ಕಂಬಳವೀರರಿಗೆ ಟ್ರೇನಿಂಗ್ ಹೇಗಿರುತ್ತದೆ?
ಬಳ ಸಂರಕ್ಷಣೆ, ನಿರ್ವಹಣೆ ಹಾಗೂ ತರಬೇತಿಗೆ ಉಡುಪಿ ಜಿಲ್ಲೆಯ ಕಾರ್ಕಳ ಬಳಿಯ ಮೀಯಾರು ಎಂಬಲ್ಲಿ ಅಕಾಡೆಮಿ ಸ್ಥಾಪಿಸಲಾಗಿದೆ. ಇದರಡಿಯಲ್ಲಿ ಕೋಣಗಳನ್ನು ಓಡಿಸುವವರಿಗೆ 12 ದಿನಗಳ ವಿಶೇಷ ಉಚಿತ ತರಬೇತಿಯನ್ನು ನೀಡಲಾಗುತ್ತದೆ.
ಕರಾವಳಿಯ ಸಾಂಪ್ರದಾಯಿಕ ಕ್ರೀಡೆ ಕಂಬಳದ ಕೆಸರು ಗದ್ದೆಯಲ್ಲಿ ವಿಶ್ವದಾಖಲೆ ವೀರ ಉಸೇನ್ ಬೋಲ್ಟ್‌ಗಿಂತ ವೇಗವಾಗಿ ಓಡಿ ಮೂಡಬಿದಿರೆಯ ಶ್ರೀನಿವಾಸ ಗೌಡ ದಾಖಲೆ ಬರೆಯುತ್ತಿದ್ದಂತೆ ಕಂಬಳ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಕೋಣಗಳನ್ನು ಓಡಿಸುವ ಸ್ಪರ್ಧೆಯನ್ನು ಅಚ್ಚರಿಗಣ್ಣಿನಿಂದ ನೋಡುತ್ತಿವೆ.
ಶ್ರೀನಿವಾಸಗೌಡಗೆ ಓಟದ ತರಬೇತಿ ನೀಡಲು ಕೇಂದ್ರ ಸರ್ಕಾರ ಮುಂದೆ ಬಂದಿದೆ. ಅವರನ್ನು ಒಲಿಂಪಿಕ್ಸ್‌ಗೆ ಕಳಿಸಬೇಕು ಎಂದು ಗಣ್ಯಾತಿಗಣ್ಯರು ಕೂಡ ಹೇಳತೊಡಗಿದ್ದಾರೆ. ಒಲಿಂಪಿಕ್ಸ್‌ಗೆ ಹೋಗುವ ಕ್ರೀಡಾಳುಗಳು ವರ್ಷಗಟ್ಟಲೆ ಕಠಿಣ ತರಬೇತಿ ಪಡೆದಿರುತ್ತಾರೆ. ಹಾಗಂತ ಕಂಬಳದಲ್ಲಿ ಕೋಣ ಓಡಿಸುವವರೇನೂ ಕಡಿಮೆ ತರಬೇತಿ ಪಡೆದಿರುವುದಿಲ್ಲ. ಅದರ ಕುರಿತು ಹಾಗೂ ಕಂಬಳದ ಹಿನ್ನೆಲೆಯ ಕುರಿತು ಮಾಹಿತಿ ಇಲ್ಲಿದೆ.
ಕಂಬಳದಲ್ಲಿ ತನ್ನದೇ ದಾಖಲೆ ಮುರಿದ ತುಳುನಾಡಿನ ಶ್ರೀನಿವಾಸ!
ಕೋಣ ಓಡಿಸುವವರ ತರಬೇತಿಯಲ್ಲಿ ಏನೇನಿರುತ್ತದೆ?
ಕಂಬಳ ಸಂರಕ್ಷಣೆ, ನಿರ್ವಹಣೆ ಹಾಗೂ ತರಬೇತಿಗೆ ಉಡುಪಿ ಜಿಲ್ಲೆಯ ಕಾರ್ಕಳ ಬಳಿಯ ಮೀಯಾರು ಎಂಬಲ್ಲಿ ಅಕಾಡೆಮಿ ಸ್ಥಾಪಿಸಲಾಗಿದೆ. ಇದರಡಿಯಲ್ಲಿ ಕೋಣಗಳನ್ನು ಓಡಿಸುವವರಿಗೆ 12 ದಿನಗಳ ವಿಶೇಷ ಉಚಿತ ತರಬೇತಿಯನ್ನು ನೀಡಲಾಗುತ್ತದೆ.
