Asianet Suvarna News Asianet Suvarna News

ಖಾಸಗಿ OPD ಬಂದ್‌: ಬಹುತೇಕ ಜಿಲ್ಲೆಗಳಲ್ಲಿ ಬೆಂಬಲ, ತುರ್ತು ಸೇವೆ ಲಭ್ಯ

ರಾಜ್ಯಾದ್ಯಂತ ನಡೆಯುತ್ತಿರುವ  ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌ಗೆ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಪ್ಪಳ, ಉಡುಪಿ, ಬಳ್ಳಾರಿ ಸೇರಿ ಹಲವು ಕಡೆ ಒಪಿಡಿ ಬಂದ್ ಆಗಿದ್ದರೆ ಕೊಡಗಿನಲ್ಲಿ ಬಂದ್‌ ಬಿಸಿ ತಟ್ಟಿಲ್ಲ. ಬಂದ್‌ ನಡೆಯುತ್ತಿರುವ ಆಸ್ಪತ್ರೆಗಳಲ್ಲಿಯೂ ತರ್ತು ಸೇವೆ ನೀಡಲು ಮುಂದಾಗುವ ಮೂಲಕ ವೈದ್ಯರು ಮಾನವೀಯತೆ ಮೆರೆದಿದ್ದಾರೆ. ರಾಜ್ಯದ ಯಾವ್ಯಾವ ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ಸಿಕ್ಕಿದೆ, ಸಿಕ್ಕಿಲ್ಲ, ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

 

IMA calls for oneday shutdown of OPDs in Karnataka
Author
Bangalore, First Published Nov 8, 2019, 8:53 AM IST

ಬೆಂಗಳೂರು(ನ.08): ರಾಜ್ಯಾದ್ಯಂತ ನಡೆಯುತ್ತಿರುವ  ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್‌ಗೆ ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಪ್ಪಳ, ಉಡುಪಿ, ಬಳ್ಳಾರಿ ಸೇರಿ ಹಲವು ಕಡೆ ಒಪಿಡಿ ಬಂದ್ ಆಗಿದ್ದರೆ ಕೊಡಗಿನಲ್ಲಿ ಬಂದ್‌ ಬಿಸಿ ತಟ್ಟಿಲ್ಲ.

"

ಕೊಡಗು:

ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಹಿನ್ನೆಲೆಯಲ್ಲಿ ಕೊಡಗಿನಲ್ಲಿ ಖಾಸಗಿ, ಸರ್ಕಾರಿ ಆಸ್ಪತ್ರೆ ಸೇವೆ ಯಥಾಸ್ಥಿತಿ ಮುಂದುವರಿದಿದೆ. ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿ ಎಂದಿನಂತೆ ಸೇವೆ, ಸೌಲಭ್ಯಗಳು ಜನರಿಗೆ ಲಭ್ಯವಾಗಿದೆ. ಕೊಡಗು ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಬೆರಳೆಣಿಕೆ ಲೆಕ್ಕದಲ್ಲಿದ್ದು, ಉಳಿದಂತೆ ಕ್ಲಿನಿಕ್‌ಗಳು ಕೂಡ ಬಂದ್ ಮಾಡದೆ ವೈದ್ಯರು ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಗೆ ಆಸ್ಪತ್ರೆ ಓಪಿಡಿ ಬಂದ್ ಬಿಸಿ ತಟ್ಟಿಲ್ಲ.

ಕೋಲಾರ : 

ಕೋಲಾರದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್‌ ನಡೆಯುತ್ತಿಲ್ಲ. ಖಾಸಗಿ ಆಸ್ಪತ್ರೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿಲ್ಲ. ಎಲ್ಲ ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.

