Asianet Suvarna News Asianet Suvarna News

ಹಕ್ಕಿಯಂತೆ ಕೂಡಿಟ್ಟಿದ್ದರು, ಚಳಿ ತಾಳಲು ಆಗಲಿಲ್ಲ: ಬಿಜೆಪಿಗರ ರೆಸಾರ್ಟ್‌ ವಾಸ ಅಂತ್ಯ

ಬಿಜೆಪಿ ಶಾಸಕರ ರೆಸಾರ್ಟ್‌ ವಾಸ ಕೊನೆಗೂ ಅಂತ್ಯವಾಗಿದೆ. 5 ದಿನಗಳ ಬಳಿಕ ಬಾಹ್ಯ ಪ್ರಪಂಚಕ್ಕೆ ಬಂದ ವಿಧಾನಸಭಾ ಸದಸ್ಯರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಹಕ್ಕಿಯಂತೆ ಕೂಡಿಟ್ಟಿದ್ದರು, ಚಳಿ ತಾಳಲು ಆಗಲಿಲ್ಲ ಎಂದು ಹೇಳಿದ್ದಾರೆ.

BJP resort politics ends this is how MLAs shared their experience
Author
Bangalore, First Published Jan 20, 2019, 10:14 AM IST

ನವದೆಹಲಿ[ಜ.20]: ಕಳೆದ 5 ದಿನಗಳಿಂದ ದೆಹಲಿ ಹೊರವಲಯದ ಗುರುಗ್ರಾಮದ ಐಷಾರಾಮಿ ರೆಸಾರ್ಟ್‌ನೊಳಗೆ ಬೀಡುಬಿಟ್ಟಿದ್ದ ಬಿಜೆಪಿಯ ಶಾಸಕರು ಶನಿವಾರ ಹೊರಬಂದಿದ್ದಾರೆ. ರೆಸಾರ್ಟ್‌ ವಾಸ ಹೇಗಿತ್ತು ಎಂದು  ಪ್ರಶ್ನಿಸಿದಾಗೆ ಕೆಲವರು ನೇರಾನೇರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾರುವ ಹಕ್ಕಿಯನ್ನು ಕೂಡಿಟ್ಟಂತಿತ್ತು, ಚಳಿಯಿಂದ ಹಿಂಸೆ ಅನುಭವಿಸಿದೆವು, ಜನರಿಂದ ದೂರ ಇರಬೇಕಾಯಿತು ಎಂಬ ಸಮಸ್ಯೆಗಳನ್ನು ಬಿಜೆಪಿಯ ಶಾಸಕರು ಹೇಳಿಕೊಂಡಿದ್ದಾರೆ.

