Asianet Suvarna News Asianet Suvarna News

ಶರಣರ ಚಿಂತನೆಗಳು ಆಡಳಿತ ಪ್ರಕ್ರಿಯೆಗೆ ದಾರಿದೀಪ!

ಶರಣರ ಚಿಂತನೆಗಳು ಆಡಳಿತ ಪ್ರಕ್ರಿಯೆಗೆ ದಾರಿದೀಪ| ನನ್ನ ಹೋರಾಟ, ಚಿಂತನೆಗೆ ಸ್ಫೂರ್ತಿ ಆಗಿದ್ದು ಕ್ರಾಂತಿಕಾರಿ ಬಸವೇಶ್ವರರು|  ನನ್ನಿಂದ ಸಮಾಜದ ಎಲ್ಲ ಸಮುದಾಯಗಳನ್ನು ಅಭಿವೃದ್ಧಿಯಲ್ಲಿ ಒಳಗೊಳ್ಳುವ ಕಾಯಕ| ಬಸವ ಜಯಂತಿ ನಿಮಿತ್ತ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಲೇಖನ

Basava Jayanthi Special Write Up By Karnataka Chief Minister BS Yediyurappa
Author
Bangalore, First Published Apr 26, 2020, 11:31 AM IST

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

ನುಡಿಯೊಳಗೊಂದಾಗಿ ನಡೆಯದಿರ್ದೊಡೆ

ಹಿಡಿದಿರ್ದ ಲಿಂಗ ಘಟ ಸರ್ಪವಾಗುವುದು

ಕೂಡಲ ಸಂಗಮದೇವಾ.

ಹನ್ನೆರಡನೆಯ ಶತಮಾನದ ಮಹಾನ್‌ ಸಮಾಜ ಸುಧಾರಕ ಬಸವಣ್ಣನವರ ಈ ವಚನ ಪ್ರತ್ಯಕ್ಷವಾಗಿಯೋ ಇಲ್ಲ ಪರೋಕ್ಷವಾಗಿಯೋ ನನ್ನ ಮೇಲೆ ಗಾಢ ಪರಿಣಾಮವನ್ನು ಬೀರಿತು. ಈ ವಚನದ ಒಟ್ಟು ಸಾರ ನುಡಿದಂತೆ ನಡೆದುಕೊಳ್ಳಬೇಕು. ನಾವು ಯಾವುದೇ ವ್ಯಕ್ತಿಗೆ ಮಾತೊಂದನ್ನು ಕೊಟ್ಟರೆ ಎಂಥ ಕಷ್ಟಕರ ಪರಿಸ್ಥಿತಿಯಲ್ಲಿಯೂ ಕೊಟ್ಟಮಾತಿನಂತೆ ನಡೆದುಕೊಳ್ಳಬೇಕು. ಒಂದು ವೇಳೆ ನಾವು ಕೊಟ್ಟಮಾತಿನಂತೆ ನಡೆದುಕೊಳ್ಳದೇ ಹೋದರೆ, ನಾವು ಪೂಜಿಸುವ ಆರಾಧಿಸುವ ಲಿಂಗವೇ ಘಟ ಸರ್ಪವಾಗುವುದು. ಈ ವಚನದ ಸಾರಸರ್ವಸ್ವವನ್ನು ನಾನು ನನ್ನ ಬದುಕಿನಲ್ಲಿ ಕಾಯಾ-ವಾಚಾ-ಮನಸಾ ಅನುಸರಿಸಿಕೊಂಡು ಬಂದಿದ್ದೇನೆ. ನಿಜ ಹೇಳಬೇಕೆಂದರೆ ನನ್ನ ಹದಿ ಹರೆಯದ ದಿನಗಳಿಂದ ನನ್ನ ವ್ಯಕ್ತಿತ್ವ ರೂಪುಗೊಂಡದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ. ಶಿಸ್ತು, ಬದ್ಧತೆ, ಪ್ರಾಮಾಣಿಕತೆ, ಸಚ್ಚಾರಿತ್ರ್ಯ, ಗುರು-ಹಿರಿಯರನ್ನು ಗೌರವಿಸುವುದರ ಜೊತೆಗೆ ರಾಷ್ಟ್ರಪ್ರೇಮ ಇವುಗಳನ್ನು ಕಲಿಸಿಕೊಟ್ಟದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದರ ಜೊತೆಗೆ ಬಡವರು, ದೀನ-ದಲಿತರು, ಅವಕಾಶ ವಂಚಿತರ ಅಭ್ಯುದಯಕ್ಕೆ ಪೂರಕವಾಗಿ ತಮ್ಮನ್ನು ತಾವೇ ಅರ್ಪಿಸಿಕೊಳ್ಳಬೇಕು ಅನ್ನುವ ಪಾಠವನ್ನು ನನಗೆ ಎರಕ ಹೊಯ್ದದ್ದೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ. ಇಂಥದೊಂದು ಶಿಸ್ತು ಬದ್ಧ ಚೌಕಟ್ಟಿನಲ್ಲಿ ಬೆಳೆದ ನನಗೆ ಹನ್ನೆರಡನೆಯ ಶತಮಾನದ ಶರಣರ ತತ್ವ ಮತ್ತು ಸಿದ್ಧಾಂತಗಳೂ ಆಕರ್ಷಕವಾಗಿ ಕಂಡಿದ್ದವು. ದೇವಲೋಕ ಮರ್ತಯ ಬೇರಿಲ್ಲ ಕಾಣಿಭೋ ಸತ್ಯವನು ನುಡಿವುದೇ ದೇವಲೋಕ, ಮಿಥ್ಯವನು ನುಡಿಯುವುದೇ ಮರ್ತಯ ಆಚಾರವೇ ಸ್ವರ್ಗ, ಅನಾಚರವೇ ನರಕ ಕೂಡಲ ಸಂಗಮ ದೇವಾ ಎನ್ನುವ ವಚನ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗರಡಿಯಲ್ಲಿ ರೂಪುಗೊಂಡ ನನಗೆ ಹೆಚ್ಚು ಹೆಚ್ಚು ಆಕರ್ಷಿತವಾಗಿ ಕಂಡಿತ್ತು. ಇಂಥ ಪ್ರತಿಯೊಂದು ವಚನಗಳನ್ನು ಸಾರ್ವಜನಿಕ ಬದುಕಿನಲ್ಲಿ ಅಂತರ್ಗತಗೊಳಿಸಿಕೊಳ್ಳುವ ಪ್ರಯತ್ನವನ್ನು ಪ್ರಜ್ಞಾಪೂರ್ವಕವಾಗಿ ನಾನು ಅನುಸರಿಸಿಕೊಂಡು ಬಂದಿದ್ದೇನೆ.

