sports
By Suvarna Web Desk | 06:13 PM August 12, 2017
ಮತ್ತೆ ಅಬ್ಬರಿಸಿದ ಧವನ್-ರಾಹುಲ್ ಜೋಡಿ

Highlights

ಮೂರನೇ ಟೆಸ್ಟ್'ನ ಮೊದಲ ದಿನದಾಟ ಮುಕ್ತಾಯದ ವೇಳೆಗೆ ಭಾರತ ತಂಡ 6 ವಿಕೆಟ್ ಕಳೆದುಕೊಂಡು 329 ರನ್ ಕಲೆಹಾಕಿದೆ.

ಪಲ್ಲೆಕೆಲೆ, ಶ್ರೀಲಂಕಾ(ಆ.12): ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್'ಮನ್'ಗಳಾದ ಶಿಖರ್ ಧವನ್ ಹಾಗೂ ಕನ್ನಡಿಗ ಕೆ.ಎಲ್ ರಾಹುಲ್ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ಎದುರು ಭಾರತ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ. ಆದರೆ ದಿನದಾಟದ ಕೊನೆಯಲ್ಲಿ ಲಂಕಾ ಬೌಲರ್'ಗಳ ಚುರುಕಿನ ಪ್ರದರ್ಶನದಿಂದ ಟೀಂ ಇಂಡಿಯಾದ ಪ್ರಮುಖ 6 ವಿಕೆಟ್'ಗಳನ್ನು ಕಬಳಿಸುವಲ್ಲಿ ಆತಿಥೇಯ ಪಡೆ ಯಶಸ್ವಿಯಾಯಿತು.