ನೇತಾಜಿ ಸುಭಾಷ್‌ಚಂದ್ರ ಬೋಸ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯಿಂದ ಯೋಗ, ವ್ಯಾಯಾಮ, ಮನಃಶಾಸ್ತ್ರ , ವ್ಯಕ್ತಿತ್ವ ವಿಕಸನ, ಫಿಸಿಯೋ ಥೆರಪಿ ತರಬೇತಿ ಜತೆಗೆ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನೂ ಅನುಸರಿಸಲಾಗುತ್ತದೆ. ಹಲವು ವೈದ್ಯಕೀಯ ಪರೀಕ್ಷೆ ಮಾಡುವ ಮೂಲಕ ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್) ನೀಡುವಂತಹುದೇ ಗುಣಮಟ್ಟದ ತರಬೇತಿಯನ್ನು ಕಂಬಳವೀರರಿಗೆ ಕೊಡಲಾಗುತ್ತದೆ.
ಹಗ್ಗ ನೇಯುವುದು, ಕಚ್ಚೆ ಮುಂಡಾಸು ಕಟ್ಟುವುದು, ಬೆತ್ತ ನೇಯುವುದು, ಕೋಣಗಳನ್ನು ಸಾಕುವುದು, ಅವುಗಳನ್ನು ಪಂದ್ಯಗಳಿಗೆ ಸಜ್ಜುಗೊಳಿಸುವುದು ಮುಂತಾದ ತರಬೇತಿ ನೀಡಲಾಗುತ್ತದೆ. ಪ್ರತಿದಿನವೂ ಅವರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಕಂಬಳ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಗುಣಪಾಲ ಕಡಂಬ ಹೇಳುತ್ತಾರೆ.
ಒಟ್ಟು 224 ಮಂದಿ ಈ ತರಬೇತಿ ಪಡೆದಿದ್ದು, ಇದೀಗ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿರುವ ಶ್ರೀನಿವಾಸ ಗೌಡ ಈ ತರಬೇತಿ ಪಡೆದ ಮೊದಲ ಬ್ಯಾಚ್‌ನ ಸದಸ್ಯ. ಕಂಬಳದ ತರಬೇತಿ ಪಡೆದವರು ಕಂಬಳ ನಡೆಯುವ ಅವಧಿಯ 4 ತಿಂಗಳಲ್ಲಿ ಸುಮಾರು 7 ಲಕ್ಷ ರು.ವರೆಗೆ ಸಂಪಾದಿಸುತ್ತಾರೆ ಎನ್ನಲಾಗಿದೆ.
ಕೋರ್ಸ್ ಶುಲ್ಕ: 30,000ರಿಂದ 35,000 ರು.
ಅವಧಿ: 12 ದಿನ - ಬೆಳಿಗ್ಗೆ 5.30ರಿಂದ ಸಂಜೆಯವರೆಗೆ
ಕಂಬಳ ಕೋಣಗಳನ್ನು ಓಡಿಸುವ ಸ್ಪರ್ಧೆಯಲ್ಲ!
ಕೋಣಗಳನ್ನು ಓಡಿಸುವ ಸ್ಪರ್ಧೆಗೆ ಕಂಬಳ ಎನ್ನುತ್ತಾರೆ ಎನ್ನುವುದು ಕಂಬಳಕ್ಕಿರುವ ಸಾಮಾನ್ಯ ವ್ಯಾಖ್ಯಾನ. ಆದರೆ ತುಳುನಾಡಿನ ಕೃಷಿಕರಿಗೆ ಅದೊಂದು ಆರಾಧನೆ. ಹಾಗಾಗಿ ಅಲ್ಲಿನ ಜನ ಕಂಬಳವನ್ನು ಕೋಣಗಳನ್ನು ಓಡಿಸುವ ಸ್ಪರ್ಧೆ ಎಂದು ಭಾವಿಸಿಯೇ ಇಲ್ಲ. ತುಳುನಾಡಿನಲ್ಲಿ ಭಕ್ತಿ ಭಾವಗಳಿಂದ ಆಚರಿಸುವ ಭೂತಾರಾಧನೆಯ ರೀತಿಯಲ್ಲೇ ಕಂಬಳವನ್ನು ಕೂಡ ಭಕ್ತಿಯಿಂದ ಅಲ್ಲಿನ ಜನ ಆಚರಿಸುತ್ತಾರೆ, ಆರಾಧಿಸುತ್ತಾರೆ.
