Asianet Suvarna News Asianet Suvarna News

ರೈತರಿಗೆ ಕಣ್ಣೀರು ತರಿಸುತ್ತಿರುವ ಈರುಳ್ಳಿ : ಕನಿಷ್ಟ ಮಟ್ಟಕ್ಕೆ ಕುಸಿದ ಬೆಲೆ

ಈರುಳ್ಳಿ ಬೆಲೆ ಅತ್ಯಂತ ಕಡಿಮೆಯಾಗಿದ್ದು, ರೈತರ ಕಣ್ಣಲ್ಲಿ ನೀರು ತರಿಸುತ್ತಿದೆ. ಬೆಳೆ ಉತ್ತಮವಾಗಿದ್ದರೂ ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತರು ಕಂಗಾಲಾಗಿದ್ದಾರೆ. 

Onion Price Hits Very Low Karnataka Farmers In Tears
Author
Bengaluru, First Published Feb 25, 2019, 9:40 AM IST

ಬೆಂಗಳೂರು :  ಸಾವಿರಾರು ರು. ಬಂಡವಾಳ ಸುರಿದು, ಉತ್ತಮ ಇಳುವರಿ ಬಂದಿದ್ದರೂ ಅಂತಿಮವಾಗಿ ಕೈಗೆ ಹಾಕಿದ ಬಂಡವಾಳವೂ ಸಿಗದೇ ರೈತ ಕಂಗಾಲಾಗಿದ್ದಾನೆ.

ಕೆಲ ತಿಂಗಳ ಹಿಂದಷ್ಟೇ ದಾಖಲೆಯ ದರಕ್ಕೆ ಮಾರಾಟಗೊಂಡಿದ್ದ ಈರುಳ್ಳಿ ಇದೀಗ ಎರಡು ದಶಕಗಳ ಹಿಂದಿಗಿಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಸರ್ಕಾರದ ಬೆಂಬಲ ಬೆಲೆಯೂ ಆಶಾದಾಯಕವಾಗಿಲ್ಲ. ಸರ್ಕಾರವೂ ನೆರವಿಗೆ ಬರುತ್ತಿಲ್ಲ. ಹೀಗಾಗಿ ನಿರೀಕ್ಷೆ ಮಟ್ಟದಲ್ಲಿ ಬೆಲೆ ಸಿಗದಿರುವುದು ರೈತರನ್ನು ಕಂಗೆಡಗಿಸುವಂತೆ ಮಾಡಿದೆ. ಈ ಸಂಬಂಧ ರೈತರು ಅಳಲನ್ನು ತೋಡಿಕೊಂಡಿದ್ದಾರೆ.

‘ಈರುಳ್ಳಿ ಬೆಳೆ ಬೇಸಾಯಕ್ಕೆ ಒಂದು ಎಕರೆಗೆ 50ರಿಂದ 60 ಸಾವಿರ ರು. ಖರ್ಚಾಗುತ್ತದೆ. ಈ ವರ್ಷ ಉತ್ತಮ ಇಳುವರಿ ಬಂದಿದ್ದರೂ ಹಾಕಿದ ಬಂಡವಾಳವೂ ಕೈಗೆ ಸಿಗುತ್ತಿಲ್ಲ. ರೈತರು ಈರುಳ್ಳಿ ಬೆಳೆಯಿಂದ ಲಾಭದ ನಿರೀಕ್ಷೆ ಇಟ್ಟುಕೊಳ್ಳಬಾರದು’ ಎನ್ನುತ್ತಾರೆ ಕಲಬುರಗಿಯ ಈರುಳ್ಳಿ ಬೆಳೆಗಾರರಾದ ರವೀಂದ್ರ ಮಾಲಿ ಪಾಟೀಲ್‌.

ರೈತ ಸಮ್ಮಾನ್ ಯೋಜನೆ: ಹಣ ಬಿಡುಗಡೆ ವೇಳೆ ಮೋದಿ ಘರ್ಜನೆ!

ರಾಜ್ಯದಲ್ಲಿ ಈ ವರ್ಷ ಈರುಳ್ಳಿ ಇಳುವರಿ ಉತ್ತಮವಾಗಿದೆ. ಜತೆಗೆ ರಾಜಸ್ಥಾನ, ಮಹಾರಾಷ್ಟ್ರದಿಂದಲೂ ಹೆಚ್ಚುವರಿ ಈರುಳ್ಳಿ ಬರುತ್ತಿದೆ. ಕಳೆದ ವರ್ಷ ಉತ್ತಮ ಬೆಲೆ ದೊರಕಿದ್ದರಿಂದ ಈ ವರ್ಷವೂ ಲಾಭದ ನಿರೀಕ್ಷೆಯಲ್ಲಿ ಅಧಿಕ ರೈತರು ಈರುಳ್ಳಿ ಬೆಳೆದಿದ್ದಾರೆ. ಇದರಿಂದ ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗೆ ದಿನವಹಿ ಬರುವ ಈರುಳ್ಳಿ ಪ್ರಮಾಣವೂ ದುಪ್ಪಟ್ಟಾಗಿದ್ದು, ಬೇಡಿಕೆ ಸಂಪೂರ್ಣವಾಗಿ ಕುಸಿದಿದೆ ಎನ್ನುತ್ತಾರೆ.

ನಿರೀಕ್ಷೆ ಮಟ್ಟದಲ್ಲಿ ಸಿಗುತ್ತಿಲ್ಲ ಬೆಲೆ:

‘ಈರುಳ್ಳಿ ಬದಲು ತೊಗರಿ, ಕಡಲೆ ಬೆಳೆದಿದ್ದರೆ ಎಷ್ಟೋ ಲಾಭವಾಗುತ್ತಿತ್ತು. ಕಾರ್ಮಿಕರ ಕೂಲಿ, ಗೊಬ್ಬರ, ಸಾಗಣೆ ವೆಚ್ಚ ಎಲ್ಲವೂ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬಿತ್ತನೆ ಬೀಜ ಒಂದು ಕೆ.ಜಿ.ಗೆ 1600ರಿಂದ 1800 ರು. ಇದೆ. ಎಪಿಎಂಸಿ ಮಾರುಕಟ್ಟೆಗೆ ಕೊಂಡೊಯ್ಯಲು ಕ್ವಿಂಟಾಲ್‌ಗೆ 200ರಿಂದ 300 ರು. ಖರ್ಚು ಬೀಳುತ್ತದೆ. ಸ್ಥಳೀಯವಾಗಿ ಮಾರಾಟ ಮಾಡಬೇಕಾದರೆ ಏಜೆಂಟ್‌ಗಳಿಗೆ ಪ್ರತಿ 100 ರು.ಗೆ 10 ರು. ಕಮೀಷನ್‌ ಕೊಡಬೇಕು. ಹೀಗೆ ಸಾವಿರಾರು ರು. ಖರ್ಚು ಮಾಡಿ ಬೆಳೆ ತೆಗೆದರೂ ನಿರೀಕ್ಷಿತ ಮಟ್ಟದಲ್ಲಿ ಬೆಲೆ ಸಿಗುತ್ತಿಲ್ಲ’ ಎಂದು ರವೀಂದ್ರ ಬೇಸರ ವ್ಯಕ್ತಪಡಿಸಿದರು.

ಮಂಡ್ಯ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್

‘ಕಳೆದ 15 ವರ್ಷದಿಂದ ಈರುಳ್ಳಿ ಬೆಳೆಯುತ್ತಿದ್ದೇವೆ. ಅರ್ಧ ವಾರ್ಷಿಕ ಬೆಳೆ ಬೇಸಾಯಕ್ಕೆ 40 ಸಾವಿರಕ್ಕೂ ಹೆಚ್ಚಿನ ಖರ್ಚಾಗುತ್ತದೆ. ಕಳೆದ ಮುಂಗಾರಿನಲ್ಲಿ ಕೆ.ಜಿ.ಗೆ 15ರಿಂದ 20 ರು. ಬೆಲೆ ಇತ್ತು. ನಿಪ್ಪಾಣಿಯಿಂದ ಬೆಂಗಳೂರಿಗೆ ಸಾಗಣೆ ವೆಚ್ಚ 7 ಟನ್‌ಗೆ 16000 ರು.ಗೂ ಹೆಚ್ಚಾಗುತ್ತದೆ. ಈಗ ಕೆ.ಜಿ. 5ರು.ಗೆ ಮಾರಾಟ ಮಾಡಿದರೂ ಕೈಗೆ 2-3 ರು. ಸಿಗುತ್ತದೆ. ಬೆಲೆ ಇಳಿಕೆಯಿಂದ ಬೇಸತ್ತಿರುವ ರೈತರ ಸಹಾಯಕ್ಕೆ ಸರ್ಕಾರ ಮನಸ್ಸು ಮಾಡಬೇಕು’ ಎಂದು ಬೆಳಗಾವಿಯ ನಿಪ್ಪಾಣಿ ರೈತ ಶೈಲೇಶ್‌ ಜೋಶಿ ಒತ್ತಾಯಿಸಿದ್ದಾರೆ.

