Asianet Suvarna News Asianet Suvarna News

ಅತಿವೃಷ್ಟಿಯಿಂದ ಹಿಂಗಾರು ಕೃಷಿಗೆ ಭಾರೀ ಹೊಡೆತ

ಅತಿವೃಷ್ಟಿಯಿಂದ ಮುಂಗಾರು ಬೆಳೆ ಕೈಕೊಟ್ಟಮಾದರಿಯಲ್ಲೇ ಇದೀಗ ಹಿಂಗಾರು ಬೆಳೆಯೂ ಕೈಕೊಡುವ ಸಾಧ್ಯತೆಯನ್ನು ಕೃಷಿ ಇಲಾಖೆ ಮುಂಗಾಣುತ್ತಿದೆ. ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ರಾಜ್ಯದ 25 ಜಿಲ್ಲೆಗಳಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಅದರ ಪರಿಣಾಮ ಕೃಷಿ ಭೂಮಿಯ ತೇವಾಂಶ ಹೆಚ್ಚಾಗಿತ್ತು. ಹಿಂಗಾರು ಹಂಗಾಮಿನಲ್ಲೂ ಇದೇ ಪರಿಸ್ಥಿತಿ ಮುಂದುವರೆದಿರುವ ಕಾರಣ ಆಹಾರ ಉತ್ಪಾದನೆ ಭಾರಿ ಕುಸಿತ ಕಾಣಬಹುದು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

Agricultural activities hit by heavy rain
Author
Bangalore, First Published Nov 3, 2019, 10:13 AM IST

ಬೆಂಗಳೂರು(ನ.03): ಅತಿವೃಷ್ಟಿಯಿಂದ ಮುಂಗಾರು ಬೆಳೆ ಕೈಕೊಟ್ಟಮಾದರಿಯಲ್ಲೇ ಇದೀಗ ಹಿಂಗಾರು ಬೆಳೆಯೂ ಕೈಕೊಡುವ ಸಾಧ್ಯತೆಯನ್ನು ಕೃಷಿ ಇಲಾಖೆ ಮುಂಗಾಣುತ್ತಿದೆ.

ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ರಾಜ್ಯದ 25 ಜಿಲ್ಲೆಗಳಲ್ಲಿ ಬೆಳೆ ಹಾನಿ ಸಂಭವಿಸಿತ್ತು. ಅದರ ಪರಿಣಾಮ ಕೃಷಿ ಭೂಮಿಯ ತೇವಾಂಶ ಹೆಚ್ಚಾಗಿತ್ತು. ಹಿಂಗಾರು ಹಂಗಾಮಿನಲ್ಲೂ ಇದೇ ಪರಿಸ್ಥಿತಿ ಮುಂದುವರೆದಿರುವ ಕಾರಣ ಆಹಾರ ಉತ್ಪಾದನೆ ಭಾರಿ ಕುಸಿತ ಕಾಣಬಹುದು ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಟಿಪ್ಪು ಪಠ್ಯ ನಿರ್ಧರಿಸಲು ಇನ್ನೂ ಸಮಿತಿಯೇ ರಚಿಸಿಲ್ಲ..!

ಕೃಷಿ ಇಲಾಖೆ 2019-20ನೇ ಸಾಲಿನಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮು ಸೇರಿ ಆಹಾರ ಉತ್ಪಾದನೆ 138.67 ಲಕ್ಷ ಟನ್‌ ಮತ್ತು ಎಣ್ಣೆ ಕಾಳುಗಳ ಉತ್ಪಾದನೆ 14.71 ಲಕ್ಷ ಟನ್‌ ಆಗುವ ಗುರಿ ಹೊಂದಿತ್ತು. ಮುಂಗಾರಿನಲ್ಲಿ ಶೇ.80ಕ್ಕೂ ಹೆಚ್ಚು ಬಿತ್ತನೆ ಪೂರ್ಣಗೊಂಡ ಬಳಿಕ ಅತಿವೃಷ್ಟಿಯಿಂದಾಗಿ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಬೆಳೆಹಾನಿ ಸಂಭವಿಸಿತ್ತು. ಮುಂಗಾರಿನ ಭಾರಿ ಮಳೆಯ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೃಷಿ ಭೂಮಿ ಮೇಲೆ ನಿಂತ ನೀರು ಇನ್ನೂ ಇಳಿದಿರಲಿಲ್ಲ. ಇದರೊಟ್ಟಿಗೆ ಈಗ ಹಿಂಗಾರು ಮಳೆ ಕೂಡ ಭರ್ಜರಿಯಾಗಿ ಸುರಿದಿದೆ. ಇದು ಬಿತ್ತನೆ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಿಸಿದೆ. ಇದರ ಒಟ್ಟಾರೆ ಪರಿಣಾಮ ಆಹಾರ ಮತ್ತು ಎಣ್ಣೆಕಾಳುಗಳ ಉತ್ಪಾದನೆ ಕುಸಿತದ ಸಾಧ್ಯತೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು: ಸೋಲಾರ್ ಬಳಸಿದ್ರೆ 1 ಲಕ್ಷ ರೂ. ಬಹುಮಾನ..!

