Asianet Suvarna News Asianet Suvarna News

ದಕ್ಷಿಣ ಭಾರತ ಗೆಲ್ಲಲು ಬಿಜೆಪಿಗೆ ಅಯ್ಯಪ್ಪ ಅಸ್ತ್ರ

ಮಂಗಳೂರಿನ ಸಂಘನಿಕೇತನದಲ್ಲಿ ಬುಧವಾರ ತಡರಾತ್ರಿ ತನಕ ನಡೆದ ಆರ್‌ಎಸ್‌ಎಸ್‌ ದಕ್ಷಿಣ ಭಾರತ ವಿಶೇಷ ವರ್ಗದಲ್ಲಿ ಈ ಸೂಚನೆ ಹೊರಬಿದ್ದಿದೆ. ಆರ್‌ಎಸ್‌ಎಸ್‌ ಸರಕಾರ್ಯವಾಹ ಸುರೇಶ್‌ ಭಯ್ಯಾಜಿ ಜೋಶಿ ನೇತೃತ್ವದಲ್ಲಿ ನಡೆದ ಈ ವಿಶೇಷ ವರ್ಗದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್‌ ಭಾಗವಹಿಸಿದ್ದರು. ಬುಧವಾರ ರಾತ್ರಿ ಸುಮಾರು 9.15 ಗಂಟೆಗೆ ಆರಂಭವಾದ ಸಭೆ ತಡರಾತ್ರಿವರೆಗೂ ಮುಂದುವರಿಯಿತು ಎಂದು ಮೂಲಗಳು ತಿಳಿಸಿವೆ.

RSS instructed BJP to Use Sabarimala Issue For Lok Sabha Election
Author
Bangalore, First Published Nov 15, 2018, 8:39 AM IST

ಮಂಗಳೂರು[ನ.11]: ದಕ್ಷಿಣ ಭಾರತದಲ್ಲಿ ಮುಂಬರುವ ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ಶಬರಿಮಲೆ ವಿವಾದವನ್ನು ಪ್ರಮುಖ ಅಸ್ತ್ರವಾಗಿ ಬಿಜೆಪಿ ಬಳಸಿಕೊಳ್ಳುವುದು ಬಹುತೇಕ ಖಚಿತವಾಗಿದೆ. ದಕ್ಷಿಣದ 5 ರಾಜ್ಯಗಳಲ್ಲಿ ಬಿಜೆಪಿ ಬೇರು ಗಟ್ಟಿಗೊಳಿಸಬೇಕು, ಇದಕ್ಕಾಗಿ ಸದ್ಯಕ್ಕೆ ಬಿಜೆಪಿ ಪಾಲಿಗೆ ವರವಾಗಿ ಸಿಕ್ಕಿರುವ ಶಬರಿಮಲೆ ವಿವಾದವನ್ನು ಗೆಲುವಿನ ಅಸ್ತ್ರವಾಗಿ ಬಳಸಿಕೊಳ್ಳಬೇಕೆಂಬ ಸ್ಪಷ್ಟಸೂಚನೆ ಆರೆಸ್ಸೆಸ್‌ನಿಂದ ಪಕ್ಷದ ಮುಖಂಡರಿಗೆ ರವಾನೆಯಾಗಿದೆ.

ಮಂಗಳೂರಿನ ಸಂಘನಿಕೇತನದಲ್ಲಿ ಬುಧವಾರ ತಡರಾತ್ರಿ ತನಕ ನಡೆದ ಆರ್‌ಎಸ್‌ಎಸ್‌ ದಕ್ಷಿಣ ಭಾರತ ವಿಶೇಷ ವರ್ಗದಲ್ಲಿ ಈ ಸೂಚನೆ ಹೊರಬಿದ್ದಿದೆ. ಆರ್‌ಎಸ್‌ಎಸ್‌ ಸರಕಾರ್ಯವಾಹ ಸುರೇಶ್‌ ಭಯ್ಯಾಜಿ ಜೋಶಿ ನೇತೃತ್ವದಲ್ಲಿ ನಡೆದ ಈ ವಿಶೇಷ ವರ್ಗದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್‌, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್‌ ಭಾಗವಹಿಸಿದ್ದರು. ಬುಧವಾರ ರಾತ್ರಿ ಸುಮಾರು 9.15 ಗಂಟೆಗೆ ಆರಂಭವಾದ ಸಭೆ ತಡರಾತ್ರಿವರೆಗೂ ಮುಂದುವರಿಯಿತು ಎಂದು ಮೂಲಗಳು ತಿಳಿಸಿವೆ.