‘ಪಕ್ಷದ ರಾಷ್ಟ್ರೀಯ ಪರಿಷತ್‌ನ ಸಭೆಯಲ್ಲಿ ಭಾಗಿಯಾಗೋಣ, ಆ ಬಳಿಕ ಎರಡು ದಿನಗಳ ಕಾಲ ದೆಹಲಿಯಲ್ಲಿದ್ದು ಲೋಕಸಭಾ ಚುನಾವಣೆ ತಯಾರಿ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ನೇತೃತ್ವದಲ್ಲಿ ಸಭೆ ನಡೆಸಿ ಚರ್ಚಿಸೋಣ’ ಎಂದು ರಾಜ್ಯ ಬಿಜೆಪಿ ನಾಯಕರು ಜ.10ಕ್ಕೆ ರಾಜ್ಯದ ಬಿಜೆಪಿ ಶಾಸಕರು, ಸಂಸದರೆಲ್ಲರನ್ನು ದೆಹಲಿಗೆ ಕರೆಸಿಕೊಂಡಿದ್ದರು. ನಾಲ್ಕು ದಿನಗಳ ಕಾಲ ದೆಹಲಿ ವಾಸ್ತವ್ಯಕ್ಕೆ ಸಿದ್ಧರಾಗಿ ಎಲ್ಲರೂ ಬಂದಿದ್ದರು. ಆದರೆ ಪಕ್ಷದ ರಾಷ್ಟ್ರೀಯ ಪರಿಷತ್‌ನ ಸಭೆ ಮುಗಿಯುತ್ತಿದ್ದಂತೆ ಬಿಜೆಪಿಯ ಮುಂದಾಳುಗಳಲ್ಲಿದ್ದ ರಹಸ್ಯ ಕಾರ್ಯಸೂಚಿಯು ನಿಧಾನವಾಗಿ ಹೊರ ಇಣುಕಲು ಶುರುವಾಗಿತ್ತು. ಆದರೆ ಈ ಕಾರ್ಯಸೂಚಿಯ ಗುಟ್ಟನ್ನು ಶಾಸಕರಿಗೂ ಬಿಟ್ಟುಕೊಡದ ನಾಯಕರು, ಲೋಕಸಭಾ ಚುನಾವಣೆ ಚರ್ಚೆ ಬಳಿಕ ತಮ್ಮ ಶಾಸಕರನ್ನು ಸೆಳೆಯಲು ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ಪ್ರಯತ್ನಿಸುತ್ತಿದೆ ಎಂಬ ಸಬೂಬು ನೀಡಿ ದೆಹಲಿಯಿಂದ 50 ಕಿ.ಮೀ. ದೂರದ ಐಷಾರಾಮಿ ರೆಸಾರ್ಟ್‌ಗೆ ಶಾಸಕರನ್ನು ಸ್ಥಳಾಂತರ ಮಾಡಿದ್ದರು. ಸೋಮವಾರ ಸಂಜೆ ಈ ರೆಸಾರ್ಟ್‌ ಸೇರಿಕೊಂಡ ಬಿಜೆಪಿ ಶಾಸಕರಲ್ಲಿ ಬಹುತೇಕರು ಶನಿವಾರ ಬೆಳಗ್ಗೆ ಹೊತ್ತಿಗೆ ಹೊರ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ.

ಹಾರೋ ಹಕ್ಕಿನ ಕೂಡಿಟ್ಟಂತಾಯ್ತು

ನಾವು ಶಾಸಕರು ಜನರ ಮಧ್ಯೆ ಇರೋರು. ನಮಗೆ ಒಂದೇ ಕಡೆ ಕುಳಿತು, ತಿಂದು ಗೊತ್ತಿಲ್ಲ. ಹಕ್ಕಿ ಇಲ್ಲೊಂದು ಹಣ್ಣು, ಅಲ್ಲೊಂದು ಹಣ್ಣು ತಿನ್ನುತ್ತಾ ಹೊಟ್ಟೆತುಂಬಿಸಿಕೊಳ್ಳೋ ಹಾಗೆ ನಾವೂ ಇಲ್ಲೊಂದಿಷ್ಟು, ಅಲ್ಲೊಂದಿಷ್ಟುತಿಂದುಕೊಂಡು ಬದುಕುವುದು ರೂಢಿ. ಇಲ್ಲಿ ಎಲ್ಲವೂ ಕೂತಲ್ಲೇ ಸಿಗುತ್ತಿತ್ತು. ನಮಗೆ ರುಚಿ ಹತ್ತಲೇ ಇಲ್ಲ. ಹಾರಿ ತಿನ್ನೋ ಹಕ್ಕಿನಾ ಒಂದೆಡೆ ಕೂಡಿ ಹಾಕಿದಂಗೆ ಆಯಿತು.

