Asianet Suvarna News Asianet Suvarna News

ಲೋಕಸಭೆ ಚುನಾವಣೆ : ಈ ಕಾಂಗ್ರೆಸಿಗರಿಗೆ ಟಿಕೆಟಿಲ್ಲ

ದೇಶದಲ್ಲಿ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಕಾಂಗ್ರೆಸ್ ಮುಖಂಡ ಮಾಜಿ ಸಿಎಂ ಸಿದ್ದರಾಮಯ್ಯ ಹಾಲಿ ಶಾಸಕರಿಗೆ ಲೋಕಸಭಾ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದಾರೆ. 

No Lok Sabha Ticket For MLAs Says Congress Leader Siddaramaiah
Author
Bengaluru, First Published Feb 10, 2019, 11:56 AM IST

ನವದೆಹಲಿ :  ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಸಕ್ತ ಶಾಸಕರಾಗಿರುವವರಿಗೆ ಟಿಕೆಟ್‌ ನೀಡಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಶನಿವಾರ ನಡೆದ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರು ಮತ್ತು ಶಾಸಕಾಂಗ ಪಕ್ಷದ ನಾಯಕರ ಸಭೆಯಲ್ಲಿ ಭಾಗವಹಿಸಿದ ಬಳಿಕ ಕರ್ನಾಟಕ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು.

ಸಭೆಯಲ್ಲಿ ನಿರ್ದಿಷ್ಟವಾಗಿ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಮೈತ್ರಿ ಮೂಲಕ ಕಾಂಗ್ರೆಸ್‌ ಚುನಾವಣೆ ಎದುರಿಸುವ ರಾಜ್ಯಗಳಲ್ಲಿ ಆದಷ್ಟುಬೇಗ ಸೀಟು ಹಂಚಿಕೆ ಅಂತಿಮಗೊಳಿಸಬೇಕು ಎಂಬ ಸೂಚನೆಯನ್ನು ವರಿಷ್ಠರು ನೀಡಿದ್ದಾರೆ. ರಾಜ್ಯದಲ್ಲಿ ಸೀಟು ಹಂಚಿಕೆ ಬಗ್ಗೆ ಮೊದಲ ಸಭೆ ಕೂಡ ಇನ್ನೂ ನಡೆದಿಲ್ಲ. ಸೀಟು ಹಂಚಿಕೆ ಬಗೆಗಿನ ಚರ್ಚೆ ಸಮನ್ವಯ ಸಮಿತಿಯಲ್ಲಿ ನಡೆಯದು. ಬದಲಾಗಿ ಉಭಯ ಪಕ್ಷಗಳ ಹಿರಿಯ ನಾಯಕರ ಮಟ್ಟದಲ್ಲಿ ನಡೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಲೋಕಸಭೆ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಪಕ್ಷದ ತಯಾರಿ, ಅಭ್ಯರ್ಥಿಗಳ ಆಯ್ಕೆ, ಪ್ರಾದೇಶಿಕ ಪಕ್ಷಗಳೊಂದಿಗಿನ ಮೈತ್ರಿ ಹಾಗೂ ಪ್ರಚಾರದ ಕುರಿತು ರಾಹುಲ್ ಗಾಂಧಿ ಜೊತೆ ಸುದೀರ್ಘ ಚರ್ಚೆ ನಡೆಸಲಾಯಿತು. ಆಯಾ ರಾಜ್ಯ ಮುಖಂಡರಿಂದ ವರದಿ ಪಡೆದಿರುವ ರಾಹುಲ್, ಚುನಾವಣಾ ಕಾರ್ಯತಂತ್ರ ರೂಪಿಸುವ ಕುರಿತು ಸಲಹೆ ನೀಡಿದರು ಎಂದು ತಿಳಿಸಿದರು.