ಬಸವ ತತ್ವಗಳನ್ನು ಅಳವಡಿಸಿಕೊಂಡು ಬಸವ ಜಯಂತಿ ಸಂಪನ್ನಗೊಳಿಸೋಣ

ವ್ಯಕ್ತಿ ಮತ್ತು ಸಮಷ್ಟಿಯ ಹಿತ ಕಾಪಾಡುವ ಹಾದಿಯಲ್ಲಿ ಹನ್ನೆರಡನೆಯ ಶತಮಾನದ ಶರಣರ ಒಂದೊಂದು ವಚನಗಳು ನುಡುಗಟ್ಟುಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಅಧಿಕಾರ ಸೂತ್ರ ಹಿಡಿದವರಿಗಂತೂ ಹನ್ನೆರಡನೆಯ ಶತಮಾನದ ಬಸವಾದಿ ಶರಣರ ಚಿಂತನೆಗಳು ಅವರ ಆಡಳಿತ ಪ್ರಕ್ರಿಯೆಯ ದಾರಿದೀಪ. ಬಸವಾದಿ ಶರಣರ ಚಿಂತನೆಗಳು ಸಾರ್ವಕಾಲಿಕವಾಗಿರಬೇಕು. ಶೋಷಣಾಮುಕ್ತ ಸಮಾಜವನ್ನು ನಿರ್ಮಾಣ ಮಾಡುವ ದಿಸೆಯಲ್ಲಿ ಹನ್ನೆರಡನೆಯ ಶತಮಾನದಲ್ಲಿಯೇ ಬಸವಣ್ಣನವರು ದಲಿತರು, ಹಿಂದುಳಿದವರು, ಮಹಿಳೆಯರ ಅಭ್ಯುದಯಕ್ಕೆ ಪೂರಕವಾದ ಜಾಗೃತಿಯನ್ನು ಜನಮಾನಸದಲ್ಲಿ ಮೂಡಿಸಿದರು. ಸಮಾಜದಲ್ಲಿ ಅಸ್ಪೃಶ್ಯಳು ಎನ್ನುವ ಔದಾಸಿನ್ಯಕ್ಕೆ ಗುರಿಯಾಗಿದ್ದ ಮಹಿಳೆಗೆ ಸಮಾನ ಸ್ಥಾನಮಾನ ಗೌರವಗಳನ್ನು ನೀಡಿದರು. ಪುರುಷರಂತೆ ಮಹಿಳೆ ಸಮಾಜದ ಎಲ್ಲ ಹಕ್ಕು ಮತ್ತು ಅಧಿಕಾರಗಳಿಗೆ ಅರ್ಹಳು ಎನ್ನುವುದನ್ನು ಬರಿಯ ಮಾತಿನಲ್ಲಿ ಹೇಳಲಿಲ್ಲ, ಅದನ್ನು ಅನುಷ್ಟಾನಗೊಳಿಸುವುದರ ಮೂಲಕ ಸಾಕಾರಗೊಳಿಸಿದ್ದರು. ಇಷ್ಟಲಿಂಗಧಾರಣೆ ಕೇವಲ ಪುರುಷರಿಗೆ ಮಾತ್ರ ಸೀಮಿತವಾದದ್ದಲ್ಲ, ಪುರುಷರಂತೆ ಅಂಗದ ಮೇಲೆ ಲಿಂಗವನ್ನು ಧರಿಸಿ ತನ್ನ ಆರಾಧ್ಯ ದೈವವನ್ನು ಆರಾಧಿಸುವ ಅಧಿಕಾರವನ್ನು ಮಹಿಳೆಯರಿಗೆ ನೀಡಿದ್ದರು. ಬಸವಣ್ಣನವರ ಮಹಿಳಾಪರ ಚಿಂತನೆ ನನ್ನ ಮೇಲೆ ದಟ್ಟವಾದ ಪರಿಣಾಮ ಬೀರಿತ್ತು. ಈ ಕಾರಣದಿಂದಲೇ ನನ್ನ ಅಧಿಕಾರಾವಧಿಯಲ್ಲಿ ಭಾಗ್ಯಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದೆ. ಹೆಣ್ಣು ಮಗು ಎನ್ನುವ ಕಾರಣದಿಂದಲೇ ಕಣ್ಣು ತೆರೆಯುವ ಮೊದಲೇ ಮುಗ್ಧ ಮಗುವನ್ನು ಭ್ರೂಣಾವಸ್ಥೆಯಲ್ಲಿಯೇ ಹತ್ಯೆ ಮಾಡುವಂತಹ ಕ್ರೌರ್ಯ ಕೊನೆಗೊಳ್ಳಬೇಕು ಎಂದು ನಾನು ಸಂಕಲ್ಪ ಮಾಡಿದ್ದೆ ಈ ಸಂಕಲ್ಪದ ಚಂತನೆಯ ಮೂಸೆಯಲ್ಲಿ ರೂಪುಗೊಂಡದ್ದೇ ಭಾಗ್ಯಲಕ್ಷ್ಮಿ ಯೋಜನೆ. ಈ ಯೋಜನೆ ಲಕ್ಷಾಂತರ ಹೆಣ್ಣುಮಕ್ಕಳ ಭವಿಷ್ಯ ರೂಪಿಸುವ ಒಂದು ಮಹತ್ವದ ಯೋಜನೆಯಾಗಿ ರೂಪುಗೊಂಡಿದೆ. ಇದಕ್ಕೆ ನಿಸ್ಸಂಶಯವಾಗಿ ಹನ್ನೆರಡನೆಯ ಶತಮಾನದಿ ಬಸವಾದಿ ಶರಣರು ಮಹಿಳಾ ಸ್ವಾತಂತ್ರ್ಯಕ್ಕೆ ನೀಡಿದ ಪ್ರಾಮುಖ್ಯತೆಯೇ ಕಾರಣ.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭ್ಯುದಯ ಬಸವಣ್ಣನವರ ಚಿಂತನೆಯಾಗಿತ್ತು. ಕೊಲುವವನೇ ಮಾದಿಗ, ಹೊಲಸು ತಿಂಬುವನೇ ಹೊಲೆಯ, ಕುಲವೇನೋ ಆವದಿರ ಕುಲವೇನೋ, ಸಕಲ ಜೀವಾತ್ಮರಿಗೆ ಲೇಸನೇ ಮಾಡುವ ಕೂಡಲ ಸಂಗನ ಶರಣರೇ ಕುಲಜರು ಎನ್ನುವ ಬಸವಣ್ಣನವರ ವಚನ ನನ್ನ ಮೇಲೆ ಗಾಢ ಪರಿಣಾಮ ಬೀರಿದ ಮತ್ತೊಂದು ವಚನ. ಈ ಕಾರಣದಿಂದಲೇ ಎಂಭತ್ತರ ದಶಕದಲ್ಲಿಯೇ ಜೀತಮುಕ್ತರ ಪುನರ್ವಸತಿಗಾಗಿ ದೊಡ್ಡ ಹೋರಾಟವನ್ನು ಮಾಡಿದೆ. ಮೊದಲು ಶಿಕಾರಿಪುರ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಜೀತ ಮುಕ್ತರಿಗೆ ಪುನರ್ವಸತಿ ಕಲ್ಪಿಸುವ ಹೋರಾಟವನ್ನು ತಾರ್ಕಿಕ ಅಂತ್ಯದವರೆಗೆ ಕೊಂಡೊಯ್ಯುವರೆಗೆ ನನ್ನ ಹೋರಾಟ ಮುಂದುವರಿಯಿತು. ಅಂತಿಮವಾಗಿ ಸಾವಿರಾರು ಜೀತ ಮುಕ್ತರು ಪುನರ್ವಸತಿಯ ಸೌಲಭ್ಯವನ್ನು ಪಡೆದುಕೊಂಡರು. ಅವರ ಬದುಕಿನಲ್ಲಿ ನೆಮ್ಮದಿ, ಶಾಂತಿಯ ತಂಗಾಳಿ ಬೀಸಲಾರಂಭಿಸಿತು. ಅದೇ ರೀತಿ ಬಗರ್‌ ಹುಕುಂ ಹೋರಾಟವನ್ನು ಸಂಘಟಿಸಿದೆ. ನಾನು ಎರಡನೇ ಬಾರಿಗೆ ಶಾಸಕನಾಗಿದ್ದ ಅವಧಿಯಲ್ಲಿ ದಲಿತರು, ಹಿಂದುಳಿದವರು ಮತ್ತು ಶೋಷಿತರನ್ನು ಒಕ್ಕಲೆಬ್ಬಿಸಲು ಸರ್ಕಾರ ಅರಣ್ಯ ಕಾಯಿದೆ ತಿದ್ದುಪಡಿ ರೂಪಿಸಲು ಹೊರಟಿತ್ತು. ಸರ್ವರಿಗೂ ಸಮಬಾಳು- ಸರ್ವರಿಗೂ ಸಮಪಾಲು ಎನ್ನುವ ಬಸವಾದಿ ಶರಣರ ಆಶಯಗಳು ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಚಿಂತನೆಯನ್ನು ಸಕಾರಗೊಳಿಸುವುದು ನನ್ನ ಬದುಕಿನ ಧ್ಯೇಯವಾಗಿತ್ತು. ಈ ಕಾರಣದಿಂದಲೇ ದಲಿತರು, ಹಿಂದುಳಿದವರು ಮತ್ತು ಶೋಷಿತರಿಗೆ ಮಾರಕವಾಗುವ ಈ ತಿದ್ದುಪಡಿ ವಿಧೇಯಕವನ್ನು ಹಿಂದೆ ಪಡೆಯಬೇಕೆಂದು ಧರಣಿ ಕುಳಿತೆ. ಅಂತಿಮವಾಗಿ ಸರ್ಕಾರ ಹಾಲಿ ತಿದ್ದುಪಡಿ ವಿಧೆಯಕವನ್ನು ಹಿಂದೆ ತೆಗೆದುಕೊಂಡಿತ್ತು. ಇದರ ಪರಿಣಾಮ ಲಕ್ಷಾಂತರ ದಲಿತರು, ಹಿಂದುಳಿದವರು, ಅವಕಾಶ ವಂಚಿತರು ಬೀದಿ ಪಾಲಾಗುವುದು ತಪ್ಪಿತ್ತು. ಇಂಥ ದಲಿತ ಹಾಗೂ ಶೋಷಿತ ಪರ ಹೋರಾಟ ಮತ್ತು ಚಿಂತನೆಗೆ ನನಗೆ ಸ್ಫೂರ್ತಿಯಾಗಿದ್ದು ಹನ್ನೆರಡನೆಯ ಶತಮಾನದ ಮಹಾನ್‌ ಕ್ರಾಂತಿಕಾರಿ ಹಾಗು ದಾರ್ಶನಿಕ ಅಣ್ಣ ಬಸವಣ್ಣನವರೆ.