ಪೂರೈಕೆ ಹೆಚ್ಚು ಬೇಡಿಕೆ ಇಳಿಕೆ:

ಚಿತ್ರದುರ್ಗ, ಗದಗ, ಬೆಳಗಾವಿ, ವಿಜಯಪುರ, ಚಿಕ್ಕಮಗಳೂರು ಸೇರಿದಂತೆ ಮಹಾರಾಷ್ಟ್ರ, ರಾಜಸ್ಥಾನದಿಂದಲೂ ಈರುಳ್ಳಿ ರಾಜ್ಯಕ್ಕೆ ಪೂರೈಕೆಯಾಗುತ್ತಿದೆ. ಇನ್ನೊಂದೆಡೆ ಹೊಸ ಬೆಳೆಯೂ ಬರುತ್ತಿದೆ. ಎಪಿಎಂಸಿಗೆ ಪ್ರತಿ ದಿನ 150ರಿಂದ 200 ಲೋಡ್‌ ಈರುಳ್ಳಿ ಸರಬರಾಜಾಗುತ್ತದೆ. ಈ ಪೈಕಿ ಬೆಂಗಳೂರು ಮಾರುಕಟ್ಟೆಗೆ 100ರಿಂದ 120 ಲೋಡ್‌, ಆಂಧ್ರ ಹಾಗೂ ತಮಿಳುನಾಡಿಗೆ 70-80 ಲೋಡ್‌ ಈರುಳ್ಳಿ ಪೂರೈಕೆಯಾಗುತ್ತದೆ. ಮಹಾರಾಷ್ಟ್ರದಲ್ಲಿ ಸಗಟು ದರ 3ರಿಂದ 5 ರು. ಇದ್ದರೆ, ಎಪಿಎಂಸಿಯಲ್ಲಿ ಗುಣಮಟ್ಟಆಧರಿಸಿ ಕ್ವಿಂಟಾಲ್‌ಗೆ 200 ರಿಂದ 800 ರು. ನಿಗದಿಯಾಗಿದೆ. ಒಂದೆರಡು ತಿಂಗಳು ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಎಪಿಎಂಸಿ ಈರುಳ್ಳಿ ವರ್ತಕರ ಸಂಘದ ನಿರ್ದೇಶಕ ಬಿ.ರವಿಶಂಕರ್‌ ತಿಳಿಸಿದರು.

ರಾಜ್ಯದಲ್ಲಿ ಅಂದಾಜು 25 ಸಾವಿರದಿಂದ 30 ಸಾವಿರ ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತದೆ. ಸಗಟು ಮಾರುಕಟ್ಟೆಯಲ್ಲಿ ಗುಣಮಟ್ಟದ ಈರುಳ್ಳಿ ಕ್ವಿಂಟಲ್‌ಗೆ 800 ರು., ಸಾಮಾನ್ಯ-ಮಧ್ಯಮಕ್ಕೆ 200-500ರು. ನಿಗದಿಯಾಗಿದೆ. ಸರ್ಕಾರದ ಬೆಂಬಲ ಬೆಲೆಗಿಂತ ಹೊರಗಿನ ಮಾರುಕಟ್ಟೆಯಲ್ಲಿಯೇ ಹೆಚ್ಚಿನ ಬೆಲೆ ದೊರಕುತ್ತದೆ.

- ಎಂ. ಸುರೇಶ್‌, ಶ್ರೀ ಶಿವ ಟ್ರೇಡ​ರ್ಸ್ ಮಾಲೀಕರು, ಎಪಿಎಂಸಿ ಯಾರ್ಡ್‌

ವರದಿ : ಕಾವೇರಿ

Follow Us:
Download App:
  • android
  • ios