Asianet Suvarna News Asianet Suvarna News

ಅಕ್ರಮ ಬಾಂಗ್ಲನ್ನರಿಗೆ ರೈಲ್ವೆಯೇ ಶ್ರೀರಕ್ಷೆ

 ಬಾಂಗ್ಲಾ ವಲಸಿಗರು ರೈಲುಗಳಲ್ಲೇ ತುತ್ತಿನ ಚೀಲ ತುಂಬಿಸಿಕೊಳ್ಳಲು ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸುತ್ತಾರೆ. ಹಾಗೆಯೇ ಶ್ರಮದಾಯಕ ಕೆಲಸಗಳಿಗೆ ಅವರನ್ನು ಕರೆತರುವ ಜಾಲವು ರೈಲುಗಳನ್ನೇ ಬಳಸುತ್ತಿದೆ ಎನ್ನುವ ವಿಚಾರ ಹೊರ ಬಿದ್ದಿದೆ. 

Indian Trains Are the Shelter for Bangla Illegal Immigrants
Author
Bengaluru, First Published Nov 1, 2019, 8:33 AM IST

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು [ನ.01]:  ಭದ್ರತಾ ಪಡೆಗಳ ಕಣ್ತಪ್ಪಿಸಿ ದೇಶದ ಗಡಿ ದಾಟಿ ಹಿಂಡು ಹಿಂಡಾಗಿ ಬರುವ ಅಕ್ರಮ ಬಾಂಗ್ಲಾ ವಲಸೆ ಹಕ್ಕಿಗಳಿಗೆ ಕರ್ನಾಟಕ ಸೇರಿದಂತೆ ಭಾರತದೊಳಗೆ ರೈಲ್ವೆ ಮಾರ್ಗದ ಅಜುಬಾಜಿನ ಪ್ರದೇಶಗಳೇ ಗೂಡು ಕಟ್ಟಿಕೊಳ್ಳಲು ನೆಚ್ಚಿನ ತಾಣಗಳಾಗಿವೆ ಎಂಬ ಸಂಗತಿ ತನಿಖಾ ಸಂಸ್ಥೆಗಳ ತನಿಖೆಯಿಂದ ಬೆಳಕಿಗೆ ಬಂದಿದೆ.

ಅಲ್ಲದೆ ದೇಶದೊಳಗೆ ನುಸುಳಿದ ಬಳಿಕ ಬಾಂಗ್ಲಾ ವಲಸಿಗರು ರೈಲುಗಳಲ್ಲೇ ತುತ್ತಿನ ಚೀಲ ತುಂಬಿಸಿಕೊಳ್ಳಲು ರಾಜ್ಯದಿಂದ ರಾಜ್ಯಕ್ಕೆ ಪ್ರಯಾಣಿಸುತ್ತಾರೆ. ಹಾಗೆಯೇ ಶ್ರಮದಾಯಕ ಕೆಲಸಗಳಿಗೆ ಅವರನ್ನು ಕರೆತರುವ ಜಾಲವು ರೈಲುಗಳನ್ನೇ ಬಳಸುತ್ತಿದೆ. ಇದಕ್ಕೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿಸಿಬಿ ಕಾರ್ಯಾಚರಣೆಯಲ್ಲಿ ಪುರಾವೆ ಸಿಕ್ಕಿದೆ.

ಪೊಲೀಸರು ಹಾಗೂ ಭದ್ರತಾ ಪಡೆಗಳ ನಿಗಾದಿಂದ ಪಾರಾಗುವ ಸಲುವಾಗಿಯೇ ವಲಸಿಗರು ರೈಲುಗಳ ಮೇಲೆ ಅವಲಂಬಿತರಾಗಿದ್ದಾರೆ. ರೈಲು ನಿಲ್ದಾಣದ ಸುತ್ತಮುತ್ತಲ ಪ್ರದೇಶಗಳು ಸಾಮಾನ್ಯವಾಗಿ ಜನವಸತಿ ಪ್ರದೇಶಗಳಿಂದ ದೂರವಾಗಿರುತ್ತವೆ ಮತ್ತು ಕಡಿಮೆ ವೆಚ್ಚದ ಬಾಡಿಗೆ ಮನೆ ಪಡೆಯಬಹುದು ಎಂಬ ಕಾರಣಕ್ಕೆ ವಲಸಿಗರು ವಾಸ್ತವ್ಯಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲವೊಮ್ಮೆ ಆ ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಕಚ್ಚಾ ಮನೆಯನ್ನೇ ನಿರ್ಮಿಸಿಕೊಳ್ಳಬಹುದು ಎಂಬ ಕಾರಣವೂ ಇರುತ್ತದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇತ್ತೀಚೆಗೆ ರಾಮನಗರ ಹಾಗೂ ಬೆಂಗಳೂರಿನಲ್ಲಿ ಸೆರೆಯಾದ ಬಾಂಗ್ಲಾ ದೇಶದ ನಿಷೇಧಿತ ಭಯೋತ್ಪಾದಕ ಸಂಘಟನೆ ಜಮಾತ್‌ ಉಲ್‌ ಮುಜಾಹೀದ್‌ ಸಂಘಟನೆಯ ಶಂಕಿತ ಉಗ್ರರು ರೈಲ್ವೆ ನಿಲ್ದಾಣ ಸಮೀಪದ ಮನೆಗಳಲ್ಲೇ ಆಶ್ರಯ ಪಡೆದಿದ್ದರು.