ಕಂಬಳವೀರ ಶ್ರೀನಿವಾಸ ಗೌಡರಿಂದ ಮತ್ತೊಂದು ದಾಖಲೆ..ಜಗವೇ ಕೊಂಡಾಡಲಿ
ಕೃಷಿ ಗದ್ದೆಯಲ್ಲೇ ಕಂಬಳ ನಡೆಸಿ ಹಬ್ಬದಂತೆ ಸಂಭ್ರಮಿಸುತ್ತಾರೆ. ಯಕ್ಷಗಾನದಷ್ಟೇ ಸಾಂಪ್ರದಾಯಿಕವಾಗಿ ಕಂಬಳಗಳು ನಡೆಯುತ್ತವೆ. ಕೆಸರು ಮಣ್ಣಿನಿಂದ ಕೂಡಿದ ಭತ್ತದ ಗದ್ದೆಯಲ್ಲಿ ಜೋಡಿ ಕೋಣಗಳನ್ನು ಓಡಿಸುವ ಕ್ರೀಡೆಯೇ ತುಳುನಾಡಿನ ‘ಕಂಬುಲ’ ಅರ್ಥಾತ್ ಕಂಬಳ. ಕರಾವಳಿಯ ಕೃಷಿಕರ ಜಾನಪದ ಕ್ರೀಡೆಯಾಗಿರುವ ಕಂಬಳ ಹಿಂದೆ ವಿಶಾಲ ಭತ್ತದ ಗದ್ದೆಯಲ್ಲಿ ನಡೆಯುತ್ತಿತ್ತು.
ಆಧುನಿಕ ಸ್ಪರ್ಶ ಲಭಿಸಿದ ಬಳಿಕ ಕಂಬಳಕ್ಕಾಗಿಯೇ ಪ್ರತ್ಯೇಕ ಕಣಗಳನ್ನು ನಿರ್ಮಾಣ ಮಾಡಲಾಗಿದೆ. ಆದರೂ ಸಂಪ್ರದಾಯ ಹಾಗೂ ಆಚರಣೆಗೆ ಚ್ಯುತಿ ಬರದಂತೆ ಆಚರಿಸಲಾಗುತ್ತದೆ. ಸಾಂಪ್ರದಾಯಿಕ ಕಂಬಳಗಳು ತುಳುವರ ಎರಡನೇ ಕೃಷಿ ಅವಧಿಯಾದ ಸುಗ್ಗಿ ತಿಂಗಳ ಕೊಯ್ಲಿನ ಬಳಿಕ ಆರಂಭವಾಗುತ್ತಿತ್ತು. ಆಗೆಲ್ಲಾ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ಕಂಬಳಗಳು ನಡೆಯುತ್ತಿದ್ದರೆ, ಆಧುನಿಕ ಕಂಬಳಗಳು ನವೆಂಬರ್ ಕೊನೆಯ ವಾರದಿಂದ ಪ್ರಾರಂಭವಾಗಿ ಮಾಚ್‌ರ್ ಕೊನೆಯವಾರದ ವರೆಗೂ ನಡೆಯುತ್ತವೆ.
500 ವರ್ಷಗಳ ಪುರಾತನ ಕ್ರೀಡೆ
ಕಂಬಳ ಏನಿಲ್ಲದಿದ್ದರೂ 400-500 ವರ್ಷ ಹಳೆಯದು ಎನ್ನುವುದಕ್ಕೆ ಲಭ್ಯವಾಗಿರುವ ಶಾಸನಗಳೇ ಸಾಕ್ಷಿ. ತಾಳಿಪಾಡಿ ಶಾಸನ, ಶೃಂಗೇರಿ ಶಾಸನ, ತೋಳಾರ ಶಾಸನ ಹಾಗೂ ಬಂಟ್ವಾಳ ಶಾಸನ ಮುಂತಾದ 400 ವರ್ಷಕ್ಕೂ ಹಳೆಯದಾದ ಶಾಸನಗಳಲ್ಲಿ ಕಂಬಳದ ಗದ್ದೆ, ಕಂಬಳ ಜಾತ್ರೆ, ಕಂಬಳ ಸ್ಪರ್ಧೆ ಮುಂತಾದವುಗಳ ಬಗ್ಗೆ ಉಲ್ಲೇಖ ಇದೆ. ಹಿಂದೆ ರಾಜರ ಆಳ್ವಿಕೆಯ ಸಮಯದಲ್ಲಿ ಅವರ ನೇತೃತ್ವದಲ್ಲಿ ಕಂಬಳ ನಡೆಯುತ್ತಿದ್ದರೆ, ಬ್ರಿಟಿಷರ ಅವಧಿಯಲ್ಲೂ ಕಂಬಳ ವಿಜೃಂಭಣೆಯಿಂದ ನಡೆಯುತ್ತಿತ್ತು.
