Asianet Suvarna News Asianet Suvarna News

ಕಳಪೆ ಮೊತ್ತಕ್ಕೆ ಮುಂಬೈ ಆಲೌಟ್; ಕೊನೆಯ ವಿಕೆಟ್'ಗೆ ಕಾಡಿದ ಕುಲಕರ್ಣಿ

ಕರ್ನಾಟಕ ಪರ ವಿನಯ್ ಕುಮಾರ್ 6 ವಿಕೆಟ್ ಪಡೆದರೆ, ಎಸ್. ಅರವಿಂದ್ 2 ಹಾಗೂ ಕೆ. ಗೌತಮ್ ಮತ್ತು ಮಿಥುನ್ ತಲಾ ಒಂದು ವಿಕೆಟ್ ಪಡೆದರು.

Ranji Trophy Vinay bags hat trick Mumabi All Out For 173

ನಾಗ್ಪುರ(ಡಿ.07): ಕರ್ನಾಟಕ ತಂಡದ ನಾಯಕ ವಿನಯ್ ಕುಮಾರ್ ಮಾರಕ ದಾಳಿಗೆ ತತ್ತರಿಸಿದ 41 ಬಾರಿ ಚಾಂಪಿಯನ್ ತಂಡ ಮುಂಬೈ ಮೊದಲ ಇನಿಂಗ್ಸ್'ನಲ್ಲಿ ಕೇವಲ 173 ರನ್'ಗಳಿಗೆ ಸರ್ವಪತನ ಕಂಡಿದೆ. ಕರ್ನಾಟಕ ಪರ ಓವರ್ ಹ್ಯಾಟ್ರಿಕ್'ನೊಂದಿಗೆ ವಿನಯ್ ಕುಮಾರ್ 6 ವಿಕೆಟ್ ಪಡೆದರೆ, ಮುಂಬೈ ಪರ ಧವಳ್ ಕುಲಕರ್ಣಿ 75 ರನ್ ಬಾರಿಸಿ ತಂಡಕ್ಕೆ ನೆರವಾಗಿದ್ದು ಇಲ್ಲಿಯವರೆಗಿನ ಹೈಲೈಟ್ಸ್.

ನಾಗ್ಪುರದಲ್ಲಿ ಇಂದಿನಿಂದ ಆರಂಭವಾದ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನಾಯಕ ವಿನಯ್ ಕುಮಾರ್ ಫೀಲ್ಡಿಂಗ್ ಆಯ್ದುಕೊಂಡರು. ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ತೋರುತ್ತಾ ಬಂದಿದ್ದ ಯುವ ಪ್ರತಿಭೆ ಪೃಥ್ವಿ ಶಾ ಮೊದಲ ಓವರ್'ನಲ್ಲೇ 2 ರನ್ ಬಾರಿಸಿ ವಿನಯ್'ಗೆ ವಿಕೆಟ್ ಒಪ್ಪಿಸಿದರು. ಇದರ ಬೆನಲ್ಲೇ ವಿನಯ್ ತಾವೆಸೆದ ಎರಡನೇ ಓವರ್'ನ ಮೊದಲೆರಡು ಎಸೆತದಲ್ಲಿ ವಿಕೆಟ್ ಕೀಳುವ ಮೂಲಕ ಓವರ್ ಹ್ಯಾಟ್ರಿಕ್ ಸಾಧನೆ ಮಾಡಿದರು. ಕರ್ನಾಟಕ ಪರ ಬಿಗುವಿನ ದಾಳಿ ನಡೆಸಿದ ವೇಗಿಗಳು ಬಲಿಷ್ಠ ಮುಂಬೈ ಬ್ಯಾಟ್ಸ್'ಮನ್'ಗಳಿಗೆ ಕ್ರೀಸ್'ನಲ್ಲಿ ಬೇರೂರಲು ಅವಕಾಶ ನೀಡಲಿಲ್ಲ. ಮುಂಬೈ ಪರ ಅಖಿಲ್ ಹೆರ್ವಾಡ್'ಕರ್(32), ಸೂರ್ಯಕುಮಾರ್ ಯಾದವ್(14) ಮತ್ತು ಧವಳ್ ಕುಲಕರ್ಣಿ(75) ಹೊರತುಪಡಿಸಿ ಮತ್ತ್ಯಾವ ಬ್ಯಾಟ್ಸ್'ಮನ್ ಕೂಡಾ ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ.

ಕರ್ನಾಟಕ ಪರ ವಿನಯ್ ಕುಮಾರ್ 6 ವಿಕೆಟ್ ಪಡೆದರೆ, ಎಸ್. ಅರವಿಂದ್ 2 ಹಾಗೂ ಕೆ. ಗೌತಮ್ ಮತ್ತು ಮಿಥುನ್ ತಲಾ ಒಂದು ವಿಕೆಟ್ ಪಡೆದರು.

ಕೊನೆಯಲ್ಲಿ ಕಾಡಿದ ಕುಲಕರ್ಣಿ:

41 ಬಾರಿ ಚಾಂಪಿಯನ್ ತಂಡ ಮುಂಬೈ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ನೀರಸ ಪ್ರದರ್ಶನ ತೋರಿತಾದರೂ ಕೊನೆಯ ವಿಕೆಟ್'ಗೆ ಧವಳ್ ಕುಲಕರ್ಣಿ ಹಾಗೂ ಶಿವಂ ಮಲ್ಹೋತ್ರ 70 ರನ್'ಗಳ ಜತೆಯಾಟವಾಡಿ ತಂಡಕ್ಕೆ ನೆರವಾದರು. ಕುಲಕರ್ಣಿ ಸತತ 3ನೇ ಅರ್ಧ ಶತಕ ದಾಖಲಿಸಿ ಗಮನ ಸೆಳೆದರು. ಅಲ್ಲದೇ ತಂಡವನ್ನು 150ರ ಗಡಿ ದಾಟಿಸುವಲ್ಲೂ ಪ್ರಮುಖ ಪಾತ್ರ ವಹಿಸಿದರು.

ಸಂಕ್ಷಿಪ್ತ ಸ್ಕೋರ್:

ಮುಂಬೈ: 173/10

ಧವಳ್ ಕುಲಕರ್ಣಿ: 75

ಅಖಿಲ್ ಹೆರ್ವಾಡ್'ಕರ್ : 32

ಆರ್ ವಿನಯ್ ಕುಮಾರ್: 34/6

(ಚಹಾ ವಿರಾಮದ ಅಂತ್ಯಕ್ಕೆ)

 

Follow Us:
Download App:
  • android
  • ios