ಕಲಬುರಗಿ:

ರಾಜ್ಯಾಂದ್ಯಂತ ಕರೆ ನೀಡಲಾಗಿರುವ ಒಡಿಪಿ ಬಂದ್‌ಗೆ ಕಲಬುರಗಿಯಲ್ಲಿ ವೈದ್ಯರು ಬೆಂಬಲ ನೀಡಿಲ್ಲ. ವೈದ್ಯರ ಮೇಲೆ ನಡೆದ ಹಲ್ಲೆ ಖಂಡಿಸಿ ವೈದ್ಯರು ನಾಳೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಿದ್ದು, ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಸೇವೆ ನೀಡಲು ವೈದ್ಯರ ಸಂಘ ನಿರ್ಧಾರ ಮಾಡಿದೆ. ಓಪಿಡಿ ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳು ಯಥಾಸ್ಥಿತಿ ಲಭ್ಯವಾಗಲಿದೆ. ಡಿಸಿ ಕಛೇರಿ ಮುಂದೆ ಬೆಳಗ್ಗೆ 10 ಗಂಟೆಗೆ ವೈದ್ಯರ ಸಂಘದಿಂದ ಪ್ರತಿಭಟನೆ ನಡೆಯಲಿದ್ದು, ನಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಿದ್ದಾರೆ ಎಂದು ಐಎಂಎ ಜಿಲ್ಲಾಧ್ಯಕ್ಷ ಡಾ. ಅಮೂಲ ಪತಂಗೆ ಹೇಳಿದ್ದಾರೆ.

ದಕ್ಷಿಣ ಕನ್ನಡ:

ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಹಿನ್ನೆಲೆ ದ.ಕ ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳ ಸೇವೆ ಯಥಾಸ್ಥಿತಿ ಮುಂದುವರಿದಿದೆ. ಮಂಗಳೂರಿನ ಪ್ರಮುಖ ಖಾಸಗಿ ಆಸ್ಪತ್ರೆಗಳು ಒಡಿಪಿ ಬಂದ್ ಮಾಡಿಲ್ಲ. ದ.ಕ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯಲ್ಲೂ ಒಪಿಡಿ ಸೇವೆ ಯಥಾಸ್ಥಿತಿ ಮುಂದುವರಿದಿದೆ.

ಚಿತ್ರದುರ್ಗ:

ಕೋಟೆನಾಡಿನಲ್ಲಿ ಖಾಸಗಿ ಆಸ್ಪತ್ರೆ ಸೇವೆ ಯಥಾಸ್ಥಿತಿ ಇದೆ. ಸಾಮಾನ್ಯವಾಗಿ 9 ಗಂಟೆ ನಂತರ ಓಪಿಡಿ ಕೇಂದ್ರಗಳು ತೆರೆಯಲ್ಪಡುತ್ತಿದ್ದು, ಕೋಟೆನಾಡಿಗೆ ಓಪಿಡಿ ಬಂದ್ ಬಿಸಿ ತಟ್ಟಿಲ್ಲ.

ಉಡುಪಿ:

ಉಡುಪಿಯಲ್ಲಿ ಒಪಿಡಿ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದ್ದು. ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಮಾತ್ರ ಒಪಿಡಿ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ 25 ಖಾಸಗಿ ಆಸ್ಪತ್ರೆಗಳಿದ್ದು, ಎಲ್ಲರೂ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಯಥಾಸ್ಥಿತಿ ಸೇವೆ ಮುಂದುವರಿದಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆ ಒಪಿಡಿ ತೆರೆದಿರುವುದು ಆಸ್ಪತ್ರೆಗೆ ಬಂದ ಸಾರ್ವಜನಿಕರಿಗೆ ನಿರಾಳವಾಗಿದೆ. ಬಂದ್ ವಾಪಾಸು ಪಡೆಯುವ ಬಗ್ಗೆ ಯಾವುದೇ ನಿರ್ಧಾರವಾಗಿಲ್ಲ. ಒಪಿಡಿ ಬಂದ್ ನಿರ್ಧಾರದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂದು ಉಡುಪಿ ಜಿಲ್ಲಾ ಐಎಂಎ ಮಾಹಿತಿ ನೀಡಿದೆ.