ರೈತರ ಮನರಂಜನೆಗಾಗಿ ನಡೆಯುತ್ತಿದ್ದ ಕಂಬಳ ಈಗ ಸಂಘ ಸಂಸ್ಥೆಗಳ ಬಲದೊಂದಿಗೆ ಕಾರ್ಪೊರೇಟ್ ಮಟ್ಟಕ್ಕೂ ಬೆಳೆದು ನಿಂತಿದೆ. ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೇ, ಕಾಸರಗೋಡು, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರಿನ ಕೆಲ ಭಾಗದಲ್ಲಿ ಕಂಬಳ ನಡೆಯುತ್ತದೆ.
ಕಂಬಳದಲ್ಲಿ ಪಾಲ್ಗೊಳ್ಳುವವರು ಏನೇನು ಮಾಡಬೇಕು?
ಕೋಣಗಳನ್ನು ಓಡಿಸುವ ಸ್ಪರ್ಧೆಯಾದರೂ ತುಳುವರಿಗೆ ಕಂಬಳ ಎಂದರೆ ಆರಾಧನೆ. ಹೇಗೆ ಒಂದು ಊರಿನಲ್ಲಿ ಜಾತ್ರೆಯ ಅವಧಿಯಲ್ಲಿ ಊರ ಜನರೆಲ್ಲಾ ಮಾಂಸಾಹಾರ ತೊರೆಯುತ್ತಾರೋ ಹಾಗೇ ಕಂಬಳ ಘೋಷಣೆಯಾದ ದಿನದ ಬಳಿಕ ಕೋಣದ ಮಾಲಿಕರು, ಕೋಣವನ್ನು ಓಡಿಸುವವರು, ಆಯೋಜಕರು ಮಾಂಸಾಹಾರ, ಮದ್ಯಪಾನ, ದೈಹಿಕ ವಾಂಛೆ ಹಾಗೂ ದುಶ್ಚಟಗಳನ್ನು ತ್ಯಜಿಸಿ ಸನ್ಯಾಸಿಯಂತೆ ಬದುಕಬೇಕು. ಸೂತಕ ಇರುವವರು, ಅವರ ಕೋಣಗಳು ಕಂಬಳದಲ್ಲಿ ಪಾಲ್ಗೊಳ್ಳುವಂತೆ ಇಲ್ಲ.
ಚಪ್ಪಲಿ ಕಳಚಿಯೇ ಕಂಬಳದ ಕೆಸರು ಗದ್ದೆಗೆ ಇಳಿಯಬೇಕು. ಮನೆ ಮಂದಿಗೆ, ಸಾಕು ಪ್ರಾಣಿಗಳಿಗೆ ಅನಾರೋಗ್ಯ ಉಂಟಾದರೆ ಕಂಬಳದ ಗದ್ದೆಗೆ ಸೊಪ್ಪು, ಅಕ್ಕಿ ಹಾಕುತ್ತೇನೆ ಎಂದು ಹರಕೆ ಹೊರುವ ಸಂಪ್ರದಾಯವೂ ಇದೆ. ಕಂಬಳದ ಗದ್ದೆಗೆ ಇಳಿದ ತಕ್ಷಣವೇ ಕೆಸರು ನೀರನ್ನು ತಮ್ಮ ಮೇಲೆ ಹಾಗೂ ಕೋಣಗಳ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳುತ್ತಾರೆ.