- ಬಸವರಾಜ ದಢೇಸುಗುರು, ಕನಕಗಿರಿ ಶಾಸಕ

ಚಳಿಯಿಂದ ಚಿತ್ರಹಿಂಸೆ: ಅಶೋಕ್‌

ಅಬ್ಬಾ ಏನ್‌ ಚಳಿ ಅಲ್ಲಿ. ನಾನು ಬೆಂಗಳೂರಿನಲ್ಲಿ ಸ್ವೆಟರ್‌ ಹಾಕಿಕೊಳ್ಳುತ್ತಲೇ ಇರಲಿಲ್ಲ. ಇಲ್ಲಿ ಎರಡೆರಡು ಸ್ವೆಟರ್‌ ಹಾಕಿಕೊಳ್ಳಬೇಕಾಯಿತು. ಚಪ್ಪಲಿ ಹಾಕಿಕೊಂಡೇ ತಿರುಗಾಡುತ್ತಿದ್ದ ನಾನು ಶೂ ಹಾಕಿಕೊಂಡೆ, ನೋಡಿ. ಬೆಳಗ್ಗೆ ವಾಕಿಂಗ್‌ ಹೋಗಲಿಕ್ಕೂ ಸಾಧ್ಯವಾಗದಷ್ಟುಚಳಿ. ಒಟ್ಟಾರೆ ಚಿತ್ರಹಿಂಸೆ. ನಾವು ಹೊರಗಡೆ ಕೆಲ ಜಾಗಗಳಿಗೆ ಹೋಗುವ ಯೋಜನೆ ಹಾಕಿಕೊಂಡಿದ್ದೆವು. ಆದರೆ ಒಂದು ವೇಳೆ ಮಾಧ್ಯಮದವರ ಕಣ್ಣಿಗೆ ಬಿದ್ದರೆ ಬೆಂಬತ್ತಿಬಿಡುತ್ತಾರೆ. ಆದ್ದರಿಂದ ನಾವು ರೆಸಾರ್ಟ್‌ನಲ್ಲೇ ಇರಬೇಕಾಯಿತು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಹೇಳುತ್ತಾರೆ.

ಇಬ್ಬರಿಗೆ 1 ರೂಂ ಕೊಟ್ಟಿದ್ದರು: ಬೆಳ್ಳಿ ಪ್ರಕಾಶ್‌

ಕಾರ್ಪೋರೆಟ್‌ ಕಂಪನಿಗಳಲ್ಲಿ ಸಿಬ್ಬಂದಿಯನ್ನು ಹೇಗೆ ಟೂರ್‌ಗೆ ಕಳುಹಿಸುತ್ತಾರೋ ಅದೇ ರೀತಿ ನಾವು ಮೂರ್ನಾಲ್ಕು ದಿನ ರೆಸಾರ್ಟ್‌ನಲ್ಲಿದ್ದೆವು. ಸುಮಾರು 20 ವರ್ಷಗಳ ಬಳಿಕ ನಾಲ್ಕು ದಿನ ಜನರಿಂದ ದೂರ ಇರುವಂತೆ ಆಯಿತು. ಆದರೆ ಇದೂ ರಾಜಧರ್ಮದ ಭಾಗ. ಹಿಂದೆ ರಾಜರು ಇನ್ನೊಂದು ದೇಶದ ಮೇಲೆ ದಂಡೆತ್ತಿ ಹೋದ ಸಂದರ್ಭದಲ್ಲಿ ಸೈನಿಕರೆಲ್ಲ ಮೂರು ನಾಲ್ಕು ವರ್ಷ ತಮ್ಮ ಕುಟುಂಬಗಳಿಂದ ದೂರ ಇರಬೇಕಾಗುತ್ತಿತ್ತು. ಇದು ಕೂಡ ಅದೇ ರೀತಿ. ಹಾಗೆಯೇ ನಾವಿದ್ದ ರೆಸಾರ್ಟ್‌ನಲ್ಲಿ ಮೋಜು-ಮಸ್ತಿ ಏನೂ ಇರಲಿಲ್ಲ. ಇದೊಂದು ಐಷಾರಾಮಿ ರೆಸಾರ್ಟ್‌ ಆಗಿತ್ತು ಅಷ್ಟೆ. ನಾವು ಒಂದು ರೂಮ… ಅನ್ನು ಇಬ್ಬರು ಹಂಚಿಕೊಳ್ಳುತ್ತಿದ್ದ ಹಿನ್ನೆಲೆಯಲ್ಲಿ ಒಬ್ಬೊಬ್ಬರಿಗೆ 7 ಸಾವಿರ ರು. ಖರ್ಚಾಗಿರಬಹುದು. ಬೆಳಗ್ಗೆ ಎದ್ದು ಬ್ರೇಕ್‌ ಫಾಸ್ಟ್‌ ಮಾಡಿ, ಆಟ ಆಡುತ್ತಿದ್ದೆವು. ಕೆಲವರು ಜಿಮ್‌ಗೆ ಹೋಗುತ್ತಿದ್ದರು. ಮಧ್ಯಾಹ್ನ ಊಟ ಮಾಡಿ ನಿದ್ದೆ ಮಾಡುತ್ತಿದ್ದೆವು. ಸಿನಿಮಾಗಳನ್ನು ನೋಡುತ್ತಿದ್ದೆ. ನನಗೆ ಸಿನಿಮಾ ನೋಡುವ ಆಸಕ್ತಿಯಿತ್ತು. ಹಣ್ಣು, ಬನ್ನು ತಿಂದು ಇರುತ್ತಿದ್ದೆ. ಊಟನೂ ಚೆನ್ನಾಗಿತ್ತು. ಶನಿವಾರ ಬೆಳಗ್ಗೆ 7.30ಕ್ಕೆ ಹೊರಡುವ ಸೂಚನೆ ಸಿಕ್ಕಿತ್ತು. ಅದರಂತೆ ಹೊರಟೆವು ಎನ್ನುತ್ತಾರೆ ಕಡೂರಿನ ಶಾಸಕ ಬೆಳ್ಳಿ ಪ್ರಕಾಶ್‌.