ಕೊಪ್ಪಳ:

ವೈದ್ಯರ ಮೇಲೆ ಹಲ್ಲೆ ಹಿನ್ನಲೆ ಕೊಪ್ಪಳದಲ್ಲಿ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಮಾಡಲಾಗಿದ್ದು, ಸಂಪೂರ್ಣ ವೈದ್ಯಕೀಯ ಸೇವೆ ಸ್ಥಗಿತವಾಗಿದೆ. ಕೊಪ್ಪಳ ಜಿಲ್ಲೆಯ 50 ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳಲ್ಲಿ ಓಪಿಡಿ ಬಂದ್ ಆಗಿದ್ದು, ರೋಗಿಗಳಿಗೆ ತೊಂದರೆಯಾಗುವದ ಸಾಧ್ಯತೆಗಳು ಕಂಡು ಬಂದಿದೆ. ಓಪಿಡಿ ಆರಂಭಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೂಗೊಂಡಿಲ್ಲ. ಸದ್ಯ ಬಂದ್‌ಗೆ ಖಾಸಗಿ ಆಸ್ಪತ್ರೆಗಳು ಬೆಂಬಲ ನೀಡಿವೆ.

ಬಳ್ಳಾರಿ:

ಐಎಂಎ ಕರೆ ನೀಡಿದ ಖಾಸಗಿ ಆಸ್ಪತ್ರೆ ಬಂದ್ ಹಿನ್ನೆಲೆ ಬಳ್ಳಾರಿಯಲ್ಲಿ ಈವರೆಗೂ ಯಾವುದೇ ಖಾಸಗಿ ಆಸ್ಪತ್ರೆಗಳು ತೆರೆದಿಲ್ಲ. ಸಾಮಾನ್ಯವಾಗಿ ಹತ್ತು ಗಂಟೆ ಮೇಲೆಯೇ ಆಸ್ಪತ್ರೆಗಳು ತೆರೆಯುತ್ತಿದ್ದು, ಬಳ್ಳಾರಿ ವಿಮ್ಸ್ ಆಸ್ಪತ್ರೆ ಎಂದಿನಂತೆ ನಡೆಯಲಿದೆ. 9 ಗಂಟೆ ನಂತರ ವಿಮ್ಸ್ ನ ಜ್ಯೂನಿಯರ್ ವೈದ್ಯರು ಪ್ರತಿಭಟನೆ ಮಾಡಲಿದ್ದಾರೆ. ಖಾಸಗಿ ಆಸ್ಪತ್ರೆಗಳು ತೆರೆಯುವುದಿಲ್ಲ ಎಂದು ಖಾಸಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ವಿಜಯಪುರ:

ವೈದ್ಯರ ಮೇಲೆ ಕರವೇ ಕಾರ್ಯಕರ್ತರ ಹಲ್ಲೆಗೆ ಖಂಡಿಸಿ, ವಿಜಯಪುರದಲ್ಲಿ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿದೆ. ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಮಾಡಲಾಗಿದ್ದು, ಜಿಲ್ಲೆಯಾದ್ಯಂತ 130 ಖಾಸಗಿ ಆಸ್ಪತ್ರೆ, 70 ಒಪಿಡಿ ಬಂದ್ ಆಗಿವೆ. ಭಾರತೀಯ ವೈದ್ಯಕೀಯ ಸಂಘದ ನಿರ್ಧಾರದ ಬಳಿಕ ಒಪಿಡಿ ಆರಂಭಗೊಳ್ಳುವ ಸಾಧ್ಯತೆ ಇದೆ. ಸರ್ಕಾರಿ ಆಸ್ಪತ್ರೆಗಳ ಒಪಿಡಿಯಲ್ಲಿ ಎಂದಿನಂತೆ ಚಿಕಿತ್ಸೆ ನಡೆಯುತ್ತಿದೆ. ಬಂದ್‌ ಹಿನ್ನೆಲೆ ಜಿಲ್ಲಾಸ್ಪತ್ರೆ ವೈದ್ಯರಿಗೆ ನೀಡಿದ ರಜೆಯನ್ನು ಡಿಎಸ್‌ಒ ಹಿಂಪಡೆದಿದ್ದಾರೆ. ರೋಗಿಗಳ ಚಿಕಿತ್ಸೆಗೆ ಯಾವುದೇ ತೊಂದರೆಯಾಗದಂತೆ ಜಿಲ್ಲಾಸ್ಪತ್ರೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದಾರೆ.