ರಾಜ್ಯ ಸರ್ಕಾರ ಇಷ್ಟು ಬೇಗ ಲಾಕ್‌ಡೌನ್‌ ಸಡಿಲಿಸಿದ್ದೇಕೆ?

ಪರಿಶಿಷ್ಟವರ್ಗದವರಿಗೆ ಪ್ರತ್ಯೇಕ ನಿಗಮ ಸ್ಥಾಪನೆ, ಹಿಂದುಳಿದವರ ಅಭಿವೃದ್ಧಿಗೆ ಪೂರಕವಾಗಿ ಪ್ರತ್ಯೇಕ ಹಿಂದುಳಿದ ವರ್ಗದ ಇಲಾಖೆ, ಸಫಾಯಿ ಕರ್ಮಚಾರಿಗಳ ಬದುಕಿನ ಪುನಶ್ಚೇತನಕ್ಕಾಗಿ ಸಫಾಯಿ ಕರ್ಮಚಾರಿ ಆಯೋಗ ಸ್ಥಾಪನೆ. ಪ್ರತಿ ಜಿಲ್ಲೆಗಳಲ್ಲಿ ಅಂಬೇಡ್ಕರ್‌ ಭವನ, ಜಗಜೀವನ ರಾಂ ಭವನ, ಮಹರ್ಷಿ ವಾಲ್ಮೀಕಿ ಭವನ, ಸೇವಾ ಲಾಲ… ಭವನ,ಬೋವಿಗಳ ಅಭಿವೃದ್ಧಿಗೆ ಪ್ರತ್ಯೇಕ ನಿಗಮ, ದೇವದಾಸಿಯರ ಮಾಸಾಶನ, ಜೊತೆಗೆ ದೇವದಾಸಿಯರ ಪುನರ್ವಸತಿಗೆ ವಿಶೇಷ ಯೋಜನೆ, ವಾಲ್ಮೀಕಿ ಜಯಂತಿ ಮತ್ತು ಕನಕ ಜಯಂತಿಗೆ ರಜೆ. ಸರ್ಕಾರಿ, ಅರೆ ಸರ್ಕಾರಿ,ಶಾಲಾ-ಕಾಲೇಜುಗಳಲ್ಲಿ ಅಂಬೇಡ್ರ್ಕ ಭಾವಚಿತ್ರ ಅನಾವರಣ.ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ, ದಲಿತರು, ಹಿಂದುಳಿದವರು, ಅವಕಾಶ ವಂಚಿತರ ಮಠ-ಮಾನ್ಯಗಳಿಗೆ ಆರ್ಥಿಕ ನೆರವು ರೂಪಿಸುವ ಯೋಜನೆ. ಹೀಗೆ ಹನ್ನೆರಡನೆಯ ಶತಮಾನದ ಸಮಾಜ ಸುಧಾರಕ ಬಸವಣ್ಣನವರ ಚಿಂತನೆಯ ಮುಂಬೆಳಕಿನಲ್ಲಿ ಸಮಾಜದ ಎಲ್ಲ ಸಮುದಾಯಗಳನ್ನು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಒಳಗೊಳ್ಳುವ ಕಾಯಕವನ್ನು ಬದ್ಧತೆಯಿಂದ ನಾನು ಮಾಡಿದ್ದೇನೆ.