ಕಂಬಳ ಗದ್ದೆ ನಿರ್ಮಾಣ ವೇಳೆ ಮನೆಯ ಜಾನುವಾರುಗಳನ್ನು ಗದ್ದೆಗೆ ಇಳಿಸಿ ಹರಕೆ ತೀರಿಸಿಕೊಳ್ಳುತ್ತಾರೆ. ಗದ್ದೆಯ ಕೆಸರನ್ನು ಮನೆಗೆ ತೆಗೆದುಕೊಂಡು ಹೋಗಿ ಜಾನುವಾರು ಮೇಲೆ ಹಾಗೂ ಕೊಟ್ಟಿಗೆಗೆ ಸಿಂಪಡಿಸುತ್ತಾರೆ.
ಹಳ್ಳಿಯಿಂದ ದಿಲ್ಲಿಗೆ; ಕಂಬಳ ವೀರನಿಗೆ ಟಿಕೆಟ್ ಬುಕ್ ಮಾಡಿದ ಕ್ರೀಡಾ ಪ್ರಾಧಿಕಾರ!
ಕಂಬಳ ಗದ್ದೆ ತಯಾರಿಸುವುದು ಹೇಗೆ?
ಕೋಣಗಳನ್ನು ಓಡಿಸಲು ಸಮತಟ್ಟಾದ ಪ್ರದೇಶದಲ್ಲಿ ಐದರಿಂದ ಆರು ಅಡಿ ಆಳಕ್ಕೆ ಮಣ್ಣು ಹಾಗೂ ಮರಳಿನಿಂದ ಕೃತಕವಾಗಿ ನಿರ್ಮಾಣ ಮಾಡುವ ಕೊಳಗಳಿಗೆ ಕಂಬಳ ಗದ್ದೆ ಅಥವಾ ಕಂಬಳ ಕೆರೆ ಎನ್ನಲಾಗುತ್ತದೆ. ಕಂಬಳ ಘೋಷಣೆಯಾದ ಬಳಿಕ ಪೂಜೆ ಪುನಸ್ಕಾರಗಳನ್ನು ಮಾಡುವ ಮೂಲಕ ಗದ್ದೆ ನಿರ್ಮಾಣ ಕಾರ್ಯ ಆರಂಭವಾಗುತ್ತದೆ. ಅವುಗಳಲ್ಲಿ ನೀರು ನಿಲ್ಲಿಸಿ ಹದ ಮಾಡಲಾಗುತ್ತದೆ.
ಇವುಗಳು ಸುಮಾರು 150ರಿಂದ 200 ಮೀಟರ್ ಉದ್ದವಾಗಿರುತ್ತವೆ. ಹಿಂದೆ ಒಂಟಿ ಕೆರೆಯಲ್ಲಿ ಕಂಬಳ ನಡೆಯುತ್ತಿದ್ದರೆ, ಈಗ ಜೋಡಿ ಕರೆಯಲ್ಲಿ ನಡೆಯುತ್ತವೆ. ಈ ಕೆರೆಗಳಿಗೆ ಸೂರ್ಯ-ಚಂದ್ರ, ಕೋಟಿ-ಚೆನ್ನಯ, ಲವ-ಕುಶ, ವಿಜಯ-ವಿಕ್ರಮ, ಕಾಂತಂಬಾರೆ-ಬೂದಬಾರೆ, ನೇತ್ರಾವತಿ-ಫಲ್ಗುಣಿ, ವೀರ-ವಿಕ್ರಮ, ಮೂಡು-ಪಡು ಎಂಬ ಜೋಡಿ ಹೆಸರುಗಳನ್ನು ಇಡುವುದು ವಿಶೇಷ.
ಕಂಬಳದಲ್ಲಿದೆ 4 ಬಗೆಯ ಓಟದ ಸ್ಪರ್ಧೆ
ಕಂಬಳದಲ್ಲಿ ಹಗ್ಗದ ಓಟ, ಅಡ್ಡಹಲಗೆ ಓಟ, ನೇಗಿಲ ಓಟ ಮತ್ತು ಕಣೆ ಹಲಗೆ ಓಟ ಎಂಬ ನಾಲ್ಕು ವಿಧಗಳಿವೆ. ಜೋಡಿ ಕೋಣಗಳನ್ನು ನೊಗಕ್ಕೆ ಕಟ್ಟಿಓಡಿಸುವುದನ್ನು ಹಗ್ಗದ ಓಟ ಎಂದೂ, ನೊಗಕ್ಕೆ ಸೇರಿಸಿರುವ ಹಲಗೆಯ ಮೇಲೆ ನಿಂತುಕೊಂಡು ಕೋಣಗಳನ್ನು ಓಡಿಸುವುದಕ್ಕೆ ಅಡ್ಡ ಹಲಗೆ ಎಂದೂ, ನೇಗಿಲು ಮೂಲಕ ಜೋಡಿ ಕೋಣಗಳನ್ನು ಓಡಿಸುವುದಕ್ಕೆ ನೇಗಿಲ ಓಟ ಎಂದು ಕರೆಯುತ್ತಾರೆ.