ದಾವಣಗೆರೆ

ದಾವಣಗೆರೆ ಐಎಂಎ ಸಂಘದಿಂದ‌ ಓಪಿಡಿ ಬಂದ್ ವಾಪಸ್ಸು ಪಡೆಯುವ ಬಗ್ಗೆ ಯಾವುದೇ‌ ನಿರ್ಧಾರವಾಗಿಲ್ಲ. ಎಂದಿನಂತೆ ದಾವಣಗೆರೆ ಜಿಲ್ಲಾಸ್ಪತ್ರೆ  ಪಿಹೆಚ್‌ಸಿ ಕೇಂದ್ರಗಳ ಸೇವೆ ಮುಂದುವರಿದಿದೆ. ಸರ್ಕಾರಿ ವೈದ್ಯರು ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ಡಿಹೆಚ್‌ಒ ಸೂಚನೆ ನೀಡಿದ್ದಾರೆ. ದಾವಣಗೆರೆಯಲ್ಲಿ 75 ಹೆಚ್ಚು ನರ್ಸಿಂಗ್ ಹೋಮ್ 250 ಕ್ಕು ಹೆಚ್ಚು ಕ್ಲಿನಿಕ್ ಗಳಿದ್ದು, ಎಮರ್ಜೆನ್ಸಿ ಸೇವೆ ಎಲ್ಲಾ ನರ್ಸಿಂಗ್ ಹೋಮ್ಗಳಲ್ಲು ಲಭ್ಯವಿದೆ.

ಬಾಗಲಕೋಟೆ:

ರಾಜ್ಯವ್ಯಾಪಿ ಇಂದು ಖಾಸಗಿ ಆಸ್ಪತ್ರೆ ಮುಷ್ಕರ ಕರೆ ಹಿನ್ನೆಲೆಯಲ್ಲಿ ಬೆಳಗಿನ 6 ಗಂಟೆಯಿಂದಲೇ ಬಾಗಲಕೋಟೆ ಜಿಲ್ಲೆಯಲ್ಲಿನ ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆಗಿವೆ. ಜಿಲ್ಲೆಯ ಒಟ್ಟು 540 ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್ ಆಗಿದ್ದು, ಇಂದು ಬೆಳಿಗ್ಗೆ 6ರಿಂದ ನಾಳೆ ಬೆಳಗ್ಗೆ 6ಗಂಟೆಯವರೆಗೆ ಓಪಿಡಿ ಬಂದ್ ಇರಲಿದೆ. ಭಾರತೀಯ ವೈದ್ಯಕೀಯ ಸಂಘ ಬಾಗಲಕೋಟೆ ಶಾಖೆಯಿಂದ ಓಪಿಡಿ ಬಂದ್ ಕರೆ ನೀಡಿದ್ದು, ಬಾಗಲಕೋಟೆ ಜಿಲ್ಲೆಯಾದ್ಯಂತ ಖಾಸಗಿ ಆಸ್ಪತ್ರೆ ಹೊರರೋಗಿ ವಿಭಾಗ ಬಂದ್ ಇರಲಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸಾ ಸೇವೆ ಎಂದಿನಂತೆ ಲಭ್ಯವಿರಲಿದೆ. ಸರ್ಕಾರಿ ಆಸ್ಪತ್ರೆ ವೈದ್ಯರು ರಜೆ ತೆಗೆದುಕೊಳ್ಳದೇ ಕಡ್ಡಾಯವಾಗಿ ಸೇವೆಗೆ ಹಾಜರಾಗಲು ಡಿಎಚ್‌ಒ ಡಾ. ಅನಂತ್ ದೇಸಾಯಿ ಆದೇಶಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿಯೂ ಹೊರರೋಗಿ ಚಿಕಿತ್ಸೆ ಹೊರತುಪಡಿಸಿ, ತುರ್ತು ಸೇವೆ ಲಭ್ಯವಿರಲಿದೆ.

