Asianet Suvarna News Asianet Suvarna News

ರೋಹಿತ್ ಒಂದು ಶತಕ; ಹಲವಾರು ದಾಖಲೆ ನಿರ್ಮಾಣ..!

ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ ಆರಂಭಿಕನಾದ ಮೊದಲ ಪಂದ್ಯದಲ್ಲೇ ಅಕ್ಷರಶಃ ಅಬ್ಬರಿಸಿದ್ದಾರೆ. ದಕ್ಷಿಣ ಆಫ್ರಿಕಾದ ಬಲಿಷ್ಠ ಬೌಲಿಂಗ್ ಪಡೆಯನ್ನು ಅನಾಯಾಸವಾಗಿ ಎದುರಿಸುವುದರ ಜತೆಗೆ ಅಜೇಯ ಶತಕ ಬಾರಿಸಿ ಮಿಂಚಿದ್ದಾರೆ. ಈ ಶತಕ ಹಲವಾರು ದಾಖಲೆಗಳ ನಿರ್ಮಾಣಕ್ಕೂ ಸಾಕ್ಷಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Rohit Sharma Century Creates unique records in Test Cricket against South Africa
Author
Vizag, First Published Oct 2, 2019, 4:36 PM IST

ವಿಶಾಖಪಟ್ಟಣಂ[ಅ.02]: ಭಾರತ-ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ತೋರಿದೆ. ಮೊದಲ ದಿನದಾಟದ ಚಹಾ ವಿರಾಮದ ವೇಳೆಯವರೆಗೂ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಟೀಂ ಇಂಡಿಯಾ, ರೋಹಿತ್ ಶರ್ಮಾ ಆಕರ್ಷಕ ಶತಕ ಹಾಗೂ ಮಯಾಂಕ್ ಅಗರ್ವಾಲ್ ಮನಮೋಹಕ ಅರ್ಧಶತಕದ ನೆರವಿನಿಂದ ಮೊದಲ ವಿಕೆಟ್ ಗೆ ಮುರಿಯದ 202 ರನ್ ಗಳ ಜತೆಯಾಟ ನಿಭಾಯಿಸಿದೆ. 

INDvSA 1ನೇ ಟೆಸ್ಟ್; ಮೊದಲ ದಿನದಾಟ ರದ್ದು, ಭಾರತಕ್ಕೆ ನಿರಾಸೆ!

ಕೆ.ಎಲ್. ರಾಹುಲ್ ಟೆಸ್ಟ್ ಕ್ರಿಕೆಟ್’ನಲ್ಲಿ ಸತತ ವೈಫಲ್ಯ ಅನುಭವಿಸಿದ್ದರಿಂದ ಅವರನ್ನು ಕೈ ಬಿಟ್ಟು, ರೋಹಿತ್’ಗೆ ಆರಂಭಿಕನಾಗಿ ತಂಡ ಕಣಕ್ಕಿಳಿಸಿತು. ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಳ್ಳುವಲ್ಲಿ ಮುಂಬೈಕರ್ ಯಶಸ್ವಿಯಾಗಿದ್ದಾರೆ.  ಇದೇ ಮೊದಲ ಬಾರಿಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ನಿರ್ಭಯವಾಗಿ ಬ್ಯಾಟ್ ಬೀಸಿದರು. ಈಗಾಗಲೇ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಯಶಸ್ಸು ಕಂಡಿರುವ ರೋಹಿತ್, ಇದೀಗ ಟೆಸ್ಟ್ ಕ್ರಿಕೆಟ್ ನಲ್ಲೂ ಶತಕ ಸಿಡಿಸುವ ಮೂಲಕ ತಾನೊಬ್ಬ ಚಾಂಪಿಯನ್ ಓಪನರ್ ಎನ್ನುವುದನ್ನು ಕ್ರಿಕೆಟ್ ಜಗತ್ತಿಗೆ ಸಾರಿ ಹೇಳಿದ್ದಾರೆ. ಇದಷ್ಟೇ ಅಲ್ಲದೇ ಕೆಲವು ಅಪರೂಪದ ದಾಖಲೆಗೂ ’ಹಿಟ್ ಮ್ಯಾನ್’ ಪಾತ್ರರಾಗಿದ್ದಾರೆ. 

ಆರಂಭಿಕನಾಗಿ ಚೊಚ್ಚಲ ಇನಿಂಗ್ಸ್ ನಲ್ಲೇ ಶತಕ ಬಾರಿಸಿದ 4ನೇ ಭಾರತೀಯ:
ರೋಹಿತ್ ಶರ್ಮಾ ಆರಂಭಿಕನಾಗಿ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಭಾರತೀಯ ಆರಂಭಿಕ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಬರೆದಿದ್ದಾರೆ. ಈ ಮೊದಲು ಆರಂಭಿಕನಾಗಿ ಶಿಖರ್ ಧವನ್, ಕೆ.ಎಲ್. ರಾಹುಲ್, ಪೃಥ್ವಿ ಶಾ ತಾವಾಡಿದ ಮೊದಲ ಆರಂಭಿಕ ಇನಿಂಗ್ಸ್ ನಲ್ಲೇ ಶತಕ ಸಿಡಿಸಿದ್ದರು.

