Asianet Suvarna News Asianet Suvarna News

ಕಾಂಗ್ರೆಸ್‌ಗೆ ದೇವೇಗೌಡರಿಂದಲೂ ಎಚ್ಚರಿಕೆ!

ಸೀಟು ಹಂಚಿಕೆಗೆ ಪ್ರಾದೇಶಿಕ ಪಕ್ಷಗಳ ಜೊತೆ ಕಾಂಗ್ರೆಸ್‌ ಮುಕ್ತವಾಗಿರಬೇಕು| ಎಸ್‌ಪಿ- ಬಿಎಸ್‌ಪಿ ಮೈತ್ರಿ ಕಾಂಗ್ರೆಸ್‌ಗೆ ಹೊಸ ಪಾಠ| ಉತ್ತರ ಪ್ರದೇಶದಲ್ಲಿ ಮಹಾಗಠಬಂಧನ್‌ ವಿಫಲತೆಗೆ ಕಾಂಗ್ರೆಸ್‌ ಕಾರಣ| ಲೋಕ ಚುನಾವಣೆಯಲ್ಲಿ ನಮಗೆ 12 ಸೀಟು ಬೇಕು, 9-10 ಕೊಟ್ಟರೂ ಓಕೆ| ಎನ್‌ಡಿಟೀವಿಗೆ ನೀಡಿದ ಸಂದರ್ಶನದಲ್ಲಿ ಕಾಂಗ್ರೆಸ್‌ಗೆ ದೇವೇಗೌಡ ಎಚ್ಚರಿಕೆ

JDS supremo warns HD Deve Gowda congress party
Author
Bangalore, First Published Jan 15, 2019, 10:18 AM IST

ನವದೆಹಲಿ[ಜ.15]: ಸೀಟು ಹಂಚಿಕೆ ವೇಳೆ ನಮ್ಮನ್ನು ಮೂರನೇ ದರ್ಜೆ ನಾಗರಿಕರಂತೆ ಕಾಂಗ್ರೆಸ್‌ ಪರಿಗಣಿಸಬಾರದು ಎಂಬ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟೀಕೆಯ ಬೆನ್ನಲ್ಲೇ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕೂಡಾ ಕಾಂಗ್ರೆಸ್‌ಗೆ ಪರೋಕ್ಷವಾಗಿ ಇದೇ ರೀತಿಯ ಎಚ್ಚರಿಕೆ ನೀಡಿದ್ದಾರೆ. ಸೀಟು ವಿಷಯದಲ್ಲಿ ಪ್ರಾದೇಶಿಕ ಪಕ್ಷಗಳ ಜೊತೆ ಕಾಂಗ್ರೆಸ್‌ ಮುಕ್ತವಾಗಿರದೇ ವಿಷಯವೇ, ಉತ್ತರಪ್ರದೇಶದಲ್ಲಿ ಕಾಂಗ್ರೆಸ್‌ನ್ನು ಹೊರತುಪಡಿಸಿ ಎಸ್‌ಪಿ-ಬಿಎಸ್‌ಪಿ ಮೈತ್ರಿಗೆ ಕಾರಣವಾಯಿತು ಎಂದು ಎಚ್ಚರಿಸಿದ್ದಾರೆ.

‘ಎನ್‌ಡಿಟೀವಿ’ ಸುದ್ದಿವಾಹಿನಿಗೆ ಸೋಮವಾರ ಸಂದರ್ಶನ ನೀಡಿರುವ ದೇವೇಗೌಡ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಖಚಿತ. ನಾವು 12 ಸೀಟುಗಳನ್ನು ಬಿಟ್ಟುಕೊಡುವಂತೆ ಕಾಂಗ್ರೆಸ್‌ಗೆ ಕೋರಿದ್ದೇವೆ. ಕೊನೆಗೆ 9-10 ಸ್ಥಾನ ಬಿಟ್ಟುಕೊಟ್ಟರೂ ಸರಿಯೇ. ಸೀಟು ಹಂಚಿಕೆ ವೇಳೆ ಕಾಂಗ್ರೆಸ್‌ ಪಕ್ಷ ಮುಕ್ತವಾಗಿರಬೇಕು ಎಂದು ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಏನಾಯಿತೋ ಅದು ಮಹಾಗಠಬಂಧನಕ್ಕೆ ಪೂರಕವಾಗಿಲ್ಲ. ಇದನ್ನು ಪ್ರಾದೇಶಿಕ ಪಕ್ಷಗಳ ಜೊತೆಗೆ ಕಾಂಗ್ರೆಸ್‌ ಕೂಡಾ ಅರ್ಥ ಮಾಡಿಕೊಳ್ಳಬೇಕು ಎನ್ನುವ ಮೂಲಕ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಹೆಚ್ಚಿನ ಸೀಟು ಬಿಟ್ಟುಕೊಡಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಕರ್ನಾಟಕ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರ ಹೆದರಿಕೆಯಿಂದಾಗಿ ಬಿಜೆಪಿ ಶಾಸಕರು ದೆಹಲಿಗೆ ತೆರಳಿದ್ದಾರೆ ಎಂಬ ಆರೋಪಕ್ಕೆ ಎಚ್‌ಡಿಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಕರ್ನಾಟಕ ಮುಖ್ಯಮಂತ್ರಿ ಎಚ್‌ಡಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗಳೆಲ್ಲವನ್ನೂ ಗಮನಿಸಿದಾಗ, ಮುಂಬರುವ ಲೋಕಸಭಾ ಚುನಾವಣೆ ಹೊತ್ತಿಗೆ ಸರ್ಕಾರವನ್ನು ಕೆಡವಲು ಬಿಜೆಪಿ ಯತ್ನಿಸುತ್ತಿದೆ. ಕಳೆದ 7 ತಿಂಗಳಿಂದಲೂ ಬಿಜೆಪಿ ಇಂಥ ಯತ್ನವನ್ನು ಮಾಡುತ್ತಲೇ ಬಂದಿದೆ. ಆದರೆ, ಇದು ಸಾಧ್ಯವಾಗದ ಕೆಲಸ ಎಂದು ಬಿಜೆಪಿ ವಿರುದ್ಧ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಅವರು ಕಿಡಿಕಾರಿದರು.

Follow Us:
Download App:
  • android
  • ios