ಮಂಡ್ಯ:

ಮಿಂಟೋ ಆಸ್ಪತ್ರೆ ಕಿರಿಯ ವೈದ್ಯರ ಮೇಲೆ ಕರವೇ ಕಾರ್ಯಕರ್ತರಿಂದ ಹಲ್ಲೆ ಪ್ರಕರಣ ಸಂಬಂಧ ಇಂದು ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ನಡೆಯುತ್ತಿದ್ದು, ಮಂಡ್ಯದಲ್ಲೂ ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿದೆ. ಹಲ್ಲೆ ಮಾಡಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಹಾಗೂ ವೈದ್ಯರಿಗೆ ರಕ್ಷಣೆ ನೀಡುವಂತೆ ವೈದ್ಯರು ಆಗ್ರಹಿಸಿದ್ದಾರೆ. ನರ್ಸಿಂಗ್ ಹೋಮ್, ಕ್ಲಿನಿಕ್‌ಗಳು ಸೇರಿದಂತೆ ಜಿಲ್ಲೆಯ 400ಕ್ಕೂ ಹೆಚ್ಚು ಆಸ್ಪತ್ರೆಗಳ ಒಪಿಡಿ ಬಂದ್ ಆಗಿದೆ. ಮಂಡ್ಯದ ಮಿಮ್ಸ್ ಆಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ತುರ್ತು ಚಿಕಿತ್ಸೆ ಮಾತ್ರ ಲಭ್ಯವಿರಲಿದೆ. ಇಂದು ಬೆಳಗ್ಗೆ 8ರಿಂದ ನಾಳೆ ಬೆಳಗ್ಗೆ 8ರವರೆಗೆ ಒಪಿಡಿ ಬಂದ್ ಮಾಡಲು ವೈದ್ಯಕೀಯ ಸಂಘ ನಿರ್ಧರಿಸಿದೆ. ಖಾಸಗಿ ಆಸ್ಪತ್ರೆಗಳ ಒಪಿಡಿ ಬಂದ್ ಆಗಿರುವುದರಿಂದ ರೋಗಿಗಳು ಸರ್ಕಾರಿ ಆಸ್ಪತ್ರೆಯತ್ತ ಮುಖಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಹೊರರೋಗಿಗಳು ಬರುವ ಹಿನ್ನೆಲೆ  ಮಂಡ್ಯ ಮಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದೆ ಎಂದು IMA ಮಂಡ್ಯ ಜಿಲ್ಲಾ ಅಧ್ಯಕ್ಷ ಡಾ.ಮರೀಗೌಡ ಹೇಳಿದ್ದಾರೆ.

ಹುಬ್ಬಳ್ಳಿ:

ಖಾಸಗಿ ಆಸ್ಪತ್ರೆಗಳ ವೈದ್ಯರು ಪ್ರತಿಭಟನೆ ಹಿನ್ನೆಲೆ ಹುಬ್ಬಳ್ಳಿ ಧಾರವಾಡ ಅವಳಿನಗರ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದೆ. ನರ್ಸಿಂಗ್ ಹೋನ್, ಕ್ಲಿನಿಕ್‌ಗಳು ಒಪಿಡಿ ಸೇವೆ ಸ್ಥಗಿತಗೊಳಿಸಿದೆ. ಹುಬ್ಬಳ್ಳಿ ಧಾರವಾಡ 1500 ಕ್ಲಿನಿಕ್, 350 ನರ್ಸಿಂಗ್ ಹೊಮ್ ಗಳ ಸೇವೆ ಸ್ಥಗಿತವಾಗಿದೆ. ಒಳರೋಗಿಗಳಾಗಿ ದಾಖಲಾದವರಿಗಿಲ್ಲ ಯಾವುದೇ ತೊಂದರೆಯಾಗಿಲ್ಲ ಎಂದು ಹುಬ್ಬಳ್ಳಿ ಐಎಮ್‌ಎ ಅಧ್ಯಕ್ಷ ಕ್ರಾಂತಿ ಕಿರಣ್ ಹೇಳಿದ್ದಾರೆ. ರಾಜ್ಯ ಸಮಿತಿ ನಿರ್ಧಾರದಂತೆ ಬಂದ್ ಮಾಡುತ್ತಿದ್ದು 24 ಗಂಟೆಗಳವರೆಗ ಒಪಿಡಿ ಸೇವೆ ಸ್ಥಗಿತಗೊಳಿಸಿದ್ದೇವೆ ಎಂದಿದ್ದಾರೆ.