ಈ ಮೂರು ಪ್ರಭೇದಗಳಲ್ಲಿ ಗದ್ದೆಯ ಇನ್ನೊಂದು ತುದಿ (ಮಂಜೊಟ್ಟಿ)ಯನ್ನು ಬೇಗ ತಲುಪುವ ಕೋಣಗಳನ್ನು ವಿಜಯಿ ಎಂದು ಪರಿಗಣಿಸಲಾಗುತ್ತದೆ. ಆದರೆ, ಕಣೆ ಹಲಗೆ ಓಟದಲ್ಲಿ ಗೆಲುವು ನಿರ್ಧರಿಸುವ ಮಾನದಂಡ ಬೇರೆ. ಗದ್ದೆಯ ಮೇಲೆ ನೆಲಮಟ್ಟದಿಂದ ಸುಮಾರು ಎರಡು ಮೀಟರುಗಳ ಎತ್ತರದಲ್ಲಿ ಅಗಲವಾದ ಬಟ್ಟೆಅಥವಾ ಮರದ ಹಲಗೆಗಳನ್ನು ಕಟ್ಟಲಾಗುತ್ತದೆ. ಇವುಗಳನ್ನು ‘ನಿಶಾನೆ’ ಎಂದು ಕರೆಯುತ್ತಾರೆ. ಕೋಣಗಳು ಓಡುವಾಗ ರಾಚುವ ಕೆಸರಿನ ಎತ್ತರವನ್ನು ಪರಿಗಣಿಸಿ ವಿಜಯಿಗಳ ನಿರ್ಧಾರ ಮಾಡಲಾಗುತ್ತದೆ. ಒಂದು ವಿಭಾಗದಲ್ಲಿ ಸ್ಪರ್ಧೆ ಮಾಡಿದ ಕೋಣಗಳಿಗೆ ಮತ್ತೊಂದು ವಿಭಾಗದಲ್ಲಿ ಸ್ಪರ್ಧೆ ಮಾಡುವ ಅವಕಾಶ ಇಲ್ಲ.
ಓಟದ ವೇಗ ಎಷ್ಟು ನಿಖರ?
ಕಂಬಳ ಜಾನಪದ ಕ್ರೀಡೆಯಾದರೂ, ಕಾಲ ಬದಲಾದಂತೆ ಆಧುನಿಕತೆಗೆ ಒಗ್ಗಿಕೊಂಡಿದೆ. ಕೋಣದ ವೇಗವನ್ನು ಅಳೆಯಲು ಈಗ ಲೇಸರ್ ಬೀಮ್ ತಂತ್ರಜ್ಞಾನ ಹಾಗೂ ಸಮಯ ಅಳೆಯಲು ಇಲೆಕ್ಟ್ರಿಕ್ ಟೈಮರ್ ಕೂಡ ಅಳವಡಿಸಲಾಗುತ್ತದೆ. ಇದರಿಂದ ವಿಜಯಿಗಳ ನಿರ್ಣಯ ಕೂಡ ಸುಲಭ. ಹೀಗಾಗಿ ಶ್ರೀನಿವಾಸ ಗೌಡ ಅಷ್ಟೊಂದು ವೇಗವಾಗಿ ಓಡಿದ್ದು ನಿಜವೇ? ವೇಗದ ಲೆಕ್ಕಾಚಾರ ತಪ್ಪಿರಬಹುದಲ್ಲವೇ ಎಂಬ ಅನುಮಾನಕ್ಕೆ ಆಸ್ಪದವಿಲ್ಲ.
