆಗಳಿಗೆ ನೇರವಾಗಿ ಖಾಸಗಿ ಆಸ್ಪತ್ರೆಗೆ ಹೋಗಲೂ ಅವಕಾಶ ಕಲ್ಪಿಸಲಾಗಿದೆ. ಹೊರರೋಗಿ ಚಿಕಿತ್ಸಾ ವೆಚ್ಚಗಳನ್ನು ಪಡೆಯಲೂ ಸಹ ನೂತನ ಯೋಜನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಯೋಜನೆಯಲ್ಲಿ 1624 ರೀತಿಯ ಚಿಕಿತ್ಸೆಗಳು ಬಡವರಿಗೆ ಸುಲಭವಾಗಿ ಸಿಗುತ್ತವೆ. ರಾಜ್ಯದ ಗಡಿ ಭಾಗದಲ್ಲಿರುವ ಜನರಿಗೆ ಅನಾರೋಗ್ಯ ಸಮಸ್ಯೆ ಚಿಕಿತ್ಸೆ ಪಡೆಯಲು ತೆಲಂಗಾಣ, ಕೇರಳ, ತಮಿಳುನಾಡು ಹಾಗೂ ಮಹಾರಾಷ್ಟ್ರದಲ್ಲೂ 50ಕ್ಕೂ ಹೆಚ್ಚು ಆಸ್ಪತ್ರೆಗಳ ಜತೆ ಒಡಂಬಡಿಕೆ ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

Follow Us:
Download App:
  • android
  • ios