ಕಾರವಾರ:

ಐಎಂಎ ನೀಡಿದ‌ ಆಸ್ಪತ್ರೆ ಬಂದ್ ಕರೆ ಹಿನ್ನೆಲೆ ಉತ್ತರಕನ್ನಡ‌‌‌ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರವಾರದಲ್ಲಿ ಎಂದಿನಂತೆ ಹಲವು ನರ್ಸಿಂಗ್ ಹೋಂ,‌‌ಕ್ಲಿನಿಕ್‌ಗಳ‌ 
ಸೇವೆ ಯಥಾಸ್ಥಿತಿ ಮುಂದುವರಿದಿದ್ದು, ಜಿಲ್ಲೆಯ‌ ಇತರ‌ ಭಾಗಗಳಲ್ಲೂ ಹೆಚ್ಚಿನ‌ ಖಾಸಗಿ ಆಸ್ಪತ್ರೆ, ನರ್ಸಿಂಗ್‌ಹೋಂ,‌‌ಕ್ಲಿನಿಕ್‌ಗಳ‌ ಸೇವೆ ಯಥಾಸ್ಥಿತಿ ಇದೆ. ಸೇವೆ ಸ್ಥಗಿತಗೊಳಿಸುವ ಬಗ್ಗೆ ಇಲ್ಲಿಯವರೆಗೆ ಸರಿಯಾದ ಆದೇಶ‌‌‌ ದೊರೆಯದ ಹಿನ್ನೆಲೆ ವೈದ್ಯರು ಸೇವೆ ಮುಂದುವರಿಸಿದ್ದಾರೆ. ಬಂದ್ ಆದೇಶ ದೊರಕಿದಲ್ಲಿ ಒಪಿಡಿ‌ ಸೇವೆ ಇಂದು‌ ನಿಲ್ಲಿಸ್ತೇವೆ ಎಂದು ನರ್ಸಿಂಗ್ ಹೋಂ ವೈದ್ಯರು ಹೇಳಿದ್ದಾರೆ. ಆದರೆ‌,‌‌ ಶಿರಸಿ, ಕುಮಟಾದಲ್ಲಿ  ನರ್ಸಿಂಗ್ ಹೋಂ,‌ ಕ್ಲಿನಿಕ್ ಬಂದ್ ಆಗಿದೆ. ಒಪಿಡಿ‌ ಸೇವೆ ಬಿಟ್ಟು ಉಳಿದ ಸೇವೆ ನೀಡುವುದಾಗಿ‌ ಶಿರಸಿ ಐಎಂಎ ಕಾರ್ಯದರ್ಶಿ ಡಾ.‌ತನುಶ್ರೀ ತಿಳಿಸಿದ್ದಾರೆ.

ರಾಮನಗರ:

ರಾಮನಗರದಲ್ಲಿ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್ ನಡೆಯುತ್ತಿಲ್ಲ. ಆಸ್ಪತ್ರೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ವ್ಯಾಪಿ ಬಂದ್‌ಗೆ ರಾಮಗರದಲ್ಲಿ ಬೆಂಬಲ ಕಂಡುಬಂದಿಲ್ಲ.

ಚಿಕ್ಕಮಗಳೂರು:

ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ಬಂದ್ ಹಿನ್ನಲೆ ಕಿರಿಯ ವೈದ್ಯರಿಗೆ ಬೆಂಬಲಿಸಿ ಖಾಸಗಿ ಆಸ್ಪತ್ರೆಗಳು ಬಂದ್ ಆಗಿವೆ. ಚಿಕ್ಕಮಗಳೂರಿನಲ್ಲಿ ಓಪಿಡಿ ಬಂದ್ ಮಾಡಲಾಗಿದ್ದು, 25 ನರ್ಸಿಂಗ್ ಹೊಂ, 250 ಕ್ಕೂ ಹೆಚ್ಚು ಒಪಿಡಿ ಸೇವೆ ಬಂದ್ ಆಗಿದೆ. IMA ಯಿಂದ ಖಾಸಗಿ ಆಸ್ಪತ್ರೆಗಳ ಬಂದ್ ಗೆ ಕರೆ ನೀಡಲಾಗಿದ್ದು. ಇಂದು  ಬೆಳಗ್ಗೆ 6 ಗಂಟೆಯಿಂದ ನಾಡಿದ್ದು ಬೆಳಗ್ಗೆ 6 ಗಂಟೆಯವರೆಗೂ ಒಪಿಡಿ ಸೇವೆ ಬಂದ್ ಇರಲಿದೆ. 24 ಗಂಟೆಗಳ ಕಾಲ ಒಪಿಡಿ ಸೇವೆ ಬಂದ್ ಆಗಿದ್ದು, ಕೇವಲ ಎರ್ಮಜೆನ್ಸಿ ಸೇವೆ ನೀಡಲು ನಿರ್ಧಾರ ಮಾಡಲಾಗಿದೆ.