ಮೂರನೇ ಟೆಸ್ಟ್'ನ ಮೊದಲ ದಿನದಾಟ ಮುಕ್ತಾಯದ ವೇಳೆಗೆ ಭಾರತ ತಂಡ 6 ವಿಕೆಟ್ ಕಳೆದುಕೊಂಡು 329 ರನ್ ಕಲೆಹಾಕಿದೆ. ವಿಕೆಟ್ ಕೀಪರ್ ಬ್ಯಾಟ್ಸ್'ಮನ್ ವೃದ್ದಿಮಾನ್ ಸಾಹ ಹಾಗೂ ಹಾರ್ದಿಕ್ ಪಾಂಡ್ಯ ಎರಡನೇ ದಿನದಾಟಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ನಾಯಕ ವಿರಾಟ್ ಕೊಹ್ಲಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ಆರಂಭಿಕ ಜೋಡಿ ಮೊದಲ ವಿಕೆಟ್'ಗೆ ಭದ್ರ ಬುನಾದಿ ಹಾಕಿಕೊಟ್ಟಿತು. ಆರಂಭದಿಂದಲೇ ಲಂಕಾ ಬೌಲರ್'ಗಳನ್ನು ಮನಬಂದಂತೆ ದಂಡಿಸಿದ ಶಿಖರ್ ಧವನ್ ಟೆಸ್ಟ್ ವೃತ್ತಿ ಜೀವನದ 6ನೇ ಶತಕ ದಾಖಲಿಸಿದರು. ಏಕದಿನ ಕ್ರಿಕೆಟ್ ಮಾದರಿಯಂತೆ ಬ್ಯಾಟ್ ಬೀಸಿದ ಧವನ್ 107 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಅಂತಿಮವಾಗಿ ಧವನ್ 123 ಎಸೆತಗಳಲ್ಲಿ 119 ರನ್ ಬಾರಿಸಿ ಪುಷ್ಪಕುಮಾರ್'ಗೆ ವಿಕೆಟ್ ಒಪ್ಪಿಸಿದರು. ಇವರ ಸೊಗಸಾದ ಇನಿಂಗ್ಸ್'ನಲ್ಲಿ 17 ಭರ್ಜರಿ ಬೌಂಡರಿಗಳೂ ಸೇರಿದ್ದವು. ಇನ್ನು ಧವನ್'ಗೆ ತಕ್ಕ ಸಾಥ್ ನೀಡಿದ ಕೆ.ಎಲ್ ರಾಹುಲ್ ಟೆಸ್ಟ್ ಕ್ರಿಕೆಟ್'ನಲ್ಲಿ ಮತ್ತೊಂದು ಅರ್ಧಶತಕ ಸಿಡಿಸಿ ದಾಖಲೆ ಬರೆದರು. ರಾಹುಲ್ ದ್ರಾವಿಡ್ ಹಾಗೂ ಗುಂಡಪ್ಪ ವಿಶ್ವನಾಥ್ ಹೆಸರಿನಲ್ಲಿದ್ದ (ಸತತ 6 ಅರ್ಧಶತಕ) ದಾಖಲೆಯನ್ನು ಅಳಿಸಿ ಹಾಕುವಲ್ಲಿ ಕೆ.ಎಲ್. ರಾಹುಲ್ ಯಶಸ್ವಿಯಾದರು. ಅಲ್ಲದೇ ಸತತ 7 ಅರ್ಧಶತಕ ಸಿಡಿಸಿದ ವಿಶ್ವದ 6 ಬ್ಯಾಟ್ಸ್'ಮನ್ ಎನ್ನುವ ಶ್ರೇಯಕ್ಕೂ ರಾಹುಲ್ ಪಾತ್ರರಾದರು. ಅರ್ಧಶತಕ ಸಿಡಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ರಾಹುಲ್ ಲಂಕಾ ಸ್ಪಿನ್ನರ್ ಪುಷ್ಪಾ ಕುಮಾರ್ ಎಸೆತದಲ್ಲಿ ಕೆಟ್ಟಹೊಡೆತಕ್ಕೆ ಮುಂದಾಗಿ ಕೈಸುಟ್ಟುಕೊಂಡರು. ಒಂದು ಕಡೆ ಧವನ್ ಆರ್ಭಟಿಸುತ್ತಿದ್ದರೆ ಮತ್ತೊಂದೆಡೆ ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಿದ ರಾಹುಲ್ 135 ಎಸೆತಗಳಲ್ಲಿ 85 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಆರಂಭಿಕ ಜೋಡಿ ಮೊದಲ ವಿಕೆಟ್'ಗೆ 188 ರನ್ ಕಲೆಹಾಕಿತು. ಆದರೆ ಆನಂತರದಲ್ಲಿ ಬ್ಯಾಟಿಂಗ್'ಗಿಳಿದ ಕಳೆದ ಪಂದ್ಯದ ಹೀರೋ ಚೇತೇಶ್ವರ್ ಪೂಜಾರ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ಅಜಿಂಕ್ಯ ರಹಾನೆ ಆಟ ಕೂಡ ಕೇವಲ 17 ರನ್'ಗಳಿಗೆ ಸೀಮಿತವಾಯಿತು. ಒಂದು ಹಂತದಲ್ಲಿ 264ರನ್'ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಅಶ್ವಿನ್ ಅಲ್ಪ ಚೇತರಿಕೆ ನೀಡಲು ಪ್ರಯತ್ನಿಸಿದರು. ವಿರಾಟ್ 42 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ವಿಶ್ವ ಫರ್ನಾಡೋ ಎಸೆತದಲ್ಲಿ ಡಿಕ್'ವೆಲ್ಲಾ ಹಿಡಿದ ಅದ್ಭುತ ಕ್ಯಾಚ್'ಗೆ ಅಶ್ವಿನ್ ಪೆವಿಲಿಯನ್ ಸೇರಬೇಕಾಯಿತು. ಇನ್ನು 7ನೇ ವಿಕೆಟ್'ಗೆ ವೃದ್ದಿಮಾನ್ ಸಾಹಾ ಹಾಗೂ ಹಾರ್ದಿಕ್ ಪಾಂಡ್ಯ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಲಂಕಾ ಪರ ಮಿಲಿಂದಾ ಪುಷ್ಪಕುಮಾರ್ 3 ವಿಕೆಟ್ ಕಬಳಿಸಿದರೆ, ಲಕ್ಷಣ್ ಸಂದಕನ್ 2 ಹಾಗೂ ವಿಶ್ವ ಫೆರ್ನಾಂಡೊ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.

ಸ್ಕೋರ್ ವಿವರ:

ಭಾರತ:

ಮೊದಲ ಇನಿಂಗ್ಸ್ : 329/6

ಶಿಖರ್ ಧವನ್ : 119

ಕೆ.ಎಲ್ ರಾಹುಲ್ : 85

ಮಿಲಿಂದಾ ಪುಷ್ಪಕುಮಾರ್ : 40/3

Show Full Article


Recommended


bottom right ad