ಹೇಗೆ ರೈಲಿನಲ್ಲಿ ಪ್ರಯಾಣ?: ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದ ಗಡಿ ದಾಟಿದ ಬಳಿಕ ಅಕ್ರಮ ಬಾಂಗ್ಲಾ ವಲಸಿಗರು, ಕೆಲ ದಿನಗಳು ಆ ರಾಜ್ಯಗಳ ನಿರ್ಜನ ಪ್ರದೇಶದಲ್ಲಿ ಆಶ್ರಯ ಪಡೆಯುತ್ತಾರೆ. ಅನಂತರ ಕೊಲ್ಕತ್ತಾ ಸೇರಿದಂತೆ ಗಡಿ ಹತ್ತಿರದ ನಗರಗಳಿಗೆ ಬರುವ ವಲಸಿಗರು, ಅಲ್ಲಿಂದ ಬೇರೆ ಬೇರೆ ರಾಜ್ಯಗಳಿಗೆ ತೆರಳಲು ರೈಲುಗಳನ್ನು ಹತ್ತಿಕೊಳ್ಳುತ್ತಾರೆ. ಅಕ್ರಮ ಬಾಂಗ್ಲಾ ವಲಸಿಗರ ಸಾಗಾಣಿಕೆ ಜಾಲವು ಕೂಡಾ ಆ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈಲ್ವೆ ಭದ್ರತಾ ಪಡೆಗಳು ಹಾಗೂ ಸ್ಥಳೀಯ ಪೊಲೀಸರಿಗೆ ಅನುಮಾನ ಬಾರದ ರೀತಿಯಲ್ಲಿ ವಲಸಿಗರನ್ನು ಸಾಗಾಣಿಕೆ ಜಾಲವು ಸಾಗಿಸುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಿಗೂ ವಲಸಿಗರು ರೈಲುಗಳಲ್ಲಿ ಬಂದಿಳಿಯುತ್ತಾರೆ. ಅನಂತರ ರೈಲು ನಿಲ್ದಾಣದ ಅದರಲ್ಲೂ ನಗರದ ಕೇಂದ್ರ ಭಾಗದಿಂದ ಬಹುದೂರದ ರೈಲ್ವೆ ನಿಲ್ದಾಣಗಳ ಸಮೀಪದಲ್ಲೇ ಅವರು ಬೀಡು ಬಿಡುತ್ತಾರೆ. ಹೀಗಾಗಿ ಬೆಂಗಳೂರಿನಲ್ಲಿ ಕಾಡುಬೀಸನಹಳ್ಳಿ, ಕೆ.ಆರ್‌.ಪುರ, ರಾಮಮೂರ್ತಿನಗರ, ವೈಟ್‌ಫೀಲ್ಡ್‌, ಮಾರತ್ತಹಳ್ಳಿ, ಬೆಳ್ಳಂದೂರು, ಎಚ್‌ಎಎಲ್‌, ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಚಿಕ್ಕಬಾಣಾವರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಬಾಹುಳ್ಯವಿದೆ ಎಂದು ಸಿಸಿಬಿ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ರಾಮನಗರದ ರೈಲ್ವೆ ನಿಲ್ದಾಣ ವ್ಯಾಪ್ತಿಯ ಯಾರಬ್‌ ನಗರ ಹಾಗೂ ಅಜಾದ್‌ ನಗರ ಕಡೆಯಲ್ಲಿ ಬಾಂಗ್ಲಾ ಪ್ರಜೆಗಲು ಆಶ್ರಯ ಪಡೆದಿದ್ದಾರೆ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ತನಿಖಾ ದಳದ(ಎನ್‌ಐಎ) ಬಲೆಗೆ ಬಿದ್ದ ಜೆಎಂಬಿ ಸಂಘಟನೆ ಶಂಕಿತ ಉಗ್ರರು ಸಹ ಚಿಕ್ಕಬಾಣಾವರ ಹಾಗೂ ರಾಮನಗರದ ರೈಲ್ವೆ ನಿಲ್ದಾಣಕ್ಕೆ ಹತ್ತಿರವಿದ್ದ ಮನೆಯಲ್ಲೇ ನೆಲೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಅ.26ರಂದು ಶನಿವಾರ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆಗ ಅಕ್ರಮ ಬಾಂಗ್ಲಾ ವಲಸಿಗರ ಸಾಗಾಣಿಕೆ ಜಾಲದ ಜಮಾಲ್‌ ಮತ್ತು ಮೆಹಬೂಬ್‌ ಸಿಕ್ಕಿಬಿದ್ದಿದ್ದರು. ಈ ಇಬ್ಬರ ವಿಚಾರಣೆಯಲ್ಲಿ ತಾವು ಪಶ್ಚಿಮ ಬಂಗಾಳದಿಂದ ರೈಲುಗಳಲ್ಲೇ ಬಾಂಗ್ಲಾ ಪ್ರಜೆಗಳನ್ನು ಕರೆ ತಂದಿರುವುದಾಗಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧರಿಸಿ ಸಿಸಿಬಿ, ರಾಮಮೂರ್ತಿ ನಗರ ಮತ್ತು ಮಾರತ್‌ಹಳ್ಳಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿತು.