‘ಮಾಜಿ ಸಚಿವ ಎಡವಟ್ಟಿಂದ ಆಪರೇಷನ್‌ಗೆ ಹೊಡೆತ’

ತಮ್ಮ ಕ್ಷೇತ್ರಗಳಿಗೆ ತೆರಳುವ ಶಾಸಕರನ್ನು ಜೆಡಿಎಸ್‌-ಕಾಂಗ್ರೆಸ್‌ ಸಂಪರ್ಕಿಸಲು ಪ್ರಯತ್ನಿಸಿದರೆ..? ಎಂಬ ಪ್ರಶ್ನೆಯನ್ನು ರಾಜ್ಯ ಬಿಜೆಪಿಯ ಹಿರಿಯ ಮುಖಂಡರೊಬ್ಬರ ಮುಂದೆ ಇಟ್ಟಾಗ, ಮೈತ್ರಿ ಸರ್ಕಾರದಿಂದ ಈಗಾಗಲೇ ಆರು ಮಂದಿ ಶಾಸಕರು ದೂರ ಸರಿದಿದ್ದಾರೆ. ಮುಂದೆ ಸರ್ಕಾರ ರಚಿಸುವ ಸ್ಥಿತಿಯಲ್ಲಿ ನಾವೇ ಇರುವುದು ಎನ್ನುವುದು ನಮ್ಮೆಲ್ಲ ಶಾಸಕರಿಗೆ ಮನವರಿಕೆ ಆಗಿದೆ. ಆದ್ದರಿಂದ ಮೈತ್ರಿ ಪಕ್ಷಗಳ ಈ ಪ್ರಯತ್ನ ಕೈಗೂಡುವುದಿಲ್ಲ. ಕಾಂಗ್ರೆಸ್‌-ಜೆಡಿಎಸ್‌ನ ಎರಡು ಸಚಿವರು ಸೇರಿ 18 ಶಾಸಕರು ಸರ್ಕಾರದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಒಬ್ಬ ಮಾಜಿ ಸಚಿವ ಎಡವಟ್ಟು ಮಾಡಿಕೊಂಡ ಹಿನ್ನೆಲೆಯಲ್ಲಿ ನಮ್ಮ ಕಾರ್ಯಾಚರಣೆಗೆ ಹೊಡೆತ ಬಿದ್ದಿದೆ ಎಂದು ಹೇಳಿದರು.

ಜ.19ಕ್ಕೆ ಸರ್ಕಾರದ ಬಾಳ್ವಿಕೆಯ ಬಗ್ಗೆ ದೊಡ್ಡ ಪ್ರಶ್ನೆ ಉದ್ಭವವಾಗಬಹುದು, ನಮ್ಮ ಸರ್ಕಾರ ರಚನೆಯ ನಿರ್ಣಾಯಕ ಪ್ರಯತ್ನ ಮೂರ್ತ ರೂಪಕ್ಕೆ ಬರಬಹುದು ಎಂಬ ನಿರೀಕ್ಷೆಯೊಂದಿಗೆ ಜ.14ಕ್ಕೆ ರೆಸಾರ್ಟ್‌ ಬಿಲ ಸೇರಿಕೊಂಡ ಬಿಜೆಪಿ ಶಾಸಕರು ಬರಿ ಗೈಯಲ್ಲೇ ವಾಪಸ್‌ ಬಂದಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿದ್ದರೂ ಅವರಲ್ಲಿನ ವಿಶ್ವಾಸ ಇನ್ನೂ ಅಡಗಿಲ್ಲ ಎಂಬುದು ಅವರ ಮಾತುಗಳಲ್ಲಿ ಗೊತ್ತಾಗುತ್ತಿದೆ. ಇದು ರಾಜ್ಯ ರಾಜಕಾರಣದಲ್ಲಿನ ಅಸ್ಥಿರತೆ ಇನ್ನೂ ಸ್ವಲ್ಪ ಕಾಲ ಮುಂದುವರಿಯುವ ಸ್ಪಷ್ಟಸಂಕೇತ ಎಂದು ಭಾವಿಸಬಹುದು.