ಅಂಬರೀಷ್‌ ಪತ್ನಿ ಸುಮಲತಾ ಅವರು ರಾಜಕೀಯಕ್ಕೆ ಬರಬೇಕು, ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬುದು ಮಂಡ್ಯ ಜಿಲ್ಲಾ ಕಾರ್ಯಕರ್ತರ ಮತ್ತು ಅವರ ಅಭಿಮಾನಿಗಳ ಆಸೆ. ಅವರಿಗೆ ಮಂಡ್ಯ ಕ್ಷೇತ್ರದಿಂದ ಟಿಕೆಟ್‌ ನೀಡುವ ಕುರಿತು ಪಕ್ಷದಲ್ಲಿ ಯಾವುದೇ ರೀತಿಯ ಚರ್ಚೆ ನಡೆದಿಲ್ಲ. ಸೀಟು ಹಂಚಿಕೆಯೇ ಅಂತಿಮವಾಗಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ನಮ್ಮ ಮೈತ್ರಿಕೂಟವು ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಗೆಲ್ಲಲಿದೆ. ಯಡಿಯೂರಪ್ಪ ಅವರಿಗೆ ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಬೇಕು ಎಂಬ ಹುಚ್ಚು ಹಿಡಿದಿದೆ. ಇದು ಸಾಧ್ಯವಿಲ್ಲ. ಮೈತ್ರಿ ಸರ್ಕಾರ ಸರ್ಕಾರ ಸುಭದ್ರವಾಗಿದೆ ಎಂದರು.

ಸೀಟು ಹಂಚಿಕೆ ಬಗ್ಗೆ ರಾಹುಲ್‌, ಗೌಡ ಸಭೆ

ಚುನಾವಣಾ ಪ್ರಚಾರ ಮತ್ತು ಬೂತ್‌ ಮಟ್ಟದ ಪ್ರಚಾರ ಬಗ್ಗೆ ಸಭೆಯಲ್ಲಿ ಹೆಚ್ಚಿನ ಚರ್ಚೆ ನಡೆಯಿತು. ಫೆಬ್ರವರಿ ಮತ್ತು ಮಾಚ್‌ರ್‍ ತಿಂಗಳಲ್ಲಿ ರಾಹುಲ್ ಗಾಂಧಿ ಅವರ ಕಾರ್ಯಕ್ರಮಗಳ ಆಯೋಜನೆ ಎಲ್ಲೆಲ್ಲಿ ಇರಬೇಕು. ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಯಾವ್ಯಾವ ವಿಷಯಗಳನ್ನು ಪ್ರಸ್ತಾಪಿಸಬೇಕು ಮುಂತಾದವುಗಳ ಮಾಹಿತಿ ನೀಡುವಂತೆ ಕೋರಿದ್ದಾರೆ. ಆಯಾ ರಾಜ್ಯಗಳ ಸಮಸ್ಯೆಗಳ ಬಗ್ಗೆ, ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮಾಹಿತಿ ಪಡೆಯಲಾಗಿದೆ. ರಾಜ್ಯದಲ್ಲಿನ ಮೈತ್ರಿ ಸರ್ಕಾರ ಮತ್ತು ಸೀಟು ಹಂಚಿಕೆ ಬಗೆಗಿನ ವಿಷಯವನ್ನು ಕೇಂದ್ರದ ನಾಯಕರ ಮುಂದೆ ನಾವು ಇಟ್ಟಿದ್ದೇವೆ. ಈ ತಿಂಗಳಲ್ಲೇ ಸಂಸತ್‌ ಚುನಾವಣಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮಾರ್ಗದರ್ಶಿ ಸೂತ್ರ ನೀಡಿದ್ದಾರೆ. ರಾಜ್ಯದಲ್ಲಿನ ಸೀಟು ಹಂಚಿಕೆ ಬಗ್ಗೆ ಮೊದಲು ರಾಜ್ಯಮಟ್ಟದಲ್ಲಿ ಚರ್ಚೆ ನಡೆದು ಆ ಬಳಿಕ ದೇವೇಗೌಡ ಮತ್ತು ರಾಹುಲ… ಗಾಂಧಿ ಹಂತದಲ್ಲಿ ಚರ್ಚೆ ನಡೆಯಲಿದೆ ಎಂದು ದಿನೇಶ್‌ ಗುಂಡೂರಾವ್‌ ಸುದ್ದಿಗಾರರಿಗೆ ತಿಳಿಸಿದರು.

Follow Us:
Download App:
  • android
  • ios