ಧಾರವಾಡ:

ರಾಜ್ಯಾದ್ಯಂತ ವೈದ್ಯರ ಮುಷ್ಕರ ಹಿನ್ನಲೆ ಖಾಸಗಿ ಆಸ್ಪತ್ರೆ ಮುಂದೆ ಬಂದು ರೋಗಿಗಳು ಪರದಾಡುತ್ತಿದ್ದಾರೆ. ನಿನ್ನೆ ರಾತ್ರಿಯಿಂದ ಯೂರಿನ್ ಸಮಸ್ಯಯಿಂದ ಬಳಲುತ್ತಿರುವ ರೈತ ರುದ್ರಪ್ಪ ಎಂದಿನಂತೆ ಆಸ್ಪತ್ರೆಗೆ ಬಂದಿದ್ದರು. ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದ ರೈತ ಆಸ್ಪತ್ರೆ ಮುಂದೆ ಪರದಾಡುವಂತಾಗಿದೆ. ಧಾರವಾಡದ ಡಾ.ಎಸ್ ಆರ್ ರಾಮನಗೌಡರ ಆಸ್ಪತ್ರೆಗೆ ಬಂದು ಚಿಕಿತ್ಸೆ ಲಭ್ಯವಿಲ್ಲದೆ ರೈತ ಪರದಾಡುವ ಸ್ಥಿತಿ ಉಂಟಾಗಿದೆ.

ಮೈಸೂರು:

ಮಿಂಟೊ ಆಸ್ಪತ್ರೆ ವೈದ್ಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವೈದ್ಯರ ಮುಷ್ಕರಕ್ಕೆ ಮೈಸೂರು ಖಾಸಗಿ ಆಸ್ಪತ್ರೆ ಸಿಬ್ಬಂದಿ ಬೆಂಬಲ ಸೂಚಿಸಿದ್ದಾರೆ. ನಗರದ 250 ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳಲ್ಲಿ ಹೋರ ರೋಗಿಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಹೊರರೋಗಿ ವಿಭಾಗ (ಒಪಿಡಿ) ಬಂದ್‌ ಮಾಡಿ ವೈದ್ಯರು ಬೆಂಬಲ ನೀಡಿದ್ದಾರೆ. ಆಸ್ಪತ್ರೆಗಳ ಮುಂದೆ ಚಿಕಿತ್ಸೆ ಲಭ್ಯವಿಲ್ಲ ಎಂಬ ಬೋರ್ಟ್ ನೇತುಹಾಕಲಾಗಿದೆ. ತುರ್ತು ಸೇವೆಗಳು ಮಾತ್ರ ಲಭ್ಯವಿರಲಿದೆ. ಬೆಳಿಗ್ಗೆ 6 ಯಿಂದ ಸಂಜೆ 6 ರ ವರೆಗೆ ಒಪಿಡಿ ಬಂದ್ ಮಾಡಲು ಐಎಂಎ ಕರೆ ನೀಡಿದ್ದು, ಮೈಸೂರಿನಲ್ಲಿ  ವೈದ್ಯರ ಸೇವೆಯಲ್ಲಿ ವ್ಯತ್ಯಯವಾಗಿದೆ.

ರಾಜ್ಯಾದ್ಯಂತ ತರಬೇತಿ ವೈದ್ಯರ ಮುಷ್ಕರ

Follow Us:
Download App:
  • android
  • ios