ರೈಲುಗಳನ್ನೇ ಬಳಸುವುದು ಏಕೆ:

ವಿಮಾನಗಳಲ್ಲಿ ಪ್ರಯಾಣಿಸಿದರೆ ವಲಸೆ ವಿಭಾಗದ ಅಧಿಕಾರಿಗಳಿಂದ ತಪಾಸಣೆಗೆ ಒಳಗಬೇಕಾಗುತ್ತದೆ. ಆಗ ಬಾಂಗ್ಲಾ ಪ್ರಜೆಗಳು ಎಂದೂ ಪತ್ತೆಯಾದರೆ ವೀಸಾ ಮತ್ತು ಪಾಸ್‌ ಪೋರ್ಟ್‌ ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಇನ್ನು ವಲಸೆ ವಿಭಾಗದಲ್ಲಿ ಬಹುಭಾಷೆ ಬಲ್ಲ ಅಧಿಕಾರಿಗಳು ಇರುತ್ತಾರೆ. ಇದರಿಂದ ಮಾತುಗಾರಿಕೆ ಮೂಲಕ ನಿಜ ಬಣ್ಣ ಬಯಲಾಗುತ್ತದೆ. ಈ ರೀತಿಯ ಕಿರಿಕಿರಿಯೇ ಬೇಡ ಎಂಬ ಕಾರಣಕ್ಕೆ ಬಾಂಗ್ಲಾ ಪ್ರಜೆಗಳು ವಿಮಾನವನ್ನು ಬಳಸುವುದಿಲ್ಲ ಎಂದು ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಓ) ಅಧಿಕಾರಿಯೊಬ್ಬರು ಹೇಳುತ್ತಾರೆ.

ಇನ್ನು ಬಸ್ಸುಗಳಲ್ಲಿ ಗುಂಪುಗೂಡಿ ರಾಜ್ಯದಿಂದ ರಾಜ್ಯಕ್ಕೆ ಬಹಳ ದಿನಗಳ ಪ್ರಯಾಣ ಕಷ್ಟವಾಗುತ್ತದೆ. ಹೀಗಾಗಿ ರೈಲುಗಳಲ್ಲಿ ಒಮ್ಮೆ ಟಿಕೆಟ್‌ ಪಡೆದರೆ ಸಾಕು, ಯಾರ ಕಿರಿಕಿರಿಯೂ ಇಲ್ಲದೆ ಸುರಕ್ಷಿತ ಗಮ್ಯ ತಲುಪಬಹುದು ಎಂಬ ವಿಶ್ವಾಸದಿಂದಲೇ ಬಾಂಗ್ಲಾ ಪ್ರಜೆಗಳು ರೈಲುಗಳಲ್ಲೇ ಬಳಸುತ್ತಾರೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ದೂರದ ಪ್ರಯಾಣಕ್ಕೆ ರೈಲುಗಳು ಸುರಕ್ಷಿತ ಎಂದು ಬಾಂಗ್ಲಾ ಪ್ರಜೆಗಳು ಪ್ರಯಾಣಿಸುತ್ತಾರೆ. ಬೆಂಗಳೂರಿನಲ್ಲಿ ಪತ್ತೆಯಾದ 60 ಅಕ್ರಮ ಬಾಂಗ್ಲಾ ವಲಸಿಗರು ನಗರಕ್ಕೆ ರೈಲಿನಲ್ಲಿ ಬಂದಿದ್ದಾರೆ. ಎಲ್ಲಿಂದ ಹಾಗೂ ಯಾರ ಸಹಾಯದಲ್ಲಿ ಅವರು ಬಂದರು ಎಂಬ ಬಗ್ಗೆ ತನಿಖೆ ನಡೆದಿದೆ.

- ಕುಲದೀಪ್‌ ಕುಮಾರ್‌ ಜೈನ್‌, ಡಿಸಿಪಿ, ಸಿಸಿಬಿ

Follow Us:
Download App:
  • android
  • ios