ಹಿಂಗಾರು ಹಂಗಾಮಿನಲ್ಲಿ ವಿವಿಧ ಕೃಷಿ ಬೆಳೆಗಳನ್ನು 31.48 ಲಕ್ಷ ಹೆಕ್ಟೇರ್‌ ವಿಸ್ತೀರ್ಣದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ, ಅಕ್ಟೋಬರ್‌ 25ರ ವರದಿ ಅನ್ವಯ ವಾಡಿಕೆಯ ಮಳೆ 117 ಮಿ.ಮೀ. ಇದ್ದರೆ, ವಾಸ್ತವಿಕ ಮಳೆ ಸರಾಸರಿ 215 ಮಿ.ಮೀ. (ಶೇ.84 ಹೆಚ್ಚು) ಆಗಿದೆ. ಈ ಹಿನ್ನೆಲೆಯಲ್ಲಿ ಕೇವಲ 9.63 ಲಕ್ಷ ಹೆಕ್ಟೇರ್‌ ವಿಸ್ತೀರ್ಣ(ಶೇ.31ರಷ್ಟು)ದಲ್ಲಿ ಬಿತ್ತನೆಯಾಗಿದೆ. ಸೆಪ್ಟೆಂಬರ್‌ನಿಂದಲೇ ಹಿಂಗಾರು ಹಂಗಾಮು ಆರಂಭಗೊಂಡಿದ್ದು, ನವೆಂಬರ್‌ 15ರವರೆಗೂ ಬಿತ್ತನೆಗೆ ಅವಕಾಶವಿದೆ. ಈ ನಡುವೆ ಮಳೆ ಪ್ರಮಾಣ ಕಡಿಮೆಯಾಗಿ, ಅತಿವೃಷ್ಟಿಯಿಂದ ನಿಂತಿರುವ ನೀರು ಇಂಗಿದರೆ ಪುನಃ ಬಿತ್ತನೆ ಸಾಧ್ಯತೆ ಇದೆ.

ಬೇಳೆ ಕಾಳುಗಳನ್ನು ಹೆಚ್ಚಾಗಿ ಬೆಳೆಯುವ ಬೆಳಗಾವಿ, ಬಾಗಲಕೋಟೆ, ಧಾರವಾಡ, ವಿಜಯಪುರ, ಗದಗ, ಬಳ್ಳಾರಿ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಅ.21ರಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಕೃಷಿ ಭೂಮಿಯ ತೇವಾಂಶ ಕೂಡ ಹೆಚ್ಚಾಗಿದೆ. ಇದರ ಪರಿಣಾಮ ಎರೆಮಣ್ಣಿನ ಭೂಮಿಯಲ್ಲಿ ಬಿತ್ತನೆ ಕಷ್ಟ. ಇದರಿಂದ ನಿಗದಿತ ಗುರಿಯ ಆಹಾರ ಉತ್ಪಾದನೆ ಸಾಧಿಸಲು ತೊಡಕಾಗಿದೆ ಎಂದು ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸುರಿದ ಮಳೆ ಪ್ರಮಾಣ:

ರಾಜ್ಯದಲ್ಲಿ ಅಕ್ಟೋಬರ್‌ 1ರಿಂದ 25ರವರೆಗೆ ಆಗಿರುವ ಮಳೆ ಪ್ರಮಾಣ ಇಂತಿದೆ: ದಕ್ಷಿಣ ಒಳನಾಡಿನಲ್ಲಿ ವಾಡಿಕೆ ಮಳೆ 126 ಮಿ.ಮೀ. ಇದ್ದು, 207 ಮಿ.ಮೀ. ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ವಾಡಿಕೆ ಮಳೆ 98 ಮಿ.ನೀ. ಇದ್ದು, 160 ಮಿ.ಮೀ. ಮಳೆ ಸುರಿದಿದೆ. ಮಲೆನಾಡು ಭಾಗದಲ್ಲಿ 135 ಮಿ.ಮೀ. ವಾಡಿಕೆ ಮಳೆಯಿದ್ದು, 276 ಮಿ.ಮೀ. ಮಳೆಯಾಗಿದೆ. ಕರಾವಳಿ ಭಾಗದಲ್ಲಿ 158 ಮಿ.ಮೀ. ವಾಡಿಕೆ ಮಳೆಯಿದ್ದು, 413 ಮಿ.ಮೀ. ಮಳೆಯಾಗಿದೆ. ಹೀಗೆ ಈ ಅವಧಿಯಲ್ಲಿ ರಾಜ್ಯದ ಒಟ್ಟಾರೆ ವಾಡಿಕೆ ಮಳೆ 117 ಇದ್ದರೆ, 215 ಮಿ.ಮೀ. ಮಳೆಯಾಗಿದ್ದು, ಹಿಂಗಾರು ಬಿತ್ತನೆ ಮೇಲೆ ಪರಿಣಾಮ ಬೀರಿದೆ. ಅತಿವೃಷ್ಟಿಮತ್ತು ಹೆಚ್ಚು ಮಳೆ ಕಾರಣದಿಂದ ಕೃಷಿ ಭೂಮಿಯ ತೇವಾಂಶ ಹೆಚ್ಚಾಗಿದ್ದು, ಬಿತ್ತನೆಗೆ ಹಿನ್ನಡೆಯಾಗಿದೆ.

ಎಷ್ಟು ಬಿತ್ತನೆಯಾಗಿದೆ?

ಜೋಳ 2.78 ಲಕ್ಷ ಹೆಕ್ಟೇರ್‌, ರಾಗಿ 0.16 ಲಕ್ಷ ಹೆಕ್ಟೇರ್‌, ಮೆಕ್ಕೆಜೋಳ 0.16 ಲಕ್ಷ ಹೆಕ್ಟೇರ್‌, ಗೋಧಿ 0.29 ಲಕ್ಷ ಹೆಕ್ಟೇರ್‌ ಹೀಗೆ ಒಟ್ಟು 3.41 ಲಕ್ಷ ಹೆಕ್ಟೇರ್‌ನಲ್ಲಿ ಏಕದಳ ಧಾನ್ಯಗಳ ಬಿತ್ತನೆಯಾಗಿದೆ. ಕಡಲೆ 4.61 ಲಕ್ಷ ಹೆಕ್ಟೇರ್‌, ಹುರುಳಿ 1.16 ಲಕ್ಷ ಹೆಕ್ಟೇರ್‌, ಅವರೆ, ಅಲಸಂದೆ ಮತ್ತು ಇತರೆ 0.08 ಲಕ್ಷ ಹೆಕ್ಟೇರ್‌ ಅಂದರೆ ಒಟ್ಟು ದ್ವಿದಳ ಧಾನ್ಯಗಳನ್ನು 8.68 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಸೂರ್ಯಕಾಂತಿ 0.37, ಕುಸುಬೆ 0.08, ಅಗಸೆ 0.01695, ಶೇಂಗಾ 0.27, ಹತ್ತಿ 0.11, ಕಬ್ಬು 0.10 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಹೀಗೆ ಒಟ್ಟು 9.63 ಲಕ್ಷ ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಆಗಿದೆ. ತಂಬಾಕು, ಹುಚ್ಚೆಳ್ಳು, ಅರಳು, ಭತ್ತ, ಉದ್ದು, ಹೆಸರು, ಸೋಯಾ ಅವರೆ ಇತ್ಯಾದಿ ಹಲವು ಬೆಳೆಗಳ ಬಿತ್ತನೆ ಪ್ರಮಾಣ ಶೂನ್ಯ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

-ಸಂಪತ್‌ ತರೀಕೆರೆ

Follow Us:
Download App:
  • android
  • ios