Asianet Suvarna News Asianet Suvarna News

ಈ ವಿಚಾರದಲ್ಲಿ ಬಿಹಾರ, ಒಡಿಶಾಕ್ಕಿಂತಲೂ ಕರ್ನಾಟಕ ಕಳಪೆ!

ಮಕ್ಕಳಲ್ಲಿ ಅಪೌಷ್ಟಿಕತೆ ಪ್ರಮಾಣ ಬಿಹಾರ,ಒಡಿಶಾಕ್ಕಿಂತಲೂ ಕರ್ನಾಟಕ ಕಳಪೆ| ಕಳಪೆ ಸಾಧನೆ ಮಾಡಿದ ದೇಶದ 72 ಲೋಕಸಭಾ ಕ್ಷೇತ್ರಗಳಲ್ಲಿ 10 ಕರ್ನಾಟಕದ್ದು| ಕುಂಠಿತ ಬೆಳವಣಿಗೆ, ಕಡಿಮೆ ತೂಕ, ಕ್ಷೀಣಿಸುವಿಕೆ, ರಕ್ತ ಹೀನತೆಯ ಮಾನದಂಡ

Malnutrition in children karnataka is lower than odisha and bihar
Author
Bangalore, First Published Jan 23, 2019, 10:05 AM IST

ನವದೆಹಲಿ[ಜ.23]: ಆರ್ಥಿಕ ಪ್ರಗತಿಯಲ್ಲಿ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕ, ಮಕ್ಕಳ ಅಪೌಷ್ಟಿಕತೆ ವಿಷಯದಲ್ಲಿ, ದೇಶದಲ್ಲೇ ಅತ್ಯಂತ ಹಿಂದುಳಿದ ರಾಜ್ಯಗಳು ಎಂಬ ಕುಖ್ಯಾತಿಗೆ ಗುರಿಯಾಗಿರುವ ಬಿಹಾರ ಮತ್ತು ಒಡಿಶಾಕ್ಕಿಂತಲೂ ಕಳಪೆ ಸಾಧನೆ ಮಾಡಿದೆ.

2015-​16ರಲ್ಲಿ 543 ಲೋಕಸಭಾ ಕ್ಷೇತ್ರಗಳಲ್ಲಿ ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿ ಅಂಶಗಳನ್ನು ಆಧರಿಸಿ ಟಾಟಾ ಟ್ರಸ್ಟ್‌, ಹಾರ್ವರ್ಡ್‌ ವಿವಿ, ದೆಹಲಿಯ ಇನ್‌ಸ್ಟಿಟ್ಯೂಟ್‌ ಆಫ್‌ ಇಕನಾಮಿಕ್‌ ಗ್ರೋಥ್‌ ಇನ್‌ ಇಂಡಿಯಾ ಶಿಕ್ಷಣ ಸಂಸ್ಥೆಗಳು ಹಾಗೂ ನೀತಿ ಆಯೋಗ ನಡೆಸಿದ ಅಧ್ಯಯನ ವರದಿಯಲ್ಲಿ ಈ ಸಂಗತಿ ತಿಳಿಸಲಾಗಿದೆ.

ಮಕ್ಕಳ ಕುಂಠಿತ ಬೆಳವಣಿಗೆ, ಕಡಿಮೆ ತೂಕ, ಕ್ಷೀಣಿಸುವಿಕೆ ಮತ್ತು ರಕ್ತ ಹೀನತೆ- ಈ ನಾಲ್ಕು ಅಂಶಗಳನ್ನು ಅಪೌಷ್ಟಿಕತೆಯ ಅಳತೆಗೋಲಾಗಿ ಪರಿಗಣಿಸಲಾಗಿದೆ. ಈ 4 ಅಂಶಗಳು ಮಕ್ಕಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬಂದ 72 ಲೋಕಸಭಾ ಕ್ಷೇತ್ರಗಳನ್ನು ಮೊದಲ ಪಟ್ಟಿಗೆ ಸೇರಿಸಲಾಗಿದೆ. ಈ ಪಟ್ಟಿಯಲ್ಲಿ ಜಾರ್ಖಂಡ್‌ನ 12, ಮಧ್ಯಪ್ರದೇಶದ 19, ಕರ್ನಾಟಕದ 10, ರಾಜಸ್ಥಾನದ 6 ಹಾಗೂ ಉತ್ತರ ಪ್ರದೇಶದ 8 ಲೋಕಸಭಾ ಕ್ಷೇತ್ರಗಳು ಸೇರಿವೆ.

ವಿಶೇಷವೆಂದರೆ ಬಿಹಾರದ 40 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 6 ಹಾಗೂ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಕೇವಲ 8 ಕ್ಷೇತ್ರಗಳು ಮಾತ್ರ ಮಕ್ಕಳ ಅಪೌಷ್ಠಿಕತೆಯಲ್ಲಿ ಅತಿ ಕಳಪೆ ಸಾಧನೆ ತೋರಿವೆ. ಇನ್ನು ಒಡಿಶಾದ 7 ಜಿಲ್ಲೆಗಳು ಮಕ್ಕಳ ಅಪೌಷ್ಟಿಕತೆಯ ನಿರ್ಮೂಲನೆ ವಿಷಯದಲ್ಲಿ ಗಮನಾರ್ಹ ಸಾಧನೆ ಮಾಡಿವೆ. ಈ ಲೆಕ್ಕಾಚಾರದಲ್ಲಿ ನೋಡಿದರೆ ಮಕ್ಕಳ ಅಪೌಷ್ಟಿಕತೆ ವಿಷಯದಲ್ಲಿ ಕರ್ನಾಟಕದ 10 ಲೋಕಸಭಾ ಕ್ಷೇತ್ರಗಳು ಕಳಪೆ ಸಾಧನೆ ಮಾಡುವ ಮೂಲಕ ಬಿಹಾರ ಮತ್ತು ಒಡಿಶಾಕ್ಕಿಂತಲೂ ಕಳಪೆ ಸಾಧನೆ ಮಾಡಿದೆ.

Follow Us:
Download App:
  • android
  • ios