Asianet Suvarna News Asianet Suvarna News

ಪಾಂಡ್ಯ-ರಾಹುಲ್‌ ವಿಚಾರಣೆ: ಬಿಸಿಸಿಐ ಆಡಳಿತ ಸಮಿತಿಯಲ್ಲಿ ಒಡಕು

ಖಾಸಗಿ ಟಿವಿ ಶೋನಲ್ಲಿ ಅಸಭ್ಯ ಹೇಳಿಕೆ ನೀಡಿ ಟೀಂ ಇಂಡಿಯಾದಿಂದ ಅಮಾನತಾಗಿರುವ ಕೆ.ಎಲ್.ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ವಿಚಾರಣೆ ನಡೆಯುತ್ತಿದೆ. ಆದರೆ ವಿಚಾರಣೆಯಿಂದಾಗಿ ಬಿಸಿಸಿಐ ಆಡಳಿತ ಸಮಿತಿಯಲ್ಲಿ ಬಿರುಕು ಮೂಡಿದೆ.

Suspended Hardik pandya KL Rahul inquiry pending because of Split in BCCI committee
Author
Bengaluru, First Published Jan 13, 2019, 8:32 AM IST

ನವದೆಹಲಿ(ಜ.13): ಕಾಫಿ ವಿತ್‌ ಕರಣ್‌ ಶೋನಲ್ಲಿ ಮಹಿಳಾ ಅವಹೇಳನ ನಡೆಸಿ ಅಮಾನತುಗೊಂಡಿರುವ ಭಾರತೀಯ ಕ್ರಿಕೆಟಿಗರಾದ ಕೆ.ಎಲ್‌.ರಾಹುಲ್‌ ಹಾಗೂ ಹಾರ್ದಿಕ್‌ ಪಾಂಡ್ಯ ವಿಚಾರಣೆ ನಡೆಸುವ ವಿಚಾರದಲ್ಲಿ, ಬಿಸಿಸಿಐ ಆಡಳಿತ ಸಮಿತಿಯಿಂದ ವಿಭಜಿತ ಅಭಿಪ್ರಾಯ ವ್ಯಕ್ತವಾಗಿದೆ. ಬಿಸಿಸಿಐ ಆಡಳಿತದೊಳಗಿನ ಈ-ಮೇಲ್‌ ಕಿತ್ತಾಟ ಮುಂದುವರಿದಿದ್ದು, ಆಡಳಿತ ಸಮಿತಿ ಮುಖ್ಯಸ್ಥ ವಿನೋದ್‌ ರಾಯ್‌ ಸಾಧ್ಯವಾದಷ್ಟುಬೇಗ ವಿಚಾರಣೆ ಮುಗಿಸಬೇಕು ಎಂದು ಆಗ್ರಹಿಸಿದರೆ, ಆಡಳಿತ ಸಮಿತಿ ಸದಸ್ಯೆ ಡಯಾನ ಎಡುಲ್ಜಿ ಆತುರದಲ್ಲಿ ವಿಚಾರಣೆ ನಡೆಯಬಾರದು, ಹಾಗೆ ನಡೆದರೆ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆಸಿದಂತಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ಅಮಾನತಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್!