ಕೋಣಗಳಿಗೆ ರಾಜಾತಿಥ್ಯ
ಕಂಬಳದ ಕೋಣಗಳೆಂದರೆ ತುಳುವರಿಗೆ ಇನ್ನಿಲ್ಲದ ಗೌರವ, ಭಕ್ತಿ. ಹಾಗಾಗಿ ಅವುಗಳನ್ನು ಮಕ್ಕಳಿಗಿಂತ ಹೆಚ್ಚು ಪ್ರೀತಿ, ವಾತ್ಸಲ್ಯದಿಂದ ಸಾಕುತ್ತಾರೆ. ಅವುಗಳಿಗೆ ಎಣ್ಣೆ ಸ್ನಾನ ಮಾಡಿಸಿ, ಗುಣಮಟ್ಟದ ಆಹಾರ, ಶಕ್ತಿ ವರ್ಧಕಗಳನ್ನು ನೀಡಲಾಗುತ್ತದೆ. ಕೆಲವರು ಹವಾನಿಯಂತ್ರಕ, ಫ್ಯಾನ್ ಸೌಲಭ್ಯ ಇರುವ ಕೊಟ್ಟಿಗೆಯಲ್ಲಿ ಅವುಗಳನ್ನು ಸಾಕುತ್ತಾರೆ. ಅವುಗಳ ಪಾಲನೆ-ಪೋಷಣೆಗೆ ಲಕ್ಷಾಂತರ ರುಪಾಯಿ ಖರ್ಚು ಮಾಡುವುದು ಕರಾವಳಿಯಲ್ಲಿ ಸಾಮಾನ್ಯ.
ಕೋಮುಸೌಹಾರ್ದ ಪ್ರತಿರೂಪ
ಕೋಮು ಸೂಕ್ಷ್ಮ ಪ್ರದೇಶ ಕರಾವಳಿಯಲ್ಲಿ ಕಂಬಳ ಎಂದರೆ ಸರ್ವಧರ್ಮದ ಜಾತ್ರೆ. ಕಂಬಳ ಉದ್ಘಾಟನೆ ವೇಳೆ ಆ ಊರಿನ ದೇವಸ್ಥಾನ, ಚಚ್‌ರ್ ಹಾಗೂ ದರ್ಗಾದ ಪ್ರಸಾದ ತಂದು ಹಂಚಲಾಗುತ್ತದೆ. ಎಲ್ಲಾ ಧರ್ಮದ ನಾಯಕರನ್ನು ಕರೆಸಿ ಸೌಹಾರ್ದತೆ ಮೆರೆಯುವುದು ಕಂಬಳದ ವಿಶೇಷ. ಕರಾವಳಿಯಲ್ಲಿ ಅಂತಹ ತಾಕತ್ತು ಇರುವುದು ಕಂಬಳಗಳಿಗೆ ಮಾತ್ರ.
ಪ್ರಾಣಿಹಿಂಸೆ ವಿವಾದ
ಕಂಬಳದಲ್ಲಿ ಕೋಣಗಳಿಗೆ ಬಲವಾಗಿ ಹೊಡೆಯಲಾಗುತ್ತದೆ ಹಾಗೂ ಕೋಣಗಳ ದೇಹ ರಚನೆ ಓಟದ ಸ್ಪರ್ಧೆಗೆ ಪೂರಕವಾಗಿಲ್ಲ, ಇದರಿಂದ ಪ್ರಾಣಿ ಹಿಂಸೆ ಉಂಟಾಗುತ್ತಿದೆ ಎಂದು ಆರೋಪಿಸಿ ಅಂತಾರಾಷ್ಟ್ರೀಯ ಪ್ರಾಣಿದಯಾ ಸಂಸ್ಥೆ ಪೇಟಾ ಈ ಹಿಂದೆ ಹೈಕೋರ್ಟ್‌ನಿಂದ ತಡೆ ತಂದಿತ್ತು. ಈ ವೇಳೆ ಒಂದು ವರ್ಷ ಕಂಬಳ ಸ್ಪರ್ಧೆಗೆ ಬ್ರೇಕ್ ಬಿದ್ದಿತ್ತು. ಬಳಿಕ ಸುಪ್ರೀಂಕೋರ್ಟ್‌ನಲ್ಲಿ ತಡೆ ತೆರವಾಗಿದ್ದರಿಂದ ಕೆಲ ನಿಯಮಾವಳಿಗಳನ್ನು ರೂಪಿಸಿ ಕಂಬಳ ನಡೆಸಲಾಗುತ್ತಿದೆ.
- ಸಿನಾನ್ ಇಂದಬೆಟ್ಟು