ಬಸವರಾಜ್ ದಡೆಸಗುರು ಪ್ರಕಾರ ಅಲ್ಲಿನ ಊಟದಲ್ಲಿ ಉಪ್ಪೂ ಇಲ್ಲ, ಖಾರನೂ ಇರಲಿಲ್ಲ. ಅವರು ಚೆನ್ನಾಗಿ ನೋಡಿಕೊಂಡಿದ್ದರೂ ಕಟ್ಟಿಹಾಕಿದಂತ ಅನುಭವ ಆಗಿತ್ತಂತೆ.

ಟಿಕೆಟ್‌ ಕೊಡುವಾಗಲೇ ಜಾಗ್ರತೆ ವಹಿಸಬೇಕು: ಶಿವಮೊಗ್ಗ ಮೂಲದ ಮಾಜಿ ಸಚಿವರೊಬ್ಬರು, ಈ ಎಲ್ಲ ಬೆಳವಣಿಗೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. ಈ ರೆಸಾರ್ಟ್‌ ರಾಜಕಾರಣ ನಮಗೆ ಏಕೆ ಬೇಕು? ನಾವು ಟಿಕೆಚ್‌ ಕೊಡುವಾಗಲೇ ನಮ್ಮ ಜೊತೆ ಸದಾ ಇರುವವರಿಗೆಯೇ ಕೊಡಬೇಕಲ್ಲವೇ? ನೈತಿಕ ರಾಜಕಾರಣ ಮಾಡಬೇಕು. ನಾವು ಈ ಚಳಿಯಲ್ಲಿ ಇಲ್ಲಿ ಒದ್ದಾಡುವಂತೆ ಆಗಿದೆ. ಆಪರೇಷನ್‌ ಇಲ್ಲ, ಏನೂ ಇಲ್ಲ. ಎಲ್ಲವೂ ನಾರ್ಮಲ… ಡೆಲಿವರಿ ಆಗಿದೆ ಎಂದು ತಮ್ಮ ನೋವು ತೋಡಿಕೊಂಡರು.

ಭಟ್ಕಳದ ಶಾಸಕ ಸುನಿಲ್ ನಾಯ್ಕ್ ಅವರಿಗೆ ರೆಸಾರ್ಟ್‌ ಅನುಭವ ಖುಷಿ ಕೊಟ್ಟಿದೆಯಂತೆ. ಬಹುತೇಕ ಶಾಸಕರು ಗುರುಗ್ರಾಮದಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರೆ, ಬೆರಳೆಣೆಕೆಯ ಶಾಸಕರು ಕರ್ನಾಟಕ ಭವನಕ್ಕೆ ಆಗಮಿಸಿದರು. ನಂತರ ಬೆಂಗಳೂರು, ಹೈದರಾಬಾದ್‌, ಗೋವಾ ಹೀಗೆ ತಮ್ಮ ಕ್ಷೇತ್ರಗಳಿಗೆ ಹತ್ತಿರದ ವಿಮಾನ ನಿಲ್ದಾಣಗಳಿಗೆ ಟಿಕೆಟ್‌ ಮಾಡಿಕೊಂಡು ಈ ಶಾಸಕರು ದೆಹಲಿಬಿಟ್ಟರು.

ರಾಕೇಶ್‌ ಎನ್‌.ಎಸ್‌.

Follow Us:
Download App:
  • android
  • ios