ಶಬರಿಮಲೆಗೆ ಮುಖ್ಯವಾಗಿ ದಕ್ಷಿಣದ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಡೆದುಕೊಳ್ಳುತ್ತಾರೆ. ಪ್ರಸಕ್ತ ಸುಪ್ರೀಂ ಕೋರ್ಟ್‌ ಶಬರಿಮಲೆಗೆ ಎಲ್ಲ ಮಹಿಳೆಯರ ಪ್ರವೇಶಕ್ಕೆ ತೀರ್ಪು ನೀಡಿದೆ. ಆದರೆ ಇದನ್ನು ಪ್ರಶ್ನಿಸುವಲ್ಲಿ ಕೇರಳ ಎಡರಂಗ ಸರ್ಕಾರ ಎಡವುತ್ತಿದೆ. ಇದನ್ನೇ ಚುನಾವಣಾ ದಾಳವಾಗಿ ಬಳಸಿಕೊಳ್ಳುವಂತೆ ಸಭೆಯಲ್ಲಿ ಆರೆಸ್ಸೆಸ್‌ ಪ್ರಮುಖರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೇರಳ, ಆಂಧ್ರ, ತೆಲಂಗಾಣ, ತಮಿಳ್ನಾಡು, ಕರ್ನಾಟಕದಲ್ಲಿ ಶಬರಿಮಲೆ ವಿಚಾರದಲ್ಲಿ ಈಗಾಗಲೇ ಹೋರಾಟಗಳು ನಡೆಯುತ್ತಿವೆ. ಇದನ್ನು ಪಂಚರಾಜ್ಯಗಳ ಅಸೆಂಬ್ಲಿ ಚುನಾವಣೆ ಮಾತ್ರವಲ್ಲ, ಮುಂದಿನ ಸಂಸತ್‌ ಚುನಾವಣೆ ವರೆಗೆ ಜೀವಂತವಾಗಿ ಇರಿಸಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಶಬರಿಮಲೆ ಹೋರಾಟವನ್ನು ತೀವ್ರಗೊಳಿಸಬೇಕು. ಜೊತೆಗೆ ಮುಂದಿನ ಎರಡು ವರ್ಷಗಳಲ್ಲಿ ನಡೆಯುವ ಕೇರಳದ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ ಗಾಳಿ ಬೀಸುವಂತೆ ತಂತ್ರರೂಪಿಸುವ ವಿಚಾರವೂ ಸಭೆಯಲ್ಲಿ ಚರ್ಚೆಗೆ ಬಂದಿದೆ. ಇದಕ್ಕಾಗಿ ತಕ್ಷಣವೇ ಸೂಕ್ತ ರೂಪುರೇಷೆಗಳನ್ನು ರಾಷ್ಟ್ರಮಟ್ಟದಲ್ಲಿ ಕೈಗೊಳ್ಳುವಂತೆ ಬಿಜೆಪಿಗೆ ಸೂಚಿಸಲಾಗಿದೆ.

ಆರೆಸ್ಸೆಸ್‌ನ ವಿಶೇಷ ವರ್ಗದಲ್ಲಿ ಪೂರ್ಣಾವಧಿ ಪ್ರಚಾರಕರು ಮಾತ್ರ ಭಾಗವಹಿಸುತ್ತಿದ್ದಾರೆ. ದೇಶದ ದಕ್ಷಿಣೋತ್ತರ ಭಾಗದಲ್ಲಿ ಪ್ರತ್ಯೇಕವಾಗಿ ಏಕಕಾಲಕ್ಕೆ 5 ದಿನಗಳಿಂದ ನಡೆಯುತ್ತಿರುವ ಈ ವಿಶೇಷ ವರ್ಗ ನ.15ರಂದು ಮುಕ್ತಾಯಗೊಳ್ಳುತ್ತಿದೆ. ಇದರಲ್ಲಿ ಆರೆಸ್ಸೆಸ್‌ ಹಾಗೂ ಸಂಘಟನೆ ಬಗ್ಗೆ ಮಾತ್ರ ವಿಸ್ತೃತ ಚರ್ಚೆ ನಡೆಯುತ್ತದೆ. ಆದರೆ ಈ ಬಾರಿ ವಿಶೇಷ ವರ್ಗ ನಡೆಯುತ್ತಿರುವ ವೇಳೆಗೇ ಶಬರಿಮಲೆ ವಿವಾದ ತಲೆದೋರಿರುವುದು ಈ ವಿಚಾರ ಚರ್ಚೆಗೆತ್ತಿಕೊಳ್ಳಲು ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆ ವಿಚಾರವೂ ಚರ್ಚೆ: ಆರೆಸ್ಸೆಸ್‌ನ ಈ ವಿಶೇಷ ವರ್ಗದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ವಿಚಾರವೂ ಚರ್ಚೆಗೆ ಬಂದಿದೆ. ರಾಮ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ದೃಢ ಹೆಜ್ಜೆ ಇರಿಸಬೇಕು. ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ವಿಳಂಬವಾಗುವ ಕಾರಣ ವಿಶೇಷ ಮಸೂದೆ ಅಥವಾ ಅಧ್ಯಾದೇಶ ಮೂಲಕವಾದರೂ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಮುಹೂರ್ತ ಘೋಷಿಸಬೇಕು. ಇದರ ಹೊಣೆಯನ್ನು ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ನಿಭಾಯಿಸಬೇಕು. ಇದು ಮುಂದಿನ ಲೋಕಸಭಾ ಚುನಾವಣೆಗೂ ಬಿಜೆಪಿಗೆ ಅನುಕೂಲ ಅಸ್ತ್ರವಾಗಿ ಪರಿಣಮಿಸಲಿದೆ ಎಂಬ ಲೆಕ್ಕಾಚಾರವನ್ನು ಸಭೆಯ ಮುಂದಿಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಳಂಬವಾಗಿ ಆಗಮನ:

ಇದಕ್ಕೂ ಮೊದಲು ರಾತ್ರಿ ನಿಗದಿತ 7 ಗಂಟೆ ಬದಲು ಒಂದೂವರೆ ತಾಸು ವಿಳಂಬವಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಶಾ, ಭೂಪೇಂದ್ರ ಯಾದವ್‌, ರಾಮಲಾಲ್‌ ಬಂದಿಳಿದರು. ಗುರುವಾರ ಬೆಳಗ್ಗೆ 9.30ಕ್ಕೆ ಅಮಿತ್‌ ಶಾ, ತಂಡ ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದೆ ಎಂದು ಪಕ್ಷ ಮೂಲಗಳು ತಿಳಿಸಿವೆ.

Follow Us:
Download App:
  • android
  • ios