ಆಸ್ಪ್ರೇಲಿಯಾ ವಿರುದ್ಧ 2ನೇ ಏಕದಿನ ಮುಕ್ತಾಯಗೊಳ್ಳುವ ವೇಳೆಗೆ ವಿಚಾರಣೆ ಮುಗಿಸುವಂತೆ ರಾಯ್‌ ಆಗ್ರಹಿಸಿದ್ದಾರೆ. ತಂಡದ ಬಲ 15ರಿಂದ 13 ಸದಸ್ಯರಿಗೆ ಇಳಿದಿದೆ. ತಂಡಕ್ಕೆ ಸಮಸ್ಯೆಯಾಗುವುದನ್ನು ನಾನು ಒಪ್ಪುವುದಿಲ್ಲ ಎಂದು ರಾಯ್‌ ತಿಳಿಸಿದ್ದಾರೆ. ಮತ್ತೊಂದೆಡೆ ವಿಚಾರಣೆಯಲ್ಲಿ ಆಡಳಿತ ಸಮಿತಿ ಹಾಗೂ ಬಿಸಿಸಿಐ ಅಧಿಕಾರಿಗಳು ಪಾಲ್ಗೊಳ್ಳಬೇಕು. ಮೀ ಟೂ ಪ್ರಕರಣದಲ್ಲಿ ಸಿಲುಕಿದ್ದ ಸಿಇಒ ರಾಹುಲ್‌ ಜೋಹ್ರಿಯನ್ನು ರಾಹುಲ್‌-ಪಾಂಡ್ಯ ವಿಚಾರಣೆಯಿಂದ ದೂರವಿರಿಸಬೇಕು ಎಂದು ಎಡುಲ್ಜಿ ಪಟ್ಟು ಹಿಡಿದಿದ್ದಾರೆ. ಮಹಿಳಾ ಶೋಷಣೆ ಪ್ರಕರಣದಲ್ಲಿ ಸಿಲುಕಿದ ಜೋಹ್ರಿಯನ್ನು, ಮಹಿಳಾ ಅವಹೇಳನ ಪ್ರಕರಣದ ವಿಚಾರಣೆಯಲ್ಲಿ ಸೇರಿಸಿಕೊಳ್ಳುವುದು ಸರಿಯಲ್ಲ ಎಂದು ಎಡುಲ್ಜಿ ಅಭಿಪ್ರಾಯಿಸಿದ್ದಾರೆ.

ಇದನ್ನೂ ಓದಿ:ದ್ರಾವಿಡ್ ಹೇಳಿ ಕೊಡುವ ಮಾನವೀಯ, ಸರಳತೆಯ ಪಾಠ!

ಪ್ರಾಯೋಜಕತ್ವ ಕಳೆದುಕೊಂಡ ಪಾಂಡ್ಯ
ಕಾಫಿ ವಿತ್‌ ಕರಣ್‌ ಶೋನಲ್ಲಿ ಮಹಿಳೆಯರ ವಿರುದ್ಧ ಕೀಳು ಮಾತುಗಳನ್ನಾಡಿದ ಭಾರತ ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯಗೆ ವಿವಾದದ ಬಿಸಿ ಜೋರಾಗಿ ತಟ್ಟುತ್ತಿದೆ. ಅಮಾನತುಗೊಂಡು ಆಸ್ಪ್ರೇಲಿಯಾದಿಂದ ವಾಪಸಾಗಿರುವ ಪಾಂಡ್ಯ ಪ್ರತಿಷ್ಠಿತ ಶೇವಿಂಗ್‌ ರೇಜರ್‌ ಸಂಸ್ಥೆಯ ಪ್ರಾಯೋಜತ್ವ ಕಳೆದುಕೊಂಡಿದ್ದಾರೆ. ಪಾಂಡ್ಯ 7 ಬ್ರ್ಯಾಂಡ್‌ಗಳಿಗೆ ಪ್ರಚಾರ ರಾಯಭಾರಿಯಾಗಿದ್ದು, ಕೆಲ ಪ್ರಮುಖ ಸಂಸ್ಥೆಗಳು ಅವರೊಂದಿಗೆ ಒಪ್ಪಂದವನ್ನು ರದ್ದುಪಡಿಸುವ ಚಿಂತನೆ ನಡೆಸಿವೆ ಎನ್ನಲಾಗಿದೆ. ವಿವಾದದಲ್ಲಿ ಸಿಲುಕಿರುವ ಮತ್ತೊಬ್ಬ ಕ್ರಿಕೆಟಿಗ ಕೆ.ಎಲ್‌.ರಾಹುಲ್‌ ಸಹ ಕೆಲ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದು ಅವರಿಗೂ ಬಿಸಿ ತಟ್ಟುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

Follow Us:
Download App:
  • android
  • ios