3 ಮಾದರಿಯ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ:
ರೋಹಿತ್ ಈಗಾಗಲೇ ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಆರಂಭಿಕನಾಗಿ ಯಶಸ್ವಿಯಾಗಿದ್ದಾರೆ. ಇದೀಗ ರೆಡ್ ಬಾಲ್ ಕ್ರಿಕೆಟ್ ನಲ್ಲೂ ಶತಕ ಸಿಡಿಸುವುದರೊಂದಿಗೆ ಟೆಸ್ಟ್, ಟಿ20 ಹಾಗೂ ಏಕದಿನ ಕ್ರಿಕೆಟ್ ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಆರಂಭಿಕ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಹಿಟ್‌ಮ್ಯಾನ್ ಭಾಜನರಾಗಿದ್ದಾರೆ.

3 ಮಾದರಿಯಲ್ಲಿ 3 ಆರಂಭಿಕರ ಜತೆ ಹಿಟ್‌ಮ್ಯಾನ್:
ರೋಹಿತ್ ಶರ್ಮಾ ಇದೀಗ ಮೂರು ಮಾದರಿಯ ಕ್ರಿಕೆಟ್’ನಲ್ಲೂ ಆರಂಭಿಕ ಬ್ಯಾಟ್ಸ್’ಮನ್ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ರೋಹಿತ್ 3 ಮಾದರಿಯಲ್ಲೂ ಬೇರೆ-ಬೇರೆ ಆರಂಭಿಕರ ಜತೆ ಮೊದಲ ಇನಿಂಗ್ಸ್ ಆರಂಭಿಸಿದ ಆಟಗಾರ ಎನಿಸಿದ್ದಾರೆ. ರೋಹಿತ್ 2009ರಲ್ಲಿ ಟಿ20 ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಟಿ20 ಕ್ರಿಕೆಟ್’ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದರು. 2011ರಲ್ಲಿ ಮುರುಳಿ ವಿಜಯ್ ಜತೆ ಮೊದಲ ಬಾರಿಗೆ ಏಕದಿನ ಕ್ರಿಕೆಟ್’ನಲ್ಲಿ ಒಪನರ್ ಆಗಿ ಕ್ರೀಸ್ ಗಿಳಿದಿದ್ದರು. ಇದೀಗ ಟೆಸ್ಟ್ ನಲ್ಲಿ ಮಯಾಂಕ್ ಅಗರ್‌ವಾಲ್ ಜತೆ ಓಪನರ್ ಆಗಿ ಮಿಂಚಿದ್ದಾರೆ.

ICC ಮೂರು ಮಾದರಿಯಲ್ಲಿ ಶತಕ ಸಿಡಿಸಿದ ಮೊದಲ ಕ್ರಿಕೆಟಿಗ:
ಐಸಿಸಿ ಚಾಂಪಿಯನ್ಸ್ ಟ್ರೋಫಿ, ಐಸಿಸಿ ಏಕದಿನ ವಿಶ್ವಕಪ್ ಹಾಗೂ ಐಸಿಸಿ ಟೆಸ್ಟ್ ಚಾಂಪಿಯನ್’ಶಿಪ್’ನಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ದಾಖಲೆಯೂ ಇದೀಗ ರೋಹಿತ್ ಶರ್ಮಾ ಪಾಲಾಗಿದೆ. 

4 ಶತಕಗಳ ಏಕೈಕ ಸರದಾರ: 
ಟೆಸ್ಟ್ ಕ್ರಿಕೆಟ್’ನಲ್ಲಿ ರೋಹಿತ್ ಆರಂಭಿಕನಾಗಿ ಮೊದಲ ಶತಕವಾದರು, ಒಟ್ಟಾರೆ ಟೆಸ್ಟ್ ಕ್ರಿಕೆಟ್’ನಲ್ಲಿ ನಾಲ್ಕನೇ ಶತಕವಾಗಿದೆ. ಇದರೊಂದಿಗೆ ಟೆಸ್ಟ್, ಟಿ20 ಹಾಗೂ ಏಕದಿನ ಕ್ರಿಕೆಟ್[ಮೂರು ಮಾದರಿಯಲ್ಲೂ] 4+ ಶತಕ ಸಿಡಿಸಿದ ವಿಶ್ವದ ಮೊದಲ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆಯೂ ರೋಹಿತ್ ಪಾಲಾಗಿದೆ. ಈಗಾಗಲೇ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್’ನಲ್ಲಿ 27 ಶತಕ ಬಾರಿಸಿದ್ದಾರೆ. ಇನ್ನು ಟಿ20 ಕ್ರಿಕೆಟ್’ನಲ್ಲೂ ಹಿಟ್ ಮ್ಯಾನ್ 4 ಶತಕ ಚಚ್ಚಿದ್ದಾರೆ.  

ಅ.02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Follow Us:
Download App:
  • android
  • ios