Asianet Suvarna News Asianet Suvarna News

ವಿಶ್ವ ಟೂರ್‌ ಬ್ಯಾಡ್ಮಿಂಟನ್‌ - ಸಿಂಧು ಶುಭಾರಂಭ, ಸಮೀರ್‌ಗೆ ಹಿನ್ನಡೆ

ವಿಶ್ವ ಬ್ಯಾಡ್ಮಿಂಟನ್‌ ಫೈನಲ್ಸ್‌ ಭಾರತ ಮಿಶ್ರಫಲ ಅನುಭವಿಸಿದೆ.  ವಿಶ್ವ ನಂ.2 ಯಮಗುಚಿ ವಿರುದ್ಧ ಸಿಂಧು ಗೆಲುವಿನ ನಗೆ ಬೀರಿದ್ರೆ, ಸಮೀರ್ ಹಿನ್ನಡೆ ಅನುಭವಿಸಿದ್ದಾರೆ.
 

World Tour badminton Finals Sindhu beat defending champion Yamaguchi
Author
Bengaluru, First Published Dec 13, 2018, 9:13 AM IST

ಗುವಾಂಗ್‌ಝು(ಡಿ.13): ಭಾರತದ ತಾರಾ ಶಟ್ಲರ್‌ ಪಿ.ವಿ. ಸಿಂಧು, ವಿಶ್ವ ಟೂರ್‌ ಬ್ಯಾಡ್ಮಿಂಟನ್‌ ಫೈನಲ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ವಿಶ್ವ ನಂ.2 ಮತ್ತು ಹಾಲಿ ಚಾಂಪಿಯನ್‌ ಜಪಾನ್‌ನ ಅಕಾನೆ ಯಮಗುಚಿ ಎದುರು ಮೊದಲ ಪಂದ್ಯದಲ್ಲಿ ಸಿಂಧು ಅದ್ಭುತ ಪ್ರದರ್ಶನದ ಮೂಲಕ ಜಯ ಸಾಧಿಸಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್‌ನ ‘ಎ’ ಗುಂಪಿನ ಪಂದ್ಯದಲ್ಲಿ ಸಿಂಧು, ಯಮಗುಚಿ ವಿರುದ್ಧ 24-22, 21-15 ಗೇಮ್‌ಗಳಲ್ಲಿ ಗೆಲುವು ಪಡೆದರು. ಗುರುವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಸಿಂಧು, ವಿಶ್ವ ನಂ.1 ಚೈನೀಸ್‌ ತೈಪೆಯ ತೈ ತ್ಸು ಯಿಂಗ್‌ರನ್ನು ಎದುರಿಸಲಿದ್ದಾರೆ. ಗುಂಪು ಹಂತದ 3ನೇ ಪಂದ್ಯದಲ್ಲಿ ಸಿಂಧುಗೆ ಅಮೆರಿಕದ ಜಾಂಗ್‌ ಬೀವೆನ್‌ ಎದುರಾಗಲಿದ್ದಾರೆ.

ಇದು ಈ ಋುತುವಿನ ಕೊನೆಯ ಟೂರ್ನಿಯಾಗಿದ್ದು, ವಿಶ್ವದ ಅಗ್ರ 8 ಶಟ್ಲರ್‌ಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ‘ಎ’ ಹಾಗೂ ‘ಬಿ’ ಗುಂಪಿನಲ್ಲಿ ಅಗ್ರ 2 ಸ್ಥಾನ ಪಡೆಯುವ ಶಟ್ಲರ್‌ಗಳು ಸೆಮಿಫೈನಲ್‌ ಪ್ರವೇಶಿಸಲಿದ್ದಾರೆ. ದುಬೈನಲ್ಲಿ ನಡೆದಿದ್ದ ಕಳೆದ ಆವೃತ್ತಿಯಲ್ಲಿ ಸಿಂಧು, ಫೈನಲ್‌ನಲ್ಲಿ ಯಮಗುಚಿ ವಿರುದ್ಧ ಸೋತು ರನ್ನರ್‌ ಅಪ್‌ ಪ್ರಶಸ್ತಿ ಪಡೆದಿದ್ದರು. ಅಲ್ಲದೇ ಕಳೆದ 4 ಮುಖಾಮುಖಿಗಳಲ್ಲಿ ಯಮಗುಚಿ ವಿರುದ್ಧ ಸಿಂಧು ಪರಾಭವಗೊಂಡಿದ್ದರು.

ಮೊದಲ ಗೇಮ್‌ನಲ್ಲಿ 6-11ರ ಹಿನ್ನಡೆ ಅನುಭವಿಸಿದರೂ, ಪುಟಿದೆದ್ದ ಸಿಂಧು 19-19ರಲ್ಲಿ ಸಮಬಲ ಸಾಧಿಸಿ, ಬಳಿಕ ಗೇಮ್‌ ತಮ್ಮದಾಗಿಸಿಕೊಂಡರು. 2ನೇ ಗೇಮ್‌ನ ಆರಂಭದಲ್ಲೇ ಸಮಬಲದ ಪೈಪೋಟಿ ಕಂಡುಬಂತು. ಆದರೆ ವಿರಾಮದ ಬಳಿಕ ಆಕ್ರಮಣಕಾರಿ ಆಟಕ್ಕಿಳಿದ ಸಿಂಧು, 6 ಅಂಕಗಳ ಅಂತರದಲ್ಲಿ ಗೇಮ್‌ ಗೆದ್ದು ಪಂದ್ಯ ತಮ್ಮದಾಗಿಸಿಕೊಂಡರು.

ಸೋತ ಸಮೀರ್‌: ಸೈಯದ್‌ ಮೋದಿ ಪ್ರಶಸ್ತಿ ಗೆದ್ದು ಅಚ್ಚರಿಯ ಬೆಳವಣಿಗೆಯಲ್ಲಿ ವಿಶ್ವ ಬ್ಯಾಡ್ಮಿಂಟನ್‌ ಫೈನಲ್ಸ್‌ಗೆ ಅರ್ಹತೆ ಪಡೆದ ಸಮೀರ್‌ ವರ್ಮಾ, ಪುರುಷರ ಸಿಂಗಲ್ಸ್‌ನ ಮೊದಲ ಪಂದ್ಯದಲ್ಲಿ ಸೋಲುಂಡಿದ್ದಾರೆ. ಬುಧವಾರ ‘ಬಿ’ ಗುಂಪಿನ ಪಂದ್ಯದಲ್ಲಿ ಅವರು ಹಾಲಿ ವಿಶ್ವ ಚಾಂಪಿಯನ್‌, ವಿಶ್ವ ನಂ.1 ಜಪಾನ್‌ನ ಕೆಂಟೊ ಮೊಮೊಟಾ ವಿರುದ್ಧ 18-21,16-21ರಲ್ಲಿ ಪರಾಭವಗೊಂಡರು. ಸಮೀರ್‌ ಸೆಮೀಸ್‌ಗೇರಬೇಕಿದ್ದರೆ, ಮುಂದಿನ 2 ಪಂದ್ಯಗಳಲ್ಲಿ ಥಾಯ್ಲೆಂಡ್‌ನ ಕಂಟಫೆäನ್‌ ವಾಂಗ್ಚೆರೊನ್‌ ಮತ್ತು ಇಂಡೋನೇಷ್ಯಾದ ಟಾಮಿ ಸುಗಿರ್ತೊರನ್ನು ಸೋಲಿಸಬೇಕಿದೆ.
 

Follow Us:
Download App:
  • android
  • ios