ಒಂದು ಮಾತಂತೂ ಸತ್ಯ, ಜಗದ ಬೆಳಕು-ಯುಗದ ಬೆಳಕು ಬಸವಣ್ಣನವರ ತತ್ವಾದರ್ಶಗಳನ್ನು ಯಾವುದೇ ಒಂದು ಸರ್ಕಾರ ತತ್ವಶಃ ಅನುಷ್ಠಾನಗೊಳಿಸಲು ಸಂಕಲ್ಪ ಮಾಡಿದರೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುವ ಸಂವಿಧಾನದ ಸುಖೀ ರಾಜ್ಯದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಬಸವಾದಿ ಶರಣರ ನಾಡಿಗೆ ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದೇನೆ. ಅಷ್ಟುಮಾತ್ರವಲ್ಲ ಜಗತ್ತಿನ ಪ್ರಪ್ರಥಮ ಸಂಸತ್‌ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಅನುಭವ ಮಂಟಪವನ್ನು ಬಸವಕಲ್ಯಾಣದಲ್ಲಿ ಬೃಹತ್ತಾಗಿ-ಮಹತ್ತಾಗಿ ರೂಪಿಸುವುದು ನನ್ನ ಬದುಕಿನ ಹೆಬ್ಬಯಕೆ. ಬಸವಾದಿ ಶರಣರ ಜೀವನ ಹಾಗೂ ಅವರು ಜಗತ್ತಿಗೆ ಸಾರಿದ ಮಹಾನ್‌ ಸಂದೇಶಗಳನ್ನು ಭವಿಷ್ಯದ ಪೀಳಿಗೆ ತಿಳಿಸುವುದು ಅನುಭವ ಮಂಟಪದ ಸ್ಥಾಪನೆಯ ಹಿಂದಿರುವ ಮಹದೋದ್ದೇಶ. ಈ ದಿಸೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ಅನುಭವ ಮಂಟಪವನ್ನು ರೂಪಿಸಲು ನೂರು ಕೋಟಿ ರೂಪಾಯಿಗಳನ್ನು ಮೀಸಲಿರಿಸಲು ನಿರ್ಧರಿಸಿದ್ದೇನೆ. ಇದರ ಜೊತೆಗೆ ಅನುಭವ ಮಂಟಪದ ಸಮಗ್ರ ಅಭಿವೃದ್ಧಿಗೆ ಐದು ನೂರು ಕೋಟಿ ರೂಪಾಯಿಗಳನ್ನು ಒದಗಿಸಲಾಗುವುದು. ಬಸವ ಜಯಂತಿಯ ಈ ಶುಭ ಸಂದರ್ಭದಲ್ಲಿ ಅನುಭವ ಮಂಟಪದ ಸಮಗ್ರ ಅಭಿವೃದ್ಧಿ ಆಗಲೇ ಬೇಕೆನ್ನುವುದು ನನ್ನ ಸಂಕಲ್ಪ.

ನನ್ನ ಸರ್ಕಾರ ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ, ಇವ ನಮ್ಮವ ಇವ ನಮ್ಮವ ನಮ್ಮವನೆಂದೆನಿಸಯ್ಯಾ, ಕೂಡಲ ಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯಾ ಎನ್ನುವ ಬಸವಣ್ಣನವರ ವಚನದ ತಿರುಳನ್ನು ಸಾಕಾರಗೊಳಿಸುವುದೇ ನನ್ನ ಸಾರ್ವಜನಿಕ ಬದುಕಿನಲ್ಲಿ ನಾನು ಕೈಗೊಂಡಿರುವ ಮಂತ್ರ ದೀಕ್ಷೆ. ಇದಕ್ಕೆ ನಾನು ಎಲ್ಲಾ ಕಾಲಕ್ಕೂ ಬದ್ಧನಾಗಿರುತ್ತೇನೆ ಎಂದು ಬಸವ ಜಯಂತಿಯ ಈ ಸುಸಂದರ್ಭದಲ್ಲಿ ನಾಡಿನ ಜನತೆಗೆ ವಚನ ನೀಡುತ್ತೇನೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

Follow Us:
Download App:
  • android
  • ios