Asianet Suvarna News Asianet Suvarna News

ರಾಜ್ಯ ಬಜೆಟ್ ದಿನವೇ ರಾಜೀನಾಮೆ ನೀಡಲಿದ್ದಾರೆ ಈ ನಾಯಕರು?

ರಾಜ್ಯದಲ್ಲಿ ಬಜೆಟ್ ಮಂಡನೆಗೆ ಸರ್ಕಾರ ಸಿದ್ಧವಾಗಿದೆ. ಇದೇ ಸಂದರ್ಭದಲ್ಲಿ ಬಜೆಟ್ ಅಧಿವೇಶನ ನಡೆಯಲಿದ್ದು, ಅದೇ ದಿನವೇ ಅತೃಪ್ತರು ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬಂದಿದೆ. 

Karnataka Budget Session Day Dissident Leaders may Quit Congress
Author
Bengaluru, First Published Feb 4, 2019, 7:51 AM IST

ಬೆಂಗಳೂರು :  ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಬಜೆಟ್ ಅಧಿವೇಶನದ ಮೇಲೆ ಅತೃಪ್ತ ಶಾಸಕರ ಕರಿನೆರಳು ಬಿದ್ದಿದ್ದು, ಅಧಿವೇಶನದ ಮೊದಲ ದಿನವೇ ಆಡಳಿತಾರೂಢ ಪಕ್ಷಗಳ ಅತೃಪ್ತ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಯಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡಿಸುವುದೇ ಅನುಮಾನ ಎಂಬ ಹೇಳಿಕೆಗಳನ್ನು ಪ್ರತಿಪಕ್ಷ ಬಿಜೆಪಿ ನಾಯಕರು ನೀಡುತ್ತಿರುವ ಬೆನ್ನಲ್ಲೇ ಅತೃಪ್ತರು ಅಧಿವೇಶನದ ಮೊದಲ ದಿನವೇ ರಾಜೀನಾಮೆ ನೀಡಬಹುದು ಎಂಬ ಸುದ್ದಿ ಹಬ್ಬಿರುವುದು ಒಂದಕ್ಕೊಂದು ತಾಳೆ ಇದೆಯೇ ಎಂಬ ಅನುಮಾನ ಮೂಡಿಸಿದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಹಲವು ಶಾಸಕರು ಈವರೆಗೆ ತಮ್ಮ ಪಕ್ಷ ಕಾಂಗ್ರೆಸ್‌ನಿಂದ ದೂರವೇ ಉಳಿದಿದ್ದು, ಅವರೊಂದಿಗೆ ಇನ್ನಷ್ಟು ಶಾಸಕರು ಕೈಜೋಡಿಸುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಲಿದ್ದಾರೆ.  

ಆದರೆ, ಇದು ಎಷ್ಟರಮಟ್ಟಿಗೆ ಅನುಷ್ಠಾನಗೊಳ್ಳಲಿದೆ ಎಂಬುದನ್ನು ಈಗಲೇ ನಿಖರವಾಗಿ ಹೇಳದಂಥ ಪರಿಸ್ಥಿತಿಯಿದೆ ಎಂದು ಮೂಲಗಳು ತಿಳಿಸಿವೆ. ಅಧಿವೇಶನದ ಮೊದಲ ದಿನ ಅಂದರೆ ಫೆ.6 ರಂದು ರಾಜ್ಯಪಾಲರು ವಿಧಾನಮಂಡಲದ ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಮರುದಿನ 7 ರಂದು ಯಾವುದೇ ಕಲಾಪ ಇರುವುದಿಲ್ಲ. ಅದರ ಮರುದಿನ ಫೆ.8 ರಂದು ಬಜೆಟ್ ಮಂಡನೆಯಾಗಲಿದೆ. ಹೀಗಾಗಿ, ರಾಜ್ಯಪಾಲರ ಭಾಷಣಕ್ಕೂ ಮೊದಲು ಅಥವಾ ನಂತರ ಅದೇ ದಿನ ಅತೃಪ್ತ ಶಾಸಕರು ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಬಹುದು. 

ಒಂದು ವೇಳೆ ಸ್ಪೀಕರ್ ರಾಜೀನಾಮೆಯನ್ನು ತಕ್ಷಣಕ್ಕೆ ಅಂಗೀಕರಿಸಲು ಒಪ್ಪದಿದ್ದರೆ ಮರುದಿನವೇ ರಾಜ್ಯಪಾಲರನ್ನು ಕಂಡು ತಮ್ಮ ರಾಜೀನಾಮೆಯ ಪ್ರತಿಯನ್ನು ನೀಡಬಹುದು. ಇದರ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರದ ಬಹುಮತ ಸಾಬೀತಿಗೆ ಸೂಚಿಸುವಂತೆ ಕೋರಬಹುದು ಎನ್ನಲಾಗಿದೆ. ಆಗ ಒಂದು ವೇಳೆ ರಾಜ್ಯಪಾಲರು ಬಜೆಟ್ ಮಂಡನೆಗೂ ಮೊದಲು ಬಹುಮತ ಸಾಬೀತುಪಡಿಸಿ ಎಂಬ ಸೂಚನೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರವಾನಿಸಿದಲ್ಲಿ ಆಗ ಸರ್ಕಾರಕ್ಕೆ ಸಂಕಷ್ಟ ಎದುರಾಗಬಹುದು. 

ಒಂದು ಹಂತದಲ್ಲಿ ಇದು ಬೇಡ ಎನ್ನುವುದಾದರೆ, ಬಜೆಟ್ ಅಧಿವೇಶನದ ಕೊನೆಯಲ್ಲಿ ಹಣಕಾಸು ವಿಧೇಯಕ ಮತ್ತು ಬಜೆಟ್ ಅನುಮೋದನೆ ವೇಳೆ ಆಡಳಿತಾರೂಢ ಪಕ್ಷಗಳ ಅತೃಪ್ತ ಶಾಸಕರು ದೂರ ಉಳಿಯುವ ಮೂಲಕ ಸೋಲುಂಟಾಗುವಂತೆ ಮಾಡುವ ತಂತ್ರವೂ ನಡೆಯುತ್ತಿದೆ. ಆದರೆ, ಆಗ ವಿಪ್ ಜಾರಿಗೊಳಿಸುವುದರಿಂದ ಸದಸ್ಯತ್ವ ಅನರ್ಹಗೊಳಿಸುವ ಪ್ರಯತ್ನವೂ ನಡೆಯಬಹುದು. ಮೇಲಾಗಿ ಬಜೆಟ್ ಮಂಡನೆಗೆ ಅವಕಾಶ ನೀಡಿದಲ್ಲಿ ನಂತರ ಅಂಗೀಕಾರ ವೇಳೆ ಸೋಲುಂಟಾಗುವಂತೆ ಮಾಡಿದರೆ ಅದರಿಂದ ಸಮ್ಮಿಶ್ರ ಸರ್ಕಾರದ ಪರವಾಗಿಯೇ ಜನರಿಗೆ ಅನುಕಂಪ ಉಂಟಾಗಬಹುದು ಎಂಬ ಅಭಿಪ್ರಾಯವೂ ಇದೆ ಎಂದು ತಿಳಿದು ಬಂದಿದೆ

Follow Us:
Download App:
  • android
  • ios